ಬೆಂಗಳೂರು, ನ.10: ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಪಟಾಕಿ ಸಿಡಿಸುವಾಗ ಸಂಭವಿಸಿದ ಅವಘಡಗಳು ಬೆಂಗಳೂರಿನಲ್ಲಿ ಆತಂಕಕ್ಕೆ ಕಾರಣವಾಗಿವೆ. ಪಟಾಕಿಗಳಿಂದ ಕಣ್ಣಿಗೆ ಗಾಯಗೊಂಡ 100ಕ್ಕೂ ಹೆಚ್ಚು ಮಂದಿ ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಗಾಯಾಳುಗಳಲ್ಲಿ ಮಕ್ಕಳು ಹಾಗೂ ಪುಟ್ಟ ಕಂದಮ್ಮಗಳೂ ಸೇರಿರುವುದು ಕಳವಳ ಮೂಡಿಸಿದೆ.
ಕೆಲವರಿಗೆ ಗಂಭೀರ ಗಾಯಗಳಾಗಿದ್ದು, ಶಸ್ತ್ರಚಿಕಿತ್ಸೆಯ ಅಗತ್ಯವೂ ಎದುರಾಗಿದೆ. ಪಟಾಕಿ ಸಿಡಿಸುತ್ತಿದ್ದವರಷ್ಟೇ ಅಲ್ಲದೆ, ಅಕ್ಕಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದವರಿಗೂ ಗಾಯಗಳಾಗಿರುವುದು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ.
ನಾರಾಯಣ ನೇತ್ರಾಲಯದಲ್ಲಿ 70 ಮಂದಿಗೆ ಚಿಕಿತ್ಸೆ
ನಗರದ ರಾಜಾಜಿನಗರದಲ್ಲಿರುವ ನಾರಾಯಣ ನೇತ್ರಾಲಯದ ಕೇಂದ್ರವೊಂದರಲ್ಲೇ 41 ಕಣ್ಣಿನ ಗಾಯದ ಪ್ರಕರಣಗಳು ವರದಿಯಾಗಿವೆ. ಬೊಮ್ಮಸಂದ್ರ, ಬನ್ನೇರುಘಟ್ಟ ರಸ್ತೆ ಹಾಗೂ ವೈಟ್ಫೀಲ್ಡ್ ಕೇಂದ್ರಗಳಲ್ಲಿ ಒಟ್ಟು 29 ಪ್ರಕರಣಗಳು ದಾಖಲಾಗಿವೆ. ಈ ಮೂಲಕ ಆಸ್ಪತ್ರೆಯ ವಿವಿಧ ಕೇಂದ್ರಗಳಲ್ಲಿ ಒಟ್ಟು 70 ಮಂದಿ ಪಟಾಕಿ ಅವಘಡದಿಂದ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ.
ರಾಜಾಜಿನಗರ ಕೇಂದ್ರದಲ್ಲಿ ಗಾಯಗೊಂಡ 41 ಮಂದಿಯ ಪೈಕಿ 24 ಮಂದಿ 18 ವರ್ಷದೊಳಗಿನ ಮಕ್ಕಳು ಎಂಬುದು ಆತಂಕಕಾರಿ ಸಂಗತಿ. ಇವರಲ್ಲಿ 29 ಮಂದಿ ತಾವೇ ಪಟಾಕಿ ಸಿಡಿಸುವಾಗ ಗಾಯಗೊಂಡಿದ್ದರೆ, ಉಳಿದ 12 ಮಂದಿ ಪಕ್ಕದಲ್ಲಿ ನಿಂತು ನೋಡುತ್ತಿದ್ದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ.
ಗಾಯಾಳುಗಳ ಪೈಕಿ 40 ಮಂದಿಗೆ ಔಷಧೋಪಚಾರ ನೀಡಲಾಗಿದ್ದು, ಒಬ್ಬರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸದಿರುವುದು ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ. ವಿಶೇಷವಾಗಿ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಹೆಚ್ಚಿನ ಜಾಗ್ರತೆ ವಹಿಸಬೇಕಿದೆ.

