ಹೈದರಾಬಾದ್: ಗಂಡನೇ ತನ್ನ 36 ವರ್ಷದ ಪತ್ನಿಯನ್ನು ಆಸ್ಟ್ರೇಲಿಯಾದಲ್ಲಿ ಕೊಂದು, ಮಗನೊಂದಿಗೆ ಭಾರತಕ್ಕೆ ಹಿಂದಿರುಗಿರುವ ಘಟನೆ ವರದಿಯಾಗಿದೆ.
ಹೈದರಾಬಾದ್ ಮೂಲದ ಚೈತನ್ಯ ಮದಗಣಿ ಕೊಲೆಗೀಡಾದ ನತದೃಷ್ಟ ಹೆಣ್ಣುಮಗಳು. ಈಗ ಇವರ ಮಗುವು ಆಕೆಯ ಪೋಷಕರ ವಶದಲ್ಲಿದೆ. ಸ್ವತಃ ಗಂಡನೇ ಈ ಮಗುನನ್ನು ತನ್ನ ಮಾವನ ಮನೆಗೆ ಒಪ್ಪಿಸಿದ್ದಾನೆ.
ಆಸ್ಟ್ರೇಲಿಯಾದ ಬಕ್ಲಿ ಎಂಬಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದ್ದು ರಸ್ತೆಯೊಂದರ ಬದಿಯಲ್ಲಿ ಚೈತನ್ಯ ಮದಗಣಿಯ ಮೃತದೇಹ ಪತ್ತೆಯಾಗಿತ್ತು. ಪತ್ನಿಯನ್ನು ಕೊಂದ ಅಶೋಕ್ ರಾಜ್ ವಾರಿಕುಪ್ಪಳ ಕೊಲೆಯ ನಂತರ ಮಗನೊಂದಿಗೆ ಭಾರತಕ್ಕೆ ಹಿಂದಿರುಗಿದ್ದಾನೆ.
ಅಶೋಕ್ ರಾಜ್ ವಾರಿಕುಪ್ಪಳ ಮತ್ತು ಚೈತನ್ಯ ಮದಗಣಿ ದಂಪತಿಗಳು ತಮ್ಮ ಪುತ್ರನೊಂದಿಗೆ ಆಸ್ಟ್ರೇಲಿಯಾದ ಪಾಯಿಂಟ್ ಕುಕ್ ಎಂಬಲ್ಲಿ ವಾಸವಾಗಿದ್ದರು. ದಂಪತಿಗಳು ಆಸ್ಟ್ರೇಲಿಯಾ ಪೌರತ್ವ ಪಡೆದುಕೊಂಡು ಪುತ್ರನೊಂದಿಗೆ ವಾಸಿಸುತ್ತಿದ್ದರು.
ಪ್ರಕರಣ ಕುರಿತಂತೆ ಉಪ್ಪಳ ಶಾಸಕ ಭಂಡಾರಿ ಲಕ್ಷ್ಮ ರೆಡ್ಡಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು, ಚೈತನ್ಯ ಮದಗಣಿಯ ಪಾರ್ಥಿವ ದೇಹವನ್ನು ಸ್ವದೇಶಕ್ಕೆ ತಲುಪಿಸುವ ವ್ಯವಸ್ಥೆ ಮಾಡಿಕೊಡಬೇಕೆಂದು ವಿನಂತಿಸಿದ್ದರು. ಲಕ್ಷ್ಮ ರೆಡ್ಡಿ ಚೈತನ್ಯ ಪೋಷಕರ ನಿವಾಸಕ್ಕೂ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಮೃತ ಚೈತನ್ಯ ಮದಗಣಿಯ ಪೋಷಕರ ಬಳಿ ಸ್ವತಃ ಆಕೆಯ ಗಂಡನೇ ಹೋಗಿ ತಾನು ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದಾನೆ ಎಂದು ಶಾಸಕ ಲಕ್ಷ್ಮರೆಡ್ಡಿ ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ವಿಕ್ಟೋರಿಯಾ ಪೊಲೀಸರು ಮಾರ್ಚ್ 9ರಂದು ಬಕ್ಲಿ ಎಂಬಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು, ತನಿಖೆ ನಡೆಯುತ್ತಿದೆ ಎಂದು ವೆಬ್ ಸೈಟ್ ನಲ್ಲಿ ಹೇಳಿಕೆ ನೀಡಿದ್ದಾರೆ. ಕೌಟುಂಬಿಕ ವ್ಯಾಜ್ಯದಿಂದ ಈ ಪ್ರಕರಣ ನಡೆದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.