ಮೈಸೂರು: ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಪಕ್ಷಕ್ಕೆ ಹೊರೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷರೇ ಹೇಳಿದ್ದಾರೆ. ಅಧ್ಯಕ್ಷರು ಪಕ್ಷದ ಶಿಸ್ತುಪಾಲನಾ ಸಮಿತಿಗೆ ವರದಿ ಕೊಟ್ಟರೆ ಸಮಿತಿ ಅಧ್ಯಕ್ಷ ರಹೀಂ ಖಾನ್ ಕ್ರಮ ಕೈಗೊಳ್ಳಬಹುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು. ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ನಾನು ಈ ಹಿಂದೆ ಪಕ್ಷದ ಶಿಸ್ತುಸಮಿತಿ ಸದಸ್ಯನಾಗಿದ್ದೆ. ಆಗ ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ಕೊಡುವ ನಾಯಕರನ್ನು ಅವರು ಎಷ್ಟೇ ದೊಡ್ಡವರಿದ್ದರೂ ನೋಟಿಸ್ ನೀಡುತ್ತಿದ್ದೆವು. ಅಗತ್ಯ ಬಿದ್ದರೆ ಅಮಾನತು ಮಾಡುತ್ತಿದ್ದೆವು, ಜಮೀರ್ ಅಹಮದ್ ಹೇಳಿಕೆಯಿಂದ ಚುನಾವಣೆಯಲ್ಲಿ ಸ್ವಲ್ಪ ಪರಿಣಾಮ ಬೀರುತ್ತಿದೆ ಎಂದು ಪಕ್ಷದ ನಾಯಕರೆ ಹೇಳಿದ್ದಾರೆ ಎಂದು ಹೇಳಿದರು.
ಬಿಜೆಪಿ ವಿರುದ್ಧದ ಶೇ. 40 ಕಮಿಷನ್ ಆರೋಪಕ್ಕೆ ದಾಖಲೆ ಇಲ್ಲ ಎಂದು ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖಿಸಿರುವ ಕುರಿತು ಪ್ರತಿಕ್ರಿಯಿಸಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬರೆದ ಪತ್ರದ ಆಧಾರದ ಮೇಲೆ ಹೋರಾಟ ಮಾಡಿದ್ದೆವು. ನಮಗೆ ಅದೇ ದಾಖಲೆಯಾಗಿತ್ತು. ಲೋಕಾಯುಕ್ತ ಪೊಲೀಸರು ಯಾವ ಆಧಾರದ ಮೇಲೆ ಸಾಕ್ಷಿ ಇಲ್ಲ ಎಂದಿದ್ದಾರೆ ಎನ್ನುವುದು ತಿಳಿದಿಲ್ಲ. ಅಗತ್ಯ ಬಿದ್ದರೆ ಮತ್ತೊಮ್ಮೆ ತನಿಖೆ ನಡೆಸುತ್ತೇವೆ ಎಂದೂ ಹೇಳಿದರು.
ಗ್ಯಾರಂಟಿಗಳೇ ಬೇರೆ ವಿಚಾರ. ಇದಕ್ಕೂ ಬಿಪಿಎಲ್ ಕಾರ್ಡ್ ಪರಿಷ್ಕರಣೆಗೂ ಸಂಬಂಧ ಇಲ್ಲ. ಈಗಾಗಲೇ ಸರ್ಕಾರಿ ನೌಕರರು, ಎರಡು ಕಾರು ಹೊಂದಿರುವವರು, ತೆರಿಗೆ ಕಟ್ಟುತ್ತಿರುವವವರು, ಮೂರು ಹೆಕ್ಟೇರ್ ಭೂಮಿ ಹೊಂದಿರುವವರು ಬಿಪಿಎಲ್ ಕಾರ್ಡ್ ಬಳಸುತ್ತಿದ್ದಾರೆ. ಅಂತಹವರು ಸ್ವಯಂ ಪ್ರೇರಣೆಯಿಂದ ಕಾರ್ಡ್ ಗಳನ್ನು ಮರಳಿಸಬೇಕಿತ್ತು. ಈಗ ಸರ್ಕಾರ ಅದನ್ನು ಪರಿಷ್ಕರಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಈ ಕೆಲಸವನ್ನು ಮುಂಚೆಯೇ ಮಾಡಬೇಕಾಗಿತ್ತು. ತಡವಾದವರೂ ಮಾಡುತ್ತಿದ್ದೇವೆ ಎಂದರು.
ಹಲವರ ಮೇಲೆ ಪ್ರಕರಣ ಕೂಡ ದಾಖಲಾಗಿದೆ. ಹೊರ ದೇಶದಿಂದ ಬಂದು ಡ್ರಗ್ಸ್ ಮಾರಾಟ ಮಾಡುವವರ ಮಾಹಿತಿಯನ್ನು ಹೈ ಕಮಿಷನ್ ಹಾಗೂ ರಾಯಭಾರಿಗಳಿಗೆ ನೀಡಲಾಗಿದೆ. ಡ್ರಗ್ಸ್ ಮೇಲೆ ರಿಲ್ಯಾಕ್ಸ್ ಮಾಡುವ ಪ್ರಶ್ನೆಯೇ ಇಲ್ಲ.ಮೆಡಿಕಲ್ ಶಾಪ್ ನಲ್ಲಿ ಮಾತ್ರೆಗಳ ಮೂಲಕ ಡ್ರಗ್ಸ್ ಮಾರಾಟ ಮಾಡುತ್ತಿದ್ದಾರೆ ಎಂದು ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.