ನವದೆಹಲಿ: ದೀಪಾವಳಿ ಹಬ್ಬದ ಬಳಿಕ ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಈ ವೇಳೆ ಹಲವು ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ ದತ್ತಾಂಶದ ಕೊರತೆ ಕಂಡುಬಂದಿದೆ. ಈ ಬೆಳವಣಿಗೆಯು ಭಾರತದ ದಶಕದಷ್ಟು ಹಳೆಯ ವಾಯುಮಾಲಿನ್ಯ ಮಾಪನ ವಿಧಾನದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ವಾಯುಮಾಲಿನ್ಯ ಅಳೆಯುವ ಸಾಧನಗಳನ್ನು ಇತ್ತೀಚಿನ ವರ್ಷಗಳಲ್ಲಿ ಮೇಲ್ದರ್ಜೆಗೇರಿಸಲಾಗಿದ್ದರೂ, ದತ್ತಾಂಶ ಪರಿಶೀಲನೆಗೆ ಅನುಸರಿಸುತ್ತಿರುವ ಹಳೆಯ ವಿಧಾನವನ್ನು ಬದಲಿಸುವ ಅಗತ್ಯವಿದೆ ಎಂದು ಪರಿಸರ ಸಚಿವಾಲಯದ ಮೂಲಗಳು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿವೆ.
2015ರಲ್ಲಿ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕ (NAQI) ಜಾರಿಗೆ ಬಂದಾಗ ಅಳವಡಿಸಲಾಗಿದ್ದ ಮಾಲಿನ್ಯ ಮಾಪನ ಸಾಧನಗಳು ಪ್ರತಿ ಘನ ಮೀಟರ್ಗೆ 0ರಿಂದ 1,000 ಮೈಕ್ರೋಗ್ರಾಂ ವರೆಗಿನ ಮಾಲಿನ್ಯ ಪ್ರಮಾಣವನ್ನು ಅಳೆಯುವ ಸಾಮರ್ಥ್ಯ ಹೊಂದಿದ್ದವು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ.
ನವೆಂಬರ್ 10ರಂದು ಬಿಡುಗಡೆ ಮಾಡಿದ 11 ಅಂಶಗಳ ಹೇಳಿಕೆಯಲ್ಲಿ, ನಿಗದಿತ 1,000 ಮೈಕ್ರೋಗ್ರಾಂ ಮಿತಿಯನ್ನು ಮೀರಿದ ಮಾಲಿನ್ಯ ಪ್ರಮಾಣದ ದಾಖಲೆಗಳನ್ನು ಸ್ವಯಂಚಾಲಿತ ದತ್ತಾಂಶ ಪರಿಶೀಲನಾ ವ್ಯವಸ್ಥೆಯು ಮಿತಿಮೀರಿದ ಅಂಕಿಅಂಶಗಳೆಂದು ಪರಿಗಣಿಸಿ AQI ಲೆಕ್ಕಾಚಾರದಿಂದ ಹೊರಗಿಡುತ್ತದೆ ಎಂದು ಮಂಡಳಿ ತಿಳಿಸಿದೆ.
ವಿಶೇಷವಾಗಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ ತೀವ್ರವಾಗಿ ಹೆಚ್ಚಾದಾಗ ಇಂತಹ ಸಮಸ್ಯೆ ಎದುರಾಗುತ್ತದೆ. ಮಾಲಿನ್ಯದ ಪ್ರಮಾಣ ನಿಗದಿತ ಮಿತಿಯನ್ನು ಮೀರಿದರೆ, ಆ ಗಂಟೆಯ ದಾಖಲೆಗಳನ್ನು 24 ಗಂಟೆಗಳ ಸರಾಸರಿ ಲೆಕ್ಕಾಚಾರದಲ್ಲಿ ಪರಿಗಣಿಸಲಾಗುವುದಿಲ್ಲ. ಇದರಿಂದ ಆಯಾ ಮಾಲಿನ್ಯ ಮಾಪನ ಕೇಂದ್ರಗಳಲ್ಲಿ ದತ್ತಾಂಶ ಲಭ್ಯವಿಲ್ಲದಿರುವಂತೆ ಕಾಣಿಸುತ್ತದೆ ಎಂದು ಸಿಪಿಸಿಬಿ ವಿವರಿಸಿದೆ.
ಇನ್ನು, ಕಳೆದ ಹಲವು ವರ್ಷಗಳಲ್ಲಿ ಮಾಲಿನ್ಯ ಮಾಪನ ಸಾಧನಗಳನ್ನು ಮೇಲ್ದರ್ಜೆಗೇರಿಸಲಾಗಿದ್ದರೂ, ದತ್ತಾಂಶ ಪರಿಶೀಲನೆಗೆ ಬಳಸುವ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಪರಿಸರ ಸಚಿವಾಲಯದ ಮೂಲಗಳು ತಿಳಿಸಿವೆ.
“ವರ್ಷಗಳು ಕಳೆದಂತೆ ಮಾಪನ ಸಾಧನಗಳನ್ನು ಉನ್ನತೀಕರಿಸಲಾಗಿದೆ. ಆದರೆ, ದತ್ತಾಂಶ ಪರಿಶೀಲನಾ ವಿಧಾನ ಮಾತ್ರ ಹಾಗೆಯೇ ಉಳಿದಿದೆ” ಎಂದು ಸಚಿವಾಲಯದ ಮೂಲಗಳು ಹೇಳಿವೆ.
ತೀವ್ರ ವಾಯುಮಾಲಿನ್ಯದ ಸಂದರ್ಭಗಳಲ್ಲಿಯೂ ನಿಖರವಾದ ಅಂಕಿಅಂಶಗಳನ್ನು ದಾಖಲಿಸುವ ನಿಟ್ಟಿನಲ್ಲಿ ಪ್ರಸ್ತುತ AQI ಮಾಪನ ವ್ಯವಸ್ಥೆ ಹಾಗೂ ದತ್ತಾಂಶ ಪರಿಶೀಲನಾ ವಿಧಾನವನ್ನು ಪರಿಷ್ಕರಿಸುವ ಅಗತ್ಯ ಎದುರಾಗಿದೆ.

