ಎಚ್ಚರಿಕೆ, ಗಲಭೆ ಎಬ್ಬಿಸಲು ಸಂಚು ನಡೆಸುತ್ತಿದ್ದಾರೆ ಮೀಡಿಯಾ ಭಯೋತ್ಪಾದಕರು!

Most read

ಕಾಂಗ್ರೆಸ್ ಸರ್ಕಾರ ರಕ್ಷಣಾತ್ಮಕ ಆಟ ಆಡುವುದನ್ನು ಬಿಟ್ಟು ಸತ್ಯದ ಜೊತೆ ನಿಲ್ಲಬೇಕು, ಸುಳ್ಳಿನ ಮೂಲಕ ಸಮಾಜಘಾತಕ ಕೃತ್ಯಗಳನ್ನು ಎಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರಬೇಕುದಿನೇಶ್ ಕುಮಾರ್ ಎಸ್.ಸಿ.

ಒಂದು ದೇಶ, ಒಂದು ಸಮಾಜವನ್ನು ಅಲುಗಾಡಿಸಲು, ಜನರ ಮಾನಸಿಕ ಶಾಂತಿಯನ್ನು ಕದಡಲು, ಸಮುದಾಯಗಳ ನಡುವೆ ಸಂಘರ್ಷವನ್ನು ಮೂಡಿಸಿ ಜನರ ರಕ್ತ ಹರಿಸಲು ಬಂದೂಕು, ಬಾಂಬುಗಳೇ ಬೇಕೆಂದಿಲ್ಲ. ಆಧುನಿಕ ಕಾಲಘಟ್ಟದಲ್ಲಿ ಇದೆಲ್ಲವನ್ನು ಮಾಧ್ಯಮಗಳೇ ಮಾಡಿಬಿಡಬಹುದು, ಅಷ್ಟು ಮಾತ್ರವನ್ನು ಇದೆಲ್ಲವನ್ನೂ ನಿಮಿಷಾರ್ಧದಲ್ಲಿ ಒಂದು ಸುಳ್ಳು ಸುದ್ದಿಯನ್ನು ಹರಡುವ ಮೂಲಕವೇ ಮಾಡಿಬಿಡಬಹುದು. ಕನ್ನಡ ಮಾಧ್ಯಮಗಳು ಈಗ ಇದನ್ನೇ ಮಾಡುತ್ತಿವೆ. ಇದು ನಿಸ್ಸಂಶಯವಾಗಿ ಮೀಡಿಯಾ ಮಾಡುತ್ತಿರುವ ಭಯೋತ್ಪಾದನೆ. ಮೀಡಿಯಾ ಹೆಸರಲ್ಲಿ ಎಲ್ಲ ಬಗೆಯ ಅನಾಚಾರಗಳನ್ನು ಮಾಡಿದ ನಂತರ ಈಗ ನೇರವಾಗಿ ಅವು ಭಯೋತ್ಪಾದನೆಗೆ ಇಳಿದಿವೆ. ರಾಜ್ಯದ ನೆಮ್ಮದಿಯನ್ನು ಕದಡುತ್ತಿವೆ.  ಸಮುದಾಯಗಳ ನಡುವೆ ಸಂಘರ್ಷದ, ಕೋಮುಗಲಭೆಗಳ ಸಂಚು ರೂಪಿಸುತ್ತಿವೆ. 

ಮಂಡ್ಯ ತಾಲ್ಲೂಕಿನ ಕೆರಗೋಡಿನಲ್ಲಿ ಧ್ವಜ ಸ್ತಂಭ ವಿವಾದ ಆರಂಭಗೊಂಡಾಗ ಅದಕ್ಕೆ ರೆಕ್ಕೆ ಪುಕ್ಕ ಕಟ್ಟಿ, ಗಂಟೆಗಟ್ಟಲೆ ಸುದ್ದಿ ಮಾಡಿ ಅದನ್ನು ಗಲಭೆಯ ರೂಪಕ್ಕೆ ತಂದಿದ್ದೇ ನಮ್ಮ ಮೀಡಿಯಾಗಳು. ಈಗ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಬೆಂಬಲಿಗನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದನೆಂದು ಸುಳ್ಳು ಸುದ್ದಿ ಹರಡಿಸಿ ವ್ಯವಸ್ಥಿತ ಗಲಭೆಗೆ ಪಿತೂರಿ ನಡೆಸುತ್ತಿವೆ. ಕೆರಗೋಡಿನ ವಿವಾದ ಆರಂಭಗೊಂಡಾಗ ಜಿಲ್ಲಾಡಳಿತ ಹನುಮಧ್ವಜವನ್ನು ತೆರವುಗೊಳಿಸಿ, ಹನುಮಭಕ್ತರ ಭಾವನೆಗಳಿಗೆ ಧಕ್ಕೆ ತರಲಾಯಿತು ಎಂದು  ಮೀಡಿಯಾಗಳು ಪ್ರಚಾರ ಮಾಡಿದ್ದವು. ಈ ಸಂದರ್ಭದಲ್ಲಿ ʻಕನ್ನಡ ಪ್ಲಾನೆಟ್ʼ ತನಿಖಾ ವರದಿಯೊಂದನ್ನು ಪ್ರಕಟಿಸಿ, ಧ್ವಜಸ್ತಂಭವನ್ನು ರಾಷ್ಟ್ರಧ್ವಜ ಮತ್ತು ನಾಡಧ್ವಜ ಹಾರಿಸಲು ಮಾತ್ರ ಬಳಸಲಾಗುವುದು ಎಂದು ಅನುಮತಿ ಪಡೆದ  ಟ್ರಸ್ಟ್ ಮುಚ್ಚಳಿಕೆ ಬರೆದುಕೊಟ್ಟಿತ್ತು, ಗ್ರಾಮಪಂಚಾಯ್ತಿಯ ಜಾಗದಲ್ಲಿ ಇನ್ಯಾವುದೇ ಧಾರ್ಮಿಕ ಬಾವುಟಗಳನ್ನು ಹಾರಿಸುವ ಅವಕಾಶ ಕೊಡುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟವಾಗಿ ಹೇಳಿದ್ದರು ಎಂಬುದನ್ನು ದಾಖಲೆಗಳ ಸಮೇತ ಬಹಿರಂಗಪಡಿಸಿತ್ತು. ಇದಾದ ನಂತರವೂ ಭಾರತೀಯ ಜನತಾ ಪಕ್ಷ ಮತ್ತು ಅದರ ಸಂಘಟನೆಗಳು ಮಂಡ್ಯದಲ್ಲಿ ಗಲಭೆ ಎಬ್ಬಿಸಲು ಹಲವು ರೀತಿಯ ಪ್ರಯತ್ನ ನಡೆಸಿದವು. ಮಂಡ್ಯದ ಮಾನವೀಯ ಮನಸುಗಳು ಒಂದೆಡೆ ಸೇರಿ ಭಾರೀ ಪ್ರತಿರೋಧ ತೋರಿದ ಪರಿಣಾಮವಾಗಿ ಈ ಶಕ್ತಿಗಳ ಹುನ್ನಾರಗಳು ವಿಫಲವಾಗಿದ್ದವು.

ಈಗ ಕನ್ನಡ ಮೀಡಿಯಾ ಯಾರಿಂದಲೋ ಸುಪಾರಿ ಪಡೆದಂತೆ ಹೊಸ ವಿವಾದವನ್ನು ಸೃಷ್ಟಿ ಮಾಡಿವೆ. ರಾಜ್ಯಸಭಾ ಚುನಾವಣೆಗಳಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಸೋತು ಹೋದರು. ಗೆಲುವಿಗೆ ಬೇಕಾದಷ್ಟು ಮತಗಳು ಅವರ ಬಳಿ ಇರಲಿಲ್ಲ. ಅಷ್ಟೇ ಅಲ್ಲದೆ, ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಆತ್ಮಸಾಕ್ಷಿಯ ಮತ ಚಲಾಯಿಸಿರುವುದಾಗಿ ಹೇಳಿ ಬಿಜೆಪಿಗೆ ಕೈಕೊಟ್ಟರು. ಇನ್ನೊಂದೆಡೆ ಮತ್ತೋರ್ವ ಶಾಸಕ ಶಿವರಾಂ ಹೆಬ್ಬಾರ್ ಮತ ಚಲಾಯಿಸಲೇ ಬರಲಿಲ್ಲ. ಈ ಸೋಲಿನ ಹತಾಶೆಯಲ್ಲಿ ನರಳುತ್ತಿದ್ದ ಬಿಜೆಪಿ ಮತ್ತು ಅದು ಸಾಕಿಕೊಂಡಿರುವ ಮೀಡಿಯಾಗಳಿಗೆ ಹೊಸ ವಿವಾದವೊಂದು ಬೇಕಾಗಿತ್ತು. ಆಗ ಅವರ ಕೈಗೆ ಸಿಕ್ಕಿದ್ದೇ ನಾಸಿರ್ ಹುಸೇನ್ ಬೆಂಬಲಿಗರ ಸಂಭ್ರಮಾಚರಣೆಯ ವಿಡಿಯೋ.

ಇದೇ ಮಾಧ್ಯಮಗಳು ಪ್ರಸಾರ ಮಾಡಿರುವ ವಿಡಿಯೋಗಳನ್ನು ಗಮನಿಸಿ ನೋಡಿ. ನಾಸಿರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ತಮ್ಮ ನಾಯಕನ ಗೆಲುವನ್ನು ಸಂಭ್ರಮಿಸುವ ಸಂಭ್ರಮದಲ್ಲಿ ʻನಾಸಿರ್ ಸಾಬ್ ಜಿಂದಾಬಾದ್ʼ ಎಂದು ಘೋಷಣೆ ಕೂಗಿದ್ದಾರೆ. ಬಹಳ ಸ್ಪಷ್ಟವಾಗಿ ಅವರು ತಮ್ಮ ನಾಯಕನ ಪರವಾಗಿ ಘೋಷಣೆ ಕೂಗಿದ್ದಾರೆ. ಆದರೆ ನಿರ್ಲಜ್ಜ ಮಾಧ್ಯಮಗಳು ಅದನ್ನು ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಕೂಗಲಾಗಿದೆ ಎಂದು ಹೇಳುತ್ತಿವೆ. ಗೌಜು, ಗದ್ದಲದ ನಡುವೆ ಒಂದು ಘೋಷಣೆಯನ್ನು ಹೇಗೆ ಬೇಕಾದರೂ ಬಿಂಬಿಸಬಹುದು. ಮೀಡಿಯಾಗಳು ಆ ಘೋಷಣೆಯನ್ನು ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಪದೇಪದೇ ಹೇಳುತ್ತಲೇ ಇದ್ದರೆ, ಅದು ಕೇಳುಗನಿಗೂ ಹಾಗೇ ಕೇಳಿಸುತ್ತದೆ. ಘೋಷಣೆ ಕೂಗಿದವನು ನಾಸಿರ್ ಸಾಬ್ ಜಿಂದಾಬಾದ್ ಎಂದು ಕೂಗಿರಬಹುದೇ ಎಂದು ಪರೀಕ್ಷಿಸಿದಾಗ ಅದು ಸ್ಪಷ್ಟವಾಗಿ ನಾಸಿರ್ ಸಾಬ್ ಜಿಂದಾಬಾದ್ ಎಂಬುದು ಅರ್ಥವಾಗುತ್ತದೆ. ಪಾಕಿಸ್ತಾನ್ ಮತ್ತು ನಾಸಿರ್ ಸಾಬ್ ಎಂಬ ಎರಡು ಶಬ್ದಗಳು ಒಂದೇ ಬಗೆಯ ಪ್ರಾಸದಲ್ಲಿರುವುದರಿಂದ, ಘೋಷಣೆಯು ಗಲಾಟೆ ಗದ್ದಲದ ನಡುವೆ ದುರ್ಬಲವಾಗಿ ಕೇಳಿಬರುವುದರಿಂದ ಇದು ಅದೇ ಎಂದು ವಾದಿಸುವುದು ಸುಲಭ. ಇದೆಲ್ಲ ಮೀಡಿಯಾ ಪಂಡಿತರಿಗೆ ಗೊತ್ತಿಲ್ಲದ ವಿಷಯವೇನಲ್ಲ. ಆದರೆ ಅವರಿಗೆ ಬೇಕಿರುವುದು ʻಪಾಕಿಸ್ತಾನʼದ ಹೆಸರು. ಆ ಮೂಲಕ ಭಾರತೀಯ ಮುಸ್ಲಿಮರನ್ನು ದೇಶದ ಶತ್ರುಗಳೆಂದು ಬಿಂಬಿಸುವುದು ಅವರ ದುಷ್ಟ ಹುನ್ನಾರ. ಬದುಕಲು ನಾನಾ ಬಗೆಯ ದಾರಿಗಳಿವೆ, ಆದರೆ ದುಡ್ಡಿನಾಸೆಗೆ ಈ ಮೀಡಿಯಾಗಳು ತಮ್ಮನ್ನು ತಾವು ಮಾರಿಕೊಂಡು ಇಂಥ ಅಕ್ಷರ ಹಾದರವನ್ನು ಮಾಡುವುದು ಎಷ್ಟು ಸರಿ?

ಭಾರತೀಯ ಮೀಡಿಯಾಗಳು ಇದೇ ರೀತಿ ಸುಳ್ಳು ಸುದ್ದಿ ಹರಡುವುದು, ಅದರ ಮೂಲಕ ತಮ್ಮ ಎದೆಯ ಮೇಲೆ ಕಾಸು ಎಸೆಯುವ ರಾಜಕೀಯ ಪಕ್ಷದ ಕಾಲಾಳುವಿನಂತೆ ಕೆಲಸ ಮಾಡುವುದು ಇದೇ ಮೊದಲೇನಲ್ಲ. ಈಗ ಕಾಂಗ್ರೆಸ್ ಪಕ್ಷದಲ್ಲಿರುವ, ಆಗ ವಿದ್ಯಾರ್ಥಿ ನಾಯಕರಾಗಿದ್ದ ಕನ್ಹಯ್ಯ ಕುಮಾರ್ ವಿರುದ್ಧವೂ ಇದೇ ಕುತಂತ್ರವನ್ನು ಬಳಸಿ, ಅವರು ಜೈಲು ಸೇರುವಂತೆ ಮಾಡಿದ್ದವು ಮೀಡಿಯಾಗಳು. ಬೇರೆಲ್ಲೋ ಯಾರೊ ಕೂಗಿದ ಘೋಷಣೆಗಳನ್ನು ಕನ್ಹಯ್ಯ ಕುಮಾರ್ ಇದ್ದ ಸಭೆಯಲ್ಲಿ ಕೂಗಿದಂತೆ ತಿರುಚಿ ವಿಡಿಯೋವನ್ನು ಹರಿಬಿಡಲಾಯಿತು. ಬಿಜೆಪಿ ನಿಯಂತ್ರಣದಲ್ಲಿರುವ ದೆಹಲಿ ಪೊಲೀಸರು ಹಿಂದೆ ಮುಂದೆ ನೋಡದೆ ಕನ್ಹಯ್ಯ ಕುಮಾರ್ ಅವರನ್ನು ಜೈಲಿಗೆ ತಳ್ಳಿದರು. ಕೊನೆಗೆ ಅನೇಕ ಫ್ಯಾಕ್ಟ್ ಚೆಕ್ ತಂಡಗಳು ವಿಡಿಯೋದ ಸತ್ಯಾಸತ್ಯತೆಯನ್ನು ಪರೀಕ್ಷಿಸಿದಾಗ ಕನ್ಹಯ್ಯ ಇದ್ದ ಸಭೆಯಲ್ಲಿ ಭಾರತ ವಿರೋಧಿ ಘೋಷಣೆ ಕೂಗಲಾಗಿಲ್ಲ ಎಂಬುದು ಬಹಿರಂಗವಾಯಿತು. ಅಷ್ಟೇ ಅಲ್ಲ, ಫೋರೆನ್ಸಿಕ್ ತಜ್ಞರೂ ವಿಡಿಯೋವನ್ನು ಕುಲಗೆಡಿಸಲಾಗಿದೆ ಎಂದು ವರದಿ ನೀಡಿದರು. 

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಸಂದರ್ಭದಲ್ಲೂ ಮೀಡಿಯಾಗಳು ಇಂಥದ್ದೇ ಪ್ರೊಪಗಂಡ ಒಂದನ್ನು ಸೃಷ್ಟಿಸಿದ್ದರು. ಆದರೆ ಚುನಾವಣೆ ಫಲಿತಾಂಶದ ಬಿಸಿಯಲ್ಲಿ ಆ ಸುದ್ದಿ ಹೆಚ್ಚು ಪ್ರಚಾರಕ್ಕೇ ಬರಲಿಲ್ಲ. ಮೀಡಿಯಾ ಮತ್ತು ಅವುಗಳನ್ನು ಸಾಕುತ್ತಿರುವ ರಾಜಕೀಯ ಪಕ್ಷದ ಉದ್ದೇಶವೂ ಈಡೇರಲಿಲ್ಲ. ಚುನಾವಣೆ ಫಲಿತಾಂಶದ ಘೋಷಣೆ ಸಂದರ್ಭದಲ್ಲಿ ರಾಣಿ ಪಾರ್ವತಿದೇವಿ ಕಾಲೇಜಿನ ಮತ ಎಣಿಕೆ ಕೇಂದ್ರದ ಹೊರಗೆ ಸಾವಿರಾರು ಮಂದಿ ಸೇರಿದ್ದರು. ಬೆಳಗಾವಿ ಉತ್ತರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಸೀಫ್ ಸೇಠ್ ಗೆಲುವು ಖಾತ್ರಿ ಆಗುತ್ತಿದ್ದಂತೆಯೇ ಅಪಾರ ಸಂಖ್ಯೆಯ ಯುವಕರು ಅಲ್ಲಿ ನೆರೆದಿದ್ದರು. ಸಂಭ್ರಮಾಚರಣೆಯ ಭಾಗವಾಗಿ ಬಣ್ಣಗಳನ್ನು ಎರಚಿ, ಸಂಗೀತ ಹಾಕಿಕೊಂಡು ಕುಣಿದಿದ್ದರು. ಈ ವೇಳೆ ಕಾಂಗ್ರೆಸ್ ಧ್ವಜ ಹಿಡಿದು ಬಂದ ಕೆಲವರು ʻಆಸೀಫ್ ಸೇಠ್ ಜಿಂದಾಬಾದ್ʼ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು. ಗುಂಪಿನ ಗದ್ದಲದ ನಡುವೆ ʻಆಸೀಫ್ ಸೇಠ್ ಜಿಂದಾಬಾದ್ʼ ಎಂದು ಕೂಗುವುದನ್ನು ಮಾಧ್ಯಮಗಳು ʻಪಾಕಿಸ್ತಾನ್ ಜಿಂದಾಬಾದ್ʼ ಎಂದು ಪದೇಪದೇ ಹೇಳಿ ವಿಕೃತಿ ಮೆರೆದಿದ್ದವು. ಕೊನೆಗೆ ಈ ಘಟನೆಯ ಕುರಿತೂ ಫ್ಯಾಕ್ಟ್ ಚೆಕರ್ ಗಳು ಪರಿಶೀಲನೆ ನಡೆಸಿ, ಅಲ್ಲಿ ಕೂಗಲಾಗಿದ್ದು ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯಲ್ಲ, ಆಸೀಫ್ ಸೇಠ್ ಜಿಂದಾಬಾದ್ ಘೋಷಣೆ ಎಂದು ವರದಿ ನೀಡಿದ್ದವು.

ನಿನ್ನೆಯ ನಾಸಿರ್ ಹುಸೇರ್ ಗೆಲುವಿನ ಸಂಭ್ರಮಾಚರಣೆಯ ಘಟನೆಯಾಗಲೀ, ಆಸೀಫ್ ಸೇಠ್ ಗೆಲುವಿನ ಸಂಭ್ರಮಾಚರಣೆಯ ಘಟನೆಯಾಗಲಿ, ಅಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಯಾರಾದರೂ ಯಾಕಾದರೂ ಕೂಗುತ್ತಾರೆ? ಹೀಗೆ ಕೂಗಲು ಅವರ ಬೆಂಬಲಿಗರಿಗೇನು ಹುಚ್ಚು ನಾಯಿ ಕಚ್ಚಿರುತ್ತದೆಯೇ? ಒಂದು ವೇಳೆ ಹಾಗೆ ಯಾರಾದರೂ ಪಾಕಿಸ್ತಾನ್‌ ಜಿಂದಾಬಾದ್ ಎಂದು ಘೋಷಣೆ ಕೂಗಿದರೆ ತನಿಖೆಯ ಬಳಿಕ ಕಾನೂನು ಪ್ರಕಾರ ಶಿಕ್ಷೆಯಾಗಲಿ.ಅದಕ್ಕೆ ಯಾರ ಅಭ್ಯಂತರವೂ ಇರುವುದಿಲ್ಲ. ಅಲ್ಲಿಯವರೆಗೆ ಸಂಯಮ ವಹಿಸಬೇಕ ಲ್ಲವೇ?

ಮೀಡಿಯಾಗಳಿಗೆ ಈ ಕಾಮನ್ ಸೆನ್ಸ್ ಕೂಡ ಇಲ್ಲವೇ ಎಂದು ನೀವು ಪ್ರಶ್ನಿಸಬಹುದು. ಆದರೆ ಈ ಘಟನೆಗಳ ಆಳದಲ್ಲಿ ನಮ್ಮ ಮೀಡಿಯಾಗಳಲ್ಲಿರುವ ಎಂಜಲುಬಡುಕರ ಹಳವಂಡಗಳು ಕಣ್ಣಿಗೆ ರಾಚುತ್ತವೆ. ದುಡ್ಡಿನ ಆಸೆಗೆ, ಅಗ್ಗದ ಪ್ರಚಾರಕ್ಕೆ ʻಇಸ್ಲಾಮೋಫೋಬಿಯಾʼ ಹರಡುವ ಅವರ ಮಾನಸಿಕ ವಿಕೃತಿಗಳು ಕಾಣಿಸುತ್ತವೆ. ಮೀಡಿಯಾದವರು ದಡ್ಡರೇನಲ್ಲ, ಆದರೆ ಅವರು ಜನರನ್ನು ಮಾಧ್ಯಮಗಳಲ್ಲಿ ಪ್ರಸಾರವಾಗುವ ಎಲ್ಲವನ್ನು ನಂಬುವ ಜನರ ದೌರ್ಬಲ್ಯಗಳನ್ನು ಬಂಡವಾಳ ಮಾಡಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಇಂಥ ʻಇಸ್ಲಾಮೋಫೋಬಿಯಾʼ ಹರಡಲು ಅವರಿಗೆ ಹಣ ಕೊಟ್ಟು ಸಾಕಿಕೊಳ್ಳಲಾಗಿದೆ ಎಂಬುದು ಜನರಿಗೆ ಗೊತ್ತಿರುವುದಿಲ್ಲ. ಇದೆಲ್ಲವನ್ನೂ ಮೀರಿ ಮುಸ್ಲಿಮನೊಬ್ಬ ಚುನಾವಣೆಯಲ್ಲಿ ಗೆದ್ದರೆ ಅದನ್ನು ಸಹಿಸಿಕೊಳ್ಳಲು ಈ ದ್ವೇಷದ ವ್ಯಾಪಾರಿಗಳಿಗೆ ಇಷ್ಟವಿಲ್ಲ ಎಂಬುದು ಕೂಡ ಸತ್ಯ.

ʻನಾಸಿರ್ ಸಾಬ್ ಜಿಂದಾಬಾದ್ʼ ಘೋಷಣೆಯ ವಿವಾದದಲ್ಲಿ ರಾಜ್ಯ ಸರ್ಕಾರ ಡಿಫೆನ್ಸಿವ್ ಮೋಡ್ ಗೆ ಹೋದಂತೆ ಕಾಣುತ್ತಿದೆ. ಕಿವಿಗೆ ರಾಚುವಂತೆ ಸತ್ಯ ಕೇಳಿಸುತ್ತಿದ್ದರೂ, ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ವಾಸ್ತವವಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿರುವುದು ಸುಳ್ಳು ಸುದ್ದಿ ಹರಡಿದ ಮಾಧ್ಯಮಗಳ ಮೇಲೆ. ಈ ಕೂಗುಮಾರಿ ಮಾಧ್ಯಮಗಳಿಗೆ ಒಂದು ನೋಟಿಸ್ ಕೊಡಲೂ ಸರ್ಕಾರ ಹೆದರಿ ಕುಳಿತರೆ ಅವರು ಇನ್ನಷ್ಟು ಸುಳ್ಳು ಸುದ್ದಿಗಳನ್ನು ಹರಡಿ ಸಮಾಜವನ್ನು ಘಾಸಿಗೊಳಿಸುತ್ತವೆ. ಕಾಂಗ್ರೆಸ್ ಸರ್ಕಾರ ರಕ್ಷಣಾತ್ಮಕ ಆಟ ಆಡುವುದನ್ನು ಬಿಟ್ಟು ಸತ್ಯದ ಜೊತೆ ನಿಲ್ಲಬೇಕು, ಸುಳ್ಳಿನ ಮೂಲಕ ಸಮಾಜಘಾತಕ ಕೃತ್ಯಗಳನ್ನು ಎಸಗುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯ ತೋರಬೇಕು. ಸರ್ಕಾರ ಈಗಾಗಲೇ ಸುಳ್ಳು ಸುದ್ದಿಗಳ ಪ್ರಚಾರದ ವಿರುದ್ಧ ಫ್ಯಾಕ್ಟ್ ಚೆಕ್ ಘಟಕಗಳನ್ನು ತೆರೆಯುವ ಪ್ರಯತ್ನದಲ್ಲಿದೆ. ಅದಕ್ಕೆ ಇನ್ನಷ್ಟು ಬಲ ನೀಡಬೇಕು. ಸಮಾಜದಲ್ಲಿ ವಿಧ್ವಂಸಕಾರಿ ಚಟುವಟಿಕೆ ನಡೆಸಲು ಪ್ರೇರಣೆ ನೀಡುವ ಇಂಥ ಸುಳ್ಳು ಸುದ್ದಿಗಳ ಜನಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು. 

ಕೊನೆಯದಾಗಿ ಇಂಥ ಸುಳ್ಳು ಸುದ್ದಿಗಳನ್ನು ಯಾರು ಯಾಕೆ ಹೇಗೆ ಹರಡುತ್ತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲದ ವಿಷಯವೇನಲ್ಲ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಭೆಯೊಂದರಲ್ಲಿ ಹೀಗೆ ಹೇಳಿದ್ದರು. “We can spread any message that we want, whether it is true or false.” 

ಸುದ್ದಿ ಸುಳ್ಳಾಗಿರಲಿ, ಸತ್ಯವಾಗಿರಲಿ, ನಾವು ಹರಡಲು ಬಯಸುವ ಯಾವುದೇ ಸಂದೇಶವನ್ನು ನಾವು ಹರಡಲು ಶಕ್ತರಾಗಿದ್ದೇವೆ.

ಕ್ರೋನಾಲಜಿ ಅರ್ಥವಾಗಿರಬೇಕಲ್ಲವೇ?‌

ದಿನೇಶ್ ಕುಮಾರ್ ಎಸ್.ಸಿ.

More articles

Latest article