Saturday, May 18, 2024

 “ಹಿಂದುತ್ವ ರಾಜಕಾರಣ ಸೃಷ್ಟಿಸಿರುವ ಕೀಳು ಮಟ್ಟದ ರಾಮಾಯಣ”

Most read

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವ ಈ ಸಂದರ್ಭದಲ್ಲಿ ಬೇರೆ ಯಾರ್ಯಾರನ್ನೋ ಪ್ರಶ್ನಿಸುವುದನ್ನ ಬಿಟ್ಟು ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕಾದ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ  ಬಂದು ನಿಂತಿದ್ದೇವೆ. ಈಗ ಕೇಸರಿ ಧ್ವಜಗಳೊಟ್ಟಿಗೆ ಎಲ್ಲೆಡೆ ಪ್ರದರ್ಶಿತವಾಗುತ್ತಿರುವ ಬಿಲ್ಲು-ಬಾಣಗಳ ಉಗ್ರ ಸ್ವರೂಪದ ರಾಮ ಹಾಗೂ ಕೆಡವಿ-ಕಟ್ಟಲಾಗುತ್ತಿರುವ ರಾಮಮಂದಿರ, ಸಂಕೇತ ಹಾಗೂ ಸಾಂಕೇತಿಕ ರಾಜಕಾರಣದಾಚೆಗೆ ಬಂದು ಸೃಷ್ಟಿಸಲಾಗಿರುವ ನಮ್ಮ ಕಾಲದ ಕೆಟ್ಟ ಸಾಂಸ್ಕೃತಿಕ ರಾಜಕಾರಣದ ಒಂದು ಸ್ಪಷ್ಟ ಉದಾಹರಣೆ ಅಷ್ಟೇ. ಇದಕ್ಕಿಂತ ಹೆಚ್ಚಿನ ಮೌಲ್ಯ, ಗೌರವಾದರಗಳನ್ನ ಈ ವಿದ್ಯಮಾನಕ್ಕೆ ಕೊಡುವುದು ಶುದ್ಧ ತಪ್ಪುಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ, ಸಹಾಯಕ ಪ್ರಾಧ್ಯಾಪಕರು

ರಾಮಾಯಣ, ಮಹಾಭಾರತದಂತಹ ಹತ್ತು ಹಲವು ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಬಂದಿವೆ, ಮುಂದೆ ಬರುತ್ತವೆ ಎಂದೂ ಆಶಿಸೋಣ. ಜಾಗತಿಕ ಸಾಹಿತ್ಯದ ಇತಿಹಾಸದಲ್ಲಂತೂ ಅನೇಕ ಮಾಹಾಕಾವ್ಯಗಳು ಬೇರೆ ಬೇರೆ ಭಾಷೆಗಳಲ್ಲಿ ಬಂದಿದ್ದನ್ನ ಕಂಡಿದ್ದೇವೆ, ಓದಿದ್ದೇವೆ. ಹೋಮರ್’ನ ಎಲಿಯಡ್ ಮತ್ತು  ಓಡಿಸ್ಸಿ, ವರ್ಜಲ್’ನ ಅನೀಡ್, ಈಸ್ಕಿಲಸ್’ನ ಅಗಾಮೆಮ್ನಾಂ, ಡಾಂಟೆನ ಡಿವೈನ್ ಕಾಮಿಡಿ, ಜಾನ್ ಮಿಲ್ಟನ್ ಬರೆದ ಪ್ಯಾರಡೈಸ್ ಲಾಸ್ಟ್  ಹೀಗೆ. ಇವೆಲ್ಲವುಗಳ ಹಾಗೆಯೇ ರಾಮಾಯಣ ಕೂಡ ನಮ್ಮ ಕ್ಲಾಸಿಕ್ ಟೆಕ್ಸ್ಟ್ ಅಥವಾ ಮಹಾಕಾವ್ಯ ಅಷ್ಟೇ. ನೀವು ಒಂದು ಕವಿತೆ, ಕಥೆ, ಕಾದಂಬರಿಯಂತೆಯೇ ಮತ್ತೊಂದು ಸಾಹಿತ್ಯಿಕ ಪ್ರಕಾರವಾದ ಮಹಾಕಾವ್ಯಕ್ಕೂ ಅಷ್ಟೇ ಮಹತ್ವವನ್ನ ಕೊಡಬಹುದು. ಬೇರೆ ಎಲ್ಲ ಪ್ರಕಾರಗಳಿಗೆ ಹೇಗೋ ಹಾಗೆಯೇ ಮಹಾಕಾವ್ಯಗಳನ್ನೂ ಸಹಜವಾಗಿ  ಓದಿ ವಿಮರ್ಶಿಸಬಹುದು, ವಿಶ್ಲೇಷಿಸಬಹುದು. ಮೂಲ ಕಥೆಯ ಆಧಾರವಾಗಿಟ್ಟುಕೊಂಡು ಇತರೆ ಸಣ್ಣಪುಟ್ಟ ಸಂಕಥನಗಳನ್ನ ಕಟ್ಟಿಕೊಂಡು ಖುಷಿ ಪಡಬಹುದು. 

ಇಷ್ಟವಾಗದಿದ್ದರೆ ಯಾವುದೋ ಒಂದು ಸಾಹಿತ್ಯಿಕ ಪ್ರಕಾರವನ್ನ ಹೇಗೆ ದೂರ ಇಡುತ್ತಿರೋ ಹಾಗೆ ಈ ಮಹಾಕಾವ್ಯಗಳನ್ನೂ ದೂರವಿಡಬಹುದು. ಓದುಗರ ದೃಷ್ಟಿಕೋನ, ವೈಚಾರಿಕ ಪ್ರಜ್ಞೆ, ಸಂಶೋಧನೆಯ ಮನಸ್ಸು ಜಾಗೃತವಾಗಿರುವುದರಿಂದ ಇಂತಹ ಸಾಹಿತ್ಯಿಕ ಕಾರ್ಯಚಟುವಟಿಕೆಗಳಿಗೆ ಯಾವುದೇ ದೇಶ, ಕಾಲವಾದರೂ ಒಂದು ಮಾನ್ಯತೆ ಇದ್ದೇ ಇರುತ್ತದೆ. ಒಂದು ಕೃತಿಯನ್ನ ಯಾರೋ ಒಂದಿಷ್ಟು ತಮಗೆ ತಿಳಿದಂತೆ ಸಂಕುಚಿತವಾಗಿ ಅರ್ಥೈಸಿಕೊಳ್ಳುವುದರಿಂದ ಅಂತಹ ದೊಡ್ಡ ಪ್ರಮಾದವೇನೂ ಆಗಲಾರದು ಆದರೆ, ಒಂದು ಕೃತಿಯಲ್ಲಿನ ಸೆಲೆಕ್ಟಿವ್ ಪಲ್ಲಟಗಳನ್ನ ಒಂದು ಸೀಮಿತ ಧರ್ಮ-ಜಾತಿ ಸಮುದಾಯದ ಸಾಂಸ್ಕೃತಿಕ ಅಥವಾ ಪಾರಂಪರಿಕ ಮೌಲ್ಯದ ಭಾಗವಾಗಿ ವಿಜೃಂಭಿಸಿ ನೋಡುವುದಿದೆಯಲ್ಲ ಅದು ತುಂಬಾ ಅಪಾಯಕಾರಿ.

ಚಿತ್ರ : ಗೂಗಲ್

ಈ ಲೇಖಕರೆಲ್ಲಾ ತಮ್ಮ ತಮ್ಮ ಸಾಹಿತ್ಯದಲ್ಲಿ ತಾವು ಕಂಡಿರುವ ಹಗಲುಗನಸೋ, ಇರುಳುಗನಸೋ ಈ ಸ್ವರ್ಗ, ನರಕ, ದೇವರು, ರಾಕ್ಷಸ ಹಾಗೇ-ಹೀಗೆ ಏನೋ ಒಂದು ಕಲ್ಪನೆಯನ್ನ ಮುಂದಿಟ್ಟುಕೊಂಡು ಬರೆದಿರ್ತಾರೆ. ನೀವು ಬಹಳ ಪ್ರಾಯೋಗಿಕವಾಗಿ ಅನ್ವಯಿಸಿ ಇವುಗಳಿಂದ ಏನಾದ್ರೂ ಪಡೆದುಕೊಳ್ಳುವುದಿದ್ರೆ ‘ಇವೆಲ್ಲ ನಮ್ಮ ನಮ್ಮ ಒಳಗಿನ ಗುಣಸ್ವಭಾವಗಳೇ ಹೀಗಿರ್ತವೆ’ ಅಂದುಕೊಳ್ಳಬಹುದು. ಸಾಹಿತ್ಯದಲ್ಲಿ ಅನೇಕ ಬಗೆಯ ಪಾತ್ರಗಳು ಬರುತ್ತವೆ ಹೋಗುತ್ತವೆ ಎಂಬ ಮೂಲಭೂತ ಪ್ರಜ್ಞೆ ಇರಬೇಕಾಗುತ್ತದೆ. ರಾಮ, ಲಕ್ಷ್ಮಣ ಇಲ್ಲವೇ ಸೀತೆ ಸಾಹಿತ್ಯದಲ್ಲಿ ಸೃಷ್ಟಿಯಾಗಿರುವ ಕಾಲ್ಪನಿಕ ಪಾತ್ರಗಳು. ಇಂತಹ ಕಥೆಗಳಿಗೆ ವಾಸ್ತವದ ಬಣ್ಣ ಬಳಿಯುವುದು ಸರಿಯಲ್ಲ.

ಅಷ್ಟಕ್ಕೂ “ಉತ್ತಮಪುರುಷ” ಎಂಬ ಸಂಗತಿಯನ್ನ ಕಲ್ಪಿಸಿಕೊಳ್ಳಲು ನಾಮಗೆ ರಾಮಾಯಣದ ರಾಮನೇ ಬೇಕಾಗಲಿಲ್ಲ. ಅಥವಾ ನಾವೆಷ್ಟು ಉತ್ತಮ? ಉತ್ತಮವಾಗಬೇಕು? ಯಾವುದನ್ನ ಉತ್ತಮ ಎನ್ನಬೇಕು? ‘ಉತ್ತಮ’ ಎಂಬ ಪರಿಕಲ್ಪನೆಯಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಕಡೆಗಣಿಸಲ್ಪಟ್ಟ ಅಂಶಗಳು ಯಾವುವು? ಉತ್ತಮ – ಎಂಬುದರಲ್ಲಿರುವ ಸಾಂಸ್ಕೃತಿಕ ರಾಜಕಾರಣದ ಅಂಶಗಳು ಯಾವುವು? ‘ಉತ್ತಮ’ ಎಂಬುದರಲ್ಲಿ ಅಡಗಿರುವ ಲಿಂಗ ತಾರತಮ್ಯವೆಷ್ಟು? ತಮ್ಮ ತಮ್ಮ ತಂದೆ-ತಾಯಿ, ಹೆಂಡ್ತಿಯರಿಗೆ ಉತ್ತಮ ಪುರುಷರಾಗದವರೆಲ್ಲ ಶ್ರೀ ರಾಮನನ್ನ ಜಪಿಸಿದ ಮಾತ್ರಕ್ಕೆ ಉತ್ತಮ ಪುರುಷರಾಗುತ್ತಾರೆ ಎಂಬ ಮೂರ್ಖ ನಂಬಿಕೆ ಇಟ್ಟುಕೊಳ್ಳುವ ಮುಗ್ಧರೆ ನಾವೆಲ್ಲ? ಅಥವಾ ಇದು ನನ್ನ ಪರಂಪರೆ, ನನ್ನ ಧರ್ಮ, ನನ್ನ ರಾಷ್ಟ್ರೀಯತೆ ಎಂದು ಕಳ್ಳಭಟ್ಟಿ ಸಾರಾಯಿ ಕುಡಿದು ನಶೆ ಏರಿದವರ ಹಾಗೆ ಕೂಗುವ ಕೂಗುಮಾರಿಗಳೇ ನಾವೆಲ್ಲಾ?

ನೀವು ಹೇಳಬಹುದು ಇದು ನಮ್ಮ ಅಸ್ಮಿತೆ, ಪರಂಪರೆ ಹಾಗೆ ಹೀಗೆ ಎಂದು. ನೀವು ತಿಳಿದುಕೊಂಡ ಪರಂಪರೆಯ ಒಂದಂಶವೂ ಇಲ್ಲಿ ಈ ಪ್ರಸ್ತುತ ಕೆಡವಿ-ಕಟ್ಟುತ್ತಿರುವ ವಿದ್ಯಮಾನದಲ್ಲಿ ನನಗೆ ಕಾಣಿಸುತ್ತಿಲ್ಲ. ವಯಸ್ಸಾದ ಹಿರಿಯರು ‘ಎಪ್ಪಾ ಅವನಾ.. ರಾಮ ಇದ್ದಂಗ ನೋಡು’,  ‘ಎಲ್ಲಿ ಹೋದ್ರೂ ಆ ರಾಮ-ಸೀತಾರಂಗ ಜೊತಿನ ಇರ್ತಾರ ನೋಡು’, ‘ಥೇಟ್ ಸೀತಾನ್ನ ನೋಡದಂಗ ಆಯ್ತು ನೋಡು’ ಎಂಬ ಮುಗ್ಧ ಹರಕೆಗಳಲ್ಲಿ ಅಥವಾ ನಮ್ಮ ಜನಪದದಲ್ಲಿ ತಮ್ಮ ಸಣ್ಣಪುಟ್ಟ ಗ್ರಾಮಗಳಲ್ಲಿ ‘ಇಲ್ಲಿ ರಾಮ ಬಂದಿದ್ದ’ ಇಲ್ಲಿ ಸೀತೆ ಬಂದಿದ್ದಳು’ ಎಂಬ ಅಮೂರ್ತ ನಂಬಿಕೆಯಲ್ಲಿ ಪರಂಪರೆ ಇದೆ, ಅಸ್ಮಿತೆ ಇದೆ. 

ಲೋಹಿಯಾ ಅವರು ತಮ್ಮ ‘Reflections on Hinduism’ ನಲ್ಲಿ ಹೇಳುವ ಹಾಗೆ “ಯಾವುದು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಸಂಕೇತವೋ ಅದನ್ನ ‘ಚಾರಿತ್ರಿಕ ಸತ್ಯ’ ಎಂದು ಕರೆಯುವುದು – (To transform a spiritual symbol into a historical fact) ಉಗ್ರವಾದದ ಒಂದು ಪ್ರಮುಖ ಲಕ್ಷಣ”. ಹಾಗಾಗಿ ಧರ್ಮ ಮತ್ತು ಸಂಸ್ಕೃತಿಗೆ ಎಲ್ಲೆಲ್ಲಿ ಅಮೂರ್ತವಾದ ಆಧ್ಯಾತ್ಮಿಕ ಸಂಕೇತ ಅಥವಾ ಪ್ರತಿಮೆಗಳಿರುತ್ತವೆಯೋ ಅಲ್ಲಿಯವರೆಗೆ ಅದು ಜೀವಂತವಾಗಿರುತ್ತದೆ.

ಸಾಹಿತ್ಯಿಕ ಪಾತ್ರಗಳು ಇಷ್ಟು ಜನಮನ್ನಣೆಗಳಿಸಿದ್ದು ಆ ಕೃತಿಗಳ ಹೆಗ್ಗಳಿಕೆ ಎಂದೇ ಹೇಳಬಹುದು. ಆದ್ರೆ ಹಾದಿಬೀದಿಯಲ್ಲಿ ಹೋಗುವ ಅನ್ಯಧರ್ಮೀಯರನ್ನ ನಿಲ್ಲಿಸಿ ‘ಜೈ ಶ್ರೀರಾಮ್’ ಅಂತ ಹೇಳಿಸುವುದರಲ್ಲಿ ಆಗಲಿ, ‘ಹಿಜಾಬ್’ ಬದಲಿಗೆ ‘ಕೇಸರಿ ಶಾಲು’ ಹಾಕೊಂಡು ಬರ್ತೀವಿ ಎಂದು ಅಲ್ಲೂ ‘ಜೈ ಶ್ರೀರಾಮ್’ ಎಂದು ಬೀದಿನಾಯಿಗಳ ಹಾಗೆ ಎಲ್ಲಿ ಬೇಕಂದಲ್ಲೆಲ್ಲ ಬೊಗಳುವ, ಬೊಗಳಿಸುವ ಅರೆಹುಚ್ಚು ಮನಸ್ಥಿತಿಯ ಜನರಲ್ಲಿ ಈ ಪರಂಪರೆಯೂ ಇಲ್ಲ, ಅಸ್ಮಿತೆಯೂ ಇಲ್ಲ. ಗಮನಿಸಿ ನೋಡಿ ಬೇಕಾದ್ರೆ ಧರ್ಮ, ಪರಂಪರೆ ಎಂದು ಬೊಗಳೆ ಬಿಡುವ ಮೂರ್ಖರೆ ರಾಷ್ಟ್ರ, ರಾಷ್ಟ್ರೀಯತೆ, ಸಂಸ್ಕೃತಿ ಎಂಬ ಪದಗಳನ್ನೂ ಬಳಸುತ್ತಿರುತ್ತಾರೆ. ಇವರು ಸಹಜವಾಗಿ ಕೋಮುವಾದಿಗಳೂ ಮೂಲಭೂತವಾದಿಗಳೂ ಆಗಿರುತ್ತಾರೆ. ಇವರಿಗೆ ಸಂವಿಧಾನದ ಬಗ್ಗೆಯಾಗಲಿ, ಪ್ರಜಾಸತ್ತೆಯ ಮೇಲಾಗಲಿ, ಭಾರತದ ವೈವಿಧ್ಯತೆಯ ಮೇಲಾಗಲಿ ಎಳ್ಳಷ್ಟೂ ಗೌರವವಿರುವುದಿಲ್ಲ. ಇದ್ದರೂ ಮೇಲು ವರ್ತನೆಯಲ್ಲಿ ಹಾಗೆ ಗೌರವವಿರುವುದನ್ನ ಬಿಂಬಿಸಿಕೊಳ್ಳುತ್ತಾರೆ.

ಒಂದು ದೇಶದ ಪ್ರಭುತ್ವ ಮತ್ತು ವ್ಯವಸ್ಥೆಯ ಇಂತಹ ವಿಘಟನೆಗಳು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಬಹುತ್ವ ಹಾಗೂ ಐಕ್ಯತೆಯಂತಹ ಮೌಲ್ಯಗಳಿಂದ ಬದುಕು ನಡೆಸುತ್ತಿರುವ ಬೇರೆ ಬೇರೆ ಧಾರ್ಮಿಕ ಸಮುದಾಯಗಳ ಮೇಲೆ ಹುಟ್ಟುಹಾಕುವ ಪರಕೀಯತೆ, ಅಸಹಾಯಕತೆ, ಸಂದಿಗ್ಧತೆಯನ್ನ ಅರಿಯುವುದು ಕಷ್ಟ. ಬಂಡವಾಳಶಾಹಿ ಮನೋಧೋರಣೆಯ ಪ್ರಭುತ್ವವೇ ಇದರ ಹಿಂದೆ-ಮುಂದೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದು ಉಸಿರುಕಟ್ಟುವ ವಿದ್ಯಮಾನವಾಗಿ ನಮ್ಮೆದುರು ನಿಂತಿದೆ. ಪ್ರಭಾವಿ ಸಂಸ್ಕೃತಿ (dominant culture) ಎಂದಿದ್ದರೂ ಪ್ರಭಾವಿ ಸಮುದಾಯಗಳ ಬಂಡವಾಳವಾಗಿಯೇ ಇದ್ದದ್ದು ಇತಿಹಾಸದಿಂದ ನಮಗೆ ಮನವರಿಕೆಯಾಗಿದೆ. ಹಾಗಾಗಿ ಇದು ಯಾವುದೇ ಒಂದು ಸಮುದಾಯದ ತಕರಾರಲ್ಲ; ನಮ್ಮ ನಾಡು ಪ್ರಜ್ಞೆಯಿಂದ ಕಟ್ಟಿಕೊಂಡಿರುವ “ಕೂಡು ಸಂಸ್ಕೃತಿ”ಯನ್ನ ಉಳಿಸಿಕೊಳ್ಳುವ ಹೊಣೆಗಾರಿಕೆ ಇಲ್ಲಿನ ಎಲ್ಲ ಸಮುದಾಯಗಳಿಗೂ ಇರಬೇಕಿತ್ತು. ಕಾನೂನಿನ ಆಚೆಗೂ ಈ ದಿಸೆಯಲ್ಲಿ ಪ್ರಯತ್ನಗಳಿದ್ದಾಗ ಮೌಲ್ಯಗಳು ಸಾರ್ವತ್ರಿಕತೆಯ ಸ್ವರೂಪ ಪಡೆಯಲು ಯೋಗ್ಯ. 

ರಾಮಮಂದಿರ ಉದ್ಘಾಟನೆ- ಚಿತ್ರ ಕೃಪೆ: ಇಂಡಿಯನ್‌ ಎಕ್ಸ್‌ ಪ್ರೆಸ್

ಇಂತಹ ಕೀಳು ಮಟ್ಟದ ಸಾಂಸ್ಕೃತಿಕ ರಾಜಕಾರಣಕ್ಕೆ ನಮ್ಮ ನೆಲದಲ್ಲಿ ಸಾಕಷ್ಟು ಉದಾಹರಣೆಗಳಿವೆ. ಒಂದನ್ನ ಉಲ್ಲೇಖಿಸುವುದಾದರೆ ನಮ್ಮಲ್ಲಿ ಅನೇಕ ಲೇಖಕರು ವಿವಿಧ ಭಾಷೆಗಳಲ್ಲಿ ಬಂದ ಸಾಹಿತ್ಯವನ್ನ ವ್ಯವಸ್ಥಿತವಾಗಿ ವಿಶ್ಲೇಷಿಸಿ ಸರ್ವೇ ಮಾಡಿ ಸಾಹಿತ್ಯದ ಬೆಳವಣಿಗೆಯನ್ನ ಪುಸ್ತಕ ರೂಪದಲ್ಲಿ ಕಂಪೆಂಡಿಯಮ್ ಆಗಿ ಬರೆಯುತ್ತಾ ಬಂದಿದ್ದಾರೆ. ನಮ್ಮಲ್ಲಿ ರಂ. ಶ್ರೀ. ಮುಗಳಿ ಅವರು ‘ಕನ್ನಡ ಸಾಹಿತ್ಯ ಚರಿತ್ರೆ’ ಎಂದು ಬರೆದ ಹಾಗೆಯೇ ಇಂಗ್ಲೀಷ್‌ ನಲ್ಲೂ ಕೆ. ಆರ್. ಶ್ರೀನಿವಾಸ್ ಅಯ್ಯಂಗಾರ್ ಮತ್ತು  ಎಂ. ಕೆ. ನಾಯಕ್ ಅವರೂ ಕೂಡ ಬರೆದಿದ್ದಾರೆ. ಅಯ್ಯಂಗಾರ್ ಮತ್ತೆ ನಾಯಕ್ ಅವರು ಬರೆದ ಪುಸ್ತಕದಲ್ಲಿ ಗದ್ಯ-ಪದ್ಯ, ನಾಟಕ, ಪ್ರಬಂಧ, ಹೀಗೆ ಸಾಹಿತ್ಯದ ಪ್ರಮುಖ ಪ್ರಕಾರಗಳ ಬಗ್ಗೆ ವಿವರಿಸುವ ಇವರು ಗಾಂಧಿ, ನೆಹರು, ರಾಧಾಕೃಷ್ಣನ್, ಟ್ಯಾಗೋರ್, ವಿವೇಕಾನಂದ ಮುಂತಾದವರ ಗದ್ಯ ಅಥವಾ ನಾನ್-ಫಿಕ್ಷನಲ್ ಬರಹಗಳನ್ನ ಉಲ್ಲೇಖಿಸುವ ಇವರು ಮೇಲಿನ ಕೆಲವು ಲೇಖಕರ ಸಮಕಾಲೀನರೇ ಆದ, ಸುಮಾರು ಇಪ್ಪತ್ತೆರಡು (22) ಸಂಪುಟಗಳಷ್ಟು ಬರೆದ ಡಾ. ಬಿ. ಆರ್. ಅಂಬೇಡ್ಕರರ ಹೆಸರನ್ನ ಉಲ್ಲೇಖಿಸಲು ಕೂಡ ಮನಸ್ಸು ಮಾಡಿಲ್ಲದಿರುವುದು ನಮ್ಮ ಸಾಹಿತ್ಯವಲಯದ ಮಂದಿಗೆ ಇದು ನಾಚಿಕೆಗೇಡಿನ ಸಂಗತಿ ಎಂದು ಅನಿಸಿಲೇ ಇಲ್ವಲ್ಲ. ಇಂಥವುಗಳನ್ನ ನಮ್ಮ ನೆಲದ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ರಾಜಕಾರಣವಾಗಿ ನೋಡದೆ ವಿಧಿ ಇಲ್ಲ.

ಇಷ್ಟು ಸಹಜ ಸಾಮಾನ್ಯ ತಿಳುವಳಿಕೆಯನ್ನೂ ನಾವು ನಮ್ಮ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಕಷ್ಟವಾಗುತ್ತಿದೆ ಅಥವಾ ಆ ಅರಿವು ಮೂಡಿಸುವಲ್ಲಿ  ಅಸಮರ್ಥರಾಗಿದ್ದೀವಿ ಎಂಬ ಸಂಗತಿ ಬೇಸರ ಹುಟ್ಟಿಸುತ್ತದೆ.

ಡಾ. ವಸಂತಕುಮಾರ್ ಎಸ್. ಕಡ್ಲಿಮಟ್ಟಿ

ಸಹಾಯಕ ಪ್ರಾಧ್ಯಾಪಕರು, ಇಳಕಲ್, ಬಾಗಲಕೋಟೆ.

More articles

Latest article