ಸೋನಿಯಾ ಗಾಂಧಿ ಆತ್ಮಚರಿತ್ರೆ ಸರಣಿ – 4
ಪುಸ್ತಕವನ್ನು ಓದದೆ ಟೀಕಿಸುವುದಕ್ಕಿಂತ ಓದಿ ಟೀಕಿಸುವುದು ಖಂಡಿತಾ ಉತ್ತಮ. ಆದರೆ ಓದಿದ ನಂತರವೂ ಲೇಖಕಿಗೆ ತನ್ನ ಅನುಭವಗಳನ್ನು ತನ್ನ ಗ್ರಹಿಕೆಯಂತೆ ದಾಖಲಿಸುವ ಹಕ್ಕಿದೆ ಎಂಬ ಸರಳ ಸತ್ಯವನ್ನು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ, ಅದು ಯಾವ ಬಗೆಯ ಬೌದ್ಧಿಕ ಸ್ವಾತಂತ್ರ್ಯದ ಪ್ರತಿಪಾದನೆ? ಮೋದಿ ಆಡಳಿತದಲ್ಲಿ ಒಬ್ಬ ವ್ಯಕ್ತಿಗೆ ತನ್ನ ಬದುಕಿನ ಕಥೆಯನ್ನು ತನ್ನ ಅನುಭವ, ನೆನಪು ಮತ್ತು ಗ್ರಹಿಕೆಗಳ ಆಧಾರದಲ್ಲಿ ಹೇಳಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲವೇ? – ಕೆ ಚಂದ್ರಶೇಖರ ಶೆಟ್ಟಿ, ರಾಜಕೀಯ ವಿಶ್ಲೇಷಕರು.
“ಯಾವುದೇ ಒಂದು ಆತ್ಮಕಥನದಲ್ಲಿ ಈ ಗ್ರಹಿಕೆ ಇರಬಾರದು, ಆ ವಿಶ್ಲೇಷಣೆ ಇರಬಾರದು ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ! ” — ಇದು ಜಯಪ್ರಕಾಶ್ ಹೆಗ್ಡೆಯವರ ಅಭಿಪ್ರಾಯ.
ನನ್ನಂತಹವರ ಸೈದ್ಧಾಂತಿಕ ಸ್ಪಷ್ಟತೆಯ ಸ್ಫೂರ್ತಿದಾತರು, ಮಾಜಿ ಸಚಿವರು, ಮಾಜಿ ಸಂಸದರು ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರೊಂದಿಗೆ ನಿನ್ನೆ ಸಂಜೆ ಚರ್ಚಿಸುತ್ತಿದ್ದ ಸಂದರ್ಭದಲ್ಲಿ ಅವರು ಮುಂದಿಟ್ಟ ಕೆಲವು ವಿಚಾರಗಳು ಬಹಳ ಚಿಂತನಾರ್ಹವೆನಿಸಿದವು.
ಒಬ್ಬ ವ್ಯಕ್ತಿ ತನ್ನ ಆತ್ಮಕಥೆಯನ್ನು ಬರೆಯುವಾಗ ತನ್ನ ಬದುಕಿನ ಸುತ್ತ ನಡೆದ ಘಟನೆಗಳು, ತಾನು ಕಂಡ ಮನುಷ್ಯರು, ಅನುಭವಿಸಿದ ಸನ್ನಿವೇಶಗಳು ಹಾಗೂ ಅವುಗಳ ಕುರಿತಾದ ತನ್ನದೇ ಗ್ರಹಿಕೆ ಮತ್ತು ವಿಶ್ಲೇಷಣೆಗಳನ್ನು ದಾಖಲಿಸುವ ಸಂಪೂರ್ಣ ಹಕ್ಕು ಹೊಂದಿರುತ್ತಾರೆ. ಒಬ್ಬರ ಗ್ರಹಿಕೆ ಮತ್ತೊಬ್ಬರ ಗ್ರಹಿಕೆಯಂತೆಯೇ ಇರಬೇಕೆಂದಿಲ್ಲ. ಒಂದೇ ಘಟನೆಗೆ ವಿಭಿನ್ನ ವ್ಯಕ್ತಿಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು. ಲೇಖಕರು ತಮ್ಮ ಅನುಭವಗಳ ಆಧಾರದಲ್ಲಿ ಏನು ಬರೆಯಬೇಕು ಎಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅದನ್ನು ಒಪ್ಪುವುದು ಅಥವಾ ಒಪ್ಪದಿರುವುದು ಓದುಗರ ಆಯ್ಕೆಗೆ ಬಿಟ್ಟ ವಿಚಾರ ಎಂಬುದು ಅವರ ಚಿಂತನೆಯ ಸಾರವಾಗಿತ್ತು.
ಅವರ ಈ ಮಾತುಗಳನ್ನು ಕೇಳಿದಾಗ ನನಗೆ ಸೋನಿಯಾ ಗಾಂಧಿಯವರ ಬದುಕಿನ ಹಲವು ಆಯಾಮಗಳು ನೆನಪಾದವು.
ರಾಜೀವ್ ಗಾಂಧಿಯವರನ್ನು ಪ್ರೀತಿಸಿ ವಿವಾಹವಾಗಿ ಅವರ ಜೀವನ ಸಂಗಾತಿಯಾದವರು ಸೋನಿಯಾ ಗಾಂಧಿ. ಇಂದಿರಾ ಗಾಂಧಿಯವರ ಸೊಸೆಯಾಗಿ ಅವರ ಕುಟುಂಬದ ಬದುಕಿನ ಏಳುಬೀಳುಗಳನ್ನು ಹತ್ತಿರದಿಂದ ಕಂಡವರು. ಭಾರತಕ್ಕೆ ಬಂದಾಗ ಈ ದೇಶದ ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ಬದುಕನ್ನು ಅರಿಯಲು ಪ್ರಯತ್ನಿಸಿದವರು. ರಾಜೀವ್ ಗಾಂಧಿಯವರ ರಾಜಕೀಯ ಬದುಕಿನ ಏಳುಬೀಳುಗಳಿಗೆ ಸಾಕ್ಷಿಯಾದವರು. ರಾಹುಲ್ ಮತ್ತು ಪ್ರಿಯಾಂಕಾ ಅವರ ತಾಯಿ. ಮುಂದೆ ಕಾಂಗ್ರೆಸ್ ಪಕ್ಷದ ನಾಯಕತ್ವದ ಜವಾಬ್ದಾರಿಯನ್ನೂ ಹೊತ್ತವರು.

ಅಷ್ಟೇ ಅಲ್ಲ, ಡಾ. ಮನಮೋಹನ್ ಸಿಂಗ್ ಅವರಂತಹ ಶ್ರೇಷ್ಠ ಆರ್ಥಿಕ ತಜ್ಞರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿ, ತಾವು ಪ್ರಧಾನಿಯ ಅಧಿಕಾರದ ಸ್ಥಾನದಿಂದ ದೂರ ಉಳಿದ ರಾಜಕೀಯ ನಿರ್ಧಾರದಲ್ಲೂ ಪ್ರಮುಖ ಪಾತ್ರ ವಹಿಸಿದವರು.
ಈ ಎಲ್ಲ ಪಾತ್ರಗಳು ಮತ್ತು ಅನುಭವಗಳ ಮೂಲಕ ಅವರು ಕಂಡ ಬದುಕು, ಎದುರಿಸಿದ ಸವಾಲುಗಳು, ಸಂಬಂಧಗಳ ಆಳ ಹಾಗೂ ರಾಜಕೀಯದ ಒಳಸುಳಿಗಳ ಕುರಿತು ರೂಪಿಸಿಕೊಂಡ ಗ್ರಹಿಕೆಗಳು ಅವರಿಗೇ ವಿಶಿಷ್ಟವಾದವು. ಆ ಬದುಕನ್ನು ಅವರಂತೆ ಅನುಭವಿಸದ ಮತ್ತೊಬ್ಬರಿಗೆ ಆ ಎಲ್ಲ ಗ್ರಹಿಕೆಗಳು ಸಂಪೂರ್ಣವಾಗಿ ದಕ್ಕಲು ಸಾಧ್ಯವೇ?
ಹಾಗಿರುವಾಗ, ತಮ್ಮ ಆತ್ಮಕಥನದಲ್ಲಿ ಇಂತಹ ಅನುಭವಗಳು ಮತ್ತು ವೈಯಕ್ತಿಕ ವಿಶ್ಲೇಷಣೆಗಳನ್ನು ದಾಖಲಿಸುವ ಹಕ್ಕನ್ನು ಪ್ರಶ್ನಿಸುವುದಾದರೂ ಹೇಗೆ?
ಕಳೆದ ಕೆಲ ದಿನಗಳಿಂದ ಸೋನಿಯಾ ಗಾಂಧಿಯವರ ಆತ್ಮಕಥನದ ಪ್ರತಿಯೊಂದು ಪುಟವನ್ನೂ ವಿಶ್ಲೇಷಿಸುತ್ತಾ, ಅದರ ವಿಚಾರಗಳಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ ವಿರೋಧಿಗಳು ಪ್ರತಿಭಟಿಸುತ್ತಿದ್ದಾರೆ. ಸೋನಿಯಾ ಗಾಂಧಿಯವರು ತಮ್ಮ ಬದುಕಿನ ಅನುಭವಗಳನ್ನು ದಾಖಲಿಸಿರುವುದು ಆತ್ಮಕಥನದಲ್ಲಿ; ಅದೇನೂ ಕಾನೂನು ಪುಸ್ತಕವಲ್ಲ, ಸಂವಿಧಾನದ ವ್ಯಾಖ್ಯಾನವಲ್ಲ ಅಥವಾ ನ್ಯಾಯಾಲಯದ ತೀರ್ಪೂ ಅಲ್ಲ.
ಪುಸ್ತಕದಲ್ಲಿರುವ ವಿಚಾರಗಳನ್ನು ಒಪ್ಪದಿದ್ದರೆ ವಿಮರ್ಶಿಸಿ, ಆಧಾರಗಳೊಂದಿಗೆ ಪ್ರಶ್ನಿಸಿ, ನಿಮ್ಮ ಭಿನ್ನಾಭಿಪ್ರಾಯ ದಾಖಲಿಸಿ. ಆದರೆ ಒಬ್ಬ ವ್ಯಕ್ತಿ ತನ್ನ ಬದುಕಿನ ಕಥೆಯನ್ನು ತನ್ನದೇ ದೃಷ್ಟಿಕೋನದಲ್ಲಿ ಹೇಳಿಕೊಂಡಿದ್ದಕ್ಕೆ ಇಷ್ಟೊಂದು ಆಕ್ರೋಶವೇಕೆ? ಇಷ್ಟೊಂದು ಅಸಹನೆಯೇಕೆ?
—
ಜಯಪ್ರಕಾಶ್ ಹೆಗ್ಡೆಯವರು ಮುಂದಿಟ್ಟ ಲೇಖಕರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಓದುಗರ ಆಯ್ಕೆಯ ಸ್ವಾತಂತ್ರ್ಯದ ವಿಚಾರ ಚಿಂತನಾರ್ಹ! ಅವರ ಈ ಅಭಿಪ್ರಾಯದ ಹಿನ್ನೆಲೆಯಲ್ಲಿ ಪುಸ್ತಕದ ಸುತ್ತ ನಡೆಯುತ್ತಿರುವ ವಿರೋಧವನ್ನು ಗಮನಿಸಿದಾಗ ನನಗೆ ಮೂಡುವ ಪ್ರಶ್ನೆ ಒಂದೇ
ಹೌದಲ್ಲವೇ? ಮೋದಿ ಆಡಳಿತದಲ್ಲಿ ಒಬ್ಬ ವ್ಯಕ್ತಿಗೆ ತನ್ನ ಬದುಕಿನ ಕಥೆಯನ್ನು ತನ್ನ ಅನುಭವ, ನೆನಪು ಮತ್ತು ಗ್ರಹಿಕೆಗಳ ಆಧಾರದಲ್ಲಿ ಹೇಳಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲವೇ?
ಕೆ. ಚಂದ್ರಶೇಖರ ಶೆಟ್ಟಿ
ಲೇಖಕರು ಪ್ರಸಿದ್ಧ ವ್ಯಂಗ್ಯಚಿತ್ರಕಾರರು, ಪತ್ರಕರ್ತರು ಮತ್ತು ರಾಜಕೀಯ ವಿಶ್ಲೇಷಕರಾಗಿದ್ದಾರೆ
ಇದನ್ನೂ ಓದಿ- ಸೋನಿಯಾ ಗಾಂಧಿಯವರ ಆತ್ಮಕಥನ ಏಕೆ ಓದಬೇಕು ಗೊತ್ತೇ?


