ಇಂದು ವಿಶ್ವ ಹೃದಯ ದಿನ. ಈ ದಿನದಂದು ನಾವೆಲ್ಲರೂ ಒಂದು ಸಂಕಲ್ಪ ಮಾಡೋಣ. ನಮ್ಮ ಹೃದಯವನ್ನು ಪ್ರೀತಿಸೋಣ. ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳೋಣ. ಏಕೆಂದರೆ ಹೃದಯ ಬಡಿತ ನಿಂತರೆ ಎಲ್ಲವೂ ಮುಗಿದಂತೆ. ಹೃದಯ ಇದ್ದರೆ ಮಾತ್ರ ಎಲ್ಲವೂ ಇದೆ – ಕೆ ಎಸ್ ಜಯಶಂಕರ್, ಬರಹಗಾರರು.
ಇಂದು ವಿಶ್ವ ಹೃದಯ ದಿನ. ಆರೋಗ್ಯವೇ ಸಂಪತ್ತು ಎಂಬುದನ್ನು ನೆನಪಿಸುವ ದಿನ. ವರ್ಲ್ಡ್ ಹಾರ್ಟ್ ಫೆಡರೇಷನ್ (WHF) ಸಂಸ್ಥೆಯು ವಿಶ್ವ ಆರೋಗ್ಯ ಸಂಸ್ಥೆ (WHO) ಜೊತೆಗೂಡಿ 2000 ನೇ ಇಸವಿಯಲ್ಲಿ ಇದನ್ನು ಸ್ಥಾಪಿಸಿತು. ಈ ವರ್ಷದ ಥೀಮ್ “ಡೋಂಟ್ ಮಿಸ್ ಎ ಬೀಟ್” (Don’t Miss a Beat) ಎಂದಾಗಿದೆ. ಇದು ಹೃದಯದ ಆರೋಗ್ಯದ ಸೂಕ್ಷ್ಮ ಹಾಗೂ ಮುಂಚಿತವಾಗಿ ಕಾಣಿಸಿಕೊಳ್ಳುವ ಲಕ್ಷಣಗಳನ್ನು ನಿರ್ಲಕ್ಷಿಸದೆ ಎಚ್ಚೆತ್ತುಕೊಳ್ಳುವಂತೆ ಸಂದೇಶ ನೀಡುತ್ತದೆ.
ನಮ್ಮ ಎದೆಯೊಳಗೆ ಕೆಂಪು ಬಣ್ಣದ ಒಂದು ಹೃದಯ ಪ್ರತಿ ಕ್ಷಣವೂ ಮಿಡಿಯುತ್ತಿದೆ. ಯಾವುದೇ ವಿಶ್ರಾಂತಿ ಇಲ್ಲದೆ, ಯಾವುದೇ ರಜೆ ಇಲ್ಲದೆ. ಹುಟ್ಟಿನಿಂದ ಸಾವಿನವರೆಗೆ ಅವಿರತವಾಗಿ ದುಡಿಯುವ ಈ ಒಂದು ಅಂಗಕ್ಕೆ ನಾವು ಎಷ್ಟು ಕೃತಜ್ಞರಾಗಿದ್ದೇವೆ? ಈ ಪ್ರಶ್ನೆಯನ್ನೇ ಈ ದಿನ ನಮ್ಮ ಮುಂದಿಡುತ್ತದೆ.
“ನಿಮ್ಮ ಹೃದಯವನ್ನು ಪ್ರೀತಿಸಿ… ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಿ. ಹೃದಯದ ಆರೋಗ್ಯವೇ ಸಂತೋಷದ ಜೀವನದ ಆಧಾರ.” ಇದು ಕೇವಲ ಶುಭಾಶಯದ ಸಂದೇಶವಲ್ಲ, ಇದು ಇಂದಿನ ಜೀವನಶೈಲಿಗೆ ಒಂದು ಎಚ್ಚರಿಕೆಯ ಕರೆಗಂಟೆ.
ಯಾಕೆ ಈ ದಿನ ಆಚರಣೆ?
ವಿಶ್ವ ಹೃದಯ ಒಕ್ಕೂಟ 2000ನೇ ಇಸವಿಯಿಂದ ಪ್ರತಿ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸುತ್ತಾ ಬಂದಿದೆ. ಇದರ ಉದ್ದೇಶ ಒಂದೇ – ಹೃದ್ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು. ಒಂದು ಕಾಲದಲ್ಲಿ 60 ವರ್ಷ ದಾಟಿದವರಿಗೆ ಬರುತ್ತಿದ್ದ ಹೃದಯಾಘಾತ, ಇಂದು 30-35 ವರ್ಷದ ಯುವಕರನ್ನೂ ಬಲಿ ತೆಗೆದುಕೊಳ್ಳುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಜಿಮ್‌ನಲ್ಲಿ, ಆಟವಾಡುವಾಗ, ನಿದ್ದೆಯಲ್ಲೇ ಹೃದಯಾಘಾತದಿಂದ ಸಾವನ್ನಪ್ಪುವ ಸುದ್ದಿಗಳು ಸಾಮಾನ್ಯವಾಗುತ್ತಿವೆ. ಇದಕ್ಕೆ ಕಾರಣ ನಮ್ಮ ಹೃದಯ ದುರ್ಬಲವಾಗಿರುವುದಲ್ಲ, ನಾವು ಅದನ್ನು ದುರ್ಬಲಗೊಳಿಸುತ್ತಿರುವುದು.

ನಮ್ಮ ಹೃದಯದ ವೈರಿಗಳು ಯಾರು?
ಹೃದಯಕ್ಕೆ ನಾಲ್ಕು ಪ್ರಮುಖ ವೈರಿಗಳಿವೆ.
ಒತ್ತಡ : ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒತ್ತಡವೇ ದೊಡ್ಡ ರೋಗ. ಕೆಲಸದ ಒತ್ತಡ, ಸಾಲದ ಒತ್ತಡ, ಸಾಮಾಜಿಕ ಜಾಲತಾಣದ ಒತ್ತಡ ನಮ್ಮ ರಕ್ತದೊತ್ತಡವನ್ನು ಹೆಚ್ಚಿಸಿ ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಅನಾರೋಗ್ಯಕರ ಆಹಾರ : ಜಂಕ್ ಫುಡ್, ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಅತಿಯಾದ ಸಕ್ಕರೆ ಮತ್ತು ಉಪ್ಪಿನ ಸೇವನೆ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೆ ಕಾರಣವಾಗುತ್ತದೆ.
ಕುಳಿತು ಮಾಡುವ ಕೆಲಸ ಮತ್ತು ಮೊಬೈಲ್ ಜೀವನ : ಇಡೀ ದಿನ ಕುರ್ಚಿಯಲ್ಲಿ ಕುಳಿತು ಕೆಲಸ, ವ್ಯಾಯಾಮದ ಕೊರತೆ, ರಾತ್ರಿ ತಡವಾಗಿ ಮಲಗುವುದು ಹೃದಯದ ಲಯವನ್ನೇ ತಪ್ಪಿಸುತ್ತದೆ.
ವ್ಯಸನಗಳು: ಧೂಮಪಾನ, ಮದ್ಯಪಾನ ಮತ್ತು ಇತ್ತೀಚೆಗೆ ಹೆಚ್ಚುತ್ತಿರುವ ಇ-ಸಿಗರೇಟ್ ಚಟ ಹೃದಯದ ಅಪಧಮನಿಗಳನ್ನು ಬಿಗೊಳಿಸುತ್ತದೆ.
ಹೃದಯವನ್ನು ಪ್ರೀತಿಸುವುದು ಹೇಗೆ?
ಹೃದಯದ ಆರೋಗ್ಯಕ್ಕೆ ದುಬಾರಿ ಔಷಧಿ ಬೇಕಿಲ್ಲ, ದುಬಾರಿ ಆಸ್ಪತ್ರೆ ಬೇಕಿಲ್ಲ. ಬೇಕಿರುವುದು ಸಣ್ಣ ಬದಲಾವಣೆ.
ಆಹಾರವೇ ಔಷಧ: ನಮ್ಮ ಪೂರ್ವಜರ ಆಹಾರಕ್ಕೆ ಹಿಂತಿರುಗಿ. ಸಿರಿಧಾನ್ಯ, ತರಕಾರಿ, ಸೊಪ್ಪು, ಹಣ್ಣುಗಳನ್ನು ಹೆಚ್ಚು ಬಳಸಿ. ಉಪ್ಪು, ಎಣ್ಣೆ, ಸಕ್ಕರೆಯನ್ನು ಕಡಿಮೆ ಮಾಡಿ. ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯಿರಿ ಎನ್ನುತ್ತಾರೆ ವೈದ್ಯರು.
ದಿನಕ್ಕೆ 30 ನಿಮಿಷ : ಜಿಮ್‌ಗೆ ಹೋಗಲೇಬೇಕೆಂದಿಲ್ಲ. ದಿನಕ್ಕೆ 30 ನಿಮಿಷ ಚುರುಕಾಗಿ ನಡೆಯುವುದು, ಮೆಟ್ಟಿಲು ಹತ್ತುವುದು, ಯೋಗ, ಪ್ರಾಣಾಯಾಮ ಮಾಡುವುದು ಹೃದಯವನ್ನು ಸದೃಢವಾಗಿಸುತ್ತದೆ.
ನಿದ್ದೆ ಮತ್ತು ನೆಮ್ಮದಿ : ದಿನಕ್ಕೆ 7-8 ಗಂಟೆ ನಿದ್ದೆ ಹೃದಯಕ್ಕೆ ಅತ್ಯಗತ್ಯ. ಮಲಗುವ ಒಂದು ಗಂಟೆ ಮೊದಲು ಮೊಬೈಲ್ ದೂರವಿಡಿ. ಕುಟುಂಬದೊಂದಿಗೆ ಸಮಯ ಕಳೆಯಿರಿ, ನಗು ನಗುತ್ತಾ ಇರಿ ಎಲ್ಲರನ್ನೂ ನಗಿಸಿ.
ಆರೋಗ್ಯ ತಪಾಸಣೆ : 30 ವರ್ಷ ದಾಟಿದ ಮೇಲೆ ವರ್ಷಕ್ಕೊಮ್ಮೆ ರಕ್ತದೊತ್ತಡ, ಸಕ್ಕರೆ, ಕೊಲೆಸ್ಟ್ರಾಲ್ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ. ಆರಂಭದಲ್ಲೇ ಪತ್ತೆ ಹಚ್ಚಿದರೆ ಹೃದ್ರೋಗವನ್ನು ತಡೆಗಟ್ಟಬಹುದು.
ಈ ವಿಶ್ವ ಹೃದಯ ದಿನದಂದು ನಾವೆಲ್ಲರೂ ಒಂದು ಸಂಕಲ್ಪ ಮಾಡೋಣ ನಮ್ಮ ಹೃದಯವನ್ನು ಪ್ರೀತಿಸೋಣ, ಆರೋಗ್ಯಕರ ಜೀವನವನ್ನು ಅಳವಡಿಸಿಕೊಳ್ಳೋಣ. ಏಕೆಂದರೆ ಹೃದಯ ಬಡಿತ ನಿಂತರೆ ಎಲ್ಲವೂ ಮುಗಿದಂತೆ. ಹೃದಯ ಇದ್ದರೆ ಮಾತ್ರ ಎಲ್ಲವೂ ಇದೆ.

ಕೆ ಎಸ್ ಜಯಶಂಕರ್
ಬರಹಗಾರರು
ಇದನ್ನೂ ಓದಿ- ಸುಟ್ಟ ನೆತ್ತಿಯಿಂದ ಚಿಗುರುವ ಸ್ತ್ರೀ ಪ್ರಜ್ಞೆ


