ಬೆಂಗಳೂರು ಸೆ.24: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಹಾಗೂ ಕರ್ನಾಟಕದ ಶಾಸ್ತ್ರೀಯ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್ ಅವರು ರೈಲು ಪ್ರಯಾಣದ ವೇಳೆ ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ರೈಲು ಪ್ರಯಾಣವನ್ನು “ಆಘಾತಕಾರಿ ಅನುಭವ” ಎಂದು ವಿವರಿಸಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕ ಪ್ರಜ್ಞೆ ಮತ್ತು ಇತರರ ವೈಯಕ್ತಿಕ ಜಾಗವನ್ನು ಗೌರವಿಸುವ ಅಗತ್ಯದ ಬಗ್ಗೆ ಪ್ರಶ್ನಿಸಿದ್ದಾರೆ.
ಶಿವಶ್ರೀ ಅವರ ಪ್ರಕಾರ, 56 ಆಸನಗಳಿದ್ದ ಬೋಗಿಯಲ್ಲಿ ಸುಮಾರು 40 ಮಂದಿ ಮಧ್ಯವಯಸ್ಕರ ಗುಂಪೊಂದು ಪ್ರಯಾಣಿಸುತ್ತಿತ್ತು. ಈ ಗುಂಪು ಸುಮಾರು ಐದು ಗಂಟೆಗಳ ಕಾಲ ನಿರಂತರವಾಗಿ ಜೋರಾಗಿ ಮಾತನಾಡುತ್ತಾ, ನಗುತ್ತಾ ಗದ್ದಲ ಮಾಡುತ್ತಿತ್ತು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಸಾರ್ವಜನಿಕ ಸ್ಥಳದಲ್ಲಿದ್ದಾಗ ಜೋರಾಗಿ ಮಾತನಾಡದೆ, ಇತರರ ವೈಯಕ್ತಿಕ ಜಾಗವನ್ನು ಗೌರವಿಸಬೇಕು. ಕಲಾವಿದರಾದ ನಮಗೆ ಮನಸ್ಸಿನಲ್ಲಿ ನೂರಾರು ಆಲೋಚನೆಗಳು ಓಡುತ್ತಿರುತ್ತವೆ. ನಾವು ಮೌನದಲ್ಲಿ ಬೆಳೆಯುತ್ತೇವೆ” ಎಂದು ಶಿವಶ್ರೀ ಬರೆದಿದ್ದಾರೆ.
ಬೇರೆ ಬೋಗಿಗೆ ಸ್ಥಳ ಕೇಳಿದರೂ ಸಿಗಲಿಲ್ಲ
ನಿರಂತರ ಗದ್ದಲದಿಂದ ತೊಂದರೆಗೊಳಗಾದ ಶಿವಶ್ರೀ ಅವರು ಟಿಟಿಇಯನ್ನು ಸಂಪರ್ಕಿಸಿ ಬೇರೆ ಬೋಗಿಯಲ್ಲಿ ಆಸನ ನೀಡುವಂತೆ ಮನವಿ ಮಾಡಿದ್ದರು. ಆದರೆ ರೈಲು ಸಂಪೂರ್ಣ ಭರ್ತಿಯಾಗಿದ್ದ ಕಾರಣ ಬೇರೆ ಬೋಗಿಗೆ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅದೇ ಬೋಗಿಯಲ್ಲಿ ಬೇರೆ ಆಸನದಲ್ಲಿ ಕುಳಿತುಕೊಳ್ಳಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಇದರ ನಡುವೆಯೇ ನಿರಂತರವಾಗಿ ಮಾತನಾಡುತ್ತಾ, ನಗುತ್ತಿದ್ದ ಗುಂಪಿನಲ್ಲಿದ್ದ ಸುಮಾರು ಎಂಟು ಮಂದಿ UNO ಆಟ ಆಡಲು ಆರಂಭಿಸಿದರು. ಇದರಿಂದ ಮತ್ತಷ್ಟು ತೊಂದರೆಯಾದ ಹಿನ್ನೆಲೆಯಲ್ಲಿ ಶಿವಶ್ರೀ ಅವರು ಮತ್ತೆ ಟಿಟಿಇಗೆ ದೂರು ನೀಡಿದರು.
ಟಿಟಿಇ ಗುಂಪಿನವರ ಬಳಿ ತೆರಳಿ ಆಟ ನಿಲ್ಲಿಸುವಂತೆ ಸೂಚಿಸಿದಾಗ ಅವರು ತಕ್ಷಣ ಆಟ ನಿಲ್ಲಿಸಿದರು. ಆದರೆ ಕೆಲವೇ ನಿಮಿಷಗಳ ಬಳಿಕ ಟಿಟಿಇ ಮತ್ತೆ ಅವರ ಬಳಿ ತೆರಳಿ, “ಯಾಕೆ ಸರ್ ಗಲಾಟೆ ಮಾಡ್ತಾ ಇದ್ದೀರಾ?” ಎಂದು ವ್ಯಂಗ್ಯವಾಗಿ ಕೇಳಿದರು ಎಂದು ಶಿವಶ್ರೀ ಆರೋಪಿಸಿದ್ದಾರೆ.
ಅದಕ್ಕೆ ಗುಂಪಿನವರು ನಗುತ್ತಾ, “ಸರ್, ನೀವೂ ಬನ್ನಿ, ಆಡೋಣ” ಎಂದು ಟಿಟಿಇಯನ್ನೇ ಆಟಕ್ಕೆ ಆಹ್ವಾನಿಸಿದರು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ. ನಂತರ ಅವರು ಉದ್ದೇಶಪೂರ್ವಕವಾಗಿ ಬಾಲಿವುಡ್ ಹಾಡುಗಳನ್ನು ಹಾಡಿದರು. ಈ ದೇಶವನ್ನು ದೇವರೇ ಕಾಪಾಡಬೇಕು ಎಂದು ಅವರು ಹೇಳಿದ್ದಾರೆ.
“ಸಿವಿಕ್ ಸೆನ್ಸ್ ಆಟದಲ್ಲಿ ನಾವೆಲ್ಲರೂ ಸೋತೆವು”
ಈ ಘಟನೆಯನ್ನು ಕೇವಲ UNO ಆಟದ ವಿಚಾರವಾಗಿ ನೋಡಬಾರದು ಎಂದು ಶಿವಶ್ರೀ ಹೇಳಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇತರರಿಗೂ ತೊಂದರೆಯಾಗದಂತೆ ವರ್ತಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶವನ್ನು ಅವರು ನೀಡಿದ್ದಾರೆ.
“ಯಾರು ಗೆದ್ದರು ಎಂಬುದು ಇಲ್ಲಿ ಪ್ರಶ್ನೆಯಲ್ಲ. ಅವರ ಜೊತೆಗೆ ಒಬ್ಬ ಭಾರತೀಯಳಾಗಿ ನಾನೂ ಸಿವಿಕ್ ಸೆನ್ಸ್ ಆಟದಲ್ಲಿ ಸೋತೆ” ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಜನರು ತಮ್ಮ ವರ್ತನೆಯನ್ನು ಯಾವಾಗ ಸುಧಾರಿಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿರುವ ಶಿವಶ್ರೀ, ದೇಶದಲ್ಲಿ ಸಾರ್ವಜನಿಕ ವರ್ತನೆ ಮತ್ತು ನಾಗರಿಕ ಪ್ರಜ್ಞೆ ಸುಧಾರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿವಶ್ರೀ ಅವರ ಈ ಪೋಸ್ಟ್ ಸೆಪ್ಟೆಂಬರ್ 24ರಂದು ಪ್ರಕಟವಾಗಿದ್ದು, ರೈಲುಗಳಲ್ಲಿ ಪ್ರಯಾಣಿಸುವಾಗ ಸಾರ್ವಜನಿಕ ಶಿಸ್ತು, ಶಬ್ದ ನಿಯಂತ್ರಣ ಹಾಗೂ ಇತರ ಪ್ರಯಾಣಿಕರ ಹಕ್ಕುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.

