ಸಂಘಿ ಫೇಕ್ ಫ್ಯಾಕ್ಟರಿ ಪ್ರಕರಣ

Most read

ಕೋಮು ಭಾವನೆ ಕೆರಳಿಸುವ, ದ್ವೇಷವನ್ನು ಹೆಚ್ಚಿಸುವ, ಹುರುಳಿಲ್ಲದ ಹುಸಿ ಸಂಗತಿಗಳನ್ನು ಹಂಚಿಕೊಳ್ಳುವಂತಹ ಕೆಲಸಗಳು ಸತ್ಯಕ್ಕೆ ಮಾಡುವ ಅಪಚಾರವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ನೈತಿಕತೆಯೇ ಪ್ರಶ್ನಾರ್ಹ. ಯಾವುದೇ ಪಕ್ಷ ಸಿದ್ಧಾಂತದವರು ಇಂತಹ ಸುಳ್ಳು ಪ್ರಚಾರದಲ್ಲಿ ಭಾಗಿಯಾದರೂ ಅವರೆಲ್ಲಾ ಶಿಕ್ಷಾರ್ಹರೇ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ನಿರಂತರವಾಗಿ ಸುಳ್ಳುಗಳನ್ನು  ಸೃಷ್ಟಿಸಿ ಜನಮಾನಸದಲ್ಲಿ ಗೊಂದಲ ಹುಟ್ಟಿಸುವ ಕಾಯಕವನ್ನು ಸಂಘಿ ಸಂತಾನಗಳು ಮಾಡುತ್ತಲೇ ಬಂದಿವೆ. ಲೋಕಸಭಾ ಚುನಾವಣಾ ಸಮಯದಲ್ಲಿ ಕೇಸರಿ ಪಡೆಯ ಫೇಕ್ ಫ್ಯಾಕ್ಟರಿ ಅತ್ಯಂತ ಕ್ರಿಯಾಶೀಲವಾಗಿದೆ.

ಕರ್ನಾಟಕದ ಮುಖ್ಯಮಂತ್ರಿಯನ್ನ ಹಿಂದೂ ವಿರೋಧಿ ಹಾಗೂ ಮುಸ್ಲಿಂ ಪರ ಎಂದು ಸಾಬೀತು ಪಡಿಸಲು ಹಾಗೂ ಹಿಂದೂ ಸಮುದಾಯದವರನ್ನು ಸಿದ್ದರಾಮಯ್ಯನವರ ವಿರುದ್ದ ಎತ್ತಿಕಟ್ಟಲು ಈ ಫೇಕುಗಳು ಪ್ರಯತ್ನಿಸುತ್ತಿದ್ದಾರೆ. ಅದರ ಮುಂದುವರಿಕೆಯಾಗಿ ” ಹಿಂದೂಗಳ ಅಗತ್ಯ ನಮಗೆ ಬೇಡ, ಮುಸ್ಲಿಮರ ಓಟು ಸಾಕು” ಎಂದು ಸಿದ್ದರಾಮಯ್ಯನವರು ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ ಎನ್ನುವ  ಪತ್ರಿಕಾ ವರದಿಯನ್ನು ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.  ಇದನ್ನು ಕೇಸರಿ ಟ್ರೋಲಿಗರು ಫಾರ್ವರ್ಡ್ ಮಾಡಿ ವಿಕೃತ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. 

ಈ ಸಲ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ಪಕ್ಷದ ಬಹುತೇಕ ಅಭ್ಯರ್ಥಿಗಳು ಸೋಲುತ್ತಾರೆ ಎಂಬುದು ಈಗಾಗಲೇ ಈ ಕೇಸರಿ ಪಡೆಗೆ ಗೊತ್ತಾಗಿರಬೇಕು. ಹೀಗಾಗಿ ಅಪಪ್ರಚಾರವನ್ನೇ ಅಸ್ತ್ರವಾಗಿಸಿಕೊಂಡು, ಜನರಲ್ಲಿ ಕೋಮುಭಾವನೆ ಕೆರಳಿಸಿ ಬಿಜೆಪಿಗರನ್ನು ಗೆಲ್ಲಿಸುವ ಶಡ್ಯಂತ್ರದ ಭಾಗವಾಗವೇ ಸುಳ್ಳು ಸುದ್ದಿಯ ಸೃಷ್ಟಿ. 

“ಹತ್ತು ವರ್ಷಗಳ ಕಾಲ ದೇಶದ ಆಡಳಿತ ನಡೆಸಿದ ಪಕ್ಷವೊಂದು ಚುನಾವಣೆ ಗೆಲ್ಲಲು ಸುಳ್ಳು ಸುದ್ದಿಯ ಮೊರೆ ಹೋಗುವಂತಹ ಹೀನಾಯ ಸ್ಥಿತಿಗೆ ತಲುಪಬಾರದಿತ್ತು, ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ” ಎಂದು ಸಿಎಂ ಸಿದ್ದರಾಮಯ್ಯನವರೇ ಟ್ವೀಟ್ ಮಾಡಿದ್ದಾರೆ. ಆದರೆ ಸತ್ಯ ಬಾಗಿಲು ದಾಟುವಷ್ಟರಲ್ಲಿ ಸುಳ್ಳು ಊರೆಲ್ಲಾ ಸುತ್ತಿ ಬಂದಿರುತ್ತದಂತೆ. ಹಾಗೆ ಈಗಾಗಲೇ ಸುಳ್ಳು ಸುದ್ದಿ ಕೇಸರಿಗರ ವಾಟ್ಸಾಪ್ ಗಳಲ್ಲಿ ಸದ್ದು ಮಾಡುತ್ತಿದೆ. ಅದನ್ನು ವೈರಲ್ ಮಾಡಲು ಕೋಮುಕ್ರಿಮಿಗಳ ಪಡೆ ಕ್ರಿಯಾಶೀಲವಾಗಿದೆ. 

“ಸುಳ್ಳು ಸುದ್ದಿಯ ಸೃಷ್ಟಿಕರ್ತರು ಹಾಗೂ ಅವರ ಬೆಂಬಲಕ್ಕೆ ನಿಂತಿರುವವರು ಹಾಗೂ ಫೇಕ್ ಫ್ಯಾಕ್ಟರಿಯನ್ನು ಕಾನೂನಿನ ಮೂಲಕ ಬೇರು ಸಹಿತ ಕಿತ್ತೆಸೆಯುತ್ತೇವೆ” ಎಂದು ಸಿದ್ದರಾಮಯ್ಯನವರು ಎಚ್ಚರಿಕೆ ಕೊಟ್ಟಿದ್ದರು. ನುಡಿದಂತೆ ನಡೆದ ಮುಖ್ಯಮಂತ್ರಿಗಳು ಸೈಬರ್  ಸೆಲ್ ನವರನ್ನು ಬಿಟ್ಟು ಈ ಫೇಕ್ ಫ್ಯಾಕ್ಟರಿಯ ಏಳು ಜನ ಕಾಲಾಳುಗಳನ್ನು ಕಂಡು ಹಿಡಿದಿದ್ದಾರೆ. ಪ್ರಭಾಕರ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು, ಪಂಡು ಮೋದಿಕಾ ಮುಂತಾದವರ ವಿರುದ್ದ ದೂರು ದಾಖಲಿಸಿ ಎಫ್ ಐಆರ್  ಮಾಡಲಾಗಿದೆ. ಈ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡಿದ ಬಿಎಸ್ ವೈ ಸಪೋರ್ಟರ್ಸ್‌ ಹಾಗೂ ದಾವಣಗೆರೆ ಬಿಜೆಪಿ ಖಾತೆಯ ಅಡ್ಮಿನ್ ಗಳ ಮೇಲೂ ದೂರು ದಾಖಲಾಗಿದೆ. ಧಾತ್ರಿ ಗೋಶಾಲೆ ಗೂಳೂರು ವಾಟ್ಸಾಪ್ ಗ್ರೂಪ್ ಈ ಫೇಕ್ ಸುದ್ದಿಯ ಮೂಲವಾಗಿದ್ದು ತನಿಖೆ ಮುಂದುವರೆದಿದೆ. ಎಲ್ಲರನ್ನೂ ಬಂಧಿಸುವುದು ಬಾಕಿ ಇದೆ. ಇದೇ ರೀತಿ ಫೇಸ್ಬುಕ್, ವಾಟ್ಸಾಪ್, ಇನ್ಸ್ಟ್ರಾಗ್ರಾಂ, ಟ್ವಿಟ್ಟರ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬೇನಾಮಿ ಹೆಸರಲ್ಲಿ ಖಾತೆಯನ್ನು ತೆರೆದು ಫೇಕ್ ಸುದ್ದಿಗಳನ್ನು ಪ್ರಸಾರ ಮಾಡುವ ಗ್ರೂಪ್ ಗಳು ಬೇಕಾದಷ್ಟಿವೆ. ಅವುಗಳನ್ನು ಬ್ಯಾನ್ ಮಾಡುವುದು ಕಷ್ಟಸಾಧ್ಯ. ಆದರೆ ಸುಳ್ಳು ಸುದ್ದಿ ಹರಿಬಿಟ್ಟವರು ಹಾಗೂ ಹಂಚಿಕೊಳ್ಳುವವರ ಮೇಲೆ ವಿಳಂಬ ಮಾಡದೆ  ಕೂಡಲೇ ಕಾನೂನಾತ್ಮಕ ಕ್ರಮ ಕೈಗೊಳ್ಳುವ ಮೂಲಕ ನಿಯಂತ್ರಿಸ ಬಹುದಾಗಿದೆ. ಇಂತಹ ಫೇಕ್ ನ್ಯೂಸ್ ಗಳನ್ನು ನಿಜ ಎಂದು ಬಿಂಬಿಸಿ ಜನರ ದಾರಿ ತಪ್ಪಿಸುವ ಸುದ್ದಿ ಮಾಧ್ಯಮಗಳ ಮೇಲೂ ಕ್ರಮ ತೆಗೆದು‌ ಕೊಳ್ಳಬೇಕಿದೆ.

ಯಾವುದೇ ರೀತಿಯ ಫೇಕ್ ನ್ಯೂಜ್ ಹರಿದಾಡಿದರೂ ತೀವ್ರ ತನಿಖೆ ಮಾಡಿಸಿ ಸುಳ್ಳು ಸುದ್ದಿಯ ಸೃಷ್ಟಿಕರ್ತರನ್ನು ಜೈಲಿಗೆ ಕಳಿಸದೇ ಹೋದರೆ ಇವು ಇನ್ನೂ ಹೆಚ್ಚು ಆಕ್ರಮಣಶಾಲಿಯಾಗುತ್ತವೆ. ಸಾವಿರ ಸಲ ಸುಳ್ಳನ್ನು ಹೇಳಿ ಸತ್ಯದ ಭ್ರಮೆಯನ್ನು ಹುಟ್ಟಿಸುವ ಈ ಗೋಬೆಲ್ ವಂಶಸ್ಥರನ್ನು ಹಿಡಿದು ಮಟ್ಟ ಹಾಕಲೇ ಬೇಕಿದೆ. 

ಕೋಮು ಭಾವನೆ ಕೆರಳಿಸುವ, ದ್ವೇಷವನ್ನು ಹೆಚ್ಚಿಸುವ, ಹುರುಳಿಲ್ಲದ ಹುಸಿ ಸಂಗತಿಗಳನ್ನು ಹಂಚಿಕೊಳ್ಳುವಂತಹ ಕೆಲಸಗಳು ಸತ್ಯಕ್ಕೆ ಮಾಡುವ ಅಪಚಾರವಾಗಿದೆ. ಇಂತಹ ಕೃತ್ಯದಲ್ಲಿ ಭಾಗಿಯಾಗುವವರ ನೈತಿಕತೆಯೇ ಪ್ರಶ್ನಾರ್ಹ. ಯಾವುದೇ ಪಕ್ಷ ಸಿದ್ಧಾಂತದವರು ಇಂತಹ ಸುಳ್ಳು ಪ್ರಚಾರದಲ್ಲಿ ಭಾಗಿಯಾದರೂ ಅವರೆಲ್ಲಾ ಶಿಕ್ಷಾರ್ಹರೇ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

More articles

Latest article