ಎಡಮಂಗಲ : ಪ್ರಜಾಧ್ವನಿ ಕರ್ನಾಟಕ ಮತ್ತು ಸರಕಾರಿ ಪ್ರೌಢಶಾಲೆ ಎಡಮಂಗಲ ಇವುಗಳ ಸಹಯೋಗದಲ್ಲಿ ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಭಾರತದ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆಯನ್ನು ಎಡಮಂಗಲ ಸರಕಾರಿ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಪರ್ಲ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಭಾವಚಿತ್ರಗಳಿಗೆ ಅತಿಥಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು
ಶಾಲಾ ಮುಖ್ಯಮಂತ್ರಿ ಕು. ಶ್ರೇಯಾ ಸಂವಿಧಾನದ ಪೀಠಿಕೆಯನ್ನು ವಾಚಿಸಿ ಸಭಿಕರಿಗೆ ಬೋಧಿಸಿದರು. ಪ್ರಜಾಧ್ವನಿ ಕರ್ನಾಟಕದ ಸ್ಥಾಪಕ ಸದಸ್ಯ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನಿರ್ದೇಶಕ ಕೆ. ಪಿ. ಜಾನಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಧ್ವನಿ ಕರ್ನಾಟಕ ಸಂಘಟನೆಯ ಆಶಯಗಳನ್ನು ವಿವರಿಸಿದರು.
ಶಾಲಾ ವಿದ್ಯಾರ್ಥಿಗಳು ಮಹಾತ್ಮಾ ಗಾಂಧೀಜಿ ಕುರಿತು ಚುಟುಕಾಗಿ ಭಾಷಣ ಮಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಧಾರ್ಮಿಕ ಪರಿಷತ್ತು ಸದಸ್ಯ ಲಕ್ಷ್ಮೀಶ ಗಬ್ಬಲಡ್ಕರವರು ಮಹಾತ್ಮ ಗಾಂಧಿಯವರ ಜೀವನ, ಅವರು ಪಾಲಿಸಿದ ಸತ್ಯ, ಶಾಂತಿ, ಅಹಿಂಸಾ ತತ್ವಗಳ ಕುರಿತು ಮತ್ತು ಇಂದಿನ ದಿನಗಳಲ್ಲೂ ಅವುಗಳ ಪ್ರಸ್ತುತತೆ ಹಾಗೂ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಶಾಲಾ ಹಿರಿಯ ಶಿಕ್ಷಕ ಆನಂದ ಕೆ. ಎಸ್. ಸಂದರ್ಭೋಚಿತವಾಗಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಪ್ರವೀಣ್ ಮುಂಡೋಡಿ ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯ ಶುಭಾಶಯಗಳನ್ನು ಕೋರಿ ಪ್ರಜಾಧ್ವನಿ ಕರ್ನಾಟಕ ನಡೆಸಿಕೊಂಡು ಬರುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ ಪರ್ಲ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಪ್ರಜಾಧ್ವನಿ ಕರ್ನಾಟಕದ ಪದಾಧಿಕಾರಿಗಳು ಹಾಗೂ ಸದಸ್ಯರಾದ ಗೋಪಾಲ್ ಪೆರಾಜೆ, ಮೋಹನ್ ಕೆ. ಪಿ. ಕಡಬ, ಶಿವಶಂಕರ್ ಕಡಬ, ಮಹೇಶ್ ಬೆಳ್ಳಾರ್ಕರ್, ಅಶ್ರಫ್ ಸಾಹುಕಾರ್, ಭರತ್ ಕುಕ್ಕುಜಡ್ಕ, ಕೇಶವ ಮೊರಂಗಲ್ಲು, ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಕು. ಸಮನ್ವಿ ಕೆ. ಎಲ್ಲರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕು. ಸುಪ್ರಿಯಾ ಎ. ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಪ್ರಜಾಧ್ವನಿ ಕರ್ನಾಟಕದ ವತಿಯಿಂದ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.


