ತಿರುವನಂತಪುರಂ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಕೇರಳದಲ್ಲಿ ವರ್ಕ್ಸ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದ 2006ರ ಅವಧಿಯಲ್ಲಿ ಅವರ ವಿರುದ್ಧ ನಡೆದಿದ್ದ ವಿಜಿಲೆನ್ಸ್ ಇಲಾಖೆಯ ಪ್ರಾಥಮಿಕ ತನಿಖೆಗೆ ಸಂಬಂಧಿಸಿದ ಕಡತಗಳನ್ನು ಕೇರಳ ಗೃಹ ಇಲಾಖೆ ಕೇಳಿಸಿಕೊಂಡಿದೆ.
ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಜಾರಿಗೆ ತರುವ ಸಿಇಸಿ ಜ್ಞಾನೇಶ್ ಕುಮಾರ್ ಅವರ ಕ್ರಮವನ್ನು ವಿರೋಧಿಸಿ INDIA ಮೈತ್ರಿಕೂಟ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಸುಮಾರು ಎರಡು ದಶಕಗಳ ಹಿಂದೆ ಮಲೇಷ್ಯಾದ ಇಂಜಿನಿಯರ್ ಒಬ್ಬರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನೇಶ್ ಕುಮಾರ್ ವಿರುದ್ಧ ಕೇರಳದ ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳ (VACB) ಪ್ರಾಥಮಿಕ ತನಿಖೆ ನಡೆಸಿತ್ತು.
ಮಲೇಷ್ಯಾ ಇಂಜಿನಿಯರ್ ಆತ್ಮಹತ್ಯೆ ಪ್ರಕರಣ
ಮಲೇಷ್ಯಾದ ಇಂಜಿನಿಯರ್ ಲೀ ಸೀ ಬೀನ್ ಅವರ ಆತ್ಮಹತ್ಯೆಯ ಬಳಿಕ ಈ ತನಿಖೆ ಆರಂಭವಾಗಿತ್ತು. ಅವರು ಕೇರಳ ಸ್ಟೇಟ್ ಟ್ರಾನ್ಸ್ಪೋರ್ಟ್ ಪ್ರಾಜೆಕ್ಟ್ನಡಿ ಎಂಸಿ ರಸ್ತೆಯನ್ನು ಮೇಲ್ದರ್ಜೆಗೇರಿಸುವ ಕಾಮಗಾರಿ ಕೈಗೊಂಡಿದ್ದ PATI-BEL ಎಂಬ ಭಾರತ–ಮಲೇಷ್ಯಾ ಜಂಟಿ ಒಕ್ಕೂಟದ ಮುಖ್ಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದರು.
ಸರ್ಕಾರಿ ಅಧಿಕಾರಿಗಳು ಬಿಲ್ಗಳನ್ನು ಪಾವತಿಸಲು ಸಹಕರಿಸುತ್ತಿಲ್ಲ ಎಂಬ ಆರೋಪಗಳ ನಡುವೆ ಲೀ ಸೀ ಬೀನ್ ಅವರು ಕೌಲಾಲಂಪುರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ.
ಆತ್ಮಹತ್ಯೆಗೂ ಮುನ್ನ ಅವರು ಬರೆದಿದ್ದ ಟಿಪ್ಪಣಿಯಲ್ಲಿ ಜ್ಞಾನೇಶ್ ಕುಮಾರ್ ಅವರ ಹೆಸರೂ ಉಲ್ಲೇಖವಾಗಿತ್ತು. ಯೋಜನೆಯ ಅನುಷ್ಠಾನದಲ್ಲಿ ವ್ಯವಸ್ಥಿತ ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪಗಳನ್ನು ಒಳಗೊಂಡಿದ್ದ ಅವರ ಟಿಪ್ಪಣಿಯಿಂದಾಗಿ ಪ್ರಕರಣ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಅಂದಿನ ಎಲ್ಡಿಎಫ್ ಸರ್ಕಾರ ವಿಜಿಲೆನ್ಸ್ ತನಿಖೆಗೆ ಆದೇಶಿಸಿತ್ತು.
ತನಿಖೆ ಏನಾಯಿತು?
ವಿಜಿಲೆನ್ಸ್ ತನಿಖೆ ಆರಂಭವಾದ ಬಳಿಕ ಕೆಲವೇ ಸಮಯದಲ್ಲಿ ಪ್ರಕರಣದ ತನಿಖೆ ನಿಧಾನಗತಿಗೆ ತಿರುಗಿತು ಎನ್ನಲಾಗಿದೆ. ಬಳಿಕ ತನಿಖೆ ಸ್ಥಗಿತಗೊಂಡಿತು ಎಂಬ ವರದಿಗಳೂ ಇವೆ. ಪ್ರಕರಣಕ್ಕೆ ಸಂಬಂಧಿಸಿದ ಹಲವು ಪ್ರಮುಖ ದಾಖಲೆಗಳು ಆರಂಭಿಕ ಹುಡುಕಾಟದಲ್ಲೇ ಪತ್ತೆಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಅಂದಿನ ಸಂದರ್ಭದಲ್ಲಿ ಕ್ರೈಂ ಬ್ರಾಂಚ್ ಕೂಡ ಪ್ರಕರಣದ ಬಗ್ಗೆ ಆಸಕ್ತಿ ತೋರಿಸಿತ್ತು. ಆದರೆ ಅದರ ಕಚೇರಿಯಲ್ಲಿ ನಡೆಸಿದ ಹುಡುಕಾಟದಲ್ಲೂ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಸಿಗಲಿಲ್ಲ ಎನ್ನಲಾಗಿದೆ.
ಸಿಪಿಎಂಗೆ ಹೊಸ ಸವಾಲು?
ಹಳೆಯ ಪ್ರಕರಣದ ತನಿಖೆಯನ್ನು ಮುಂದುವರಿಸುವ ಸಾಧ್ಯತೆಗಳ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಈ ಪ್ರಕರಣ ನಡೆದ ಸಂದರ್ಭದಲ್ಲಿ ಕೇರಳದಲ್ಲಿ ಸಿಪಿಎಂ ನೇತೃತ್ವದ ಎಲ್ಡಿಎಫ್ ಸರ್ಕಾರ ಅಧಿಕಾರದಲ್ಲಿತ್ತು. ಹೀಗಾಗಿ ಪ್ರಕರಣವನ್ನು ಮತ್ತೆ ಕೈಗೆತ್ತಿಕೊಂಡರೆ ಸಿಪಿಎಂ ಕೂಡ ರಾಜಕೀಯವಾಗಿ ಮುಜುಗರದ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು ಎಂದು ಮೂಲಗಳು ಹೇಳಿವೆ.
ವಿಶೇಷವೆಂದರೆ, ಪ್ರಸ್ತುತ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಿಪಿಎಂ ತೀವ್ರ ರಾಜಕೀಯ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಅವರ ವಿರುದ್ಧದ ಎರಡು ದಶಕಗಳ ಹಿಂದಿನ ಪ್ರಕರಣದ ಕಡತಗಳನ್ನು ಗೃಹ ಇಲಾಖೆ ಮತ್ತೆ ಪರಿಶೀಲನೆಗೆ ಪಡೆಯುತ್ತಿರುವುದು ಕುತೂಹಲ ಮೂಡಿಸಿದೆ.

