ಹೇ…ರಾಮ್…
ಎಲವೋ ಅನ್ನದ ಅಯ್ಯ ಅನ್ನುವ
ನಾಡಿನಿಂದ ಬಂದವನು ನಾನು
ನಾ ಹುಟ್ಟಿದ ಧರ್ಮದಲಿ
ವರ ಕೊಡುವ ದೇವರಿಲ್ಲ
ಶಾಪ ಕೊಡುವ ದೇವರೂ ಇಲ್ಲ
ಭಾರತ ಜನನಿಯ ತನುಜಾತೆಯ ಪುತ್ರ
ನಾನು
ಹಿಂದೂ ಅಲ್ಲವಾದರೂ
ಕೋಟ್ಯಂತರ ಜನಮಾನಸದಲಿ
ನೆಲೆ ನಿಂತ ನಿನ್ನಲ್ಲಿಗೆ ಬಂದಿದ್ದೇನೆ.
ನಿನ್ನನೆಂದು ಸ್ಮರಿಸದ, ಪೂಜಿಸದ
ಭಜಿಸದ, ಜೈಕಾರ ಹಾಕದವನು
ಪ್ರಶ್ನೆ ಕೇಳಲು ನಿಂತಿದ್ದೇನೆ.
ಮುಳುಗುವ ದೇಶವ ದಡ
ಸೇರಿಸುತ್ತೇನೆಂದು ಹುಟ್ಟು ಹಾಕಿ
ನಡುನೀರಿನಲಿ ಕೈ ಬಿಟ್ಟ
ಜನನಾಯಕನ ಹುಟ್ಟಡಗಿ ಹೋಗಿದೆ.
ಅಭಿವೃದ್ಧಿ ಅಭಿವೃದ್ಧಿ ಅಭಿವೃದ್ಧಿ
ಎಂದು ಅಬ್ಬರಿಸಿದವನು
ದೇಶದೇಳಿಗೆಯ ಹೊರೆಯನು
ಕರಿಬಂಡೆಯಲ್ಲಿ ಕೆತ್ತಿದ
ನಿನ್ನ ಮೂರ್ತಿಗೆ ಪ್ರಾಣ ತುಂಬಿ
ಅದರ ಹೆಗಲಿಗೆ ಜಾರಿಸಿದ್ದಾನೆ.
ಕೊಟ್ಟ ಕೋಟಿ ಪೊಳ್ಳು ಭರವಸೆ
ಮಾತಿನಲ್ಲೇ ಕಟ್ಟಿದ ಅರಮನೆ
ಮಾಡಿದ ಆಣೆ ಪ್ರಮಾಣಕ್ಕೆ
ಬೆನ್ನು ತೋರಿದವನ ಬಳಿ
ಇನ್ನೆಂಥ ಮಾತು?
ನೀನೇ ಉತ್ತರಿಸಬೇಕು.
ಹಸಿವು ಬಡತನ ಅಸ್ಪೃಶ್ಯತೆ ಅಸಮಾನತೆ
ನೀ ಕೊಟ್ಟ ಶಾಪವೇ?
ಎಲ್ಲವನ್ನು ಗೆಲ್ಲಬಲ್ಲ ಹುಮ್ಮಸ್ಸು
ಕಾಯಕದಲಿ ಬದುಕುವ ಕನಸು
ಬಿಸಿರಕ್ತ ಯುವಕರಿಗೆ ಸಿಗದ
ದುಡಿಮೆ ಕಟ್ಟಿದ ಖಾಲಿ ಕೈಗಳು
ನೀ ಕೊಟ್ಟ ವರವೇ?
ವರುಷಕ್ಕೆರಡು ಕೋಟಿ ಉದ್ಯೋಗ
ಎಂದ ಉತ್ತರಕುಮಾರನ ಪರ
ನೀನು ಉತ್ತರಿಸಬೇಕಿದೆ.
ಬಸಿರು ತಾಯಂದಿರು
ಹೆರುವ ಪುಟ್ಟ ಕಂದಮ್ಮಗಳು
ಅದೆಷ್ಟು ದಿನ ಸೂರ್ಯನ ನೋಡಿದವು?
ಕತ್ತಲು ಕವಿದು ಚಂದಮಾಮ
ಬರುವ ಮುಂಚೆಯೇ ಕಣ್ಮುಚ್ಚಿದವು.
ಇನ್ನು ಬತ್ತಿ ಹೋದ ಮೊಲೆ ಹೊತ್ತ
ಬಡಕಲು ದೇಹದ ತಾಯಿ
ಭಾರತಮಾತೆ ಬದುಕಿ
ಉಳಿಯುವಳೇ?
ಈ ಸಂಕಟದ ಬಾಯಿಗೆ
ಅಖಂಡ ರಾಮಭಕ್ತನ ನಾಡಲ್ಲಿ
ಕಿವಿಯಾಗುವವರಾರು?
ಈಗ ಬಿಡು….ನಿನ್ನದೇ ದರ್ಬಾರು
ಬಂದಿದೆ ರಾಮರಾಜ್ಯ
ಸಿಗಲೇ ಬೇಕಿದೆ ಉತ್ತರ.
ಹೇಳದೆ ಬಡಿದ ಬರಗಾಲ
ಕೇಳದೆ ಸುರಿದ ಮಳೆಗಾಲ
ಉತ್ತಿದ್ದು ಬಿತ್ತಿದ್ದೆಲ್ಲ
ಮಣ್ಣಲ್ಲಿ ಮಣ್ಣು
ತಿನ್ನುವ ಬಾಯಿಗೆ ಹಿಡಿಮಣ್ಣು!
ರೈತನ ಜೇಬಿಗೆ ದುಪ್ಪಟ್ಟು ದುಡ್ಡು
ಸುರಿಯುತ್ತೇನೆಂದವ ಕಣ್ಮುಚ್ಚಿ
ಕೂತಿದ್ದಾನೆ.
ಚುನಾವಣೆ ಬಂತೆಂದು
ನಿನ್ನ ಕರೆಸಿಕೊಂಡವ
ರಾಮನಾಮ ಜಪಿಸುತ್ತಿದ್ದಾನೆ.
ಇದಕ್ಕೆಲ್ಲಿ ಪರಿಹಾರ
ನೀನು ಉತ್ತರಿಸಲೇ ಬೇಕಿದೆ.
ರೈತ ನೇಣಿಗೇರುವ ಮುನ್ನ
ಅವನ ಗಂಗಳದಲ್ಲಿ ನೀನು ಉಣ್ಣಬೇಕಿದೆ.
ಜನರ ದುಡಿಮೆಯ ಕೂಡಿಟ್ಟ
ಬೆವರಿನ ದುಡ್ಡನ್ನು ತೊಳೆದು
ವ್ಯಾಪಾರಿ ಗೆಳೆಯರ ಜೋಳಿಗೆ
ತುಂಬಿದ ಚೌಕೀದಾರ.
ತೊಟ್ಟ ವೇಷ ಕಳಚಿ
ಉಟ್ಟು ಕಷಾಯ ವಸ್ತ್ರ
ರಾಮಭಕ್ತನಂತೆ ಕ್ಯಾಮೆರಾಗೆ
ಪೋಸು ಕೊಟ್ಟ ನಟಭಯಂಕರ.
ಹಗಲು ದರೋಡೆಕೋರನ ನೀನು
ವಿಚಾರಿಸಬೇಕಿದೆ ಓಡಿಹೋದ
ಗಂಟುಕಳ್ಳರ ಹುಡುಕಿ ತದುಕಬೇಕಿದೆ
ಇದಕ್ಕೆ ನೀನು ಉತ್ತರಿಸಬೇಕಿದೆ.
ಜೈಶ್ರೀರಾಮ್…
ಕೂಗದಿದ್ದರೆ ನಿನ್ನೆಸರು ಬಡಿಗೆಯಲ್ಲಿ
ಬಡಿದು ಬಾಯಿ ಬಿಡಿಸುವ ರಕ್ಕಸರ
ನಾಡಿಗೆ ಬಂದಿದ್ದೀಯ!
ಹಾಡುಹಗಲೇ ಹರೆಯಕ್ಕೆ ಬಂದ
ಹೆಣ್ಣುಮಕ್ಕಳ ಹೊತ್ತೊಯ್ದು
ಅಂಗಾಂಗಗಳ ಮುರಿದು ಮುಕ್ಕುವ
ತೋಳದ ಬೀಡಿಗೆ ಇಳಿದಿದ್ದೀಯ!
ದೇಗುಲದ ಹೊಸ್ತಿಲ ತುಳಿದು
ದಂಡ ತೆತ್ತ ಪುಟ್ಟಬಾಲಕ
ಛಡಿಯೇಟು ತಿಂದ ಯುವಕ
ಶಿಕ್ಷೆಕೊಟ್ಟ ವಿಕೃತ ಮನಸ್ಸುಗಳ
ನೆಲವನ್ನು ಮೆಟ್ಟಿದ್ದೀಯ!
ಈ ಸನಾತನ ಕರ್ಮಕಾಂಡಗಳಿಗೆ
ನೀನು ಉತ್ತರಿಸಲೇ ಬೇಕು.
ಮಳೆ ಗಾಳಿಗೆ ಬಿಸಿಲು ಚಳಿಗೆ
ಹೆದರುವ ಹಾಗೇ ಇಲ್ಲ
ನೀನಿದ್ದ ತಗಡು ಶೀಟಿನ ಜೋಪಡಿ
ಭವ್ಯ ಅರಮನೆಯಾಗಿದೆಯಲ್ಲ!
ನಿಂತ ಕಾಲಚಕ್ರ ಈಗಷ್ಟೇ ಚಲಿಸುತ್ತಿದೆ
ದೇಶವಾಸಿಗಳೆಲ್ಲರ
ತಲೆಯ ಮೇಲೆ ಸೂರೆಂದ
ದೇವರ ದೀಪ ಬೆಳಗಿದರೆ
ಬಡತನ ಮಾಯವೆಂದ
ಹೇಳಿದ್ದೇ ತಡ ತಟ್ಟೆಲೋಟ ಬಡಿದವರ
ಉತ್ತರಕುಮಾರನ
ಮೋಡಿಯ ಮಾತಿಗೆ ಮರುಳಾದವರ
ಪ್ರಶ್ನೆಗೆ ನೀನು ಉತ್ತರಿಸಬೇಕಿದೆ.
ಭಂಡನಾಯಕನಂತೆ ತಪ್ಪಿಸಿಕೊಳ್ಳದೆ
ನೀನು ಉತ್ತರಿಸಬೇಕಿದೆ
ಬಂದಿದೆ ರಾಮರಾಜ್ಯ
ನಿನ್ನದೇ ಸಾಮ್ರಾಜ್ಯ
ಆಕಾಶಕೆ ಬೊಗಸೆಯೊಡ್ಡಿ
ಆಸೆಗಣ್ಣುಗಳಿಂದ ಕಾತರಿಸಿ
ಕೂತ ಈ ದೇಶ
ಈಗ ನಿನ್ನ ಮಾತಿನ ಮೇಲೆ ನಿಂತಿದೆ.
ಚಂದ್ರಪ್ರಭ ಕಠಾರಿ