(ಈ ವರೆಗೆ..) ದನ ಕಳೆದುಕೊಂಡ ಗಂಗೆ ಕಂಗಾಲಾದಳು. ಮನಸು ಹಿಂದಕ್ಕೋಡಿತು. ತಾನು ಮಗುವಿರುವಾಗ ತನ್ನ ಅಮ್ಮ ಮೂರು ಹುಡುಗರ ಬಳಿಕ ಹುಟ್ಟಿದವಳು, ಮನೆಗೆ ಅನಿಷ್ಟವೆಂದು ಮಗುವಿಗೆ ಮೊಲೆಯುಣಿಸದೆ ಸಾಯಿಸಲು ಯತ್ನಿಸಿದ್ದಳು. ಅದೇ ಊರಿನ ಅಕ್ಕಯ್ಯ ಸಾಕವ್ವನ ಕಣ್ತೆರೆಸಿ ಗಂಗೆಯನ್ನು ಉಳಿಸಿದ್ದಳು. ಯಾಕಾದರೂ ನನ್ನನ್ನು ಉಳಿಸಿದರೋ ಎಂದು ಅಲವತ್ತುಕೊಂಡೇ ಗಂಗೆ ಅಪ್ಪಜ್ಜಣ್ಣನ ಹುಡುಕುತ್ತಾ ಕಾಡಿನತ್ತ ನಡೆದಳು. ಅಲ್ಲೇನಾಯ್ತು ? ? ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಿನ ನಡಿಗೆಯ70 ನೇ ಕಂತು.
ಪ್ರಪಂಚದ ಸಮಸ್ತ ಭಾರವನ್ನೆಲ್ಲ ತನ್ನ ಎದೆಯ ಮೇಲೆ ಹೊತ್ತುಕೊಂಡಂತೆ ಜೇನುಕಲ್ಲು ಬೆಟ್ಟದ ಕಾಡೊಳಗೆಲ್ಲಾ ಕಳೆದು ಹೋದ ಹಸು ಕರುವನ್ನು ಹುಡುಕುತ್ತಾ ಅಲೆಯುತ್ತಿದ್ದ ಅಪ್ಪಜ್ಜಣ್ಣನಿಗೆ ದಟ್ಟವಾದ ಪೊದೆಯ ಸಂಧಿಯಲ್ಲಿ ನಾಜೋಕಾಗಿ ತುಂಡರಿಸಿ ಒಟ್ಟಿದ್ದ ಮರದ ತುಂಡುಗಳು ಕಂಡವು. ಹಿಂದಿನ ಒಂದು ವಾರದಿಂದ ಮನೆಯಲ್ಲಿ ಸೌದೆ ಇಲ್ಲದೆ ಒಲೆ ಉರಿಸಲು ಪಡಿಪಾಟಲು ಪಡುತ್ತಿದ್ದ ಗಂಗೆಯ ಮುಖ ಧುತ್ತನೆ ಅವನ ಕಣ್ಣೆದುರು ಬಂದು ನಿಂತಿತು.
ತುಸು ಎದೆ ಹಗುರವಾದಂತೆನಿಸಿತು, ಪಕ್ಕದಲ್ಲಿಯೇ ನೇತಾಡುತ್ತಿದ್ದ ಮರದ ಬಿಳಿಲೊಂದನ್ನು ಕಿತ್ತು, ಒಟ್ಟಿದ್ದ ಮರದ ತುಂಡುಗಳನ್ನು ತನ್ನ ಶಕ್ತಿಮೀರಿ ಹೊರುವಷ್ಟನ್ನು ಹೊರೆಕಟ್ಟಿ ಹರಸಾಹಸ ಮಾಡಿ ತಲೆಯ ಮೇಲಿಟ್ಟುಕೊಂಡ. ಭಾರವಾದ ಹೆಜ್ಜೆಯೊಂದಿಗೆ ಇನ್ನೇನು ದಟ್ಟವಾದ ಕಾಡಿನ ಮಗ್ಗುಲು ದಾಟಬೇಕು ಎನ್ನುವುದರೊಳಗೆ ಅದೆಲ್ಲಿದ್ದರೊ ಐದಾರು ಜನ ದಾಂಡಿಗರು ಅಪ್ಪಜ್ಜಣ್ಣನನ್ನು ಮುತ್ತುವರಿದು ನಿಂತರು. ಕೋಪದಿಂದ ನಖಶಿಖಾಂತ ಉರಿಯುತ್ತಿದ್ದ ಅವರು ” ಎಷ್ಟು ದಿನ ಅಂತ ನಮ್ಮುನ್ನ ಯಾಮಾರುಸ್ತಿಯಾ ಬಡ್ಡಿ ಮಗ್ನೆ ಇವತ್ತು ನಿನ್ ಹೆಣ ಬೀಳುಸ್ತಿವಿ” ಎಂದು ಚೀರಿ, ಕಣ್ಣು ಮುಚ್ಚಿ ಬಿಡುವುದರ ಒಳಗೆ ಅವನನ್ನು ಹಣ್ಣುಗಾಯಿ ನೀರುಗಾಯಾಗುವಂತೆ ಬಡಿದು ಹಾಕಿದರು.
ಆಸೆಯಿಂದ ಹೊರೆ ಕಟ್ಟಿಕೊಂಡಿದ್ದ ಅದೇ ಮರದ ತುಂಡುಗಳು ಅಪ್ಪಜ್ಜಣ್ಣನ ಅಂಗಾಂಗವನ್ನು ನಜ್ಜುಗುಜ್ಜು ಮಾಡಿ ತಲೆ, ಮೈ ಕೈಗಳನ್ನೆಲ್ಲಾ ರಕ್ತ ಸಿಕ್ತ ಗೊಳಿಸಿತ್ತು. ಅಳಿದುಳಿದ ತ್ರಾಣವನ್ನೆಲ್ಲಾ ಒಟ್ಟು ಗೂಡಿಸಿ ” ಕೆಟ್ಟೆ ಕಣ್ರಪ್ಪೊ ಯಾರಾರ ನನ್ನ ಜೀವ ಉಳುಸ್ರೊ” ಎನ್ನುವ ಅವನ ಕೀರಲು ದನಿಯ ಜಾಡು ಹಿಡಿದು ಬಂದ ಗಂಗೆ ಹಿಂದು ಮುಂದು ನೋಡದೆ ದಾಂಡಿಗರ ನಡುವೆ ನುಸುಳಿ ಅನಾಮತ್ತಾಗಿ ಅಪ್ಪಜ್ಜಣ್ಣನಿಗೆ ಅಡ್ಡಲಾಗಿ ಮಲಗಿ ಬಿಟ್ಟಳು. ಹೀಗೆ ಬಿರುಗಾಳಿಯಂತೆ ನುಸುಳಿ ಬಂದ ಹೆಂಗಸನ್ನು ಕಂಡು ಕ್ಷಣ ಹಿಂದ್ಸರಿದು ನಿಂತ ಆ ದಾಂಡಿಗರು” ಕಳ್ಮುಂಡೆ ನಿಂದೂ ಇಕ್ಮತ್ ಐತೆ ಅನ್ನು ಇದ್ರೊಳಗೆ, ಎಷ್ಟು ದಿನದಿಂದ ನಾವು ಕಡುದ್ ಗಂಧನ ಹಿಂಗೆ ಕದ್ ಜೀವ್ನ ಹೊರಿತಿದಿರಿ ಬೊಗ್ಳೆ ಲೌಡಿ…” ಎಂದು ಅವಳ ಮೇಲೆ ಮರದ ಕೊರಡೆತ್ತಿ ನಿಂತರು.
“ಅಯ್ಯೋ ದೇವ್ರಾಣೆಗೂ ನಾವು ಕಳ್ರಲ್ಲ ಕಣ್ರಪ್ಪ. ನಮ್ಮ ಹಸ ಕರ ಕಾಣುಸ್ತಿರ್ಲಿಲ್ಲ ಅದ್ಕೆ ಹುಡಿಕೊಂಡ್ ಇತ್ತಗ್ಬಂದಿದ್ದೊ. ಇವನೊಬ್ಬ ಹೆಡ್ಡ ಏನು ಗೊತ್ತಾಗಕ್ಕಿಲ್ಲ. ಮನೇಲಿ ಸೌದೆ ಇಲ್ಲ ಅಂತ ಪರ್ದಾಡ್ತಿದ್ನಲ್ಲ ಅದ್ಕೆ ಎಲ್ಲೊ ಈ ಮರುದ್ ತುಂಡುಗೊಳ್ನ ಹೊರೆ ಕಟ್ಬುಟವ್ನೆ. ಇದು ಗಂಧುದ್ಮರ ಅಂತ ಅವ್ನಿಗೆ ಹೆಂಗ್ ಗೊತ್ತಾಗ್ಬೇಕು ಹೇಳಿ, ಇವ್ನ ಪರ್ವಾಗಿ ನಾನು ನಿಮ್ಮ ಕಾಲಿಡಿತಿನಿ ಬುಟ್ಬುಡ್ರಪ್ಪ” ಎಂದವಳೆ ಆ ಗುಂಪಿನ ಯಜಮಾನನಂತೆ ಕಾಣುತ್ತಿದ್ದವನ ಕಾಲಿಡಿದಳು. “ಹುಂ ಇನ್ನೊಂದಪ ಇತ್ತಗಿ ತಲೆ ಹಾಕಿದ್ರೊ ನಿಮ್ಮ್ ಹುಟ್ ಅಡ್ಗುಸ್ಬುಡ್ತಿವಿ. ಬುಡ್ತಿರಿ ಗಾಡಿ” ಎಂದು ಹಲ್ಲು ಕಡಿದು ತನ್ನ ಚಡ್ಡಿ ಜೇಬಿನಲ್ಲಿದ್ದ ಬೀಡಿ ತೆಗೆದು ಹೊತ್ತಿಸಿದ. ಕೈ ಕಾಲುಗಳಿಗೆ ಬಲವಾಗಿಯೆ ಪೆಟ್ಟು ಬಿದ್ದು ರಕ್ತಸಿಕ್ತ ವಾಗಿದ್ದ ಅಪ್ಪಜ್ಜಣ್ಣನಿಗೆ ತನ್ನ ಹೆಗಲ ಆಧಾರ ಕೊಟ್ಟು ಊರತ್ತ ಮುಖ ಮಾಡಿದಳು ಗಂಗೆ.
ಆಕೆ ಇನ್ನು ಒಂದಷ್ಟು ದೂರ ನಡೆದಿದ್ದಳೊ ಇಲ್ಲವೊ ದಾಂಡಿಗನೊಬ್ಬ ಹಿಂದಿನಿಂದ ಓಡಿ ಬಂದು ಅವಳ ಸೊಂಟಕ್ಕೆ ಕೈ ಹಾಕಿ “ನೋಡು ನೀನು ನಾವು ಹೇಳ್ದಂಗೆ ಕೇಳಿದ್ರೆ ಮಾತ್ರ ಇಲ್ಲಿಂದ ಕಳುಸ್ತೀವಿ. ಇಲ್ಲ ಅಂದ್ರೆ ಪಕ್ಕದಲ್ಲೆ ಹೊಳೆ ಹರಿತಯ್ತೆ ನೋಡು ಏನ್ ಮಾಡ್ತಿ ” ಎಂದು ಜೊಲ್ಲು ಸುರಿಸುತ್ತಾ ವಿಕಾರವಾಗಿ ಹೇಳಿದ. ಕ್ಷಣ ಗಂಗೆಯ ಜಂಘಾಬಲವೆ ಉಡುಗಿದಂತಾಯ್ತು. ಕಣ್ಣು ಬಿಡಲಾರದೆ ನಿಡುಸುಯ್ಯುತ್ತಿದ್ದ ಅಪ್ಪಜ್ಜಣ್ಣ ಆ ದಾಂಡಿಗನ ಮಾತು ಕೇಳಿ ಪುಕ್ಕ ಕಿತ್ತ ಹಕ್ಕಿಮರಿಯಂತೆ ಗಂಗೆಯ ಹೆಗಲಿಗೆ ಆತುಕೊಂಡೆ ಕೊಸರಾಡತೊಡಗಿದ. ಭುಜ ಒತ್ತಿ ಅಪ್ಪಜ್ಜಣ್ಣನನ್ನು ಸಮಾಧಾನಗೊಳಿಸಿದ ಗಂಗೆ ತನ್ನ ಭಯವನ್ನೆಲ್ಲ ಒಳಗೆ ಅದುಮಿಟ್ಟು ತುಟಿ ಮೇಲೆ ನಗೆ ಅರಳಿಸುತ್ತಾ ಅವನ ಕಿವಿಯ ಬಳಿ ಮುಖವಿಟ್ಟು “ಅಯ್ಯೋ…ಈಗ ನನ್ನ ಗಂಡ ಹುಡಿಕೊಂಡು ಬತ್ತಿರ್ಬೋದೊ ಏನೋ. ನಾನು ಆ ಕೂಡ್ಲೂರಿನ ಕಾಪಿ ಕಂಪ್ನಿ ಲೈನಲಿರೊಳು. ನಾಳೆ ಬೆಳಗ್ಗೆ ಹತ್ಗಂಟೆ ಮೇಲೆ ನಮ್ಮ ಮನೆಲಿ ಯಾರು ಇರಕಿಲ, ಸೀದ ನಮ್ಮ ಕ್ವಾಟ್ರಾಸಿಂತಕೆ ಬಂದು ರಾಧಿ ಮನೆ ಯಾವ್ದು ಅಂತ ಕೇಳಿ ಯಾರ್ ಬೇಕಿದ್ರು ತೋರುಸ್ತರೆ. ಈಗ ಈ ವಯ್ಯುನ್ ಕರ್ಕೊಂಡೋಗಿ ಮನೆತಕಾಗ್ತಿನಿ ಬುಟ್ಬುಡಿ” ಎಂದು ನಾಜೂಕಾಗಿ ಹೇಳಿ ಅಲ್ಲಿಂದ ಬಿಡಿಸಿಕೊಂಡು ಬಂದು ಊರು ಸೇರಿದಳು.
ಮನೆಗೆ ಬಂದ ಗಂಗೆ ಅಪ್ಪಜ್ಜಣ್ಣನ ಮೈ ಕೈಯನ್ನೆಲ್ಲ ಒದ್ದೆ ಬಟ್ಟೆಯಲ್ಲಿ ವರೆಸಿ ಗಾಯಗಳಿಗೆಲ್ಲ ಮುಲಾಮು ಹಚ್ಚಿ ತಿಂಡಿ ತಿನ್ನಿಸಿ ಸಮಾಧಾನ ಹೇಳಿ ಮಲಗಿಸಿದಳು. ತಿನ್ನಲು ತಿಂಡಿ ಹಾಕಿಕೊಂಡವಳಿಗೆ ಹಸು ಕರುವಿನ ನೆನಪು ಒದ್ದುಕೊಂಡು ಬಂದಂತಾಯ್ತು. ತಟ್ಟೆಯನ್ನು ಹಾಗೆಯೆ ಮುಚ್ಚಿಟ್ಟು ” ಇವತ್ತೇನಾರ ಆಗ್ಲಿ ಹಸಕರ ಹುಡ್ಕೆ ತೀರ್ತಿನಿ ” ಎಂದು ತನಗೆ ತಾನೆ ಶಪಥ ಮಾಡಿಕೊಂಡವಳಂತೆ ಗೊಣಗಿ ಕೊಳ್ಳುತ್ತಾ ಬಾಗಿಲು ಮುಚ್ಚಿ ಬೀದಿಗಿಳಿದಳು.
ಊರಿನ ದನ ಎಮ್ಮೆ ಕಟ್ಟಿದ್ದವರೆಲ್ಲರ ಮನೆಗೂ ಎಡತಾಕಿ ತನ್ನ ದುಃಖ ತೋಡಿಕೊಂಡು ಅವರ ಕೊಟ್ಟಿಗೆಯ ಒಳಗೊಮ್ಮೆ ಇಣುಕಿ ಹೊರಬಂದಳು. ಬದುಕಿನ ಒಂದು ದೊಡ್ಡ ಭರವಸೆಯೆ ಕೈ ತಪ್ಪಿದಂತಾಗಿ ಗಂಗೆಯ ಜೀವ ಹಿಂಡಿದಂತಾಯ್ತು. ಅವಳ ಕೈ ಮೀರಿ ಕಣ್ಣುಗಳು ಧುಮ್ಮಿಕ್ಕ ತೊಡಗಿದವು. ಯಾರಿಗೂ ಕಾಣದಂತೆ ಸೆರಗಿನಿಂದ ಮುಖ ಮುಚ್ಚಿಕೊಂಡು ಕಾಲುವೆಯ ಹಾದಿಯತ್ತ ಹೊರಟವಳಿಗೆ ಚಿಕ್ಕತ್ತೂರಿನ ಪಂಕಜಕ್ಕ ಎದುರಾದಳು. “ಏನ್ ಗಂಗೂ ಈ ಮಠ ಮಠ ಉರಿಯೊ ಬಿಸ್ಲಲ್ಲಿ ಎತ್ತಗೊಂಟಿದ್ಯವ” ಎಂದು ಬಹಳ ಅಕ್ಕರೆಯಿಂದ ಕೇಳಿದಳು. ಈ ರೀತಿಯ ಒಂದೇ ಒಂದು ಪ್ರೀತಿಯ ಮಾತಿಗಾಗಿ ಕಾದು ಕುಳಿತವಳಂತೆ ಗಂಗೆ ಒಮ್ಮೆಗೆ ತನ್ನ ಒಳಗಿಟ್ಟುಕೊಂಡು ಒದ್ದಾಡುತ್ತಿದ್ದ ಸಂಕಟವನ್ನೆಲ್ಲಾ ಪಂಕಜಕ್ಕನ ಎದುರು ಚೆಲ್ಲಿಕೊಂಡು ಬಿಕ್ಕಿದಳು.
ಹಿಂತಿನ ಕಂತು ಓದಿದ್ದೀರಾ? http://“ಅದೇನಾಯ್ತದೋ ಆಗೇ ಬುಡ್ಲಿ….” https://kannadaplanet.com/thanthi-meilna-nadige-69/
ಚಿಕ್ಕತ್ತೂರಿನ ಪಂಕಜಕ್ಕ ಈಗ್ಗೆ ವರ್ಷದ ಹಿಂದೆ ತನ್ನ ಮಗಳು ರಾಜಿಯನ್ನು ಈ ನಾರಿಪುರಕ್ಕೆ ಮದುವೆ ಮಾಡಿ ಕೊಟ್ಟಿದ್ದಳು. ಮಗಳನ್ನು ನೋಡುವ ಸಲುವಾಗಿ ಆಗಾಗ ಹತ್ತು ಮೈಲು ದೂರದ ಕಾಲು ನಡಿಗೆಯ ಹಾದಿ ಸವೆಸಿ ಬಂದು ಮಗಳ ಮನೆಯಲ್ಲಿ ಒಂದೆರಡು ದಿನ ಇದ್ದು ಹೋಗುತ್ತಿದ್ದಳು. ಅವತ್ತು ಕೂಡ ಬಿಸಿಲೇರುವುದರೊಳಗೆ ನಾರಿಪುರ ಸೇರಿ ಬಿಡಬೇಕೆಂದು ನಿರ್ಧರಿಸಿ, ಮಗಳಿಗೆ ಬೇಕಾದ ಸಾಮಾನು ಸರಂಜಾಮುಗಳನ್ನೆಲ್ಲ ತನ್ನ ಎಡ ಬಲ ಬಗಲುಗಳಿಗೆ ನೇತಾಕಿಕೊಂಡು ಸೂರ್ಯ ಮೂಡುವುದರೊಳಗೆ ಊರು ಬಿಟ್ಟಿದ್ದಳು. ಹೀಗೆ ಬರುತ್ತಿದ್ದವಳಿಗೆ ಎದುರಾಗಿ ಹಸು ಕರುವನ್ನು ಹಿಡಿದ ಚಂದ್ರಹಾಸ ಗಿರಿಧರರು ಎದುರಾಗಿದ್ದರು. ಆ ಮಸುಕಿನೊಳಗೆ ಅವರನ್ನು ಗುರುತಿಸಿದ್ದ ಪಂಕಜಕ್ಕ ಹೆಸರು ಹಿಡಿದು ಎಷ್ಟು ಕೂಗಿದರು ಕೇಳದವರಂತೆ ತಿರುಗಿಯೂ ನೋಡದೆ ಒಂದು ಬದಿಗೆ ಮುಖ ತಿರುಗಿಸಿ ಬರಬರನೆ ನಡೆದು ಹೋಗಿದ್ದರು. “ಈ ಹೈಕ್ಳು ತಿಕೆಲ್ಲ ಕೊಬ್ಮಾಡ್ತವಲ್ಲೊ ಶಿವ್ನೆ. ನೋಡು ಹೆಂಗ್ ಕೇಳುಸ್ತಂಗೊಯ್ತವೆ” ಎಂದು ತನಗೆ ತಾನೆ ಗೊಣಗಿಕೊಂಡು ಬಂದು ನಾರಿಪುರ ಸೇರಿದ್ದಳು.
ಅವರಿಬ್ಬರೂ ಹಾಗೆ ತಲೆಮರೆಸಿಕೊಂಡು ಹೋದ ಕಾರಣವನ್ನು ಅರಿತ ಪಂಕಜಕ್ಕನಿಗೆ ಗಂಗೆಯನ್ನು ಕಂಡು ಕರುಳು ಚುರ್ ಎಂದಿತು. “ಅಯ್ಯೋ ನಿಮ್ಮಣ್ಗಳು ಬೆಳಿಗ್ಗೆ ಮುಂಚೆ ಹಸನು ಕರನು ಹೊಡ್ಕೊಂಡು ನಮ್ಮೂರಿನ ಕಡೆಗೆ ಹೋದುದ್ದ ನಾನೆ ನೋಡ್ದೆ ಕನ್ಮಗ. ನಾನೆಷ್ಟು ಕರುದ್ರು ಓ ಗೊಡ್ಲಿಲ್ಲ ಕಳ್ನನ್ಮಕ್ಳು. ಸುಮ್ನೆ ಬುಡ್ಬೇಡ ಗಂಗವ್ವ ಹೋಗಿ ಪೋಲಿಸ್ನೋರಿಗೆ ದೂರು ಕೊಟ್ಟು ನಿನ್ನ ಹಸ ಕರ ವಸೂಲಿ ಮಾಡ್ಕೊ” ಎಂದು ಹೇಳಿ ಹೊರಟು ಹೋದಳು.
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.