ನವದೆಹಲಿ: ಜಾಗತಿಕ ಮಟ್ಟದಲ್ಲಿ ಮೈಕ್ರೋಸಾಫ್ಟ್‌ನ ಔಟ್‌ಲುಕ್ ಸೇರಿದಂತೆ ಹಲವು ಸೇವೆಗಳಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆಯನ್ನು ಸರಿಪಡಿಸುವ ಪ್ರಯತ್ನಗಳು ನಿರೀಕ್ಷಿತ ಫಲಿತಾಂಶ ನೀಡದ ಹಿನ್ನೆಲೆಯಲ್ಲಿ, ಪರ್ಯಾಯ ಕ್ರಮಗಳ ಮೂಲಕ ಸೇವಾ ಸಾಮರ್ಥ್ಯ ಹೆಚ್ಚಿಸಲು ಕಂಪನಿ ಮುಂದಾಗಿದೆ.
ಗುರುವಾರ ಮಧ್ಯಾಹ್ನದಿಂದ ಔಟ್‌ಲುಕ್, ಟೀಮ್ಸ್, ಕೃತಕ ಬುದ್ಧಿಮತ್ತೆ ಸಹಾಯಕ ಕೋಪೈಲಟ್ ಹಾಗೂ ಮೈಕ್ರೋಸಾಫ್ಟ್ 365 ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಹಲವು ಕಂಪನಿಗಳು ಮತ್ತು ಕೆಲವು ಸರ್ಕಾರಿ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿದೆ.
ಔಟ್‌ಲುಕ್ ಬಳಕೆಯಲ್ಲಿ ಸಮಸ್ಯೆ ಎದುರಿಸುತ್ತಿರುವುದಾಗಿ ಡೌನ್‌ಡೆಟೆಕ್ಟರ್‌ನಲ್ಲಿ ಸುಮಾರು 1.30 ಲಕ್ಷ ಬಳಕೆದಾರರು ದೂರು ದಾಖಲಿಸಿದ್ದಾರೆ. ಇಮೇಲ್ ಕಳುಹಿಸಲು, ಸ್ವೀಕರಿಸಲು ಹಾಗೂ ಇನ್‌ಬಾಕ್ಸ್ ತೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ತಿಳಿಸಿದ್ದಾರೆ. ಟೀಮ್ಸ್ ಮತ್ತು ಕೋಪೈಲಟ್ ಬಳಕೆದಾರರೂ ತೊಂದರೆ ಅನುಭವಿಸಿದ್ದಾರೆ.
ಸರ್ವರ್‌ಗಳ ಮೇಲಿನ ಹೆಚ್ಚುವರಿ ಒತ್ತಡ ಮತ್ತು ಸಾಮರ್ಥ್ಯದ ಸಮಸ್ಯೆಯಿಂದ ಸಂಪರ್ಕ ವ್ಯತ್ಯಯ ಉಂಟಾಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ಜಪಾನ್‌ನಲ್ಲಿಯೂ ಸರ್ಕಾರಿ ಐಟಿ ಮೂಲಸೌಕರ್ಯದ ಮೇಲೆ ಈ ಅಡಚಣೆ ಪರಿಣಾಮ ಬೀರಿದೆ ಎಂದು ಅಲ್ಲಿನ ಉಪ ಮುಖ್ಯ ಸಂಪುಟ ಕಾರ್ಯದರ್ಶಿ ಮಸನಾವೊ ಓಝಾಕಿ ಹೇಳಿದ್ದಾರೆ.
ಉತ್ತರ ಅಮೆರಿಕದಲ್ಲಿ ಟೀಮ್ಸ್ ಸೇವೆಯನ್ನು ಭಾಗಶಃ ಮರುಸ್ಥಾಪಿಸಿರುವುದಾಗಿ ಮೈಕ್ರೋಸಾಫ್ಟ್ ತಿಳಿಸಿದರೂ, ಕೆಲವು ಬಳಕೆದಾರರಿಗೆ ಇನ್ನೂ ಸಂಪರ್ಕ ಸಮಸ್ಯೆ ಮುಂದುವರಿದಿದೆ. ಜಾಗತಿಕವಾಗಿ ಸೇವೆಗಳನ್ನು ಸಹಜ ಸ್ಥಿತಿಗೆ ತರಲು ಕಂಪನಿ ಪರ್ಯಾಯ ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದೆ.

