ಮಹದೇವಪುರ : ಬೆಂಗಳೂರು ಪೂರ್ವ ತಾಲ್ಲೂಕಿನ ಬಿದರಹಳ್ಳಿ ಹೋಬಳಿ ಕಾಡ ಆಗ್ರಹಾರ ಗ್ರಾಮದಲ್ಲಿ ಅಕ್ರಮವಾಗಿ ಒತ್ತುವರಿ ಮಾಡಲಾಗಿದ್ದ ನೂರಾರು ಕೋಟಿ ರೂ. ಮೌಲ್ಯದ 12 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡವು ಇಂದು ಯಶಸ್ವಿಯಾಗಿ ವಶಪಡಿಸಿಕೊಂಡಿದೆ.
ಕಾಡ ಆಗ್ರಹಾರ ಗ್ರಾಮದ ಹಳೆ ಸರ್ವೆ ನಂ. 34 (ಹೊಸ ಸರ್ವೆ ನಂ. 115 ಹಾಗೂ 116) ರಲ್ಲಿರುವ ಒಟ್ಟು 12 ಎಕರೆ ಸರ್ಕಾರಿ ಗೋಮಾಳ ಜಮೀನನ್ನು ವೆಂಕಟೇಶ್ ಮತ್ತು ವಿಶ್ವನಾಥ್ ಎಂಬುವರು ತಲಾ ಆರು ಎಕರೆಯಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಒತ್ತುವರಿ ಮಾಡಿಕೊಂಡಿದ್ದರು.
ಈ ಬಗ್ಗೆ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ, 2015-16ನೇ ಸಾಲಿನಲ್ಲಿ ವಿಶೇಷ ಜಿಲ್ಲಾಧಿಕಾರಿಗಳು ಈ ಸರ್ವೆ ನಂಬರ್‌ಗಳ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರು. ಪರಿಶೀಲನೆಯಲ್ಲಿ ದಾಖಲಾತಿಗಳು ಸಂಪೂರ್ಣವಾಗಿ ನಕಲಿ ಎಂಬುದು ಸಾಬೀತಾಗಿದ್ದರಿಂದ, ಕೂಡಲೇ ಈ ಸರ್ಕಾರಿ ಗೋಮಾಳ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳುವಂತೆ ಅವರು ಆದೇಶ ಹೊರಡಿಸಿದ್ದರು.
ವಿಶೇಷ ಜಿಲ್ಲಾಧಿಕಾರಿಗಳ ಆದೇಶವನ್ನು ಪ್ರಶ್ನಿಸಿ ಒತ್ತುವಾರಿದಾರರಾದ ವೆಂಕಟೇಶ್ ಹಾಗೂ ವಿಶ್ವನಾಥ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, ವಿಶೇಷ ಜಿಲ್ಲಾಧಿಕಾರಿಗಳ ಆದೇಶವೇ ಸರಿ ಎಂದು ತೀರ್ಪು ನೀಡಿ, ಅವರ ಆದೇಶವನ್ನು ಎತ್ತಿಹಿಡಿದಿತ್ತು.
ನ್ಯಾಯಾಲಯದ ಆದೇಶದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ, ಇಂದು ದಿಢೀರ್ ಕಾರ್ಯಾಚರಣೆ ನಡೆಸಿತು. ತಹಶೀಲ್ದಾರ್ ಪರಶುರಾಮ್ ನೇತೃತ್ವದ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ, ನಕಲಿ ದಾಖಲೆ ಸೃಷ್ಟಿಸಿ ಕಬಳಿಸಲಾಗಿದ್ದ 12 ಎಕರೆ ಜಮೀನಿಗೆ ಸರ್ಕಾರದ ಫಲಕವನ್ನು ನೆಡುವ ಮೂಲಕ ಜಾಗವನ್ನು ಅಧಿಕೃತವಾಗಿ ವಶಕ್ಕೆ ಪಡೆದುಕೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಗದೀಶ್, “ಸರ್ಕಾರಿ ಜಮೀನುಗಳನ್ನು ಅಕ್ರಮವಾಗಿ ಒತ್ತುವರಿ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು. ವಶಪಡಿಸಿಕೊಳ್ಳಲಾಗಿರುವ ಈ ಕೋಟ್ಯಂತರ ರೂ. ಬೆಲೆಬಾಳುವ ಭೂಮಿಯನ್ನು ಸಂಪೂರ್ಣವಾಗಿ ಸಾರ್ವಜನಿಕರ ಉಪಯೋಗಕ್ಕಾಗಿಯೇ ಕಾಯ್ದಿರಿಸಲಾಗುವುದು” ಎಂದು ತಿಳಿಸಿದ್ದಾರೆ.

