ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರನ್ನು ಬ್ರೂಕ್ ಫೀಲ್ಡ್ ಆಸ್ಪತ್ರೆಯಲ್ಲಿ ಭೇಟಿ ಮಾಡಿದರು.
ಮೈಸೂರಿನ ವಿವಿಧ ಯೋಜನೆಗಳ ಶಂಕುಸ್ಥಾಪನೆ ಇತ್ಯಾದಿ ಕಾರ್ಯಕ್ರಮಗಳನ್ನು ನೆರವೇರಿಸಿ ನೇರವಾಗಿ ಎಚ್. ಎ. ಎಲ್ ವಿಮಾನನಿಲ್ದಾಣಕ್ಕೆ ಆಗಮಿಸಿದ ಅವರು ಅಲ್ಲಿಂದ ನೇರವಾಗಿ ಬ್ರೂಕ್ ಫೀಲ್ಡ್ ಆಸ್ಪತ್ರೆಗೆ ತೆರಳಿದರು.
ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಿದ್ಧರಾಮಯ್ಯ ಸಾಂತ್ವನ ಹೇಳಿದರು. ಗಾಯಾಳುಗಳಿಗೆ ಆಗಿರುವ ಗಾಯಗಳು ಮತ್ತು ಅವರಿಗೆ ನೀಡಲಾಗುತ್ತಿರುವ ಚಿಕಿತ್ಸೆಯ ಕುರಿತು ಮುಖ್ಯಮಂತ್ರಿಗೆ ಆಸ್ಪತ್ರೆಯ ವೈದ್ಯರು ವರದಿ ನೀಡಿದರು.
ಈ ಸಂದರ್ಭದಲ್ಲಿ ಗಾಯಾಳು ಸ್ವರ್ಣಾಂಬ ಕುಟುಂಬಸ್ಥರ ಜತೆಯಲ್ಲಿಯೂ ಅವರು ಚರ್ಚೆ ನಡೆಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚನೆ ನೀಡಿದರು. ಇದಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಫೋಟ ನಡೆದ ರಾಮೇಶ್ವರಂ ಕೆಫೆ ಬಳಿಗೆ ತೆರಳಿದರು.
ನಿನ್ನೆ ಮಧ್ಯಾಹ್ನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ (Bomb Blast) ಪ್ರಕರಣದ ಕುರಿತು ಹೆಚ್ಎಎಲ್ (HAL) ಠಾಣೆಯಲ್ಲಿ ಎಫ್ಐಆರ್ (FIR) ದಾಖಲಿಸಲಾಗಿದೆ.
ಐಪಿಸಿ ಸೆಕ್ಷನ್ 307 (ಕೊಲೆ ಯತ್ನ), 471 (ಸುಳ್ಳು ಸ್ಪಷ್ಟನೆಯ ದಸ್ತಾವೇಜನ್ನು ನೈಜವಾದುದೆಂದು ಬಳಸುವುದು) ಮತ್ತು ಯುಎಪಿಯ 16 (ಭಯೋತ್ಪಾದಕ ಕೃತ್ಯ), 18 (ಪಿತೂರಿ) ಹಾಗೂ 38 (ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಅಪರಾಧ) ಮತ್ತು ಎಕ್ಸ್ಪ್ಲೋಸಿವ್ ಸಬ್ಸ್ಟೆನ್ಸ್ ಆ್ಯಕ್ಟ್ 3 (ಜೀವಕ್ಕೆ ಅಥವಾ ಆಸ್ತಿಗೆ ಅಪಾಯನ್ನುಂಟುಮಾಡುವ ಸ್ಫೋಟ) ಮತ್ತು 4 (ಜೀವಕ್ಕೆ ಹಾನಿಯುಂಟುಮಾಡುವ ಉದ್ದೇಶದಿಂದ ಸ್ಫೋಟಕ ತಯಾರಿಕೆ) ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
ಶುಕ್ರವಾರ ಮಧ್ಯಾಹ್ನ ಕೆಫೆಯಲ್ಲಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಓರ್ವ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಒಟ್ಟು 10 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಓರ್ವ ಶಂಕಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆಫೆಯ ಒಳಗಡೆ ಸ್ಫೋಟಕವನ್ನು ಇರಿಸಿ ಬಳಿಕ ಬೈಕ್ನಲ್ಲಿ ತೆರಳಿದ್ದ ಶಂಕಿತನ ಬೈಕ್ ಮಾಹಿತಿಯನ್ನು ಆಧರಿಸಿ ಆತನನ್ನು ವಶಕ್ಕೆ ಪಡೆದು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಕಪ್ಪು ಬ್ಯಾಗ್ ಬೆನ್ನಿಗೆ ಹಾಕಿಕೊಂಡು ಬಂದಿದ್ದ ಬಾಂಬರ್ ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತಿಂದು ಕೈತೊಳೆದ ಬಳಿಕ ಬ್ಯಾಗ್ ಅನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ. ಸಿಸಿಟಿವಿಯಲ್ಲಿ ಆತನ ಪ್ರತಿಯೊಂದು ಚಲನವಲನಗಳು ಸೆರೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.