ಬೆಂಗಳೂರು ಸೆ 22: ಧರ್ಮಸ್ಥಳದಲ್ಲಿ 2012ರಲ್ಲಿ ನಡೆದ ಅಪ್ರಾಪ್ತ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ‘ಕೊಂದವರು ಯಾರು?’ ಆಂದೋಲನ ಸ್ವಾಗತಿಸಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಕಾಲಮಿತಿಯೊಳಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಅನುವಾಗುವಂತೆ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ಕೂಡಲೇ ರಚಿಸಬೇಕು ಎಂದು ಆಂದೋಲನ ಸರ್ಕಾರವನ್ನು ಆಗ್ರಹಿಸಿದೆ.
ಸೌಜನ್ಯ ಪ್ರಕರಣದಲ್ಲಿ ಸಿಓಡಿ, ಸಿಬಿಐ ಸೇರಿದಂತೆ ಹಲವು ತನಿಖಾ ಸಂಸ್ಥೆಗಳು ತನಿಖೆ ನಡೆಸಿದ್ದರೂ ಪ್ರಕರಣದ ಸತ್ಯಾಂಶ ಹೊರಬಂದಿಲ್ಲ ಎಂದು ಆಂದೋಲನ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಪ್ರಕರಣದಲ್ಲಿ ಪೊಲೀಸರು ಆರೋಪಿಯೆಂದು ಗುರುತಿಸಿದ್ದ ವ್ಯಕ್ತಿಯನ್ನು ನ್ಯಾಯಾಲಯ ನಿರಪರಾಧಿ ಎಂದು ಖುಲಾಸೆಗೊಳಿಸಿರುವ ಹಿನ್ನೆಲೆಯಲ್ಲಿ, ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ನೈಜ ಅಪರಾಧಿಗಳು ಯಾರು ಎಂಬ ಪ್ರಶ್ನೆ ಇನ್ನೂ ಉಳಿದಿದೆ ಎಂದು ಹೇಳಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಅವರು ಪ್ರಕರಣದ ಮರುತನಿಖೆಗೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ತನಿಖೆ ನಡೆದ ರೀತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದೆ ಎಂದು ಆಂದೋಲನ ಹೇಳಿದೆ.
17 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ತನಿಖೆ ಮುಂದುವರಿದ ರೀತಿ ಹಾಗೂ ವಿವಿಧ ತನಿಖಾ ಸಂಸ್ಥೆಗಳು ಸಾಕ್ಷ್ಯಗಳನ್ನು ಸಂಗ್ರಹಿಸಿ ಪರಿಶೀಲಿಸಿದ ರೀತಿಯು ನ್ಯಾಯಾಲಯದ ಮನಸ್ಸನ್ನು ತೀವ್ರವಾಗಿ ಕದಡಿದೆ ಎಂದು ಸುಪ್ರೀಂಕೋರ್ಟ್ ದಾಖಲಿಸಿರುವುದನ್ನು ಆಂದೋಲನ ಉಲ್ಲೇಖಿಸಿದೆ.
‘SIT ರಚಿಸಿ, ಕಾಲಮಿತಿಯಲ್ಲಿ ತನಿಖೆ ಪೂರ್ಣಗೊಳಿಸಿ’
ಸುಪ್ರೀಂಕೋರ್ಟ್ ಆದೇಶವು ಪ್ರಕರಣದ ತನಿಖೆಯಲ್ಲಿ ನಡೆದಿರಬಹುದಾದ ಲೋಪದೋಷಗಳ ಬಗ್ಗೆ ನ್ಯಾಯಾಲಯ ವ್ಯಕ್ತಪಡಿಸಿರುವ ಆತಂಕವನ್ನು ಪ್ರತಿಬಿಂಬಿಸುತ್ತದೆ ಎಂದು ಆಂದೋಲನ ಹೇಳಿದೆ.
ರಾಜ್ಯದ ಗೃಹ ಸಚಿವರು ಕೂಡ ಸುಪ್ರೀಂಕೋರ್ಟ್ ಆದೇಶದ ಪ್ರತಿ ಕೈಸೇರಿದ ತಕ್ಷಣ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ SIT ರಚಿಸುವುದಾಗಿ ಹೇಳಿರುವುದನ್ನು ಆಂದೋಲನ ಸ್ವಾಗತಿಸಿದೆ.
ಸರ್ಕಾರದ ಮುಂದೆ ಹಲವು ಹಕ್ಕೊತ್ತಾಯ
‘ಕೊಂದವರು ಯಾರು?’ ಆಂದೋಲನವು ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ.
ಈ ಹಿಂದೆ ರಚನೆಯಾಗಿದ್ದ SIT ಸಲ್ಲಿಸಿರುವ ಸಮಗ್ರ ತನಿಖಾ ವರದಿಯನ್ನು ಸಾರ್ವಜನಿಕ ವಲಯಕ್ಕೆ ಬಿಡುಗಡೆ ಮಾಡಬೇಕು.
ಪ್ರಕರಣದ ಆರಂಭದಿಂದ ತನಿಖಾ ಸಂಸ್ಥೆಗಳನ್ನು ಹಾದಿ ತಪ್ಪಿಸಿದ ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವೈದ್ಯರು ಸೇರಿದಂತೆ ಸಂಬಂಧಪಟ್ಟವರನ್ನು ವಿಚಾರಣೆಗೆ ಒಳಪಡಿಸಬೇಕು.
ಸಾಕ್ಷ್ಯಗಳನ್ನು ನಾಶಪಡಿಸಿದವರು ಹಾಗೂ ಅವರಿಗೆ ರಕ್ಷಣೆ ನೀಡಿದ ಪ್ರಭಾವಿ ಶಕ್ತಿಗಳ ಬಗ್ಗೆ ತನಿಖೆ ನಡೆಸಬೇಕು.
ಯಾವುದೇ ರಾಜಕೀಯ ಅಥವಾ ಪ್ರಭಾವಿ ಶಕ್ತಿಗಳ ಒತ್ತಡಕ್ಕೆ ಮಣಿಯದೆ ದಕ್ಷ ಮತ್ತು ನಿಷ್ಪಕ್ಷಪಾತ ಅಧಿಕಾರಿಗಳನ್ನು ಒಳಗೊಂಡ SIT ರಚಿಸಬೇಕು.
ಸುಪ್ರೀಂಕೋರ್ಟ್ ನಿರ್ದೇಶನದಂತೆ ನಿರ್ದಿಷ್ಟ ಕಾಲಮಿತಿಯೊಳಗೆ ಮರುತನಿಖೆ ಪೂರ್ಣಗೊಳಿಸಬೇಕು.
ತನಿಖಾಧಿಕಾರಿಗಳ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು.
ಸೌಜನ್ಯ ಕುಟುಂಬ ಹಾಗೂ ಪ್ರಮುಖ ಸಾಕ್ಷಿಗಳಿಗೆ ಸಂಪೂರ್ಣ ಭದ್ರತೆ ಒದಗಿಸಬೇಕು.
ಹೊಸ ಸಾಕ್ಷಿಗಳು SIT ಅನ್ನು ಸಂಪರ್ಕಿಸಲು ಸಹಾಯವಾಣಿ ವ್ಯವಸ್ಥೆ ಕಲ್ಪಿಸಬೇಕು.
ಸಾಕ್ಷಿದಾರರ ಗುರುತು ಮತ್ತು ಗೌಪ್ಯತೆಯನ್ನು ಕಾಪಾಡುವುದರ ಜೊತೆಗೆ ಅಗತ್ಯ ರಕ್ಷಣೆ ನೀಡಬೇಕು.
ಇದಲ್ಲದೆ, ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಮಹಿಳೆಯರು ಮತ್ತು ಯುವತಿಯರ ಮೇಲಿನ ಅತ್ಯಾಚಾರ, ಕೊಲೆ, ನಾಪತ್ತೆ ಪ್ರಕರಣಗಳು ಹಾಗೂ ಇತರ ಅಸಹಜ ಸಾವುಗಳ ಬಗ್ಗೆಯೂ ಆಳವಾದ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಂದೋಲನ ಆಗ್ರಹಿಸಿದೆ.
“ಸೌಜನ್ಯಳನ್ನು ಕೊಂದವರು ಯಾರು?” ಎಂಬ ಪ್ರಶ್ನೆಗೆ ಸತ್ಯದ ಮೂಲಕ ಉತ್ತರ ದೊರೆಯಬೇಕು. ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಕಾನೂನಿನಡಿ ಶಿಕ್ಷಿಸುವುದು ಸರ್ಕಾರದ ಜವಾಬ್ದಾರಿ ಎಂದು ‘ಕೊಂದವರು ಯಾರು?’ ಆಂದೋಲನ ತನ್ನ ಹೇಳಿಕೆಯಲ್ಲಿ ಒತ್ತಾಯಿಸಿದೆ.

