ಚುನಾವಣಾ ಬಾಂಡ್ ಹಗರಣವನ್ನು ಸ್ವತಂತ್ರ ಪತ್ರಕರ್ತರು ನಿತ್ಯವೂ ಬಗೆಯುತ್ತಿದ್ದಾರೆ. ಹೊಸ ಹೊಸ ಅನ್ಯಾಯ ಮತ್ತು ಅಕ್ರಮಗಳ ಕತೆ ಹೊರಬರುತ್ತಲೇ ಇದೆ. ಗುಜರಾತ್ ಅಂಜಾರ್ ನದು ಒಂದು ಕತೆ ಅಷ್ಟೆ. ಈ ಹಗರಣದ ಗುಡ್ಡದಡಿಯಲ್ಲಿ ಇನ್ನೆಷ್ಟು ಅಂಜಾರ್ ಗಳು ಅಡಗಿವೆಯೋ, ಎಷ್ಟು ಮಂದಿ ಮಹೇಂದ್ರ ಸಿನ್ಹಾ ಸೋಧಾಗಳು ಇದ್ದಾರೆಯೋ ಮುಂದಷ್ಟೇ ತಿಳಿಯಬೇಕು. – ಶ್ರೀನಿವಾಸ ಕಾರ್ಕಳ
ಮೋದಿ ಆಡಳಿತದ ಅಮೃತಕಾಲದ, ‘ಚುನಾವಣಾ ಬಾಂಡ್’ ಎಂಬ ಕಂಡು ಕೇಳರಿಯದ ಮಹಾ ಭ್ರಷ್ಟಾಚಾರದ ಕತೆಗಳು ದಿನಕ್ಕೊಂದರಂತೆ ಹೊರಬರುತ್ತಿವೆ. ಕೆಲವು ಮಾಮೂಲಿ ಕತೆಗಳಾದರೆ, ಇನ್ನು ಕೆಲವು ಊಹಿಸಲಾಗದಷ್ಟು ಭಯಾನಕವೂ, ರೋಚಕವೂ ಆದವು. ಅಂತಹ ಒಂದು ಕತೆ ಗುಜರಾತಿನ ಕಛ್ ಜಿಲ್ಲೆಯ ಅಂಜಾರ್ ನಿಂದ ವರದಿಯಾಗಿದೆ. ಅಕ್ಷರಸ್ಥ ಮಹಾ ಬುದ್ಧಿವಂತರು ಸೇರಿ ಅನಕ್ಷರಸ್ಥ ಮುಗ್ಧ ದಲಿತ ಕುಟಂಬಕ್ಕೆ 11 ಕೋಟಿ ನಾಮ ಹಾಕಿದ ಕತೆಯಿದು.
ಮೋಸದ ಕತೆ ಬೆಳಕಿಗೆ ಬಂದ ಬಗೆ
ದಿನಾಂಕ 11, ಅಕ್ಟೋಬರ್ 2023 ರಂದು ಗುಜರಾತಿನ ಕಛ್ ಜಿಲ್ಲೆಯ ಅಂಜಾರ್ ನ ಆರು ಸದಸ್ಯರ ದಲಿತ ಕುಟುಂಬದ ಹೆಸರಿನಲ್ಲಿ 11 ಕೋಟಿ 14 ಸಾವಿರ ರುಪಾಯಿ ಮೌಲ್ಯದ ಚುನಾವಣಾ ಬಾಂಡ್ (ಎಲೆಕ್ಟೋರಲ್ ಬಾಂಡ್) ಖರೀದಿಸಲಾಯಿತು. ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಿದ ಮಾಹಿತಿಯನ್ನು ಬೆನ್ನಟ್ಟಿದಾಗ ತಿಳಿದು ಬಂದುದೇನಂದರೆ, ಈ ಬಾಂಡ್ ಗಳ ಪೈಕಿ 10 ಕೋಟಿಯನ್ನು 16 ಅಕ್ಟೋಬರ್ 2023 ರಂದು ಭಾರತೀಯ ಜನತಾ ಪಾರ್ಟಿ ನಗದೀಕರಿಸಿತು. 18, ಅಕ್ಟೋಬರ್ 2023 ರಂದು ಶಿವಸೇನೆಯು 1 ಕೋಟಿ 14 ಸಾವಿರದ ಬಾಂಡ್ ಅನ್ನು ನಗದೀಕರಿಸಿತು.
ಇದರಲ್ಲಿ ಏನು ವಿಶೇಷವಿದೆ ಎಂದು ಕೇಳಬಹುದು. ವಿಶೇಷವಿದೆ. ಇದಕ್ಕೆ ಕಾರಣ, ಈ ಅಮಾಯಕ ದಲಿತ ಕುಟುಂಬ ಸ್ವ ಇಚ್ಛೆಯ ಮೇರೆಗೆ ಚುನಾವಣಾ ಬಾಂಡ್ ಖರೀದಿಸಿ ರಾಜಕೀಯ ಪಕ್ಷಗಳಿಗೆ ಹಂಚಿದ್ದಲ್ಲ. ಅವರಿಗೆ ಮೋಸ ಮಾಡಿ ಅವರು ಬಾಂಡ್ ಖರೀದಿಸುವಂತೆ ಮಾಡಿದ್ದು!
ಮಹಾಮೋಸ
ತಾನು ವಂಚನೆಗೊಳಗಾಗಿ 11 ಕೋಟಿ ಕಳೆದುಕೊಂಡಿದ್ದೇನೆ ಎಂದು ತಡವಾಗಿ ಅರಿತ ಮಾನವರ್ ದಲಿತ ಕುಟುಂಬವು ಈ ಸಂಬಂಧ ಪೊಲೀಸ್ ದೂರು ನೀಡಿತು. ಆ ದೂರಿನ ಪ್ರಕಾರ, ಅದಾನಿ ಸಮೂಹಕ್ಕೆ ಸೇರಿದ Welspun Enterprises Ltd ಕಂಪೆನಿಗೆ ತನ್ನ ಒಂದು ಯೋಜನೆಗಾಗಿ ಜಮೀನು ಬೇಕಾಗಿತ್ತು. ಅ ಪ್ರಕಾರ ಅಂಜಾರ್ ನ ದಲಿತ ಕುಟುಂಬದ ಕೃಷಿ ಜಮೀನನ್ನು (43,000 ಚದರ ಮೀಟರ್) ಅದು ಖರೀದಿಸ ಹೊರಟಿತು. ಆಗಸ್ಟ್ 2023 ರಲ್ಲಿ ಜಿಲ್ಲಾಡಳಿತವು ಅವರ ಕೃಷಿ ಭೂಮಿಯನ್ನು 16,61,21,877 ರುಪಾಯಿಗೆ ಮಾರಲು ಒಪ್ಪಿಗೆ ನೀಡಿತು. ಇದರಲ್ಲಿ 2,80,15,000 ರುಪಾಯಿಯನ್ನು ಮುಂಗಡವಾಗಿ ನೀಡಲಾಯಿತು. 13,81,09,877 ರುಪಾಯಿಯನ್ನು ಭೂಸ್ವಾಧೀನಗೊಂಡ ಜಮೀನಿನ ಜಂಟಿ ಮಾಲೀಕರಾದ ಏಳು ಮಂದಿಯ ಖಾತೆಗೆ ವರ್ಗಾಯಿಸಲಾಯಿತು.
ಇದರ ತರುವಾಯ, 1, ಅಕ್ಟೋಬರ್ 2023 ಮತ್ತು 8, ಅಕ್ಟೋಬರ್ 2023 ರ ನಡುವೆ ವೆಲ್ ಸ್ಪನ್ ಉದ್ಯೋಗಿ ಮಹೇಂದ್ರ ಸಿನ್ಹ ಸೋಧಾ (ಈತ ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಭಾಗಿಯಾದವ) ಕಂಪೆನಿಯ ಗೆಸ್ಟ್ ಹೌಸ್ ನಲ್ಲಿ ಸಾವಕಾರ ಮತ್ತು ಆತನ ಮಗ ಹರೇಶ‍್ ನೊಂದಿಗೆ ನಾಲ್ಕು ಸಭೆಗಳನ್ನು ನಡೆಸಿದ. ‘ಕೋಟಿಗಟ್ಟಲೆಯ ಮೊತ್ತ ಇರುವುದರಿಂದ ನಿಮಗೆ ಆದಾಯ ತೆರಿಗೆ ಇಲಾಖೆಯಿಂದ ತೊಂದರೆಯಾಗಲೂ ಬಹುದು, ಆದ್ದರಿಂದ ಜಮೀನು ಮಾರಿ ಗಳಿಸಿದ ಹಣವನ್ನು ಚುನಾವಣಾ ಬಾಂಡ್ ನಲ್ಲಿ ತೊಡಗಿಸಿ, ಆ ಹಣವು ಕೆಲವು ವರ್ಷಗಳಲ್ಲಿ ಒಂದೂವರೆ ಪಟ್ಟು ಆಗುತ್ತದೆ’ ಎಂದು ನಂಬಿಸಿದ.
“ನಾವು ಅನಕ್ಷರಸ್ಥರು. ಈ ಯೋಜನೆಯ ಬಗ್ಗೆ ನಮಗೆ ಏನೇನೂ ಗೊತ್ತಿರಲಿಲ್ಲ. ಆಗ ಅದು ನಮಗೆ ಅತ್ಯಂತ ಆಕರ್ಷಕವಾಗಿ ಕಂಡಿತು” ಎನ್ನುತ್ತಾರೆ 41 ರ ಹರೆಯದ ಹರೇಶ‍್ ಸಾವಕಾರ. ಹರೇಶ್ ಸಾವಕಾರ ಮಾನವರ್ ನ ಮಗ. ಸಾವಕಾರ ಮಾನವರ್ ವಂಚನೆಗೊಳಗಾದ ಕುಟುಂಬದ ಆರು ಸದಸ್ಯರಲ್ಲಿ ಒಬ್ಬ.
ಸೋಧಾ ನಡೆಸಿದ ಸಭೆಗಳಲ್ಲಿ ಬಿಜೆಪಿ ಅಂಜಾರ್ ಸಿಟಿ ಅಧ್ಯಕ್ಷ ಹೇಮಂತ ರಜಿನಿಕಾಂತ್ ಶಾ ಕೂಡಾ ಭಾಗಿಯಾಗಿದ್ದ.
ಹೀಗೆ ಸಾವಕಾರ ದಲಿತ ಕುಟುಂಬ ಅನ್ಯಾಯವಾಗಿ 11 ಕೋಟಿಯನ್ನು ಕಳೆದುಕೊಂಡಿತು.
ಷಡ್ಯಂತ್ರದಲ್ಲಿ ಭಾಗಿಯಾದವರು
ಸಾವಕಾರ 18 ಮಾರ್ಚ್ 2024 ರಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಅಂಜಾರ್ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ವೆಲ್ ಸ್ಪನ್ ನಿರ್ದೇಶಕ ವಿಶ‍್ವನಾಥನ್ ಕೊಲ್ಲೆಂಗೊಡೆ, ಸಂಜಯ್ ಗುಪ್ತಾ, ಚಿಂತನ್ ಥಾಕರ್, ಪ್ರವೀಣ ಭನ್ಸಾಲಿ, ಮಹೇಂದ್ರ ಸಿನ್ಹ ಸೋಧಾ (ವೆಲ್ ಸ್ಪನ್ ಸೀನಿಯರ್ ಜನರಲ್ ಮ್ಯಾನೇಜರ್), ವಿಮಲ್ ಕಿಶೋರ್ ಜೋಶಿ (ಅಂಜಾರ್ ಭೂ ಸ್ವಾಧೀನ ಅಧಿಕಾರಿ) ಮತ್ತು ಹೇಮಂತ ಅಲಿಯಾಸ್ ಡ್ಯಾನಿ ರಜನಿಕಾಂತ ಶಾ (ಅಂಜಾರ್ ಸಿಟಿ ಬಿಜೆಪಿ ಅಧ್ಯಕ್ಷ) ಮೊದಲಾದವರನ್ನು ಆರೋಪಿಗಳೆಂದು ಹೆಸರಿಸಿದ್ದಾರೆ.
ಪೊಲೀಸರು ಇನ್ನೂ ಎಫ್ ಐ ಆರ್ ದಾಖಲಿಸಿಲ್ಲ. ತನಿಖೆ ನಡೆಸುತ್ತಿದ್ದೇವೆ, ದೂರಿನಲ್ಲಿ ಹುರುಳಿದೆಯಾದರೆ ಮುಂದೆ ಎಫ್ ಐ ಆರ್ ದಾಖಲಿಸುತ್ತೇವೆ ಎಂದಿದ್ದಾರೆ.
ಅನುಮಾನಾಸ್ಪದ ಭೂಸ್ವಾಧೀನ ಪ್ರಕ್ರಿಯೆ
ಹಾಗೆ ನೋಡಿದರೆ, ಈ ಜಮೀನು ವ್ಯವಹಾರವೇ ಶಂಕಾಸ್ಪದವಾಗಿತ್ತು. ಮಾನವರ್ ಕುಟುಂಬ ಕೃಷಿ ಮಾಡುತ್ತಿದ್ದ ಜಮೀನನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಅಕ್ಟೋಬರ್ 2022 ರಲ್ಲಿಯೇ ಶುರುವಾಗಿತ್ತು. ಅಂಜಾರ್ ನ ವಕೀಲ ಗೋವಿಂದ ದಫಾಡಾ ಹೇಳುವ ಪ್ರಕಾರ, ಕಲೆಕ್ಟರ್ ನೇತೃತ್ವದ ಜಿಲ್ಲಾ ಸ್ತರದ ಭೂಸ್ವಾಧೀನ ಸಮಿತಿಯು ಚದರ ಮೀಟರ್ ಗೆ 17,500 ರುಪಾಯಿಯಂತೆ ಜಮೀನಿಗೆ ಬೆಲೆ ನಿಗದಿಪಡಿಸಿತ್ತು. ಈ ಬೆಲೆಯ ಪ್ರಕಾರ ಒಟ್ಟು ಪರಿಹಾರ ಮೊತ್ತ ಸುಮಾರು 76 ಕೋಟಿ ಯಾಗುತ್ತದೆ.
ಆದರೆ ಇಷ್ಟು ದೊಡ್ಡ ಮೊತ್ತವನ್ನು ಕೊಡಲು ವೆಲ್ ಸ್ಪನ್ ಗೆ ಮನಸಿರಲಿಲ್ಲ. ಆದ್ದರಿಂದ ಪ್ರಕ್ರಿಯೆಯು ಒಂದು ವರ್ಷ ಮುಂದೆ ಹೋಯಿತು. ಭೂಸ್ವಾಧೀನ ಪ್ರಕ್ರಿಯೆ ಸಮಿತಿಯು ಭೂ ಸ್ವಾಧೀನಕ್ಕೆ ದರ ನಿಗದಿಪಡಿಸಿದ ಒಂದು ವರ್ಷದ ಒಳಗೆ ವ್ಯವಹಾರ ಮುಗಿಯದಿದ್ದರೆ ಮತ್ತೆ ಹೊಸದಾಗಿ ಅದನ್ನು ಆರಂಭಿಸಬೇಕು ಎಂಬ ನಿಯಮವಿದೆ.
ಈ ನಡುವೆ ಏನಾಯಿತೋ ಗೊತ್ತಿಲ್ಲ. ಪ್ರಕ್ರಿಯೆ ಇನ್ನೇನು ಅನೂರ್ಜಿತಗೊಳ್ಳುತ್ತದೆ ಎನ್ನುವಾಗ, ಕಛ್ ನ ಡೆಪ್ಯುಟಿ ಕಲೆಕ್ಟರ್ ಮೆಹುಲ್ ದೇಸಾಯಿ ಮಧ್ಯ ಪ್ರವೇಶಿಸಿ ಮತ್ತೆ ಸಂಧಾನ ಮಾಡಿ ಜಮೀನಿನ ಮೌಲ್ಯವನ್ನು 76 ಕೋಟಿಯಿಂದ 16,61,21,877 ಕ್ಕೆ ಇಳಿಸಿದರು! ಗುಜರಾತ್ ಸೀಲಿಂಗ್ ಕಾನೂನಿನ ಪ್ರಕಾರ ಭೂಸ್ವಾಧೀನ ಸಮಿತಿಯು ನಿಗದಿಪಡಿಸಿದ ಮೊತ್ತವಾದ 76 ಕೋಟಿಗೆ ಮಾರುತ್ತಿದ್ದರೆ ಗುಜರಾತ್ ಸರಕಾರಕ್ಕೆ 30.4 ಕೋಟಿ (40%) ಸಿಗುತ್ತಿತ್ತು, ಸಾವಕಾರ ಕುಟುಂಬಕ್ಕೆ 45.6 ಕೋಟಿ ಸಿಗುತ್ತಿತ್ತು. ಆದರೆ ಕಂಪೆನಿಗೆ ಅನುಕೂಲ ಮಾಡ ಹೊರಟು, ಸಾವಕಾರ ಕುಟುಂಬಕ್ಕೆ 30 ಕೋಟಿ ನಷ್ಟವಾದರೆ, ಗುಜರಾತ್ ಸರಕಾರಕ್ಕೂ 30 ಕೋಟಿ ನಷ್ಟವಾಯಿತು.
ಕಂಪೆನಿ ಅಧಿಕಾರಿಗಳು, ಸರಕಾರಿ ಅಧಿಕಾರಿಗಳು ಸೇರಿ ನಡೆಸಿದ ಎಷ್ಟೊಂದು ದೊಡ್ಡ ಹಗರಣವಿದು! ಸೂಕ್ತ ತನಿಖೆಗೆ ಒಳಪಡಿಸಿದರೆ ಇನ್ನೂ ಎಷ್ಟೊಂದು ಮಾಹಿತಿಗಳು ಹೊರಬಂದಾವು, ಎಷ್ಟೊಂದು ಮಂದಿ ಸರಕಾರಿ ಅಧಿಕಾರಿಗಳು ಜೈಲು ಸೇರಬೇಕಾದೀತು! ಆದರೆ ತನಿಖೆ ಮಾಡುವವರು ಯಾರು?
ಚುನಾವಣಾ ಬಾಂಡ್ ಹಗರಣವನ್ನು ಸ್ವತಂತ್ರ ಪತ್ರಕರ್ತರು ನಿತ್ಯವೂ ಬಗೆಯುತ್ತಿದ್ದಾರೆ. ಹೊಸ ಹೊಸ ಅನ್ಯಾಯ ಮತ್ತು ಅಕ್ರಮಗಳ ಕತೆ ಹೊರಬರುತ್ತಲೇ ಇದೆ. ಗುಜರಾತ್ ಅಂಜಾರ್ ನದು ಇದು ಒಂದು ಕತೆ ಅಷ್ಟೆ. ಈ ಹಗರಣದ ಗುಡ್ಡದಡಿಯಲ್ಲಿ ಇನ್ನೆಷ್ಟು ಅಂಜಾರ್ ಗಳು ಅಡಗಿವೆಯೋ, ಎಷ್ಟು ಮಂದಿ ಮಹೇಂದ್ರ ಸಿನ್ಹಾ ಸೋಧಾಗಳು ಇದ್ದಾರೆಯೋ ಮುಂದಷ್ಟೇ ತಿಳಿಯಬೇಕು.
(ಮಾಹಿತಿ ಮೂಲ: The Quint)
ಶ್ರೀನಿವಾಸ ಕಾರ್ಕಳ
ಸಾಮಾಜಿಕ ಕಾರ್ಯಕರ್ತರು