ಅನಗತ್ಯ ಅಭಿವೃದ್ಧಿಯ ದುಷ್ಪರಿಣಾಮಗಳನ್ನು ಮುಂದೆ ಸ್ಥಳೀಯರು ಬೇರೆ ಬೇರೆ ಸ್ವರೂಪದಲ್ಲಿ ಎದುರಿಸುತ್ತಾ ತಮ್ಮ ಕೃಷಿ ಭೂಮಿಗಳನ್ನೇ ಕಳೆದು ಕೊಳ್ಳುವ ಸಾಧ್ಯತೆಯಿದೆ. ಕೂಲಿ ಕಾರ್ಮಿಕರು ಇದರ ಮೊದಲ ಸಂತ್ರಸ್ತರಾಗುತ್ತಾರೆ. ಈಗಾಗಲೇ ಹವಾಗುಣ ಬದಲಾವಣೆಯಿಂದಾಗಿ ಮಲೆನಾಡಿನಲ್ಲಿ ಕಾಫಿ, ಅಡಿಕೆ ನೆಲಕಚ್ಚುತ್ತಿದೆ. ಈಗ ವಿವೇಚನೆಯಿಂದ ಇಂತಹ ಅವೈಜ್ಞಾನಿಕ ರಸ್ತೆಗಳನ್ನು ತಡೆಯದಿದ್ದರೆ ಮುಂದೊಂದು ದಿನ ಅದು ಬದುಕಿಗೇ ಮಾರಕವಾಗಲಿದೆ – ನಾಗರಾಜ ಕೂವೆ, BEAS ಸೆಂಟರಿನ ಸಂಸ್ಥಾಪಕರು
ಕಳಸ ಸಮೀಪದ ಸಂಸೆ-ಎಳನೀರು ಮೂಲಕ ಬೆಳ್ತಂಗಡಿಯನ್ನು ಸಂಪರ್ಕಿಸಲು ಹೆದ್ದಾರಿಯ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ತಯಾರಿಗಳು ನಡೆಯುತ್ತಿವೆ. ಮೇಲ್ನೋಟಕ್ಕೆ ಇದು ಘಟ್ಟದ ಮೇಲಿರುವ ಕಳಸದಿಂದ, ಕೆಳಗಿರುವ ಬೆಳ್ತಂಗಡಿಗೆ ಸಂಪರ್ಕಿಸುವ ರಸ್ತೆಯಾಗಿ ಮಾತ್ರ ಕಾಣಿಸುತ್ತದೆ. ಆದರೆ ಅದರ ಹಿಂದೆ ಜನಸಾಮಾನ್ಯರಿಗೆ ಕಾಣಿಸದ ನೂರಾರು ಸಂಗತಿಗಳು ಅಡಗಿವೆ. ಇವತ್ತು ಮಲೆನಾಡಿನಲ್ಲಿ ನಿರ್ಮಾಣವಾಗುವ ಯಾವುದೇ ಒಂದು ಹೆದ್ದಾರಿಯ ಹಿಂದೆ ಜಾಗತಿಕ ಶಕ್ತಿಗಳಿರುತ್ತವೆ!
ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿಯ ಬಂದರುಗಳನ್ನು ಹಂತಹಂತವಾಗಿ ಅದಾನಿ ಸಮೂಹದ ಕಂಪೆನಿಗಳು ಕೊಳ್ಳುತ್ತಿವೆ. ದೇಶಕ್ಕೆ ಬೇಕಾದ ಎಲ್ಲಾ ಸರಕು ಸಾಗಾಣಿಕೆಯ ವಹಿವಾಟು ಏಕಸ್ವಾಮ್ಯ ಆಗುವತ್ತ ಹೆಜ್ಜೆ ಇಡುತ್ತಿದೆ. ಈ ಪಶ್ಚಿಮ ಕರಾವಳಿಯ ಮುಖಾಂತರ ವಾಹನಗಳು ಒಳನಾಡನ್ನು ಪ್ರವೇಶಿಸಬೇಕಾದರೆ (ಗುಜರಾತ್ ನಿಂದ ಕನ್ಯಾಕುಮಾರಿವರೆಗೂ) ಪಶ್ಚಿಮ ಘಟ್ಟದ ಮೂಲಕವೇ ಹಾದು ಬರಬೇಕು. ಆಗ ಸರಕು ಸಾಗಿಸುವ ಬೃಹತ್ ಟ್ರಕ್ ಗಳಿಗೆ ಅಗಲವಾದ ರಸ್ತೆಗಳೇ ಬೇಕು! ಅಂದರೆ ಹೆದ್ದಾರಿಯೇ ಆಗಬೇಕು. ಅದಕ್ಕೆ ಪಶ್ಚಿಮ ಘಟ್ಟಗಳ ನೂರಾರು ವರ್ಷಗಳ ಸಾವಿರಾರು ಪಾರಂಪರಿಕ ಮರಗಳು ಬಲಿಯಾಗಬೇಕಾಗುತ್ತವೆ. ಅದು ಜೀವವೈವಿಧ್ಯ ನಾಶಕ್ಕೆ ಕಾರಣವಾಗಲಿದೆ. ಯಾವಾಗ ಜೀವವೈವಿಧ್ಯಕ್ಕೆ ಹಾನಿಯಾಗುತ್ತದೋ ಅದರ ನೇರ ಪರಿಣಾಮಗಳನ್ನು ಕೃಷಿ ಎದುರಿಸಬೇಕಾಗುತ್ತದೆ.
ಹೆದ್ದಾರಿಯ ನೆಪದಲ್ಲಿ ಕಿಲೋಮೀಟರ್ ಗಟ್ಟಲೆ ಜೆಸಿಬಿಗಳಿಂದ ಭೂಮಿಯಾಳದ ಮಣ್ಣನ್ನು ತೆಗೆಯಲಾಗುತ್ತದೆ. ಅದರಲ್ಲಿ ಇರುವ ಬೇರೆ ಬೇರೆ ಖನಿಜಗಳು, ಭಾರಲೋಹಗಳು ಭೂಮಿಯ ಮೇಲ್ಭಾಗಕ್ಕೆ ಬರುತ್ತವೆ. ಅದು ಮಳೆ ಬಂದಾಗ ತೊಳೆದು ಹೋಗಿ ಅಲ್ಲಿನ ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತದೆ. ಹಳ್ಳ-ತೊರೆಗಳೆಲ್ಲಾ ಹೂಳು ತುಂಬಿಕೊಂಡು ಅವುಗಳ ನೀರು ಹಿಡಿದುಕೊಳ್ಳುವ ಸಾಮರ್ಥ್ಯ ಕುಗ್ಗುತ್ತದೆ. ತೊರೆಗಳ ಕುಳಿಗಳಿಗೆ ಹೂಳು ಬಂದು ಕುಳಿತು ಅಲ್ಲಿರುವ ಮರಳು ಮೀನು, ಏಡಿ, ನೀರು ಚೇಳು, ನೀರು ನಾಯಿ ಮತ್ತು ಅವೆಲ್ಲದರ ಸುತ್ತ ಹಬ್ಬಿಕೊಂಡಿರುವ ಪರಿಸರ ವ್ಯವಸ್ಥೆ ನಾಶವಾಗಿ ಹೋಗುತ್ತದೆ. ಅಲ್ಲದೇ ಗೋಡು ತುಂಬುವ ಹಳ್ಳಗಳಲ್ಲಿ ಸಣ್ಣ ಮಳೆಗೂ ಪ್ರವಾಹ ಏರ್ಪಟ್ಟು ಅಂಚಿನಲ್ಲಿರುವ ಗದ್ದೆ, ತೋಟಗಳಿಗೆ ಅಪಾರ ಹಾನಿಯಾಗುತ್ತದೆ. ಹೆದ್ದಾರಿಯೊಂದು ಸಣ್ಣ ಹಿಡುವಳಿದಾರನ ಜೀವನೋಪಾಯವನ್ನೇ ಕಸಿದು ಬಿಡುತ್ತದೆ.
ಅಗಲವಾಗುವ ರಸ್ತೆಯಿಂದಾಗಿ ದೊಡ್ಡ ದೊಡ್ಡ ಧರೆಗಳು ನಿರ್ಮಾಣವಾಗಿ ಜಲದ ಕೊಂಡಿಗಳು ಶಾಶ್ವತವಾಗಿ ಕತ್ತರಿಸಲ್ಪಡುತ್ತವೆ. ಅಂತಹ ಜಾಗಗಳಲ್ಲಿ ಸಣ್ಣ ಮಳೆಗೂ ಭೂಕುಸಿತ ಸಂಭವಿಸುತ್ತದೆ. ಎತ್ತರದ ಧರೆಗಳು ವನ್ಯಜೀವಿಗಳ ಓಡಾಟದ ದಾರಿಯನ್ನು ಕತ್ತರಿಸಿ ಅವು ಸಮೀಪದ ಕೃಷಿ ಭೂಮಿಗೆ ಆಹಾರ ಅರಸಿ ಬರುವಂತೆ ಮಾಡುತ್ತದೆ. ಅದು ಮಾನವ-ವನ್ಯಜೀವಿ ಸಂಘರ್ಷವನ್ನು ತೀವ್ರಗೊಳಿಸುತ್ತದೆ.
ರಸ್ತೆ ವಿಸ್ತರಣೆ ಆದ ನಂತರ ಅಲ್ಲಿಗೆ ಪ್ರವಾಸಿಗರು ದೌಡಾಯಿಸುತ್ತಾರೆ. ಆಗ ಎಲ್ಲರಿಗೂ ಗೊತ್ತಿರುವಂತೆ ಪರಿಸರ ಮಾಲಿನ್ಯ ಅದರ ಗರಿಷ್ಠ ಮಟ್ಟವನ್ನು ತಲುಪುತ್ತದೆ. ಇದು ಅರಣ್ಯ ಪ್ರದೇಶವಾದುದರಿಂದ ಶಿಕಾರಿ, ವನ್ಯಜೀವಿಗಳ ಬೇಟೆ ಇತ್ಯಾದಿಗಳು ಹೆಚ್ಚಾಗಲಿದೆ. ಇದರ ಎಲ್ಲಾ ದುಷ್ಪರಿಣಾಮಗಳನ್ನು ಸ್ಥಳೀಯ ಜನರೇ ಅನುಭವಿಸಲಿದ್ದಾರೆ.
ಪ್ರಸ್ತಾಪಿತ ಹೆದ್ದಾರಿಯ ಪ್ರದೇಶ ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ತಾಗಿಕೊಂಡಿದೆ. ಹಿಂದೆ ಕುದುರೆಮುಖದಲ್ಲಿ ನಡೆದ ಗಣಿಗಾರಿಕೆಯು ನೀರಿನ ಮೂಲ ಮತ್ತು ಪರಿಸರಕ್ಕೆ ಅಪಾರ ಹಾನಿಯುಂಟು ಮಾಡಿದೆ. ಚಳುವಳಿ, ಕಾನೂನು ಹೋರಾಟ ಮೊದಲಾದ ಜನಸಾಮಾನ್ಯರ ಪ್ರಯತ್ನದಿಂದ 2006 ರಲ್ಲಿ ಗಣಿಗಾರಿಕೆ ನಿಂತಿದೆ. ಹಾಗಿದ್ದರೂ ಇನ್ನೂ ಅಲ್ಲಿನ ಗುಡ್ಡಗಳು ಚೇತರಿಸಿಕೊಳ್ಳುತ್ತಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಪುನಃ ಕುದುರೆಮುಖದಲ್ಲಿ ಕಬ್ಬಿಣದ ಗಣಿಗಾರಿಕೆ ಪ್ರಾರಂಭಿಸಲು ತೆರೆಮರೆಯಲ್ಲಿ ಯೋಜನೆ ರೂಪಿಸುತ್ತಿದೆ! (ಕೇವಲ ಕುದುರೆಮುಖದಲ್ಲಿ ಮಾತ್ರವಲ್ಲ ಇಡೀ ದೇಶದ ಬೇರೆ ಬೇರೆ ಭಾಗಗಳಲ್ಲಿ) ಇಂತಹ ಕೆಲಸಗಳಿಗಾಗಿ, ದೊಡ್ಡ ದೊಡ್ಡ ಕಾಮಗಾರಿಗಳ ಅನುಷ್ಠಾನಕ್ಕಾಗಿ ವನ್ಯಜೀವಿ ಸಂರಕ್ಷಣಾ ಕಾನೂನು, ಪರಿಸರ ಸಂರಕ್ಷಣಾ ಕಾಯ್ದೆಗಳಲ್ಲಿದ್ದ ಕಠಿಣ ನಿಯಮಗಳನ್ನು ಸಡಿಲಗೊಳಿಸಲಾಗಿದೆ! ಈಗ ಈ ಹೆದ್ದಾರಿ ಮೂಲಕ ಭವಿಷ್ಯಕ್ಕೆ ಬೇಕಾದ ಸಂಪರ್ಕ ರಸ್ತೆಗಳನ್ನು ಸಿದ್ಧಗೊಳಿಸಲಾಗುತ್ತದೆ.
ಹಿಂದೆ ಕುದುರೆಮುಖದಲ್ಲಿ ಗಣಿಗಾರಿಕೆ ಮೂಲಕ ಸಿಗುತ್ತಿದ್ದ ಅದಿರು ಚೀನಾಕ್ಕೆ ಹೋಗುತ್ತಿತ್ತು; ಆದರೆ ಗಣಿಗಾರಿಕೆಯ ದುಷ್ಪರಿಣಾಮಗಳನ್ನು ಮಾತ್ರ ಸ್ಥಳೀಯರು ಎದುರಿಸಿದರು.
ಪಶ್ಚಿಮ ಘಟ್ಟದಲ್ಲಿ ಇವತ್ತು ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಬೇರೆ ಬೇರೆ ಕೆಲಸಗಳಲ್ಲಿ ಕಾರ್ಪೋರೇಟ್ ಕಂಪೆನಿಗಳ ಹಿತಾಸಕ್ತಿಗಳು ತುಂಬಾ ಸಂಕೀರ್ಣವಾಗಿ ಕೆಲಸ ಮಾಡುತ್ತಿವೆ. ಇದಾವುದನ್ನೂ ಅರಿಯದ ಜನಸಾಮಾನ್ಯರು ರಸ್ತೆ ನಿರ್ಮಾಣವಾದರೆ, ಸಂಪರ್ಕ ಸುಲಭವಾಗಿ, ನಮ್ಮ ಬದುಕೇ ಬದಲಾಗುತ್ತದೆ ಎಂದು ಕನಸು ಕಾಣುತ್ತಾರೆ.
ಇವತ್ತು ಕಾಡು ಕಡಿದು ರಸ್ತೆ ವಿಸ್ತರಣೆ ಮಾಡುವುದಾದರೆ ಎಲ್ಲಾ ಪಕ್ಷಗಳೂ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಲಿವೆ. ಏಕೆಂದರೆ ಅದರಲ್ಲಿ ಕೋಟಿ ಕೋಟಿ ಹಣವಿದೆ. ಇದರಿಂದ ರಾಜಕಾರಣಿಗಳಿಗೆ, ಗುತ್ತಿಗೆದಾರರಿಗೆ ಒಳ್ಳೆಯ ಧನ ಲಾಭವಿದೆ. ಇಂತಹ ಯೋಜನೆಗಳಲ್ಲಿ ಹಣ ಜಾಸ್ತಿ ಇರುವುದರಿಂದ ಮುಂದಿನ ಯಾವುದನ್ನೂ ಯೋಚಿಸದ ರಾಜಕಾರಣಿಗಳು ‘ರಸ್ತೆಯಿಂದ ಜನಕ್ಕೆ ಅನುಕೂಲವಾಗಲಿದೆ, ನಮ್ಮ ಊರು ಅಭಿವೃದ್ಧಿ ಸಾಧಿಸಲಿದೆ’ ಮೊದಲಾದ ಆಕರ್ಷಕ ಕಾರಣಗಳನ್ನು ಕೊಡುತ್ತಾ ತಾವೆಲ್ಲಾ ಜನಪರ ಎಂದು ಬಿಂಬಿಸಿಕೊಳ್ಳುತ್ತಾರೆ. ಮಲೆನಾಡಿನ ಬಹುಪಾಲು ಹಳ್ಳಿಗಳ ರಸ್ತೆಗಳನ್ನು ನೋಡಿದರೆ ಗಾಬರಿಯಾಗುತ್ತದೆ, ಅಂತಹ ರಸ್ತೆಗಳನ್ನು ದುರಸ್ತಿ ಪಡಿಸುವ ಮೂಲಕ ಜನಪರವಾಗಿ ಇರುವ ಬಗೆಗೆ ಯಾರಿಗೂ ಅಷ್ಟೊಂದು ಆಸಕ್ತಿ ಇಲ್ಲ. ಎಲ್ಲರಿಗೂ ದೊಡ್ಡ ದೊಡ್ಡ ದುಡ್ಡಿನ ಯೋಜನೆಗಳೇ ಬೇಕು!
ಅನಗತ್ಯ ಅಭಿವೃದ್ಧಿಯ ದುಷ್ಪರಿಣಾಮಗಳನ್ನು ಮುಂದೆ ಸ್ಥಳೀಯರು ಬೇರೆ ಬೇರೆ ಸ್ವರೂಪದಲ್ಲಿ ಎದುರಿಸುತ್ತಾ ತಮ್ಮ ಕೃಷಿ ಭೂಮಿಗಳನ್ನೇ ಕಳೆದು ಕೊಳ್ಳುವ ಸಾಧ್ಯತೆಯಿದೆ. ಕೂಲಿ ಕಾರ್ಮಿಕರು ಇದರ ಮೊದಲ ಸಂತ್ರಸ್ತರಾಗುತ್ತಾರೆ. ಈಗಾಗಲೇ ಹವಾಗುಣ ಬದಲಾವಣೆಯಿಂದಾಗಿ ಮಲೆನಾಡಿನಲ್ಲಿ ಕಾಫಿ, ಅಡಿಕೆ ನೆಲಕಚ್ಚುತ್ತಿದೆ. ಈಗ ವಿವೇಚನೆಯಿಂದ ಇಂತಹ ಅವೈಜ್ಞಾನಿಕ ರಸ್ತೆಗಳನ್ನು ತಡೆಯದಿದ್ದರೆ ಮುಂದೊಂದು ದಿನ ಅದು ಬದುಕಿಗೇ ಮಾರಕವಾಗಲಿದೆ.
ಪಶ್ಚಿಮ ಘಟ್ಟದ ಕಾಡುಗಳು ಒದಗಿಸುವ ಪರಿಸರ ಸೇವೆ ಅಪಾರವಾದುದು. ಇವತ್ತು ವಿವಿಧ ಸ್ವರೂಪಗಳಲ್ಲಿ ಅದರ ನಾಶ ಮಿತಿಮೀರಿದೆ. ಹವಾಗುಣ ಬದಲಾವಣೆಯ ಗರಿಷ್ಠ ದುಷ್ಪರಿಣಾಮಗಳನ್ನು ಮಲೆನಾಡಿನ ಜನರು ಮತ್ತು ಜೀವವೈವಿಧ್ಯ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಇರುವ ನೈಸರ್ಗಿಕ ಕಾಡುಗಳನ್ನು ನಾವು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕಾದುದು ಈ ಕ್ಷಣದ ತುರ್ತು.
ನಾಗರಾಜ ಕೂವೆ
ಶೃಂಗೇರಿಯ BEAS Centre ನ ಸಂಸ್ಥಾಪಕರಾದ ಇವರು ಈ ಸಂಸ್ಥೆಯ ಮೂಲಕ ಪರಿಸರ ಸಂರಕ್ಷಣೆಯ ಬಗೆಗೆ ಜಾಗೃತಿ ಮೂಡಿಸುತ್ತಿದ್ದಾರೆ
ಇದನ್ನೂ ಓದಿ-ಎಚ್ಚರಿಕೆ, ಗಲಭೆ ಎಬ್ಬಿಸಲು ಸಂಚು ನಡೆಸುತ್ತಿದ್ದಾರೆ ಮೀಡಿಯಾ ಭಯೋತ್ಪಾದಕರು!