ನವದೆಹಲಿ, ನ.13 : ಕಾಂಗ್ರೆಸ್ ನಾಯಕಿ ಹಾಗೂ ಮಾಜಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಆತ್ಮಕಥನದ ಕುರಿತು ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳಿಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಬಿಜೆಪಿ ನಾಯಕರು ಮತ್ತು ಅವರ ಬೆಂಬಲಿಗರು ಪುಸ್ತಕದ ಬಗ್ಗೆ ಎಷ್ಟು ಹೆಚ್ಚು ಟೀಕೆ ಮಾಡುತ್ತಾರೋ, ಅಷ್ಟೇ ಪುಸ್ತಕದ ಜನಪ್ರಿಯತೆ ಹಾಗೂ ಮಾರಾಟ ಹೆಚ್ಚಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ನಡೆದ ‘ಆಸ್ಕ್ ಮಿ’ ಸಂವಾದದಲ್ಲಿ, ಸೋನಿಯಾ ಗಾಂಧಿ ಅವರ ಇತ್ತೀಚೆಗೆ ಬಿಡುಗಡೆಯಾದ ‘Belonging: A Journey Of Love’ ಪುಸ್ತಕದ ಬಗ್ಗೆ ಬಿಜೆಪಿ ನಾಯಕರು ಏಕೆ ಇಷ್ಟೊಂದು ಚರ್ಚೆ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದರು.
“ಇದು ಅತ್ಯುತ್ತಮ ಪುಸ್ತಕ. ಬಿಜೆಪಿ ನಾಯಕರೆಲ್ಲರೂ ಇದನ್ನು ಓದುತ್ತಿದ್ದಾರೆ. ಪುಸ್ತಕ ಓದುವುದನ್ನು ಅವರಿಂದ ತಡೆಯಲು ಸಾಧ್ಯವಾಗುತ್ತಿಲ್ಲ. ಓದಿದ ಬಳಿಕ ಅದರ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ” ಎಂದು ಹೇಳಿದರು.
“ಬಿಜೆಪಿಯ ಹಲವು ನಾಯಕರು ನಿಜವಾಗಿಯೂ ನನ್ನ ತಾಯಿಯನ್ನು ರಹಸ್ಯವಾಗಿ ಇಷ್ಟಪಡುತ್ತಾರೆ. ಅವರು ಅದ್ಭುತ ವ್ಯಕ್ತಿ ಎಂದು ಭಾವಿಸುತ್ತಾರೆ. ಆದರೆ ದುರದೃಷ್ಟವಶಾತ್, ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ” ಎಂದು ಲೇವಡಿ ಮಾಡಿದರು.
ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, “ನೀವೆಲ್ಲರೂ ದಯವಿಟ್ಟು ಪುಸ್ತಕದ ಬಗ್ಗೆ ಟೀಕೆ ಮಾಡುವುದನ್ನು ಮುಂದುವರಿಸಿ. ನೀವು ಎಷ್ಟು ಹೆಚ್ಚು ಮಾತನಾಡುತ್ತೀರೋ, ಪುಸ್ತಕಕ್ಕೆ ಅಷ್ಟೇ ಒಳ್ಳೆಯದಾಗುತ್ತದೆ. ಪುಸ್ತಕವನ್ನು ಇನ್ನಷ್ಟು ಪ್ರಚಾರ ಮಾಡಿ, ಆಕ್ರಮಣಕಾರಿಯಾಗಿ ಟೀಕಿಸಿ, ಕಟುವಾಗಿ ಮಾತನಾಡಿ. ಏಕೆಂದರೆ ನಿಮ್ಮ ಟೀಕೆಗಳೇ ಪುಸ್ತಕಕ್ಕೆ ಸಹಾಯ ಮಾಡುತ್ತಿವೆ” ಎಂದು ವ್ಯಂಗ್ಯವಾಗಿ ಹೇಳಿದರು.
ಸೋನಿಯಾ ಪುಸ್ತಕಕ್ಕೆ ಬಿಜೆಪಿ ವಿರೋಧ
ಮಂಗಳವಾರ ಬಿಡುಗಡೆಯಾದ ಸೋನಿಯಾ ಗಾಂಧಿ ಅವರ ‘Belonging’ ಆತ್ಮಕಥನಕ್ಕೆ ಓದುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪುಸ್ತಕ ಬಿಡುಗಡೆಯಾದ ಹಿನ್ನೆಲೆಯಲ್ಲಿ ದೆಹಲಿಯ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಪ್ರತಿಗಳನ್ನು ಖರೀದಿಸಲು ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಆದರೆ, ಪುಸ್ತಕದ ವಿಚಾರವಾಗಿ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. 1975ರಲ್ಲಿ ಹೇರಲಾಗಿದ್ದ ತುರ್ತು ಪರಿಸ್ಥಿತಿಯನ್ನು ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಹಾಗೂ 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ತಮ್ಮ ಪತಿ ರಾಜೀವ್ ಗಾಂಧಿ ಅವರಿಗೆ ಕ್ಲೀನ್ಚಿಟ್ ನೀಡಲು ಯತ್ನಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಅಲ್ಲದೆ, ಈ ಪುಸ್ತಕಕ್ಕೆ ‘Belonging’ ಎಂಬ ಹೆಸರಿನ ಬದಲಿಗೆ ‘Whitewashing’ (ತಪ್ಪುಗಳನ್ನು ಮುಚ್ಚಿಹಾಕುವ ಪ್ರಯತ್ನ) ಎಂದು ಹೆಸರಿಡಬೇಕಿತ್ತು ಎಂದು ಬಿಜೆಪಿ ಟೀಕಿಸಿದೆ.
ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಪುಸ್ತಕವನ್ನು ಮುಕ್ತ ಹಾಗೂ ಪ್ರಾಮಾಣಿಕ ನಿರೂಪಣೆ ಎಂದು ಬಣ್ಣಿಸಿದ್ದು, ಸೋನಿಯಾ ಗಾಂಧಿ ಅವರ ಸಾಧನೆಗಳನ್ನು ಶ್ಲಾಘಿಸಿದ್ದಾರೆ.

