ಬೆಂಗಳೂರು, ಸೆ.26 : ಐತಿಹಾಸಿಕ ಮೈಸೂರು ದಸರಾ ಉದ್ಘಾಟನೆಗೆ ಕೊಪ್ಪಳ ಗವಿಮಠದ ಪೂಜ್ಯ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಆಯ್ಕೆ ಮಾಡಿರುವುದು ಅತ್ಯಂತ ಸಂತಸದ ಹಾಗೂ ಹೆಮ್ಮೆಯ ಸಂಗತಿ. ನಾಡಹಬ್ಬ ಮೈಸೂರು ದಸರಾವನ್ನು ನಾಡಿನ ಜನಪ್ರಿಯ ಧಾರ್ಮಿಕ ಹಾಗೂ ಸಮಾಜಮುಖಿ ನಾಯಕತ್ವದ ಪ್ರತಿನಿಧಿಯಾಗಿರುವ ಶ್ರೀಗಳ ಮೂಲಕ ಉದ್ಘಾಟಿಸುತ್ತಿರುವುದು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅಭಿಪ್ರಾಯಪಟ್ಟಿದ್ದಾರೆ.
ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತವಾಗದೆ ಶಿಕ್ಷಣ, ಸಮಾಜ ಸೇವೆ, ಯುವಜನರ ಮಾರ್ಗದರ್ಶನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಗವಿಮಠದ ಸಾಮಾಜಿಕ ಮತ್ತು ಶೈಕ್ಷಣಿಕ ಕೈಂಕರ್ಯಗಳಿಗೆ ಹೊಸ ಚೈತನ್ಯ ನೀಡಿರುವ ಶ್ರೀಗಳು, ಸಾವಿರಾರು ಯುವ ಸಮುದಾಯಕ್ಕೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸರಳ ಭಾಷೆಯಲ್ಲಿ ಜೀವನ ಮೌಲ್ಯಗಳನ್ನು ತಿಳಿಸುವ ಶ್ರೀಗಳ ಪ್ರವಚನಗಳು ಅಪಾರ ಜನಪ್ರಿಯತೆ ಪಡೆದಿವೆ. ಧರ್ಮದ ಜೊತೆಗೆ ಶಿಕ್ಷಣ, ಶ್ರಮ, ಮಾನವೀಯತೆ, ಸಾಮಾಜಿಕ ಹೊಣೆಗಾರಿಕೆ ಮತ್ತು ಉತ್ತಮ ಬದುಕಿನ ಕುರಿತು ಅವರು ನೀಡುವ ಸಂದೇಶಗಳು ಎಲ್ಲ ವರ್ಗದ ಜನರನ್ನು ತಲುಪಿವೆ. ಅವರ ಪ್ರವಚನಗಳನ್ನು ಕೇಳಲು ದೊಡ್ಡ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದು ಅವರ ಜನಪ್ರಿಯತೆ ಮತ್ತು ಜನರೊಂದಿಗೆ ಅವರಿಗಿರುವ ಆತ್ಮೀಯ ಒಡನಾಟಕ್ಕೆ ಸಾಕ್ಷಿಯಾಗಿದೆ ಎಂದರು.
ಮೈಸೂರು ದಸರಾ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಅಸ್ಮಿತೆಯನ್ನು ಪ್ರತಿಬಿಂಬಿಸುವ ನಾಡಹಬ್ಬ. ಇಂತಹ ಮಹತ್ವದ ಉತ್ಸವಕ್ಕೆ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳನ್ನು ಉದ್ಘಾಟಕರನ್ನಾಗಿ ಆಯ್ಕೆ ಮಾಡಿರುವುದು ಇಡೀ ಕರ್ನಾಟಕದ ವೈವಿಧ್ಯತೆಯನ್ನು, ಸಾಂಸ್ಕೃತಿಕ ಚೈತನ್ಯವನ್ನು ಗೌರವಿಸಿದಂತಾಗಿದೆ. ಅವರ ಆಯ್ಕೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ.
ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಪಾವನ ಸಾನ್ನಿಧ್ಯದಲ್ಲಿ ಈ ಬಾರಿಯ ಮೈಸೂರು ದಸರಾ ಮತ್ತಷ್ಟು ಅರ್ಥಪೂರ್ಣವಾಗಿ ನಡೆಯಲಿ. ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡದ ಕಂಪು ವಿಶ್ವದಾದ್ಯಂತ ಪಸರಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

