ಇವರೂ … ಅವರೂ …
ನಾನೂ … ನೀನೂ …
ನಾವೆಲ್ಲ ಯಾರು?
ನಮ್ಮೊಳಗಿನ ಲಿಂಗ ಯಾವುದು?
ಎಲ್ಲರದ್ದೂ ರಕ್ತ ಕೆಂಪಲ್ಲವೇ ?
ಇಂಥೆಲ್ಲಾ ಪ್ರಶ್ನೆ ಬೇಕೇ ಈಗ ?
ಹೋಗಲಿ ಬಿಡು.
ಇವರ್ ಯಾರು?
ನಮ್ಮವರು ….
ಅವರ್ ಯಾರು?
ನಮ್ಮವರಲ್ಲ, ನಿಮ್ಮವರೇನೋ …
ಇವರು ನಿಮ್ಮವರೇ?
ಹಾಂ… ಹೌದು
ಇವರ ಮನೆ ನಿಮ್ಮ ಪಕ್ಕದಲ್ಲೆ?
ಇಲ್ಲಿಲ್ಲ…
ನಿಮ್ಮ ಕೇರಿಯಲ್ಲೋ?
ಅಯ್ಯೋ… ಇಲ್ಲ…
ಮತ್ತೆಲ್ಲಿ?
ಊರ ಕೊನೆಯ ಕೇರಿಯಲ್ಲೆಲ್ಲೋ
ಅಲ್ಲೆಲ್ಲಿ?
ನೋಡಿದ್ದರೆ ತಾನೆ
ಇವರ್ ಯಾರು ಮತ್ತೆ ?
ನಮ್ಮವರು… ನಮ್ಮವರು… ನಮ್ಮವರು...
ಅವರ್ ಯಾರು?
ಏಯ್… ಹೇಳಿದೆನಲ್ಲ
ನಮ್ಮವರಲ್ಲ ಅಂತ
ಅವರ ಮನೆ ಎಲ್ಲಿ?
ಸ್ಪಷ್ಟವಿಲ್ಲ …
ನಿಮ್ಮ ಕೇರಿಯವರೇ?
ಇಲ್ಲಿಲ್ಲ …
ನಿಮ್ಮ ಊರಿನವರೇ?
ಅಲ್ಲಲ್ಲ …
ಅವರ ಮನೆಮಠ ಜನಮಂದಿ
ಅಡವುಆಸ್ತಿ ಬಟ್ಟೆಬರೆ
ಊಟಉಪಚಾರ ನೆಂಟರುಬೀಗರು
ಮದುವೆಮುಂಜಿ ಹುಟ್ಟುಸಾವು
ಏನಾದರೂ ಗೊತ್ತೆ ?
ಗೊತ್ತೇ ಇಲ್ಲ …
ಇವರ ಪೂರ್ವಜರು ಗೊತ್ತೇ ?
ಅಯ್ಯೋ… ಇದ್ದರಲ್ಲ
ನನ್ನ ಪೂರ್ವಜರ ಕಾಲದಿಂದಲೂ
ಮತ್ತೇನು ಗೊತ್ತು ?
ಅವರು ನಮ್ಮವರಲ್ಲ ಅಂತ…
ಮತ್ತೆಲ್ಲಿಯವರು ?
ಎಲ್ಲಿಯೋ ಹೊರಗಿನವರು
ನೀನು ?
ಇಲ್ಲಿಯವನೇ …
ನಾನು ?
ಬಹುಶಃ… ನೀನು… ನೀನು…
ಇಲ್ಲಿಯವನಲ್ಲ ಅಂತ ಕಾಣುತ್ತೆ
ಏಯ್ … ನಾನು ನಿನ್ನ ಸ್ನೇಹಿತ ಕಣೋ
ಹೌದಲ್ಲ … ಮರೆತೇ ಬಿಟ್ಟಿದ್ದೆ.
ಪ್ರಕಾಶ್ ಮರ್ಗನಳ್ಳಿ
ಸಹ ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ


