ಮೈಸೂರು, ಅ. 13 : ನನ್ನ ತಂದೆ ವಿರುದ್ದ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ತಂದೆಯವರು ನ್ಯಾಯಾಲಯದಲ್ಲಿ ತಡೆಯಾಜ್ಷೆ ತೆಗೆದುಕೊಳ್ಳಲು ಮುಂದಾಗಿದ್ದು, ಅಪ್ರಚಾರ ಮಾಡಿದವರ ಮೇಲೆ ದೂರು ಕೊಡಲಾಗಿದೆ. ಅಪಪ್ರಚಾರ ಮಾಡ್ತಿದ್ದರೂ ಸುಮ್ಮನೆ ಇರಬೇಕಾ ? ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತಿನ ರಾಜಕೀಯ ಪರಿಸ್ಥಿತಿ ಕೆಳ ಮಟ್ಟಕ್ಕೆ ಹೋಗಿದೆ. ಯಾರದ್ದೋ ಕೈಯಲ್ಲಿ ಸ್ಟಿಂಗ್ ಆಪರೇಷನ್ ಅಂತಾ ಹೇಳಿಸಿದ್ದಾರೆ. ತಡೆಯಾಜ್ಞೆ ಮಾತ್ರವಲ್ಲ, ಸುಳ್ಳು ವೀಡಿಯೋ ಹರಿಬಿಡುತ್ತಿರುವವರ ವಿರುದ್ಧ ಕೂಡ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ಅವರಂತಹ ದೊಡ್ಡ ಲೀಡರ್ ಗಳೂ ಕೂಡ ಇಂತಹ ಕೆಟ್ಟ ಆರೋಪಗಳನ್ನು ಎದುರಿಸಬೇಕಾಗಿದೆ ತಂದೆಯವರು ಮೊದಲೇ ಹೇಳಿದ್ದರು. ನನ್ನ ಮೇಲೆ ಅಪಪ್ರಚಾರ ಮಾಡ್ತಿದ್ದಾರೆ. ತಡೆಯಾಜ್ಞೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ರಾಜಕಾರಣದ ವ್ಯವಸ್ಥೆ ಹಾಳಾಗಿದೆ. ನಾವು ಎಲ್ಲವನ್ನೂ ಎದುರಿಸುತ್ತೇವೆ ಎಂಬ ಅದಮ್ಯ ವಿಶ್ವಾಸ ವ್ಯಕ್ತಪಡಿಸಿದರು.
ತಂದೆ ತಪ್ಪು ಮಾಡಿಲ್ಲ ಹಾಗಾಗಿ ನನಗೆ ಬೇಸರವಿಲ್ಲ. ರಾಜಕೀಯ ಈ ಮಟ್ಟಕ್ಕೆ ಬಂದಿದೆ. ಕಾನೂನು ಸಲಹೆ ಪಡೆದು ಮುಂದುವರಿಯಿರಿ ಎಂದು ಹೇಳಿದ್ದೇವೆ. ಸಿದ್ದರಾಮಯ್ಯ ಅವರು ವಿಶ್ರಾಂತಿಗಾಗಿ ಮೈಸೂರಿಗೆ ಬಂದಿದ್ದಾರೆ ದಸರಾ ನೋಡಲು ಬರುತ್ತಾರೆ ಎಂಭುದು ಗೊತ್ತಿಲ್ಲ ಎಂದು ಹೇಳಿದರು.
ಅದೊಂದು ಸುಳ್ಳು ವೀಡಿಯೋ
ಇನ್ಟಾಗ್ರಾಂ ನಲ್ಲಿ ಕೆಲವರು ಆರೋಪ ಮಾಡಿದ್ದರು. ಅದೊಂದು ಸುಳ್ಳು ವೀಡಿಯೋ. ಅನಗತ್ಯವಾಗಿ ಅದೇ ಎಲ್ಲಾ ಕಡೆ ವ್ಯಾಪಿಸುತ್ತದೆ. ಯಾರ್ಯಾರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೋ ಅವರ ಮೇಲೂ ದೂರು ಕೊಟ್ಟಿದ್ದಾರೆ.ಅದೇ ಎಲ್ಲಾ ಕಡೆಯೂ ಹರಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅದನ್ನು ನೋಡಿಕೊಂಡು ಸುಮ್ಮನೆ ಕೂರಲು ಆಗೋದಿಲ್ಲ. ಆ ವೀಡಿಯೋ ನೋಡಿದ ಜನರು ಅದನ್ನೇ ನಿಜ ಎಂದು ತಿಳಿದುಕೊಳ್ಳುತ್ತಾರೆ. ಅಪಪ್ರಚಾರ, ತೇಜೋವಧೆ ಮಾಡುವಂತಹದ್ದು ಷಡ್ಯಂತ್ರ. ಆ ವೀಡಿಯೋ ಹಾಕಿದವರ ಮೇಲೆ ಕ್ರಮ ಆಗಬೇಕು ಎಂದು ತಂದೆ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನು ರಾಜಕೀಯವಾಗಿ ಎದುರಿಸಬೇಕಾಗಿದೆ, ಎದುರಿಸುತ್ತೇವೆ. ವೀಡಿಯೋ ಬಂದಾಗಲೇ ತಂದೆಯವರು ನಮ್ಮೊಟ್ಟಿಗೆ ಚರ್ಚೆ ಮಾಡಿದ್ದರು.ಕಾನೂನು ತಜ್ಷರ ಸಲಹೆ ಪಡೆದು ಕಂಪ್ಲೈಟ್ ಕೊಟ್ಟಿದ್ದಾರೆ, ಇದಕ್ಕೆಲ್ಲ ನಮಗೆ ಬೇಸರ ಆಗಿಲ್ಲ, ಏನಾದ್ರೂ ತಪ್ಪಾಗಿದ್ದರೆ ತಾನೇ ಬೇಸರ ಆಗೋದು ? ಎಂದು ಪ್ರಶ್ನಿಸಿದರು..

