ಬಾಂಬ್ ಸ್ಫೋಟ ಸಂಭವಿಸಿದ ಒಂದು ವಾರದ ಬಳಿಕ ಇದೀಗ ಶಿವರಾತ್ರಿಯ ಸಂದರ್ಭದಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಪುನರಾರಂಭಗೊಂಡಿದೆ. ಬೆಳಗ್ಗೆಯ ಪೂಜೆ ಬಳಿಕ ಗ್ರಾಹಕರ ಸ್ವಾಗತಕ್ಕೆ ಸಜ್ಜಾಗಿರುವ ಕೆಫೆಯಲ್ಲಿ ಬಿಗಿ ಭದ್ರತೆಯನ್ನೂ ಕೈಗೊಳ್ಳಲಾಗಿದೆ.
ಕೆಫೆಯ ಪ್ರವೇಶ ದ್ವಾರದ ಬಳಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಡಲಾಗಿದೆ. ಶನಿವಾರದಿಂದ ಪ್ರತಿ ಗ್ರಾಹಕರನ್ನು ಹ್ಯಾಂಡ್ ಡಿಟೆಕ್ಟರ್ ಮೂಲಕ ತಪಾಸಣೆ ಮಾಡಿಯೇ ಒಳ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಕೆಫೆ ಸುತ್ತ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಪೊಲೀಸರು ತೆರವುಗೊಳಿಸಿದ್ದಾರೆ. ಈ ಮಧ್ಯೆ, ಪೊಲೀಸ್ ಸಮ್ಮುಖದಲ್ಲೇ ಪೂಜಾ ಕಾರ್ಯಕ್ರಮಗಳು ನೆರವೇರಿದವು.
ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಶುಕ್ರವಾರ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಐದು ಮಂದಿ ಗಾಯಗೊಂಡಿದ್ದರು. ಬಾಂಬ್ ಇಟ್ಟು ಹೋಗಿದ್ದ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಘಟನೆ ಸಂಬಂಧ ತನಿಖೆಯೂ ಪ್ರಗತಿಯಲ್ಲಿದೆ.