ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!

Most read

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ದ್ವೇಷವನ್ನು ಹರಡುವವರನ್ನು ಮಟ್ಟ ಹಾಕಲು ನಮ್ಮ ಈಗಿನ ಕಾನೂನುಗಳು ಸಮರ್ಥವಾಗಿಲ್ಲ. ದ್ವೇಷ, ಅಸಹಿಷ್ಣುತೆ ಮತ್ತು ಕೋಮು ಹಿಂಸೆ ಇವುಗಳನ್ನು ನಿಖರವಾಗಿ ವ್ಯಾಖ್ಯಾನಿಸುವ ಮತ್ತು  ಧರ್ಮ, ಜಾತಿ ಮತ್ತು ಕೋಮು ಆಧಾರಿತವಾಗಿ ದ್ವೇಷ ಹರಡುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸುವ ಹಾಗೂ ಅಂತಹ ಕಂಟೆಂಟ್ ಗಳನ್ನು ತಕ್ಷಣ ತೆಗೆದು ಹಾಕದ ಜಾಲತಾಣಗಳನ್ನು ದಂಡನೆಗೆ ಗುರಿಪಡಿಸಲು ಅವಕಾಶ ನೀಡುವ ಕಾನೂನು ಬಹಳ ತುರ್ತಾಗಿ ನಮಗೆ ಬೇಕು- ಶಫೀರ್ ಎ.ಎ, ವಕೀಲರು.

ಇನ್ನೂರಕ್ಕೂ ಹೆಚ್ಚು ಮನೆಗಳನ್ನು ಕ್ಷಣಾರ್ಧದಲ್ಲಿ  ನೆಲ ಸಮಾಧಿಮಾಡಿ, ವೃದ್ದರು, ಮಹಿಳೆಯರು,  ಮಕ್ಕಳು ಮತ್ತು ಪುಟ್ಟ ಶಿಶುಗಳು ಸೇರಿದಂತೆ  300 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದು ಕೊಂಡ ಹಾಗು ಹಲವಾರು ಕುಟುಂಬಗಳನ್ನು ಬೀದಿ ಪಾಲು ಮಾಡಿದ ಕೇರಳದ ವಯನಾಡಿನ ಪ್ರಕೃತಿ ವಿಕೋಪದ ಭೀಕರತೆ ಮತ್ತು ಭಯಾನಕತೆಯ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ.  ಮೇಘ ಸ್ಪೋಟದಿಂದ  ಎಡೆಬಿಡದೆ ಎರಡು ದಿನ ಸುರಿದ ಮಳೆಗೆ ಭಾರೀ ಭೂಕುಸಿತ ಉಂಟಾಗಿ ರಾತ್ರೋ ರಾತ್ರಿ ಮುಂಡಕ್ಕೈ ಮತ್ತು ಚೂರಲ್ಮಲ ಎಂಬ ಎರಡು ಜನ ನಿಬಿಡ ಪಟ್ಟಣಗಳು ಕುರುಹೇ ಇಲ್ಲದಂತೆ  ಕೊಚ್ಚಿ ಹೋಗಿದ್ದು ಇಡೀ ಕೇರಳ ರಾಜ್ಯದಲ್ಲಿ ಮೂರು ದಿನಗಳಿಂದ ಸೂತಕದ ಛಾಯೆ ಆವರಿಸಿದೆ.  

ಹಿಂದೆಂದೂ ಕಂಡರಿಯದ  ಘೋರ ಪ್ರಕೃತಿ ವಿಕೋಪಕ್ಕೆ ಬಲಿಯಾಗಿ ಇನ್ನು ಅಳಲು ಕಣ್ಣೀರು ಕೂಡಾ ಬಾಕಿ ಇಲ್ಲದ  ವಯನಾಡಿನ ಜನತೆಗೆ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ ಸಾಮಾಜಿಕ ಜಾಲತಾಣಗಳಲ್ಲಿ “Pray for Wayanad” ಎಂಬ ಪೋಸ್ಟ್ ಗಳನ್ನು ಮಾನವೀಯ ಅಂತಃಕರಣ ಉಳ್ಳ ಹಲವರು ಹಾಕಿದ್ದಾರೆ. ಆದರೆ ಇಂತಹ ಪೋಸ್ಟ್ ಗಳು ಹಾಗು ವಯನಾಡು ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾದ ಸುದ್ದಿಗಳ ಕೆಳಗೆ ಬಂದ ಕೆಲವು ಕಾಮೆಂಟ್ ಗಳು ನಡುಕ ಹುಟ್ಟಿಸುವ ರೀತಿಯಲ್ಲಿವೆ. ಕೊಂಚವೂ ಮಾನವೀಯತೆ ಇಲ್ಲದ, ಇತರರಿಗೆ ಸದಾ ಕೆಡುಕನ್ನೇ ಬಯಸುವ, ಅನ್ಯ ಕೋಮಿನವರ ಸಾವು-ನೋವುಗಳನ್ನೇ ಸಂಭ್ರಮಿಸಿ ವಿಕೃತ ಸಂತೋಷ ಪಟ್ಟುಕೊಳ್ಳುವ ನಿಕೃಷ್ಟರು ವಯನಾಡು ಭೂಕುಸಿತದ ವಿಚಾರದಲ್ಲಿ ಮಾಡಿರುವ ದ್ವೇಷಕಾರುವ ಬಹಳಷ್ಟು ಕಾಮೆಂಟುಗಳು ಫೇಸ್ಬುಕ್, ಇನ್ಸ್ಟಾಗ್ರಾಮ್, ಯುಟ್ಯೂಬ್ ಮತ್ತು ಎಕ್ಸ್ ಮುಂತಾದ ವೇದಿಕೆಗಳಲ್ಲಿ ಪ್ರತ್ಯಕ್ಷವಾಗಿವೆ. 

“ಜಿಹಾದಿಗಳು ಕೊಚ್ಚಿಕೊಂಡು ಹೋಗುವುದನ್ನು ನೋಡಲು ಬಹಳ ಚೆಂದ ಇದೆ” ಎಂದು ಒಬ್ಬ ಕ್ರಿಮಿ ಬರೆದರೆ “ಪಪ್ಪುವನ್ನು ಗೆಲ್ಲಿಸಿದವರಿಗೆ ಇದು ದೇವರು ಕೊಟ್ಟ ಶಿಕ್ಷೆ”

 “ಗೋ ಮಾತೆಯ ತಲೆಕಡಿದವರ ತಲೆಯನ್ನು ಪ್ರಕೃತಿ ಕಡಿದಿದೆ, ಇದು ಒಂದು ರೀತಿಯ ಒಳ್ಳೆಯ ವಿಷಯ. ಧರ್ಮೋ ರಕ್ಷತಿ ರಕ್ಷಿತಃ” 

“ಇನ್ನೂ ಹೆಚ್ಚು ಹೆಚ್ಚು ಬೇವರ್ಸಿಗಳು ಅಲ್ಲಾನಿಗೆ ಪ್ರಿಯವಾಗಲಿ” 

“ಹಸುಗೂಸನ್ನು ಕಡೆದಿದ್ದ ಈ ಜನಗಳ ರಕ್ತ ಕೋಡಿ ಹರಿಯೋದೆ ನಮ್ಮಂತ ಹಿಂದುಗಳಿಗೆ ನೆಮ್ಮದಿ ಅವರಿಗೆ ಹಸು-ಗೂಸನ್ನು ತಿನ್ನುವ ನೆಮ್ಮದಿ ನಾವು ಬಿಡ್ತೀವಾ ನಾವು ಬಿಟ್ಟಿಲ್ಲ ಅಂದ್ರು ಪ್ರಕೃತಿ ಅವರನ್ನು ಹಂಗೆ ಸಂಹಾರ ಮಾಡುತ್ತೆ ಜೈ ಗೋಮಾತೆ”  

“God taking back his own country” 

“this is how god punishes you for electing Balak buddhi to our parliament” ಎಂಬಿತ್ಯಾದಿಯಾಗಿ ಇನ್ನು ಕೆಲವು ವಿಷಜಂತುಗಳು ವಿಷಕಾರಿಕೊಂಡಿವೆ. 

ಎಲ್ಲಾ ಜಾತಿ ಧರ್ಮಗಳಿಗೆ ಸೇರಿದ ಜನ ಈ ಘೋರ ದುರ್ಘಟನೆಯಲ್ಲಿ ನೋವುಂಡಿದ್ದಾರೆ ಮತ್ತು  ಗೋವು ಸೇರಿದಂತೆ ಕೋಣ, ಆಡು, ಕುರಿ, ಮೇಕೆ, ಕೋಳಿ ಇತ್ಯಾದಿಯಾಗಿ ಅನೇಕ  ಮುಗ್ಧ ಸಾಕು ಪ್ರಾಣಿಗಳು ಸಹ ಜೀವ ಕಳೆದು ಕೊಂಡಿದೆ. ಮಸೀದಿ ಮತ್ತು ದೇವಸ್ಥಾನ ಇವೆರೆಡೂ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗಿವೆ. ಈ ವಾಸ್ತವ ಮೇಲಿನಂತೆ ಕ್ರೂರವಾಗಿ ಕಾಮೆಂಟ್ ಹಾಕಿರುವ ಮೆದುಳಿಲ್ಲದ ಕೋಮು ರಾಕ್ಷಸರಿಗೆ ತಿಳಿಯದ ವಿಚಾರ ಏನಲ್ಲ. ಆದರೆ ರಾಹುಲ್ ಗಾಂಧಿಗೆ ಮರು ಜನ್ಮ ಕೊಟ್ಟ, ಕಮ್ಯುನಿಸ್ಟರ  ಕೈಗೆ ಅಧಿಕಾರ ಕೊಟ್ಟ  ಕೇರಳದವರ ವಿರುದ್ಧ ಅಸಹನೆ ಇತ್ಯಾದಿ ಎಲ್ಲ ವಾಸ್ತವಗಳಿಂದ ಇವರ ಕಣ್ಣು ಮಂಜಾಗಿಸಿದೆ. 

ವಯನಾಡು ಘಟನೆಗೆ ಮುನ್ನ ನಮ್ಮದೇ ಉತ್ತರ ಕನ್ನಡದ ಶಿರೂರಿನಲ್ಲಿ ಗುಡ್ಡ ಕುಸಿದು ಹತ್ತಾರು ಮಂದಿ ಜೀವಕಳೆದು ಕೊಂಡಿದ್ದು ಕೇರಳದ ಅರ್ಜುನ್ ಎಂಬ ಲಾರಿ ಚಾಲಕ ಲಾರಿ ಸಮೇತ ಗಂಗಾವಳಿ ನದಿಯೊಳಗೆ ಕಾಣೆಯಾಗಿದ್ದ. ಈ ಸಂದರ್ಭದಲ್ಲಿ ಕನ್ನಡದ ಪ್ರಮುಖ ಮಾಧ್ಯಮಗಳು ಒಂದು ಕೋಮನ್ನು ಅನುಮಾನ ಮತ್ತು ಅವಮಾನಕ್ಕೆ ಗುರಿಪಡಿಸುವಂತಹ ನೆರೆಟೀವ್ ಕಟ್ಟಬಲ್ಲ “ಬೌ ಬೌ ಬಿರಿಯಾನಿಯ” ಹಿಂದೆ ಓಡುತ್ತಿದ್ದವು. 

ಕೋವಿಡ್ ನಂತಹ ಮಹಾಮಾರಿಯ ಕಾಲದಲ್ಲೇ “ಅವರು vs ನಾವು” ಎಂಬ ವಿಷಲೇಪಿತ ಶೀರ್ಷಿಕೆ ಕೊಟ್ಟು ಸುಳ್ಳು ವದಂತಿ ಹರಡುವ ಕಂಟೆಂಟ್ ಪ್ರಸಾರಮಾಡಿ ಬಹುಸಂಖ್ಯಾತರ ಮಧ್ಯೆ ಒಂದು ಕೋಮಿನ ವಿರುದ್ಧ ಅಸಹನೆಯ ಕಿಚ್ಚನ್ನು ಹೊತ್ತಿಸಲು ಪ್ರಯತ್ನಿಸಿದ ಪ್ರಮುಖ ಮಾಧ್ಯಮವನ್ನು ನಾವು ನೋಡಿದ್ದೇವೆ. ಅಂತಹವರಿಗೆ ಸಂಕಷ್ಟದ ಸಂದರ್ಭದಲ್ಲಿ  ಜನರ ಕಣ್ಣೀರು-ವ್ಯಥೆಗಳಿಗೆ ಧ್ವನಿಯಾಗುವುದಕ್ಕಿಂತ ಯಾರೋ ಬೀಸಾಕಿದ “ನಾಯಿ ಮಾಂಸವೇ” ರುಚಿಕರವಾಗಿ ಕಂಡು ಬಂದರೆ ಆಶ್ಚರ್ಯವೇನಿಲ್ಲ. ಧರ್ಮದ ಅಫೀಮು ನೆತ್ತಿಗೇರಿದ ಸ್ವಯಂ ಘೋಷಿತ ಧರ್ಮರಕ್ಷಕರ ತಾಳಕ್ಕೆ ತಕ್ಕ ಹಾಗೆ ಕುಣಿವ ಮಾಧ್ಯಮಗಳಿಗೆ ಕುರಿಯನ್ನು ನಾಯಿ ಅಥವಾ  ದನ ಮಾಡುವ ಚಮತ್ಕಾರ ಚೆನ್ನಾಗಿ ಸಿದ್ಧಿಸಿದೆ. 

ಆದರೆ ದೇಶದ ಭವಿಷ್ಯದ ದೃಷ್ಟಿಯಿಂದ ನೋಡುವುದಾದರೆ ಕೆಲವು ಪ್ರಮುಖ  ಮಾಧ್ಯಮಗಳು ಪೋಷಿಸಿಕೊಂಡು ಬರುತ್ತಿರುವ ಮತ್ತು ಸಾಮಾಜಿಕ ಜಾಲತಾಣಗಳು ಯಾವುದೇ ಕ್ರಮ ಕೈಗೊಳ್ಳದೇ ಪರೋಕ್ಷವಾಗಿ ಪೊರೆದುಕೊಂಡು ಬರುತ್ತಿರುವ ಒಂದು ಕೋಮಿನೆಡೆಗಿನ ಈ ಪರಿಯ ದ್ವೇಷ ಮತ್ತು ಅಸಹನೆ ಇಡೀ ದೇಶವನ್ನೇ ಆಹುತಿ ಪಡೆದುಕೊಳ್ಳುವ ಮುನ್ನ ಕನಿಷ್ಠ ಪಕ್ಷ ನಮ್ಮ ಕಾನೂನು ವ್ಯವಸ್ಥೆ ಎಚ್ಚೆತ್ತು ಕೊಳ್ಳಬೇಕು. 

ದ್ವೇಷ ಭಾಷಣಗಳು IPC ಯ ಸೆಕ್ಷನ್ 153A, 153B, 295A ಮತ್ತು 505 ಅಡಿಯಲ್ಲಿ ಅಪರಾಧಗಳಾಗಿರುವುದರಿಂದ ಪೊಲೀಸರು ದೂರಿಗಾಗಿ ಕಾಯದೇ ತಕ್ಷಣ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಬೇಕು ಎಂದು ಮಾನ್ಯ ಸರ್ವೋಚ್ಚ ನ್ಯಾಯಾಲಯ “ಅಶ್ವಿನಿ ಕುಮಾರ್ ಉಪಾಧ್ಯಾಯ ವಿರುದ್ಧ ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು-Writ Petition (Civil) No. 943/2021” ಪ್ರಕರಣದಲ್ಲಿ ಕಳೆದ ವರ್ಷ ಏಪ್ರಿಲ್ 28 ರಂದು ಕಟ್ಟು ನಿಟ್ಟಿನ ತಾಕೀತು ನೀಡಿದೆ. ಇಷ್ಟಾಗಿಯೂ ರಾಜಕೀಯ ಇಚ್ಚಾ ಶಕ್ತಿಯ ಕೊರತೆ, ಪೊಲೀಸ್ ಇಲಾಖೆಯ ಮೌನ ಮತ್ತು ಸಾಮಾಜಿಕ ಜಾಲತಾಣಗಳ ಬೇಜವಾಬ್ದಾರಿತನ ಇವು ಲಂಗು ಲಗಾಮಿಲ್ಲದೆ ದ್ವೇಷ ಭಾಷಣಗಳು ಮುಂದುವರೆಯಲು ಆಸ್ಪದ ನೀಡುತ್ತಾ ಬಂದಿವೆ. 

ಶಫೀರ್ ಎ.ಎ 

ವಕೀಲರು

ಇದನ್ನೂ ಓದಿ-ಮುಸ್ಲಿಮ್ ಮಹಿಳೆ ಮತ್ತು ಷರೀಯತ್-ಭಾಗ 2

More articles

Latest article