ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ: ಖಚಿತಪಡಿಸಿದ ಡಿಜಿ ಅಲೋಕ್ ಮೋಹನ್

Most read

ಬೆಂಗಳೂರು: ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಇಂದು ಮಧ್ಯಾಹ್ನ ನಡೆದಿರುವುದು ಬಾಂಬ್ ಸ್ಫೋಟ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ತಿಳಿಸಿದ್ದಾರೆ.

ಘಟನಾಸ್ಥಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಒಂಭತ್ತು ಮಂದಿ ಗಾಯಾಳುಗಳಾಗಿದ್ದಾರೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ವಿಧಿವಿಜ್ಞಾನ ( FSL) ತಂಡದ ತಜ್ಞರು ಪರಿಶೀಲನೆ ನಡೆಸುತ್ತಿದ್ದು, ಬಾಂಬ್ ಸ್ಫೋಟಕ್ಕೆ ಏನನ್ನು ಬಳಸಲಾಗಿದೆ ಎಂಬುದು ನಂತರ ತಿಳಿದುಬರಲಿದೆ ಎಂದರು.

ಘಟನೆ ಕುರಿತಂತೆ ಈಗಾಗಲೇ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಗುಪ್ತಚರ ದಳ (IB) ಸೇರಿದಂತೆ ಎಲ್ಲ ತನಿಖಾ ಸಂಸ್ಥೆಗಳಿಗೆ ಮಾಹಿತಿ ತಲುಪಿಸಲಾಗಿದೆ ಎಂದು ಅಲೋಕ್ ಮೋಹನ್ ಹೇಳಿದರು.

ಘಟನೆ ವಿವರ:
ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಎಚ್.ಎ.ಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ಹೊಸದಾಗಿ ಆರಂಭಗೊಂಡಿರುವ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟವೊಂದು ಸಂಭವಿಸಿತ್ತು. ಆರಂಭದಲ್ಲಿ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿರಬಹುದು ಎಂದು ಶಂಕಿಸಲಾಗಿತ್ತು. ಆದರೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾಂಬ್ ಸ್ಫೋಟ ಸಂಭವಿಸಿರುವುದನ್ನು ಖಚಿತಪಡಿಸಿದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ರಾಜ್ಯದ ಜನರು ಆತಂಕಪಡುವ ಅಗತ್ಯವಿಲ್ಲ‌. ಘಟನೆ ಕುರಿತು ಪೂರ್ಣ ಮಾಹಿತಿ ಪಡೆಯಲಾಗುತ್ತಿದ್ದು, ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

More articles

Latest article