ಕಳೆದ ಮೂರು ಅವಧಿಯಿಂದ ಕಾಂಗ್ರೆಸ್ಸಿನ ಡಿ.ಕೆ.ಸುರೇಶರವರೇ ಬೆಂಗಳೂರು ಗ್ರಾಮಾಂತರ ರಾಮನಗರ ಕ್ಷೇತ್ರದಿಂದ ಗೆಲ್ಲುತ್ತಾ ಬಂದಿದ್ದಾರೆ. ಡಿ.ಕೆ.ಶಿವಕುಮಾರರಿಗೆ ಇಡೀ ಕ್ಷೇತ್ರದ ಮೇಲೆ ಉಡದ ಹಿಡಿತವಿದೆ. ಡಿ ಕೆ. ಸಹೋದರರ ಅಭೇದ್ಯ ಕೋಟೆಯನ್ನು ಬೇಧಿಸಿ ಗೆಲ್ಲುವ ಸಾಮರ್ಥ್ಯ ಹಾಗೂ ತಂತ್ರಗಾರಿಕೆ ಖಂಡಿತಾ ಸಾಧು ಸ್ವಭಾವದ ಮಂಜುನಾಥ ಡಾಕ್ಟರರಿಗಂತೂ ಇಲ್ಲ. ಜೆಡಿಎಸ್ ಪ್ರಾಬಲ್ಯವೂ ಈಗ ಕ್ಷೀಣವಾಗಿದೆ. ಹೀಗಿರುವಾಗ ಅದು ಯಾವ ಧೈರ್ಯದ ಮೇಲೆ ಮಂಜುನಾಥರವರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ಒಪ್ಪಿದರು? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
ಇಂತಹುದೊಂದು ಮಾತು ನಾಡಿನಾದ್ಯಂತ ಪ್ರತಿಧ್ವನಿಸುತ್ತಲೇ ಇದೆ. ಇತ್ತೀಚೆಗಷ್ಟೇ ಬೆಂಗಳೂರಿನ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಸ್ಥಾನದಿಂದ ನಿವೃತ್ತಿ ಹೊಂದಿದ್ದ ಜನಪ್ರಿಯ ವೈದ್ಯ ಡಾ.ಮಂಜುನಾಥರವರನ್ನು ಬೆಂಗಳೂರು ಗ್ರಾಮಾಂತರ ರಾಮನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿದಾಗಿನಿಂದ ಇಂತಹ ಮಾತುಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಮಾರ್ದನಿಸುತ್ತಿವೆ.
ಡಾ. ಸಿ ಎನ್ ಮಂಜುನಾಥರವರು ಅತ್ಯಂತ ಹೃದಯವಂತ ಹೃದಯ ತಜ್ಞರು ಎನ್ನುವುದು ನಿರ್ವಿವಾದ. ಹೃದಯ ಕಾಯಿಲೆ ಇರುವ ಅದೆಷ್ಟೋ ಬಡವರಿಗೆ ಚಿಕಿತ್ಸೆ ನೀಡಿರುವುದೂ ಸುಳ್ಳಲ್ಲ. ತಮ್ಮ ಮನವೀಯ ಗುಣ ವಿಶೇಷತೆಯಿಂದಾಗಿ ವೈದ್ಯಲೋಕದ ಅಚ್ಚರಿಯಾಗಿದ್ದಾರೆಂಬುದೂ ಅತಿಶಯೋಕ್ತಿಯಲ್ಲ. ಸರಳ ಸಾಧು ಸ್ವಭಾವದ ಉತ್ತಮ ವ್ಯಕ್ತಿ ಎನ್ನುವುದರಲ್ಲೂ ಎರಡು ಮಾತಿಲ್ಲ.
ಆದರೆ.. ಈಗ ಮಾನವೀಯತೆಯನ್ನೇ ಕಳೆದುಕೊಂಡ, ಹೃದಯವಂತಿಕೆಯೆಂಬುದಕ್ಕೆ ವಿರುದ್ಧ ಎನ್ನಬಹುದಾದ ರಾಜಕೀಯ ಕ್ಷೇತ್ರಕ್ಕೆ ಡಾ.ಮಂಜುನಾಥರವರು ಆಗಮಿಸಿದ್ದು ಅವರ ಅದೆಷ್ಟೋ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ದಂತೂ ನಿಜ. ರಾಜಕೀಯದ ಗಂಧಗಾಳಿ ಆಳ ಅಗಲಗಳ ಅರಿವಿಲ್ಲದ ವ್ಯಕ್ತಿಗೆ ರಾಜಕೀಯವೆನ್ನುವುದು ಸೂಕ್ತ ಜಾಗವಲ್ಲ ಎಂಬುದು ಮಂಜುನಾಥರವರಿಗೂ ಗೊತ್ತಿರುವ ಸಂಗತಿ.
ಅವರು ಬೇಡವೆಂದರೂ ರಾಜಕೀಯದವರ ನೆಂಟಸ್ತನ ಬಿಡಬೇಕಲ್ಲಾ. ಹೇಳಿ ಕೇಳಿ ಮಂಜುನಾಥರವರು ಈ ನಾಡಿನ ರಾಜಕೀಯ ದಿಗ್ಗಜ ದೇವೇಗೌಡರ ಅಳಿಯ. ಮಾಜಿ ಸಿಎಂ ಕುಮಾರಸ್ವಾಮಿಯವರ ಭಾವ. ಮಂಜುನಾಥರವರಿಗೆ ರಾಜಕೀಯದ ಅನಿವಾರ್ಯತೆ ಇಲ್ಲವಾದರೂ ಈ ಮಾವ ಭಾವರಿಗೆ ಮಂಜುನಾಥರವರ ಜನಪ್ರಿಯತೆಯ ಅಗತ್ಯ ಇದೆ. ಹೇಗಾದರೂ ಮಾಡಿ ಬೆಂಗಳೂರು ಗ್ರಾಮಾಂತರ ಮತಕ್ಷೇತ್ರದಲ್ಲಿ ತಮ್ಮ ರಾಜಕೀಯ ಶತ್ರು ಡಿಕೆಶಿ ಯವರ ಸಹೋದರ ಡಿಕೆ ಸುರೇಶರವರನ್ನು ಸೋಲಿಸಲೇ ಬೇಕೆಂಬುದು ಮಂಜುನಾಥರವರ ಮಾವ ಭಾವನವರ ಉದ್ದೇಶ. ಅದಕ್ಕಾಗಿ ಒತ್ತಾಯ ಪೂರ್ವಕವಾಗಿ ಮಂಜುನಾಥರವರನ್ನು ರಾಜಕೀಯಕ್ಕೆ ಎಳೆತಂದು ಸಾರ್ವತ್ರಿಕ ಚುನಾವಣೆಯಲ್ಲಿ ಅಭ್ಯರ್ಥಿಯಾಗಿಸಲಾಗಿದೆ.
ಅವತ್ತು ಕಲಾಗ್ರಾಮದಲ್ಲಿ ತೋ. ನಂಜುಂಡಸ್ವಾಮಿಯವರ ಸ್ಮರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.ಮಂಜುನಾಥರವರನ್ನು ರಾಜಕೀಯ ಪ್ರವೇಶದ ಕುರಿತು ಪ್ರಶ್ನಿಸಿದಾಗ “ಅದೆಲ್ಲಾ ನಮ್ಮಂತವರಿಗೆ ಯಾಕೆ? ಮತ್ತೆ ಕುಟುಂಬ ರಾಜಕಾರಣದ ಆರೋಪ ನನ್ನ ಮೇಲೆಯೂ ಬರುತ್ತದೆಯಲ್ಲವೇ?” ಎಂದು ಉತ್ತರಿಸಿ ತಮ್ಮ ನಿರಾಕರಣೆಯನ್ನು ವ್ಯಕ್ತಪಡಿಸಿದ್ದರು. ಆದರೆ ಈಗ ಮತ್ತದೇ ದೇವೇಗೌಡರ ಕುಟುಂಬ ರಾಜಕಾರಣದ ಭಾಗವಾಗಿ ಚುನಾವಣಾ ಕಣಕ್ಕೆ ಇಳಿದು ತಮ್ಮ ವರ್ಚಸ್ಸನ್ನು ಪಣಕ್ಕಿಟ್ಟಿದ್ದಾರೆ.
ಬದಲಾದ ರಾಜಕೀಯ ಸಮೀಕರಣದಲ್ಲಿ ಮಂಜುನಾಥರವರನ್ನು ದೇವೇಗೌಡರ ಜೆಡಿಎಸ್ ಪಕ್ಷದ ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದು ಅಚ್ಚರಿ. ಯಾಕೆಂದರೆ ಮಂಜುನಾಥರವರು ಬಿಜೆಪಿ ಪಕ್ಷದ ಸದಸ್ಯರೂ ಅಲ್ಲ, ಕಾರ್ಯಕರ್ತರೂ ಅಲ್ಲ, ಸಂಘಿಯೂ ಅಲ್ಲ, ಹಿಂದುತ್ವವಾದಿ ಸಿದ್ಧಾಂತಿಯೂ ಅಲ್ಲ. ಅಸಲಿಗೆ ಬಿಜೆಪಿಗೂ ಅವರಿಗೂ ಯಾವುದೇ ಸಂಬಂಧವೂ ಇರಲಿಲ್ಲ. ಆದರೂ ಕನಿಷ್ಟ ಸದಸ್ಯತ್ವವನ್ನೂ ಪಡೆಯದ ವ್ಯಕ್ತಿಯನ್ನು ಬಿಜೆಪಿ ತನ್ನ ಪಕ್ಷದ ಉಮೇದುವಾರ ಎಂದು ಘೋಷಿಸಿದ್ದೇ ಆ ಪಕ್ಷದ ಇತಿಹಾಸದಲ್ಲಿ ಮೊದಲನೆಯದು. ಬಿಜೆಪಿ ಪಕ್ಷದಿಂದ ಟಿಕೆಟ್ ಸಿಕ್ಕಿದ್ದರಿಂದಾಗಿ ಕುಟುಂಬ ರಾಜಕಾರಣದ ಆರೋಪದಿಂದ ಮುಕ್ತನಾದೆ ಎಂದು ಮಂಜುನಾಥರವರು ಸಮರ್ಥನೆ ಮಾಡಿಕೊಳ್ಳ ಬಹುದಾಗಿದೆ. ಮಂಜುನಾಥರವರು ಕುಟುಂಬ ರಾಜಕಾರಣದ ಸುಳಿಯಿಂದ ಹೊರಬರಬೇಕೆಂದರೂ ಕುಟುಂಬ ರಾಜಕಾರಣ ಅವರನ್ನು ಬಿಟ್ಟರೂ ಬಿಡದ ಮಾಯೆಯಂತೆ ಸುತ್ತುವರೆದಿದೆ. ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತೆ ಬಲೆ ಹೆಣೆದಿದೆ.
ಮೊದಲನೆಯದಾಗಿ ಡಿಕೆ ಸಹೋದರರ ಪ್ರಾಬಲ್ಯದ ಬೆಂಗಳೂರು ಗ್ರಾಮಾಂತರ ರಾಮನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷಕ್ಕೆ ಗಟ್ಟಿಯಾದ ನೆಲೆ ಇಲ್ಲ. ಕಳೆದ ಸಲ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ಮೆಟ್ಟಿ ನಿಂತು ಕರ್ನಾಟಕದಲ್ಲಿ ಎಂಪಿ ಯಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಏಕೈಕ ಸಂಸದ ಡಿ.ಕೆ.ಸುರೇಶ್. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ 8 ವಿಧಾನಸಭಾ ಶಾಸಕರಲ್ಲಿ ಐವರು ಕಾಂಗ್ರೆಸ್ಸಿನವರು. ಇಬ್ಬರು ಬಿಜೆಪಿ ಹಾಗೂ ಒಬ್ಬರು ಜೆಡಿಎಸ್. ಕಳೆದ ಮೂರು ಅವಧಿಯಿಂದ ಕಾಂಗ್ರೆಸ್ಸಿನ ಡಿ.ಕೆ.ಸುರೇಶರವರೇ ಈ ಕ್ಷೇತ್ರದಲ್ಲಿ ಗೆಲ್ಲುತ್ತಾ ಬಂದಿದ್ದಾರೆ. ಡಿ.ಕೆ.ಶಿವಕುಮಾರರಿಗೆ ಇಡೀ ಕ್ಷೇತ್ರದ ಮೇಲೆ ಉಡದ ಹಿಡಿತವಿದೆ. ಡಿ ಕೆ.ಸಹೋದರರ ಅಭೇದ್ಯ ಕೋಟೆಯನ್ನು ಬೇಧಿಸಿ ಗೆಲ್ಲುವ ಸಾಮರ್ಥ್ಯ ಹಾಗೂ ತಂತ್ರಗಾರಿಕೆ ಖಂಡಿತಾ ಸಾಧು ಸ್ವಭಾವದ ಮಂಜುನಾಥ ಡಾಕ್ಟರರಿಗಂತೂ ಇಲ್ಲ. ಜೆಡಿಎಸ್ ಪ್ರಾಬಲ್ಯವೂ ಈಗ ಕ್ಷೀಣವಾಗಿದೆ. ಹೀಗಿರುವಾಗ ಅದು ಯಾವ ಧೈರ್ಯದ ಮೇಲೆ ಮಂಜುನಾಥರವರು ಲೋಕಸಭಾ ಚುನಾವಣೆಗೆ ಅಭ್ಯರ್ಥಿಯಾಗಲು ಒಪ್ಪಿದರು?
ಜೆಡಿಎಸ್ ಪಕ್ಷದ ಮಾಲೀಕರಾದ ಅಪ್ಪ ಮಗನ ಒತ್ತಾಯ, ಮೋದಿ ನಾಮ ಬಲದಿಂದ ಗೆದ್ದರೂ ಗೆಲ್ಲಬಹುದು ಎನ್ನುವ ನಂಬಿಕೆ ಹಾಗೂ ವೈದ್ಯರಾಗಿ ತಾವು ಪಡೆದ ಒಳ್ಳೆಯ ಹೆಸರು ತಮ್ಮನ್ನು ದಡ ಸೇರಿಸಬಹುದು ಎನ್ನುವ ವಿಶ್ವಾಸ ಮಂಜುನಾಥರವರದ್ದಾಗಿದೆ. ಆದರೆ ಎಲ್ಲರೂ ಸೇರಿ ತಮ್ಮನ್ನು ಹರಕೆಯ ಕುರಿಯನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಮಂಜುನಾಥರವರಿಗೆ ಅರ್ಥವಾಗದ ಸತ್ಯವೇನಲ್ಲ.
ಡಿಕೆ ಸಹೋದರರ ಪ್ರಾಬಲ್ಯವನ್ನು ಮಟ್ಟ ಹಾಕಲು ಜೆಡಿಎಸ್ ಪಕ್ಷವು ಮಂಜುನಾಥರವರ ಹೆಸರನ್ನು ಬಳಸಿಕೊಳ್ಳುತ್ತಿದೆ. ಈ ಮತ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಳಸಿಕೊಂಡು ಚುನಾವಣೆ ಮೂಲಕ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳಲು ಬಿಜೆಪಿ ಪಕ್ಷ ಹವಣಿಸುತ್ತಿದೆ. ಈ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳ ರಾಜಕೀಯದಾಟದಲ್ಲಿ ಡಾ.ಮಂಜುನಾಥರವರು ಬಲಿಪಶು ಆಗುವುದಂತೂ ನಿಶ್ಚಿತ. ವೈದ್ಯ ವೃತ್ತಿ ಬದುಕಿನಲ್ಲಿ ಗೆಲ್ಲುತ್ತಲೇ ಬಂದ ಡಾ.ಮಂಜುನಾಥರವರಿಗೆ ರಾಜಕೀಯ ಕ್ಷೇತ್ರದಲ್ಲಿ ಸೋಲಂತೂ ಖಚಿತ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಭಾರತದ ಚುನಾವಣಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆಯೇ?