ಚುನಾವಣೆ ಸಮಯ ಕೋಮು ಸೌಹಾರ್ದತೆಗೆ ಮತಾಂಧರು ಮಾಡುವ ಗಾಯ

Most read

ಚುನಾವಣಾ ಕಾಲ ಬಂತು ಅಂದಾಗ ಈ ಬಿಜೆಪಿ ಹಾಗೂ ಅದರ ಹಿಂದಿರುವ ಸಂಘ ಪರಿವಾರದವರು ಕೋಮು ಸೌಹಾರ್ದತೆಯನ್ನು ಕದಡಿ ರಾಜಕೀಯ ಲಾಭ ಮಾಡಿಕೊಳ್ಳಲು ಕಾದಿರುತ್ತಾರೆ. ಈ ಮಾರ್ಚ್ 17 ರ ಭಾನುವಾರ ಸಂಜೆ ಬೆಂಗಳೂರಿನ ಕಬ್ಬನ್‌ ಪೇಟೆಯ ಪಕ್ಕದ ನಗರ್ತಪೇಟೆಯ ಸಿದ್ದಣ್ಣ ಗಲ್ಲಿಯಲ್ಲಿದ್ದ ಕೃಷ್ಣ ಟೆಲಿಕಾಂ ಅಂಗಡಿಯ ಮುಂದೆ ಚಿಕ್ಕದಾಗೊಂದು ಗಲಾಟೆ ನಡೆಯಿತು. ಈ ಅಂಗಡಿಯ ಮಾಲೀಕ ಮಾರ್ವಾಡಿ ಮುಖೇಶ್ ಎನ್ನುವ ಯುವಕ ಡಿಫೆಕ್ಟ್ ಇರುವ ವಸ್ತುವನ್ನು ಕೊಟ್ಟಿದ್ದನ್ನು ಪ್ರಶ್ನಿಸಿ ಕೆಲವು ಯುವಕರು ವಾದಕ್ಕಿಳಿದರು. ಅದು ಜಗಳದ ರೂಪ ತಾಳಿ ಹೊಡೆದಾಟ ಶುರುವಾಗಿತ್ತು. ಇಂತಹ ಗಲಾಟೆಗಳು ಈ ವ್ಯಾಪಾರಿ ಪ್ರದೇಶದಲ್ಲಿ ಮಾಮೂಲಾಗಿವೆ. ಆದರೆ ಗಲಾಟೆ ಮಾಡಿದವರಲ್ಲಿ ಇಬ್ಬರೋ ಮೂವರೋ ಮುಸ್ಲಿಂ ಯುವಕರು ಇದ್ದರು ಎನ್ನುವ ಸುದ್ದಿ ಬಿಜೆಪಿ ಕಚೇರಿಗೆ ತಲುಪಿತು. ಕೋಮುದ್ವೇಷ ಹುಟ್ಟಿಸುವಂತಹ ಯಾವುದೇ ಚಿಕ್ಕ ದೊಡ್ಡ ಸನ್ನಿವೇಶಗಳಾದರೂ ರಣಹದ್ದುಗಳಂತೆ ಬಂದೆರಗುವ ಸಂಘ ಪರಿವಾರಿಗರು ಕಬ್ಬನ್ ಪೇಟೆಗೆ ಕೇಸರಿ ಶಾಲು ಬಾವುಟಗಳ ಸಮೇತ ಲಗ್ಗೆ ಹಾಕಿದರು.

ಆ ಭಾಗದ ಸಂಸದನಾಗಿದ್ದು ಈಗ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವ ತೇಜಸ್ವಿ ಸೂರ್ಯನ ಜೊತೆಗೆ ಬೆಂಗಳೂರು ಉತ್ತರ ಮತಕ್ಷೇತ್ರಕ್ಕೆ ಅಭ್ಯರ್ಥಿಯಾಗಿರುವ ಹಾಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬೆಂಗಳೂರು ಕೇಂದ್ರ ಮತಕ್ಷೇತ್ರದ ಸಂಸದ ಹಾಗೂ ಅಭ್ಯರ್ಥಿ ಪಿ.ಸಿ.ಮೋಹನ್ ರವರು ಈ ಪ್ರತಿಭಟನೆಯ ನೇತೃತ್ವವನ್ನು ವಹಿಸಿಕೊಂಡರು. ಶಾಸಕ ಎಸ್.ಸುರೇಶಕುಮಾರ್ ಸಾತ್ ಕೊಟ್ಟರು. ಸಂಘ ಪರಿವಾರದ ರೆಬೆಲ್ ವಿಂಗ್ ಆದ  ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳದ ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಇಡೀ ಏರಿಯಾದಲ್ಲಿ ಸಂಘರ್ಷದ ವಾತಾವರಣವನ್ನು ನಿರ್ಮಿಸಿದರು. ಜೈಶ್ರೀರಾಂ ಘೋಷಣೆಗಳನ್ನು ಮೊಳಗಿಸಿದರು, ಕೇಸರಿ ಬಾವುಟಗಳನ್ನು ಹಾರಿಸಿದರು. ಪೊಲೀಸರ ಜೊತೆ ವಾದಕ್ಕಿಳಿದರು, ವಾಗ್ವಾದ ತಳ್ಳಾಟಗಳು ನಡೆದವು. ಇಡೀ ಪ್ರದೇಶದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಲಾಯ್ತು. ಈ ಸಂಘಿ ಹದ್ದುಗಳ ಜೊತೆಗೆ ಗೋದಿ ಮೀಡಿಯಾದ ಮಾಧ್ಯಮಗಳೆಂಬ ರಣಹದ್ದುಗಳೂ ಸೇರಿ ಕಡ್ಡಿಯನ್ನು ಗುಡ್ಡಮಾಡುವ ಕಾಯಕದಲ್ಲಿ ನಿರತರಾದರು.

ಹನುಮಾನ್ ಚಾಲೀಸಾ ಹಾಕಿದ್ದ ವಿಚಾರಕ್ಕೆ ಮೊಬೈಲ್ ಅಂಗಡಿ ಮಾಲೀಕನ ಕೊಲೆಗೆ ಯತ್ನಿಸಿದ್ದಾರೆ. ಜೋರಾಗಿ ಭಕ್ತಿಗೀತೆ ಹಾಕಿದ್ದಕ್ಕೆ ಮುಸ್ಲಿಂ ಯುವಕರು ಹಿಂದೂ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂದೂಗಳ ಮೇಲೆ ಹಲ್ಲೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು ಗೃಹಸಚಿವರು ರಾಜೀನಾಮೆ ಕೊಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಯಾಮರಾಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿ ನಡುರಸ್ತೆಯಲ್ಲೇ ಕುಳಿತು ಹನುಮಾನ್ ಚಾಲೀಸಾ ಪಠಿಸಲು ಹಾಗೂ ರಸ್ತೆಯಲ್ಲಿ ಭಜನೆ ಮಾಡಲು ಮುಂದಾದರು. ಕೊನೆಗೆ ಈ ಸಂಘಿ ನಾಯಕರುಗಳನ್ನೆಲ್ಲಾ ಪೊಲೀಸರು ಬಂಧಿಸಿ ಕರೆದೊಯ್ದ ನಂತರವೇ ಪರಿಸ್ಥಿತಿ ತಹಬದಿಗೆ ಬಂದಿತು.

ಇಷ್ಟಕ್ಕೂ ಅಂಗಡಿ ಮಾಲೀಕನು ಹಲ್ಲೆ ಮಾಡಿದ ಯುವಕರ ಮೇಲೆ ಕೊಟ್ಟ ದೂರಿನಲ್ಲಿ ಎಲ್ಲೂ ಹನುಮಾನ್ ಚಾಲೀಸಾ, ಭಕ್ತಿಗೀತೆ, ಧ್ವನಿವರ್ಧಕಗಳ ಉಲ್ಲೇಖವೇ ಇಲ್ಲ. ಆದರೆ ಈ ಸಂಘಿಗಳು ಗುಂಪುಕಟ್ಟಿಕೊಂಡು ಬಂದು ಗಲಾಟೆ ಎಬ್ಬಿಸಿದ ಮೇಲೆ ಸಂತ್ರಸ್ತನಿಂದ ಪೊಲೀಸರಿಗೆ ಮರು ಹೇಳಿಕೆ ಕೊಡಿಸಲಾಗಿದೆ. ಅಂದರೆ ಆಗದೇ ಇರುವುದನ್ನು ಆಗಿದೆ ಎಂದು ಸಾಬೀತು ಪಡಿಸಲು ಸಂಘಿಗಳು ಒತ್ತಾಯಿಸುತ್ತಿದ್ದಾರೆ. ಹಾಗೂ ಹಲ್ಲೆ ಮಾಡಿದವರಲ್ಲಿ ಕೇವಲ ಮುಸ್ಲಿಂ ಯುವಕರು ಮಾತ್ರ ಅಲ್ಲ ಹಿಂದೂ ಹುಡುಗರೂ ಇದ್ದಾರೆ. ಹೀಗಾಗಿ ಇದು ಹಿಂದೂ ವಿರೋಧಿ ಹಲ್ಲೆ ಎನ್ನುವುದು ಸಾಧ್ಯವಿಲ್ಲ. ಮೊಬೈಲ್ ಅಂಗಡಿಯಲ್ಲಿದ್ದ ಸಿಸಿ ಕ್ಯಾಮರಾ ಫೂಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸಂಘಿಗಳು ಹೇಳುವ ಕಟ್ಟುಕತೆ ಯಾವುದೂ ಆ ವಿಡಿಯೋದಲ್ಲಿಲ್ಲ. ನಕಲಿ ಮಾಲು ಕೊಟ್ಟು ಮೋಸ ಮಾಡಿ ಉದ್ಧಟತನದ ತೋರಿದ್ದ ಮಾರ್ವಾಡಿಯದ್ದೂ ಇಲ್ಲಿ ತಪ್ಪಿದೆ. ಅದಕ್ಕೆ ಪ್ರತಿಕ್ರಿಯೆಯಾಗಿ ದೈಹಿಕ ಹಲ್ಲೆ ಮಾಡಿದ ಯುವಕರದ್ದೂ ಅಪರಾಧವಾಗಿದೆ. ಮಾರ್ವಾಡಿ ಪೊಲೀಸ್ ದೂರು ಕೊಟ್ಟಿದ್ದು ಪೊಲೀಸರು ತನಿಖೆ ಮಾಡುತ್ತಾರೆ.

ಆದರೆ ಈ ಪುಟ್ಟ ಪೆಟ್ಟಿಕೇಸ್ ನ್ನು ದೊಡ್ಡದಾಗಿ ಮಾಡಿ, ಕೋಮುದ್ವೇಷವನ್ನು ಸೃಷ್ಟಿಸಿದ್ದು ಸಂಘಪರಿವಾರದ ಬಹುದೊಡ್ಡ ಬ್ಲಂಡರ್. ಬೆಂಗಳೂರು ದಕ್ಷಿಣ, ಉತ್ತರ, ಹಾಗೂ ಕೇಂದ್ರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಾಗಿರುವ ಮೂವರೂ ಓಡಿ ಬಂದು ಕೋಮು ಬೆಂಕಿಗೆ ತುಪ್ಪ ಸುರಿದು ಕೋಮು ಸಾಮರಸ್ಯವನ್ನು ಹಾಳು ಮಾಡಿದ್ದು ದೊಡ್ಡ ಅಪರಾಧ. ರಸ್ತೆಯಲ್ಲಿ ಕೂತು ಭಜನೆ ಮಾಡಿ ಹನುಮಾನ್ ಚಾಲೀಸಾ ಪಠಿಸಿ ಸಾರ್ವಜನಿಕರಿಗೆ ತೊಂದರೆ ಕೊಟ್ಟು ಗಲಭೆ ವಾತಾವರಣ ಸೃಷ್ಟಿಸಿದ್ದು ಕಾನೂನು ಸುವ್ಯವಸ್ಥೆಗೆ ವಿರುದ್ಧವಾಗಿರುವಂತಹುದು. ಮೊದಲು ಈ ಎಲ್ಲಾ ಸಂಘಿ ನಾಯಕರುಗಳ ಮೇಲೆ ಕೇಸನ್ನು ದಾಖಲಿಸಬೇಕಿದೆ. ಕೋಮುಗಲಭೆ ಸೃಷ್ಟಿಸುವ ಸಂಚಿನ ವಿರುದ್ಧ ಎಫ್ ಐ ಆರ್ ದಾಖಲಿಸಬೇಕಿದೆ. ಆದರೆ ಚುನಾವಣಾ ಸಮಯದಲ್ಲಿ ಈ ಸಂಘಿಗಳನ್ನು ಎದುರು ಹಾಕಿಕೊಳ್ಳುವ ತಾಕತ್ತು ಕಾಂಗ್ರೆಸ್ ಸರಕಾರಕ್ಕಿಲ್ಲ. ಹಾಗೇನಾದರೂ ಮಾಡಿದರೆ ಈ ಚಿಕ್ಕ ಸಂಗತಿಯನ್ನೇ ರಾಷ್ಟ್ರವ್ಯಾಪಿ ಹರಡಿಸಿ ಹಿಂದೂ ಮತಗಳ ಕ್ರೋಢೀಕರಣಕ್ಕೆ ಬಿಜೆಪಿ ರಣತಂತ್ರ ರೂಪಿಸುತ್ತದೆ. ಮಾಧ್ಯಮಗಳು ಬೆಂಕಿಗೆ ಗಾಳಿ ಬೀಸುತ್ತವೆ.

ಚುನಾವಣೆಗಳು ಹತ್ತಿರ ಬಂದಾಗೆಲ್ಲಾ ಈ ಬಿಜೆಪಿ ಪಕ್ಷವು ತನ್ನ ಸಂಘ ಪರಿವಾರಿಗರನ್ನು ಸೇರಿಸಿಕೊಂಡು ಕೋಮುದ್ವೇಷವನ್ನು ಉಲ್ಬಣಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಅದು ಸೃಷ್ಟಿಸುವ ಸುಳ್ಳು ಘಟನೆಗಳು ಸತ್ಯದ ಮುಂದೆ ಕರಗಿ ಹೋಗುವಂತಹುದಾದರೂ ಚುನಾವಣೆಯಲ್ಲಿ ಲಾಭ ತಂದು ಕೊಡುತ್ತವೆ. ಚುನಾವಣಾ ನಂತರ ಸತ್ಯ ಹೊರಗೆ ಬಂದರೂ ಅದು ನಿಷ್ಪ್ರಯೋಜವಾಗಿರುತ್ತದೆ.  ಅದಕ್ಕೊಂದು ಜ್ವಲಂತ ಉದಾಹರಣೆ ಇಲ್ಲಿದೆ.

ಆಗ ಮಧ್ಯಪ್ರದೇಶ ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದು ಶಿವರಾಜ್ ಸಿಂಗ್ ಚೌಹಾನ್ ಮುಖ್ಯಮಂತ್ರಿಯಾಗಿದ್ದರು. ರಾಜ್ಯದ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇತ್ತು. ಜನರಲ್ಲಿ ಆಳುವ ಸರಕಾರದ ಕುರಿತು ಅಸಮಾಧಾನ ಹೆಚ್ಚಾಗಿತ್ತು. ಜನರ ಗಮನವನ್ನು ಬೇರೆ ಕಡೆ ತಿರುಗಿಸದೇ ಇದ್ದರೆ ಮತ್ತೆ ಗೆಲ್ಲುವುದು ಅಸಾಧ್ಯ ಎನ್ನುವುದು ಬಿಜೆಪಿಗರಿಗೆ ಮನವರಿಕೆಯಾಗಿತ್ತು. ಆಗ 2017, ಜೂನ್ 18 ರಂದು ಲಂಡನ್ನಿನ ಓವಲ್ ಸ್ಟೇಡಿಯಂನಲ್ಲಿ ಕ್ರಿಕೆಟ್ ಚಾಂಪಿಯನ್ ಟ್ರೋಫಿ ನಡೆಯುತ್ತಿತ್ತು. ಫೈನಲ್ ನಲ್ಲಿ ಭಾರತ ಹಾಗೂ ಪಾಕಿಸ್ತಾನ ದೇಶಗಳ ಕ್ರಿಕೆಟ್ ತಂಡಗಳು ಗೆಲುವಿಗಾಗಿ ಸೆಣಸಾಡುತ್ತಿದ್ದವು. ದೇಶಾದ್ಯಂತ  ಕ್ರಿಕೆಟ್ ಪಂದ್ಯದ ಜ್ವರವೂ ಏರಿತ್ತು. ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ಗೆದ್ದಿತ್ತು. ಆ ಸಂದರ್ಭವನ್ನು ಬಳಸಿಕೊಂಡು ಕೋಮು ಸೌಹಾರ್ಧತೆಗೆ ದಕ್ಕೆ ತರುವಂತಹ ಕೃತ್ಯವೊಂದನ್ನು ಸೃಷ್ಟಿಸುವ ಷಡ್ಯಂತ್ರ ಮಧ್ಯಪ್ರದೇಶದಲ್ಲಿ  ನಡೆಯಿತು.

ಮಧ್ಯಪ್ರದೇಶ ರಾಜ್ಯದ ಮೋಹಾಡ್ ಜಿಲ್ಲೆಯಲ್ಲಿ ಕೆಲವು ಮುಸ್ಲಿಂ ಸಮುದಾಯದವರು ‘ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದರು, ಸಿಹಿ ಹಂಚಿದರು ಹಾಗೂ ಪಟಾಕಿ ಸಿಡಿಸಿದರು’ ಎಂದು ಆರೋಪಿಸಿ 17 ಜನ ಮುಸ್ಲಿಂ ವ್ಯಕ್ತಿಗಳು ಹಾಗೂ ಇಬ್ಬರು ಬಾಲಕರ ಮೇಲೆ ದೂರು ದಾಖಲಿಸಲಾಯ್ತು. ಹಿಂದೂ ವ್ಯಕ್ತಿಯಿಂದ ದೂರು ಕೊಡಿಸಲಾಗಿತ್ತು. ಆ ಎಲ್ಲಾ ಆರೋಪಿಗಳ ಮೇಲೆ ದೇಶದ್ರೋಹ ಪ್ರಕರಣ ಹೂಡಲಾಗಿತ್ತು. ಆದರೆ ಪಾಕಿಸ್ತಾನದ ಪರ ಘೋಷಣೆ ಕೂಗುವುದು ಅಪರಾಧವೆಂದು ಘೋಷಿಸುವ ಯಾವುದೇ ಕಾನೂನು ಇಲ್ಲದೇ ಇರುವುದರಿಂದ ದೇಶದ್ರೋಹ ಪ್ರಕರಣ ಕೈಬಿಟ್ಟು ‘ಸಮುದಾಯಗಳ ನಡುವೆ ದ್ವೇಷ ಹರಡುವ ಕ್ರಿಮಿನಲ್ ಸಂಚು’ ಎಂದು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಘಟನೆಯನ್ನು ಒಪ್ಪಿಕೊಳ್ಳುವಂತೆ ಆರೋಪಿಗಳ ಮೇಲೆ ಪೊಲೀಸರು ಹಿಂಸಾಚಾರ ಮಾಡಿದ್ದರು. ಅಪಮಾನ ತಾಳಲಾರದೇ ರುಬಾಬ್ ನವಾಬ್ ಎನ್ನುವ ಒಬ್ಬ ಆರೋಪಿ ಆತ್ಮಹತ್ಯೆಯನ್ನೂ ಮಾಡಿಕೊಂಡು ಆತನ ಪತ್ನಿ ಮತ್ತು ಮಕ್ಕಳು ಅನಾಥರಾದರು.

ಮಧ್ಯಪ್ರದೇಶದ ಘಟನೆಯಲ್ಲಿ ದೋಷಮುಕ್ತರಾದವರು

ಈ ಪ್ರಕರಣ ಮಧ್ಯಪ್ರದೇಶವಷ್ಟೇ ಅಲ್ಲ ದೇಶಾದ್ಯಂತ ಸಂಚಲನವನ್ನು ಸೃಷ್ಟಿಸಿತು. ಮಾಧ್ಯಮಗಳು ಬೆಂಕಿಗೆ ತುಪ್ಪಸುರಿದು ಸೆನ್ಸೇಶನ್ ಕ್ರಿಯೇಟ್ ಮಾಡಿದ್ದರು. “ಯಾವಾಗಲೂ ಮುಸ್ಲಿಂ ಸಮುದಾಯದವರು ಪಾಕಿಸ್ತಾನದ ಪರವಾಗಿದ್ದವರು, ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು, ದೇಶದ್ರೋಹಿಗಳು” ಎಂದೆಲ್ಲಾ ಸಂಘ ಪರಿವಾರದವರು ಅಪಪ್ರಚಾರ ಶುರುಮಾಡಿಕೊಂಡರು. ಹಿಂದು ಸಮುದಾಯ ಮುಸ್ಲಿಮರ ದೇಶಭಕ್ತಿಯನ್ನು ಅನುಮಾನದಿಂದ ನೋಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡಲಾಯ್ತು. 2018 ರಲ್ಲಿ ಮಧ್ಯಪ್ರದೇಶದ ಚುನಾವಣೆ ಇತ್ತು ಹಾಗೂ 2019 ರಲ್ಲಿ ಲೋಕಸಭಾ ಚುನಾವಣೆ ನಡೆಯುವುದಿತ್ತು. ಮುಸ್ಲಿಂ ದ್ವೇಷವನ್ನು ಹೆಚ್ಚಿಸಿ ಹಿಂದೂ ಮತಗಳನ್ನು ಕ್ರೋಢೀಕರಿಸಲು ಬಿಜೆಪಿ ಪಕ್ಷಕ್ಕೆ ಇಂತಹ ಘಟನೆಗಳು ಅಗತ್ಯವಾಗಿದ್ದವು. ಮಾಧ್ಯಮಗಳ ಮೂಲಕ ಕೋಮು ದ್ವೇಷಕ್ಕೆ ವ್ಯಾಪಕ ಪ್ರಚಾರ ಕೊಡಲಾಯಿತು.

ಆದರೆ.. ಸುಳ್ಳನ್ನು ಅದೆಷ್ಟೇ ಸುಂದರವಾಗಿ ಸೃಷ್ಟಿಸಿ ಪ್ರಚಾರ ಪಡಿಸಿದರೂ ಸತ್ಯ ಒಂದಿಲ್ಲಾ ಒಂದು ದಿನ ಗೊತ್ತಾಗಲೇಬೇಕು. ನ್ಯಾಯಾಲಯದಲ್ಲಿ ವಿಚಾರಣೆ ಶುರುವಾಯಿತು. “ನನ್ನ ಗ್ರಾಮದಲ್ಲಿ ಮುಸ್ಲಿಂ ಜನರ ವಿರುದ್ಧ ನಾನು ಯಾವುದೇ ಆರೋಪ ಮಾಡಿಲ್ಲ ಹಾಗೂ ಸುಳ್ಳು ಹೇಳಿಕೆ ನೀಡುವಂತೆ ಪೊಲೀಸರು ನನ್ನನ್ನು ಬಲವಂತಪಡಿಸಿದ್ದರು” ಎಂದು ದೂರುದಾರನಾದ ಹಿಂದೂ ವ್ಯಕ್ತಿ ಸಾಕ್ಷಿ ನುಡಿದರೂ ಪೊಲೀಸರ ಪ್ರಕರಣವನ್ನು ಮುಂದುವರೆಸಿದರು. ಆರು ವರ್ಷಗಳ ಕಾಲ ವಿಚಾರಣೆ ನಡೆದು ಇದೊಂದು ಸುಳ್ಳು ಪ್ರಕರಣವೆಂದು ನಿರ್ಧಾರಕ್ಕೆ ಬಂದ ನ್ಯಾಯಾಲಯವು ಎಲ್ಲಾ ಆರೋಪಿಗಳನ್ನೂ ಅಕ್ಟೋಬರ್ 2023 ರಂದು ದೋಷಮುಕ್ತಗೊಳಿಸಿ  ಬಿಡುಗಡೆಗೊಳಿಸಿತು. ಅದಕ್ಕೂ ಮುಂಚೆಯೇ 2022 ಜೂನ್ ನಲ್ಲಿ ಇಬ್ಬರು ಅಪ್ರಾಪ್ತ ಆರೋಪಿಗಳನ್ನು ಬಾಲನ್ಯಾಯಾಲಯವು ದೋಷಮುಕ್ತ ಗೊಳಿಸಿತ್ತು.

ಸುಳ್ಳು ಪ್ರಕರಣವೇನೋ ಸುಖಾಂತ್ಯವಾಯ್ತು. ಆದರೆ ಆ 17 ಮಂದಿ ಮುಸ್ಲಿಮರು ಅನುಭವಿಸಿದ ಮಾನಸಿಕ ಹಿಂಸೆ ಮತ್ತು ಪೊಲೀಸರಿಂದಾದ  ದೈಹಿಕ ಹಿಂಸೆಗೆ ಪರಿಹಾರ ಕೊಡುವವರು ಯಾರು? ಅವಮಾನ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡವನ ಜೀವವನ್ನು ಮತ್ತೆ ಮರಳಿಸುವವರು ಯಾರು? ಆತನ ಅನಾಥ ಮಕ್ಕಳಿಗೆ ಆಶ್ರಯ ಕೊಡುವವರು ಯಾರು? ಸುಳ್ಳು ಪ್ರಕರಣ ದಾಖಲಿಸಿದ ಪೊಲೀಸರಿಗೆ ಶಿಕ್ಷೆ ಕೊಡುವವರು ಯಾರು? ಕೋಮು ಸೌಹಾರ್ದತೆಯನ್ನು ಕದಡಿ ರಾಜಕೀಯ ಲಾಭಕ್ಕೆ ಬಳಸಿಕೊಂಡ ಬಿಜೆಪಿ ಹಾಗೂ ಸಂಘ ಪರಿವಾರದವರ ಅಮಾನವೀಯತೆಯನ್ನು ಪ್ರಶ್ನಿಸೋರು ಯಾರು? ಈ ಮತಾಂಧ ಕೋಮುವಾದಿಗಳ ಅನ್ಯಧರ್ಮ ದ್ವೇಷಕ್ಕೆ ಇನ್ನೂ ಎಷ್ಟು ಅಮಾಯಕರು ಬಲಿಯಾಗಬೇಕು?

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಬದಲಾಗಬೇಕಾದದ್ದು ಇಸ್ಲಾಮೋಫೋಬಿಯಾ ಮನೋಧರ್ಮ

More articles

Latest article