ಸಾಗನೂರು ಕೊಲೆಗೂ ರಾಜಕೀಯ ಬಣ್ಣ ಬಳಿದ ಬಿಜೆಪಿ: ಪ್ರಿಯಾಂಕ್ ಖರ್ಗೆ ವಜಾಗೆ ಆಗ್ರಹ

Most read

ಬೆಂಗಳೂರು/ ಕಲ್ಬುರ್ಗಿ: ತನ್ನ ಸ್ನೇಹಿತರಿಂದಲೇ ಹತ್ಯೆಯಾದ ಬಿಜೆಪಿ ಮುಖಂಡ ಗಿರೀಶ್ ಚಕ್ರ ಕೊಲೆ ಪ್ರಕರಣಕ್ಕೂ ರಾಜಕೀಯ ಬಣ್ಣ ಬಳಿದಿರುವ ಭಾರತೀಯ ಜನತಾ ಪಕ್ಷ ಕಲ್ಬುರ್ಗಿಯಲ್ಲಿ ಕೊಲೆ ಸುಲಿಗೆಗಳದ್ದೇ ದರ್ಬಾರಾಗಿದ್ದು ಬಿಜೆಪಿ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂದು ಆರೋಪಿಸಿದೆ.

ಬಿಎಸ್ ಎನ್ ಎಲ್ ಸಲಹಾ ಸಮಿತಿ ನಿರ್ದೇಶಕನಾಗಿದ್ದಕ್ಕೆ ತನ್ನ ಸ್ನೇಹಿತರೊಂದಿಗೆ ಪಾರ್ಟಿ ನಡೆಸುತ್ತಿದ್ದ ಗಿರೀಶ್ ಚಕ್ರ, ಸ್ನೇಹಿತರಿಂದಲೇ ಕೊಲೆಯಾಗಿದ್ದರೂ ಭಾರತೀಯ ಜನತಾ ಪಕ್ಷ ಇದಕ್ಕೆ ರಾಜಕೀಯ ತಿರುವು ನೀಡಲು ಯತ್ನಿಸುತ್ತಿದೆ.

ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಭಾರತೀಯ ಜನತಾ ಪಕ್ಷ, ಗಿರೀಶ್ ಚಕ್ರನ ಕೊಲೆಗೆ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರೇ ನೇರಹೊಣೆ, ಹೀಗಾಗಿ ಅವರನ್ನು ವಜಾಗೊಳಿಸಬೇಕು ಎಂದು ಹೇಳಿದೆ.

ಈ ನಡುವೆ ಕಲಬುರ್ಗಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಸಂಸದ ಡಾ. ಉಮೇಶ್ ಜಾದವ್, ಗಿರೀಶ್ ಚಕ್ರ ನನ್ನ ಮಗನಿದ್ದಂತೆ, ಘಟನೆ ನನಗೆ ದಿಗ್ಬ್ರಮೆ ಮೂಡಿಸಿದೆ. 10 ವರ್ಷಗಳಿಂದ ಗಿರೀಶ್ ನನ್ನ ಜೊತೆಗಿದ್ದು ಕೆಲಸ ಮಾಡಿದ್ದ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದೆ ಎಂದು ನುಡಿದಿದ್ದಾರೆ.

ಗಿರೀಶ್ ಚಕ್ರ ಅಫಜಲಪುರದ ಪ್ರಭಾವಿ ಬಿಜೆಪಿ ಮುಖಂಡನಾಗಿ ಬೆಳೆಯುತ್ತಿದ್ದ. ಇತೀಚಿಗೆ ಆತನನ್ನು ಬಿಎಸ್ಎನ್ಎಲ್ ಸಲಹಾ ಸಮಿತಿಗೆ ನಿರ್ದೇಶಕನನ್ನಾಗಿ ನೇಮಕ ಮಾಡಲಾಗಿತ್ತು. ಇದೇ ಸಂತೋಷಕ್ಕೆ ಪಾರ್ಟಿ ಮಾಡೋಣ ಬಾ ಎಂದು ಕರೆದ ಆತನ ಸ್ನೇಹಿತರು ಕೊಂದು ಹಾಕಿದ್ದಾರೆ. ಹತ್ಯೆಗೂ ಮುನ್ನ ಗಿರೀಶ್ ಚಕ್ರನಿಗೆ ಇದೇ ಸ್ನೇಹಿತರರು ಶಾಲು ಹೊದಿಸಿ ಸನ್ಮಾನಿಸಿದ್ದರು. ಅಫಜಲಪುರದ ಸಾಗನೂರ ಎಂಬ ಗ್ರಾಮದ ಜಮೀನೊಂದರಲ್ಲಿ ಈ ಹತ್ಯೆ ನಡೆದಿದ್ದು, ಗಿರೀಶ್ ಚಕ್ರನ ಮೇಲೆ ಮಾರಾಕಾಸ್ತ್ರಗಳಿಂದ ತೀವ್ರವಾಗಿ ದಾಳಿ ನಡೆದ ಕಾರಣಕ್ಕೆ ಅಸು ನೀಗಿದ್ದಾನೆ.
ಗಾಣಗಾಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಹುಡುಕಾಟ ನಡೆಸಿದ್ದಾರೆ.

ಘಟನೆಗೂ ಮುನ್ನ ಸ್ಥಳಕ್ಕೆ ಬಂದ ಗಿರೀಶನ ಕಣ್ಣುಗಳಿಗೆ ಖಾರದ ಪುಡಿ ಎರಚಿ ನಂತರ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಹೀಗಾಗಿ ಇದೊಂದು ಪೂರ್ವನಿಯೋಜಿತ ಕೊಲೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ನಡುವೆ ನನ್ನ ತಮ್ಮ ಗಿರೀಶ್‌ ರಾಜಕೀಯವಾಗಿ ಮೇಲೆ ಬರುವುದನ್ನು ಸಹಿಸದೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ ಎಂದು ಆತನ ಸೋದರ ಸದಾಶಿವ ಚಕ್ರ ಹೇಳಿದ್ದಾರೆ. ನನ್ನ ತಮ್ಮನನ್ನು ರಾತ್ರಿ 10 ಗಂಟೆಗೆ ಸಚಿನ್ ಹಾಗೂ ಸ್ನೇಹಿತರು ಸನ್ಮಾನ ಮಾಡುವುದಾಗಿ ಕರೆದುಕೊಂಡು ಹೋಗಿದ್ದರು. ಕೊಲೆಗೂ ಮುನ್ನ ಸನ್ಮಾನ ಮಾಡಿ ನಂತರ ಅತನನ್ನು ಕೊಲೆ ಮಾಡಲಾಗಿದೆ. ನನ್ನ ತಮ್ಮನ ಕೊಲೆಗೆ ಸುಪಾರಿ ನೀಡಿದವರ ಹೆಸರು ಪೊಲೀಸರ ಮುಂದೆ ಹೇಳುತ್ತೇನೆ ಎಂದು ಅವರು ತಿಳಿಸಿದ್ದಾರೆ.

More articles

Latest article