ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಜಾತಿ ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸಿದ್ದ ಬಿಜೆಪಿ ಕಾರ್ಯಕರ್ತ ಎನ್ನಲಾದ ವ್ಯಕ್ತಿ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ತಮ್ಮದು ಸುಸಂಸ್ಕೃತರ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷದವರೇ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ಹೇಮಂತ್ ನಿಂಬಾಳ್ಕರ್ ಅವರ ಕುರಿತು ಅವಾಚ್ಯವಾಗಿ ನಿಂದಿಸಿರುವುದು, ಮರಾಠಾ ಸಮುದಾಯದ ವಿರುದ್ಧ ಕೀಳು ಮಟ್ಟದ ಹೇಳಿಕೆ ನೀಡಿರುವುದಲ್ಲದೆ ಕಾಂಗ್ರೆಸ್ ರಾಷ್ಟ್ರೀಯ ಮುಖಂಡೆ ಸೋನಿಯಾಗಾಂಧಿಯವರನ್ನು ಕೊಳಕಾಗಿ ನಿಂದಿಸಿರುವ ಹಿನ್ನೆಲೆಯಲ್ಲಿ ಈ ದೂರು ನೀಡಲಾಗಿದೆ.
ಈ ಬಗ್ಗೆ ಕಾರವಾರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಹೆಚ್.ನಾಯ್ಕ ಕಾಗಲ್, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಮ್ಮ ಅಭ್ಯರ್ಥಿಯನ್ನ ಬೆಂಬಲಿಸಿ ವಿಡಿಯೋವೊಂದನ್ನು ಫೇಸ್ಬುಕ್ ನಲ್ಲಿ ಕಾಂಗ್ರೆಸ್ ಸಾಮಾಜಿಕ ತಾಣಗಳ ವಿಭಾಗದ ಸೂರಜ್ ನಾಯ್ಕ ಅವರು ಹಂಚಿಕೊಂಡಿದ್ದರು. ಅದಕ್ಕೆ ಬಿಜೆಪಿ ಕಾರ್ಯಕರ್ತ ಕುಮಟಾದ ಶ್ರೀಕಾಂತ್ ಹೆಗಡೆ ಅಂತ್ರವಳ್ಳಿ ಎಂಬಾತ ತನ್ನ ಫೇಸ್ಬುಕ್ ಖಾತೆಯಿಂದ ನಿಂದನಾತ್ಮಕವಾಗಿ ಕಮೆಂಟ್ ಮಾಡಿದ್ದು, ಈ ಹಿನ್ನಲೆಯಲ್ಲಿ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಕಾಂತ ಹೆಗಡೆ ಅಂತ್ರವಳ್ಳಿ ಎಂಬಾತನ ವಿರುದ್ಧ ಕುಮಟಾ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣೆಯ ಸಂದರ್ಭ ಪಕ್ಷ, ಅಭ್ಯರ್ಥಿಗಳ ಪರ- ವಿರೋಧ ಸಹಜ. ಆದರೆ ನಮ್ಮ ಅಭ್ಯರ್ಥಿಯ ಜಾತಿಯನ್ನ ಗುರಿಯಾಗಿಸಿಕೊಂಡು ಅವಹೇಳನ ಮಾಡುವುದು ಅಕ್ಷಮ್ಯ. ಜಾತಿ ಜಾತಿಗಳ ನಡುವೆ ವೈಷಮ್ಯ ಬೀರುತ್ತಲೇ ಬಂದಿರುವ ಬಿಜೆಪಿಗರು ಮತ್ತೆ ಮತ್ತೆ ಅದನ್ನೇ ಮುಂದುವರಿಸಿದ್ದಾರೆ. ಹೀಗಾಗಿ ಈ ದೂರು ವೈಯಕ್ತಿಕವಾಗಿ ಹಾಗೂ ಅಸಭ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನೆ ಮಾಡುವವರಿಗೆ ಪಾಠವಾಗಬೇಕಿದೆ. ಈ ಬಗ್ಗೆ ಚುನಾವಣಾಧಿಕಾರಿಗಳೂ ಗಮನಹರಿಸಿ ಕ್ರಮ ಕೈಗೊಳ್ಳಬೇಕಿದೆ ಎಂದು ಆರ್.ಎಚ್.ನಾಯ್ಕ ಒತ್ತಾಯಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ಪರ ಅಲೆ ಇದೆ. ಗ್ಯಾರಂಟಿಗಳನ್ನ ಜಾರಿಗೆ ತಂದಿರುವುದರಿಂದ ಜನರು ಕಾಂಗ್ರೆಸ್ ಪರ ಮತ ಹಾಕಲು ಸಿದ್ಧರಾಗಿದ್ದಾರೆ. ಇದನ್ನ ಸಹಿಸದ ಬಿಜೆಪಿಗರು ನಿಂದನೆ ಮಾಡುವ ಕೆಲಸಕ್ಕೆ ಇಳಿದಿದ್ದಾರೆ ಎಂದು ದೂರಿದರು.
ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನವರು ಯಾರನ್ನೂ ವೈಯಕ್ತಿಕ ತೇಜೋವಧೆ ಮಾಡುತ್ತಿಲ್ಲ. ಆದರೆ ಬಿಜೆಪಿಗರು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರ ಮೇಲೆ ವೈಯಕ್ತಿಕ ತೇಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ಇನ್ನುಮುಂದೆ ಸಾಮಾಜಿಕ ಜಾಲತಾಣಗಳ ಮೇಲೆ ನಾವೂ ನಿಗಾ ಇಟ್ಟು ನಿಂದಿಸುವವರ ಮೇಲೆ ದೂರು ದಾಖಲಿಸುತ್ತೇವೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾದ ಸೂರಜ್ ನಾಯ್ಕ, ಅಜಯ್ ಸಿಗ್ಲಿ, ಅಶ್ರಫ್ ಸೇರಿದಂತೆ ಇತರರು ಇದ್ದರು.
ಕೇಸ್ ದಾಖಲಾದ ಮೇಲೆ ‘ನಮ್ಮವರಲ್ಲ’ವೆಂದ ಬಿಜೆಪಿ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನ!
ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರ ವಿರುದ್ಧ ನಿಂದನಾತ್ಮಕವಾಗಿ ಕಮೆಂಟ್ ಮಾಡಿದವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ‘ಅವರು ನಮ್ಮ ಪಕ್ಷದವರಲ್ಲ’ ಎಂದಿದ್ದ ಬಿಜೆಪಿ ವಿರುದ್ಧ ಇದೀಗ ಸ್ವಪಕ್ಷದವರಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ಘಟನೆ ಕುರಿತು ಸ್ಪಷ್ಟನೆ ನೀಡಿದ್ದ ಬಿಜೆಪಿ ವಕ್ತಾರರು, ಕಮೆಂಟ್ ಹಾಕಿದ್ದ ವ್ಯಕ್ತಿ ತಮ್ಮ ಪಕ್ಷದವನೇ ಅಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಬಿಜೆಪಿಗರಲ್ಲೇ ಇದೀಗ ಅಸಮಾಧಾನದ ಹೊಗೆಯಾಡಲಾರಂಭಿಸಿದೆ. ದೂರು ದಾಖಲಾದ ಕಾರ್ಯಕರ್ತನಿಗೆ ಧೈರ್ಯ ತುಂಬುವುದನ್ನ ಬಿಟ್ಟು ‘ನಮ್ಮವನಲ್ಲ’ ಎಂದು ಜಾರಿಕೊಂಡ ಬಿಜೆಪಿ ನಾಯಕರ ವರ್ತನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರಿಂದಲೇ ಟೀಕೆ ವ್ಯಕ್ತವಾಗಿದೆ.
‘ಕೇಸ್ ಆದ ಮೇಲೆ ಕರಿಮಣಿ ಮಾಲೀಕ ನಾನಲ್ಲ ಎನ್ನುವ ಮುಖಂಡರ ಬಗ್ಗೆ ಎಚ್ಚರ ವಹಿಸಿ’ ಎಂಬ ಬಿಜೆಪಿ ಕಾರ್ಯಕರ್ತರ ಪೋಸ್ಟ್ ಗಳು ಇದೀಗ ಎಲ್ಲೆಡೆ ವೈರಲ್ ಆಗತೊಡಗಿವೆ.