ಬೆಂಗಳೂರು, ಅ.8: ಬಹುನಿರೀಕ್ಷಿತ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ವರ್ಗವಾರು ಮೀಸಲಾತಿ ನಿಗದಿಪಡಿಸಿ ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮೀಸಲಾತಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ವಿವಿಧ ಜಿಲ್ಲೆಗಳ ತಾಲೂಕು ಪಂಚಾಯಿತಿಗಳಿಗೆ ಆಯ್ಕೆಯಾಗಬೇಕಾದ ಒಟ್ಟು ಸದಸ್ಯರ ಸಂಖ್ಯೆ ಹಾಗೂ ಅನುಸೂಚಿತ ಜಾತಿ (ಎಸ್ಸಿ), ಅನುಸೂಚಿತ ಪಂಗಡ (ಎಸ್ಟಿ), ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬಿ’ ಮತ್ತು ಸಾಮಾನ್ಯ ವರ್ಗಗಳಿಗೆ ಮೀಸಲಿಡುವ ಸ್ಥಾನಗಳ ಸಂಖ್ಯೆಯನ್ನು ನಿಗದಿಪಡಿಸಲಾಗಿದೆ.
ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲಾಗಿದ್ದು, ಪ್ರತಿ ವರ್ಗವಾರು ಮೀಸಲಿನೊಳಗೆ ಮಹಿಳೆಯರಿಗೆ ಮೀಸಲಿಡಬೇಕಾದ ಸ್ಥಾನಗಳನ್ನೂ ಸಹ ಪ್ರತ್ಯೇಕವಾಗಿ ನಮೂದಿಸಲಾಗಿದೆ.
ಜಿಲ್ಲಾ ಪಂಚಾಯಿತಿಗೆ ಒಟ್ಟು ಇರುವ ಸ್ಥಾನಗಳು 1,129 ಇದ್ದರೆ ಇದರಲ್ಲಿ 571 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಬೇಕು ಎಂದು ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ತಾ.ಪಂ. ಮೀಸಲಾತಿ:
ಇದೇ ಅಧಿಸೂಚನೆಯ ಮತ್ತೊಂದು ಭಾಗದಲ್ಲಿ ವಿವಿಧ ಜಿಲ್ಲೆಗಳ ತಾಲೂಕು ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಒಟ್ಟು ಸದಸ್ಯರ ಸಂಖ್ಯೆ ಹಾಗೂ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ‘ಎ’, ಹಿಂದುಳಿದ ವರ್ಗ ‘ಬಿ’ ಮತ್ತು ಸಾಮಾನ್ಯ ವರ್ಗದ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
ತಾಲೂಕು ಪಂಚಾಯಿತಿ ಸ್ಥಾನಗಳಲ್ಲಿಯೂ ಮಹಿಳೆಯರಿಗೆ ಶೇ.50ರ ಮೀಸಲಾತಿ ಅನ್ವಯವಾಗುವಂತೆ ಸಂಬಂಧಿತ ವರ್ಗಗಳೊಳಗಿನ ಮಹಿಳಾ ಸ್ಥಾನಗಳನ್ನು ಆವರಣಗಳಲ್ಲಿ ಸೂಚಿಸಲಾಗಿದೆ. ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಕ್ಷೇತ್ರವಾರು ಸ್ಥಾನಗಳ ವಿವರವನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.
ಚುನಾವಣೆ ಪ್ರಕ್ರಿಯೆಗೆ ವೇಗ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಹಲವು ಕಾರಣಗಳಿಂದ ವಿಳಂಬವಾಗಿದ್ದ ಹಿನ್ನೆಲೆಯಲ್ಲಿ, ಇದೀಗ ಮೀಸಲಾತಿ ಅಧಿಸೂಚನೆ ಪ್ರಕಟವಾಗಿರುವುದು ಚುನಾವಣಾ ಪ್ರಕ್ರಿಯೆಗೆ ವೇಗ ದೊರೆಯುವ ನಿರೀಕ್ಷೆ ಮೂಡಿದೆ. ಕ್ಷೇತ್ರವಾರು ಮೀಸಲಾತಿ ಪ್ರಕಟವಾದ ಬಳಿಕ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಆಕಾಂಕ್ಷಿಗಳು ತಮ್ಮ ಕ್ಷೇತ್ರಗಳ ಸಾಮಾಜಿಕ ಸಮೀಕರಣ, ಮೀಸಲಾತಿ ಬದಲಾವಣೆ ಮತ್ತು ಅಭ್ಯರ್ಥಿಗಳ ಆಯ್ಕೆ ಕುರಿತು ಲೆಕ್ಕಾಚಾರ ಆರಂಭಿಸುವ ಸಾಧ್ಯತೆ ಇದೆ.
ಜಿಲ್ಲಾ ಪಂಚಾಯತ್
ಒಟ್ಟು 1,129 ಸ್ಥಾನಗಳು
ಪರಿಶಿಷ್ಟ ಜಾತಿ: 225 ಸ್ಥಾನ
ಪರಿಶಿಷ್ಟ ಪಂಗಡ: 102 ಸ್ಥಾನ
ಹಿಂದುಳಿದ ವರ್ಗ ‘ಎ’: 183 ಸ್ಥಾನ
ಹಿಂದುಳಿದ ವರ್ಗ ‘ಬಿ’: 43 ಸ್ಥಾನ
ಸಾಮಾನ್ಯ ವರ್ಗ: 576 ಸ್ಥಾನ
ತಾಲೂಕು ಪಂಚಾಯತ್
ಒಟ್ಟು ಸ್ಥಾನಗಳು–3,656
ಪರಿಶಿಷ್ಟ ಜಾತಿ- 733
ಪರಿಶಿಷ್ಟ ಪಂಗಡ- 394
ಹಿಂದುಳಿದ ವರ್ಗ ‘ಅ’- 508
ಹಿಂದುಳಿದ ವರ್ಗ ‘ಬ’-111
ಸಾಮಾನ್ಯ ವರ್ಗ- 1,910

