ಈಗ ಈ ದೇಶದ ಎಚ್ಚೆತ್ತ ಜನರಿಂದ ತಾತ್ಕಾಲಿಕವಾಗಿ ಹಿಂದುತ್ವವಾದಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಅನಿವಾರ್ಯವಾಗಿ ಮೋದಿಯಂತವರೂ ಬದಲಾದಂತೆ ನಟಿಸಬಹುದು. ಆದರೆ, ಅನ್ಯಧರ್ಮ ದ್ವೇಷೋತ್ಪಾದನೆ ಹಾಗೂ ಹಿಂದೂ ಧರ್ಮದ ವಿಷಪ್ರಾಶನ ಕಾರ್ಯ ಮಾತ್ರ ಸಂಘ ಪರಿವಾರದಿಂದ ಜಾರಿಯಲ್ಲಿರುತ್ತದೆ. ಮತ್ತೆ ಹಿಂದುತ್ವವಾದಿ ಅಜೆಂಡಾ ಹೇರಲು ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಪ್ರೊ.ಚಂಪಾ ರವರು ಬರೆದ ಟಿಂಗರ್ ಬುಡ್ಡಣ್ಣ ಎನ್ನುವ ನಾಟಕ ಮತ್ತೆ ಮತ್ತೆ ನೆನಪಾಗುತ್ತಿದೆ. ಮುದಿ ದಂಪತಿಗಳು ಮಗುವಿಗಾಗಿ ಹಂಬಲಿಸಿದಾಗ ಹಿತ್ತಲಿನಲ್ಲಿ ಬೃಹದಾಕಾರವಾಗಿ ಬೆಳೆದ ಉಳ್ಳಾಗಡ್ಡಿಯಿಂದ ಅಜೈವಿಕವಾಗಿ ಹುಟ್ಟಿದ ಟಿಂಗರ್ ಬುಡ್ಡ ನಾಮಾಂಕಿತ ಮಗು ಕೆಲವೇ ದಿನದಲ್ಲಿ ಶಾಲೆಗೆ ಹೋಗುವಷ್ಟು ದೊಡ್ಡದಾಗುತ್ತಾನೆ. ಎಲ್ಲರಂತಿಲ್ಲದ ಕುಳ್ಳ ಡುಮ್ಮ ಬುಡ್ಡನನ್ನು ನೋಡಿ ಎಲ್ಲರೂ ಬುಡ್ಡಾ ಬುಡ್ಡಾ ಎಂದು ಅಣಕಿಸಿದಾಗ ಅವಮಾನಿತನಾದ ಬುಡ್ಡ ಶಾಲೆಗೆ ಹೋಗುವುದಿಲ್ಲವೆಂದು ಹಠಮಾಡುತ್ತಾನೆ. ಬುಡ್ಡನ ಮೇಲಿನ ಮೋಹದಿಂದ ಮುದಿ ತಂದೆಯು, ಅಣಕಿಸಿದವರು ಸಾಯಬೇಕೆಂದರೆ ” ಹ್ರಾಂ ಹ್ರಿಂ ಬುಡ್ಡಾ?” ಎಂದು ಮಂತ್ರ ಹೇಳಲು ಕಲಿಸುತ್ತಾನೆ. ಶಾಲೆಗೆ ಹೋಗುವ ದಾರಿಯಲ್ಲಿ ಬುಡ್ಡಾ ಎಂದು ಅಣಕಿಸಿದ ಮಕ್ಕಳು ಶಿಕ್ಷಕರುಗಳನ್ನೆಲ್ಲ ಮಂತ್ರದ ಬಲದಿಂದ ಸಾಯಿಸಿ ಖುಷಿ ಪಟ್ಟ ಬುಡ್ಡ ಮನೆಗೆ ಬಂದು ತನ್ನ ಪ್ರಲಾಪ ಹೇಳಿಕೊಳ್ಳುತ್ತಾನೆ. ಮುದುಕಿ ಕೊಟ್ಟ ಬಾಳೆ ಹಣ್ಣು ತಿಂದು ಸಿಪ್ಪೆ ಎಸೆಯುತ್ತಾನೆ. ಬುಡ್ಡನ ವಿಪರೀತ ಪ್ರಶ್ನೆಗಳಿಂದ ಸಿಟ್ಟಿಗೆದ್ದ ಮುದುಕಿ ಬುಡ್ಡ ಎಂದು ಬೈದಾಗ ಆಕೆಯನ್ನೂ ಹಾಗೂ ಹೆಂಡತಿಯ ಸಾವನ್ನು ಪ್ರಶ್ನಿಸಿದ ಮುದುಕನನ್ನೂ ಬುಡ್ಡ ಸಾಯಿಸುತ್ತಾನೆ. ಕೊನೆಗೆ ಬಾಳೆಹಣ್ಣಿನ ಸಿಪ್ಪೆ ಮೇಲೆ ಕಾಲಿಟ್ಟು ಕೆಳಗೆ ಬಿದ್ದ ಸಿಟ್ಟಿನಿಂದ ಮೇಲೆದ್ದು ” ಯಾರು ಈ ಸಿಪ್ಪೆ ಎಸೆದವರು ಸತ್ತು ಹೋಗಲಿ ಎಂದು ಹೇಳಿ ಮಂತ್ರ ಹೇಳಿ ಬುಡ್ಡ ತಾನೂ ಸತ್ತು ಹೋಗುತ್ತಾನೆ. ಇದು ಆ ನಾಟಕದ ಕತೆ.
ಈಗ ಈ ನಾಟಕ ನೆನಪಾಗಲೂ ಕಾರಣ ಇದೆ. ಹಿಂದುತ್ವವಾದಿ ಸಂಘದ ಹಿರಿಯರು ಈ ದೇಶಾದ್ಯಂತ ಟಿಂಗರ್ ಬುಡ್ಡಣ್ಣನಂತಹ ಅಸಂಖ್ಯಾತ ಮತಾಂಧರನ್ನು ಹುಟ್ಟು ಹಾಕಿದ್ದಾರೆ. ಹಿಂದೂ ಕೋಮುವಾದವನ್ನು ತಲೆಗೆ ತುಂಬಿದ್ದಾರೆ. ಹಿಂದೂಧರ್ಮ ಉಳಿಯಬೇಕೆಂದರೆ ಮೋದಿಯಿಂದ ಸಾಧ್ಯವೆಂದು ನಂಬಿಸಲಾಗಿದೆ. ಹಿಂದೂ, ಹಿಂದುತ್ವ, ಮೋದಿ ಕುರಿತು ಯಾರಾದರೂ ಪ್ರಶ್ನಿಸಿದರೆ ಸಾಕು ಈ ಮತಾಂಧ ಬುಡ್ಡಂದಿರು ಸಿಟ್ಟಿಗೇಳುತ್ತಾರೆ. ನಿಂದನೆ ಹಲ್ಲೆ ಹತ್ಯೆಗೂ ಮುಂದಾಗುತ್ತಾರೆ.
ಈಗ ಈ ಟಿಂಗರ್ ಗಳ ಮಾನಸಿಕ ಪರಿಸ್ಥಿತಿ ಎಷ್ಟು ಹದಗಟ್ಟಿದೆ ಎಂದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಬಹುಮತಕ್ಕಿಂತ ಕಡಿಮೆ ಸ್ಥಾನ ಗಳಿಸಿದ್ದಕ್ಕೆ, ಮೋದಿ ಗೆಲುವಿನ ಅಂತರ ಕಡಿಮೆಯಾಗಿದ್ದಕ್ಕೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲಾಗಿದ್ದಕ್ಕೆ, ಅಯೋಧ್ಯೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತಿದ್ದಕ್ಕೆಲ್ಲಾ ಹತಾಶರಾದ ಮತಾಂಧ ಪಡೆ ಈಗ ಹಿಂದೂಗಳ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಬಿಜೆಪಿ ವಿರುದ್ಧ ಮತ ಹಾಕಿದ ಹಿಂದೂಗಳನ್ನು ನಿಂದಿಸುತ್ತಿದ್ದಾರೆ.
“ಇತಿಹಾಸದಿಂದ ಪಾಠ ಕಲಿಯದ ಶತಮೂರ್ಖರ ಸಮುದಾಯ ಅಂತ ಯಾವುದಾದರೂ ಇದ್ದರೆ ಅದು ಹಿಂದೂಗಳು ಮಾತ್ರ” ಎಂದು ಬೈದಾಡುತ್ತಿದ್ದಾರೆ. “ರಾಮನು ಲಂಕಾವನ್ನು ಗೆಲ್ಲಲು ವಾನರಸೈನ್ಯ ಕರೆದುಕೊಂಡು ಹೋಗಿದ್ದು ಒಳ್ಳೆಯದೇ ಆಯ್ತು, ಒಂದು ವೇಳೆ ನಮ್ಮ ಹಿಂದೂಗಳನ್ನು ಕರೆದುಕೊಂಡು ಹೋಗಿದ್ದರೆ ಅರ್ಧದಷ್ಟು ಹಿಂದೂಗಳು ಹಣದಾಸೆಗೆ ರಾವಣನ ಪಕ್ಷ ಸೇರುತ್ತಿದ್ದರು” ಎಂದು ಅಂಧಭಕ್ತರು ಹಿಂದೂಗಳನ್ನು ಮೂದಲಿಸುತ್ತಿದ್ದಾರೆ.
ಈ ಮತಾಂಧ ಟಿಂಗರ್ ಬುಡ್ಡನಂತಹ ಧರ್ಮಾಂಧರು ಕೇವಲ ಹಿಂದೂಗಳನ್ನು ಮಾತ್ರ ನಿಂದಿಸುತ್ತಿಲ್ಲ ಇವರೇ ಆರಾಧಿಸುತ್ತಿದ್ದ ರಾಮ ದೇವರ ಮೇಲೂ ದ್ವೇಷ ಕಾರುವುದನ್ನು ಬಿಟ್ಟಿಲ್ಲ. “ನಾನು ಅಯೋಧ್ಯೆಗೆ ಹೋಗೊಲ್ಲ. ಆ ಶಕ್ತಿಹೀನ ರಾಮನ ಮುಖವನ್ನೂ ನೋಡೊಲ್ಲ. ಅವನಿಗೆ ಟೆಂಟೇ ಸರಿ. ಭವ್ಯ ದೇಗುಲ ಬೇಕಿಲ್ಲ” ಎಂದು ಕೆಲವು ಮತಿಗೆಟ್ಟ ಮತಾಂಧರು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಹನೆ ಹೊರಗೆ ಹಾಕುತ್ತಿದ್ದಾರೆ. ಇನ್ನೂ ಅತಿರೇಕಕ್ಕೆ ಹೋದ ಧರ್ಮಾಂಧರು ” ಶ್ರೀರಾಮನಿಗೆ ನನ್ನ ಮೆಟ್ಟು. ಥೂ ಅವನ ಜನ್ಮಕ್ಕೆ. 500 ವರ್ಷ ಟೆಂಟಲ್ಲಿ ಇದ್ದವನನ್ನು ಪೂಜಿಸಲು ಅನು ಮಾಡಿಕೊಟ್ಟಿದ್ದಕ್ಕೆ, ರಾಮ ದೇವರಲ್ಲ ಷಂಡ. ಅವನನ್ನು ಖಂಡಿತಾ ಆರಾಧಿಸುವ ಅವಶ್ಯಕತೆ ಇಲ್ಲ. ಈ ಮಟ್ಟಕ್ಕೆ ಉತ್ತರ ಪ್ರದೇಶದಲ್ಲಿ ಜಿಹಾದಿಗಳನ್ನು ಎತ್ತಿ ಕಟ್ಟಿದ್ದಾನೆ. ರಾಮ ಷಂಡ ನ*** ಮಗ” ಎಂದು ಕೆಟ್ಟದಾಗಿ ನಿಂದಿಸಲಾಗುತ್ತಿದೆ.
ಯುವಜನರ ಮೆದುಳಿಗೆ ಬಿತ್ತಲಾದ ಹಿಂದುತ್ವದ ವಿಷದ ದುಷ್ಪರಿಣಾಮ ಇದು. ಮತಾಂಧತೆಯೆಂಬ ವಿಷವನ್ನು ವರಪ್ರಸಾದವೆಂದು ಸೇವಿಸಿದ ಹಲವಾರು ಮತಾಂಧರು ಬಂಧುತ್ವವನ್ನು ಬಿಟ್ಟು ಹಿಂದುತ್ವ ಎಂದು ಮರೆದಾಡುತ್ತಲೇ ಬಂದರು. ಅನ್ಯಕೋಮಿನವರು ಹಾಗೂ ಭಿನ್ನ ವಿಚಾರಧಾರೆಯವರ ತಲೆ ಮೇಲೆ ಹಿಂದೂದ್ರೋಹಿ ಎನ್ನುವ ಆರೋಪಗಳ ಉರಿಬೆಂಕಿ ಸುರಿದು ಪ್ರಶ್ನಿಸುವವರ ಧ್ವನಿಯನ್ನೇ ಅಡಗಿಸುವ ಮಹತ್ಕಾರ್ಯದಲ್ಲಿ ಮತಾಂಧ ಪಡೆಯನ್ನು ಸಿದ್ದಗೊಳಿಸಲಾಗಿತ್ತು. ಈಗ ಸಣ್ಣ ಸೋಲನ್ನೂ, ಚಿಕ್ಕ ಹಿನ್ನಡೆಯನ್ನು ಸಹಿಸಿಕೊಳ್ಳದ ಈ ಕೋಮು ಪಿತ್ತ ನೆತ್ತಿಗೇರಿದವರು ಹಿಂದೂಗಳನ್ನೇ ನಿಂದಿಸುತ್ತಿದ್ದಾರೆ. ಬಿಜೆಪಿಗೆ ಮತ ಹಾಕದ ಹಿಂದೂಗಳನ್ನು ಜಿಹಾದಿಗಳು ಎಂದು ಅಪಮಾನಿಸುತ್ತಿದ್ದಾರೆ. ಬಿಜೆಪಿಗರಿಗೆ ಆದ ಸೋಲಿಗೆ ರಾಮನೇ ಕಾರಣನೆಂದು ದೈವನಿಂದನೆಗೆ ಇಳಿದಿದ್ದಾರೆ. ಇದು ಮನೋರೋಗದ ಅತಿರೇಕ. ಧರ್ಮದ್ವೇಷದಿಂದಾಗುವ ದುಷ್ಪರಿಣಾಮ. ಈ ಅಸ್ತವ್ಯಸ್ತ ಮನಸ್ಥಿತಿಗೆ ಕಾರಣರು ಯಾರು?
ವರ್ಣವ್ಯವಸ್ಥೆಯ ಪ್ರತಿಪಾದಕರಾದ ವೈದಿಕಶಾಹಿ ಸಂಘದವರು ಹುಟ್ಟುಹಾಕಿರುವ ಹಿಂದೂ ಶ್ರೇಷ್ಠತೆಯ ವ್ಯಸನದ ಅತಿರೇಕವೇ ಇಂತಹ ವಿಕ್ಷಿಪ್ತತೆಗೆ ಕಾರಣವಾಗಿದೆ. ರಾಮನ ಹೆಸರಲ್ಲಿ ಹಿಂದೂಗಳನ್ನು ಒಂದಾಗಿಸಿ, ದೇಶವಾಳುವ ಅಧಿಕಾರವನ್ನು ಗಳಿಸಿ, ಮನುವಾದಿ ಪ್ರೇರಿತ ಹಿಂದೂ ರಾಷ್ಟ್ರವನ್ನು ಅಸ್ತಿತ್ವಕ್ಕೆ ತರುವುದೇ ಆರೆಸ್ಸೆಸ್ ಎನ್ನುವ ವೈದಿಕಶಾಹಿ ಸಂಘದ ಉದ್ದೇಶವಾಗಿದೆ. ಇದಕ್ಕಾಗಿ ಅನ್ಯಧರ್ಮ ದ್ವೇಷ ಹಾಗೂ ಹಿಂದೂ ಮತಾಂಧತೆಯ ಆವೇಶವನ್ನು ದೇಶದ ಜನರಲ್ಲಿ ಹುಟ್ಟಿಸುತ್ತಾ ಬರಲಾಗಿದೆ. ಅದು ಎಷ್ಟರ ಮಟ್ಟಿಗೆ ಮತಾಂಧರ ಮೆದುಳನ್ನು ಆಕ್ರಮಿಸಿದೆ ಎಂದರೆ ತಮ್ಮದೇ ದೇವರನ್ನು ಅವಾಚ್ಯವಾಗಿ ನಿಂದಿಸುವಷ್ಟು. ಈ ಮನುವ್ಯಾದಿ ಸಂಘವೇ ಮಾಧ್ಯಮಗಳ ಜೊತೆ ಸೇರಿ ಸೃಷ್ಟಿಸಿದ ಮೋದಿ ಮೇನಿಯಾ ಎಷ್ಟೊಂದು ಮಿತಿಮೀರಿದೆ ಎಂದರೆ ಮತಾಂಧರು ಹಿಂದೂಗಳನ್ನೇ ಹೀಯಾಳಿಸುವಷ್ಟು. ಶ್ರೀರಾಮನ ಅದೃಷ್ಟ ಸ್ವಲ್ಪ ಮಟ್ಟಿಗೆ ಚೆನ್ನಾಗಿದೆಯಾದ್ದರಿಂದ ಬಿಜೆಪಿ ಮೈತ್ರಿಕೂಟದ ಸಹಾಯದಿಂದ ಇನ್ನೂ ಅಧಿಕಾರ ಉಳಿಸಿಕೊಂಡಿದೆ. ಅಕಸ್ಮಾತ್ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಸೋತು ನೆಲ ಕಚ್ಚಿದ್ದರೆ ಈ ಮಾತಾಂಧರು ಅಯೋಧ್ಯೆಯಲ್ಲಿ ಕಟ್ಟಲಾಗುತ್ತಿರುವ ರಾಮಮಂದಿರವನ್ನೇ ದ್ವಂಸ ಮಾಡುವ ಸಂಭವನೀಯತೆ ಇತ್ತು. ಅಮೇರಿಕದಲ್ಲಿ ಟ್ರಂಪ್ ನ ಹುಚ್ಚು ಅಭಿಮಾನಿಗಳು ಮಾಡಿದಂತೆ ಇಲ್ಲಿಯೂ ಸಂಸತ್ ಭವನಕ್ಕೆ ಮುತ್ತಿಗೆ ಹಾಕುವ ಸಾಧ್ಯತೆಯೂ ಇತ್ತು.
ಜರ್ಮನಿಯಲ್ಲಿ ಹಿಟ್ಲರ್ ಹಾಗೂ ಇಟಲಿಯಲ್ಲಿ ಮುಸಲೋನಿ ಎಂಬ ಸರ್ವಾಧಿಕಾರಿಗಳು ಮಾಡಿದ್ದೇ ಜನಾಂಗದ್ವೇಷವನ್ನು ಸೃಷ್ಟಿಸಿ, ಧರ್ಮದ ಶ್ರೇಷ್ಠತೆಯನ್ನು ಹುಟ್ಟಿಸಿದ್ದು. ಇದರಿಂದಾಗಿ ಆ ದೇಶಗಳೇ ನಾಶವಾಗಿ ಹೋದವು. ಲಕ್ಷಾಂತರ ಸಾವು ನೋವುಗಳಾದವು. ಮನುಕುಲಕೆ ಗಾಯಗಳಾದವು. ಜನರಲ್ಲಿ ಸೌಹಾರ್ದತೆ, ಸಹಮತ, ಸಹಜೀವನದ ಮೌಲ್ಯಗಳನ್ನು ಅಳವಡಿಸಲು ಪ್ರೋತ್ಸಾಹಿಸದೆ ಮತಾಂಧತೆ ಮತ್ತು ದ್ವೇಷವೆನ್ನುವ ವಿಷವನ್ನು ಬಿತ್ತಿದರೆ ಅದರ ಪರಿಣಾಮ ಮಾತ್ರ ಸರ್ವನಾಶ.
ಟಿಂಗರ್ ಬುಡ್ಡಣ್ಣನವರಂತಹ ಅವಿವೇಕಿಗಳ ಕೈಗೆ ಹಿಂದುತ್ವ ಎನ್ನುವ ಮಂತ್ರಾಯುಧವನ್ನು ಕೊಟ್ಟ ಮೇಲೆ ಅಂತವರು ತಮಗಾಗದವರನ್ನು ಸಾಯಿಸುತ್ತಾ ಹೋಗುತ್ತಾರೆ. ಮೊದಲು ಮುಸ್ಲಿಮರನ್ನು, ನಂತರ ಇತರೇ ಅಲ್ಪಸಂಖ್ಯಾತ ಧರ್ಮೀಯರನ್ನು, ತದನಂತರ ಶೂದ್ರ ದಲಿತ ಹಿಂದುಳಿದವರನ್ನು. ಕೊನೆಗೆ ತಮ್ಮ ಸೃಷ್ಟಿಕರ್ತರನ್ನು, ಅಂತಿಮವಾಗಿ ತಮ್ಮನ್ನೂ ನಾಶ ಪಡಿಸಿಕೊಳ್ಳುತ್ತಾರೆ. ಮತಾಂಧತೆ ಎಂಬ ಮಾನಸಿಕ ರೋಗಕ್ಕೆ ಇಡೀ ಜಗತ್ತು ತಲ್ಲಣಿಸಿದೆ. ಎಲ್ಲಾ ಧರ್ಮಗಳಲ್ಲೂ ಈ ರೀತಿಯ ಮತಾಂಧ ಮೂಲಭೂತವಾದಿಗಳಿದ್ದು ಮನುಕುಲದ ಸೌಹಾರ್ದತೆಗೆ ಭಂಗ ತರುತ್ತಲೇ ಇದ್ದಾರೆ. ದೇವರ ಹೆಸರಲ್ಲಿ, ಧರ್ಮ ಜಾತಿ ಜನಾಂಗ ಶ್ರೇಷ್ಠತೆಯ ವ್ಯಸನದಲ್ಲಿ ನರಹತ್ಯಾ ಪಾತಕಗಳು ಅವ್ಯಾಹತವಾಗಿವೆ. ಸರ್ವ ಜನಾಂಗದ ತೋಟವಾಗಬೇಕಿದ್ದ ಈ ನಮ್ಮ ದೇಶ ಈಗ ಧರ್ಮದ್ವೇಷದ ಬಾಣಲೆಯಲ್ಲಿ ಬೇಯುತ್ತಿದೆ. ಜನತಂತ್ರದಿಂದ ಸರ್ವಾಧಿಕಾರದತ್ತ ಸ್ಥಿತ್ಯಂತರವಾಗುತ್ತಿದೆ. ಈಗ ಈ ದೇಶದ ಎಚ್ಚೆತ್ತ ಜನರಿಂದ ತಾತ್ಕಾಲಿಕವಾಗಿ ಹಿಂದುತ್ವವಾದಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಅನಿವಾರ್ಯವಾಗಿ ಮೋದಿಯಂತವರೂ ಬದಲಾದಂತೆ ನಟಿಸಬಹುದು. ಆದರೆ, ಅನ್ಯಧರ್ಮ ದ್ವೇಷೋತ್ಪಾದನೆ ಹಾಗೂ ಹಿಂದೂ ಧರ್ಮದ ವಿಷಪ್ರಾಶನ ಕಾರ್ಯ ಮಾತ್ರ ಸಂಘ ಪರಿವಾರದಿಂದ ಜಾರಿಯಲ್ಲಿರುತ್ತದೆ. ಮತ್ತೆ ಹಿಂದುತ್ವವಾದಿ ಅಜೆಂಡಾ ಹೇರಲು ಅವಕಾಶಕ್ಕಾಗಿ ಕಾಯುತ್ತಲೇ ಇರುತ್ತದೆ. ಹಿಂದುತ್ವವಾದಿಗಳ ಹುನ್ನಾರಗಳನ್ನು ಹಿಮ್ಮೆಟ್ಟಿಸಿ ಬಹುತ್ವವಾದಿ ಸಂವಿಧಾನವನ್ನು ಸಂರಕ್ಷಿಸುವ ಜವಾಬ್ದಾರಿ ಈ ದೇಶದ ಸರ್ವ ಜಾತಿ ಜನಾಂಗದವರ ಮೇಲಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು