ನವದೆಹಲಿ : ಕೇಂದ್ರ ಸರ್ಕಾರ, 2,000 ರೂ.ಗಿಂತ ಹೆಚ್ಚಿನ ವಹಿವಾಟುಗಳಿಗೆ ಶೇಕಡಾ 0.4 ರಷ್ಟು ‘ಮರ್ಚೆಂಟ್ ಡಿಸ್ಕೌಂಟ್ ರೇಟ್’ (MDR) ಅನ್ವಯವಾಗಲಿದ್ದು, ಪ್ರತಿ ವಹಿವಾಟಿಗೆ ಗರಿಷ್ಠ ಮಿತಿಯನ್ನು 300 ರೂ.ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ನಿಗದಿಪಡಿಸಿದೆ.
ಗ್ರಾಹಕರು ಯುಪಿಐ ಅನ್ನು ಉಚಿತವಾಗಿ ಬಳಸುವುದನ್ನು ಮುಂದುವರಿಸಲಿದ್ದಾರೆ. ಹಾಗೆಯೇ, ವ್ಯಕ್ತಿಯಿಂದ ವ್ಯಕ್ತಿಗೆ ನಡೆಯುವ ವಹಿವಾಟುಗಳು ಮತ್ತು 2,000 ರೂ.ವರೆಗಿನ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಪಾವತಿಗಳು MDR ವ್ಯಾಪ್ತಿಯಿಂದ ಹೊರಗಿರುತ್ತವೆ. ಒಟ್ಟು ಯುಪಿಐ P2M ವಹಿವಾಟುಗಳಲ್ಲಿ ಇಂತಹ ಕಡಿಮೆ ಮೌಲ್ಯದ ವಹಿವಾಟುಗಳೇ ಶೇ. 95 ಕ್ಕಿಂತ ಹೆಚ್ಚು ಪಾಲನ್ನು ಹೊಂದಿವೆ ಎಂದು ಸರ್ಕಾರ ತಿಳಿಸಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) , ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಜನವರಿ 2020 ರಲ್ಲಿ ಪರಿಚಯಿಸಲಾಗಿದ್ದ ‘ಶೂನ್ಯ-MDR’ (ಯಾವುದೇ ಶುಲ್ಕವಿಲ್ಲದ) ವ್ಯವಸ್ಥೆಯಿಂದ ಈ ಹೊಸ ಕ್ರಮವು ಬದಲಾವಣೆಯನ್ನು ಸೂಚಿಸುತ್ತದೆ. ಹಿಂದಿನ ವ್ಯವಸ್ಥೆಯು ಅದರ ಕಾರ್ಯಸಾಧ್ಯತೆಯ ಕುರಿತು ಬ್ಯಾಂಕುಗಳು ಮತ್ತು ಫಿನ್ಟೆಕ್ ಕಂಪನಿಗಳಿಂದ ಟೀಕೆಗೆ ಗುರಿಯಾಗಿತ್ತು.
ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ, ರೈಲ್ವೆ, ದೂರಸಂಪರ್ಕ ಸೇವೆಗಳು, ವಿಮೆ ಮತ್ತು ಇಂಧನದಂತಹ ನಿರ್ದಿಷ್ಟ ವ್ಯಾಪಾರಿ ವಿಭಾಗಗಳಲ್ಲಿ 2,000 ರೂ.ಗಿಂತ ಹೆಚ್ಚಿನ ಯುಪಿಐ ಪಾವತಿಗಳಿಗೆ ಪ್ರತಿ ವಹಿವಾಟಿಗೆ 5 ರೂ.ಗಳ ಸ್ಥಿರ MDR ಅನ್ವಯವಾಗುತ್ತದೆ.
‘ವ್ಯಕ್ತಿಯಿಂದ ವ್ಯಾಪಾರಿಗೆ’ (P2PM) ಚೌಕಟ್ಟಿನ ಅಡಿಯಲ್ಲಿ ಬರುವ ಸಣ್ಣ ವ್ಯಾಪಾರಿಗಳು ಶೂನ್ಯ MDR ಪಾವತಿಸುವುದನ್ನು ಮುಂದುವರಿಸುತ್ತಾರೆ. ಯುಪಿಐ ಕ್ಯೂಆರ್ (QR) ಪಾವತಿಗಳ ಮೂಲಕ ತಮ್ಮ ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಿಂಗಳಿಗೆ 1 ಲಕ್ಷ ರೂ.ವರೆಗೆ ಹಣ ಪಡೆಯುವ ಸಣ್ಣ ಮಾರಾಟಗಾರರು ಈ ವರ್ಗದ ವ್ಯಾಪ್ತಿಗೆ ಬರುತ್ತಾರೆ.
ವಿಶೇಷವಾಗಿ ಟೈಯರ್-3 ಮತ್ತು ಅದಕ್ಕಿಂತ ಚಿಕ್ಕ ಮಾರುಕಟ್ಟೆಗಳಲ್ಲಿ ಡಿಜಿಟಲ್ ಪಾವತಿ ಮೂಲಸೌಕರ್ಯವನ್ನು ಬೆಂಬಲಿಸಲು ಸಣ್ಣ ವ್ಯಾಪಾರಿಗಳಿಗಾಗಿ ಮೀಸಲಾದ ನಿಧಿಯನ್ನು ಸರ್ಕಾರ ಪ್ರಸ್ತಾಪಿಸಿದೆ. ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲಿನ MDR ಮೂಲಕ ಸಂಗ್ರಹವಾಗುವ ಆದಾಯದ ಒಂದು ಭಾಗವನ್ನು ಹೊಸ ಬಳಕೆದಾರರು ಮತ್ತು ವ್ಯಾಪಾರಿಗಳಲ್ಲಿ ಯುಪಿಐ ಬಳಕೆಯನ್ನು ವಿಸ್ತರಿಸಲು ಹಾಗೂ ವ್ಯವಸ್ಥೆಯ ದೃಢತೆ, ಸೈಬರ್ ಭದ್ರತೆ ಮತ್ತು ನಾವೀನ್ಯತೆಯ ಹೂಡಿಕೆಯನ್ನು ಬೆಂಬಲಿಸಲು ಬಳಸಲಾಗುವುದು ಎಂದು ಸರ್ಕಾರ ಹೇಳಿದೆ.
ಪರಿಷ್ಕೃತ ಚೌಕಟ್ಟು ಯುಪಿಐ ಆ್ಯಪ್ ಪೂರೈಕೆದಾರರು ಹೆಚ್ಚುವರಿ ಪ್ಲಾಟ್ಫಾರ್ಮ್ ಶುಲ್ಕಗಳನ್ನು ವಿಧಿಸುವುದನ್ನು ನಿಷೇಧಿಸುತ್ತದೆ ಮತ್ತು ವ್ಯಾಪಾರಿಗಳು MDR ವೆಚ್ಚವನ್ನು ಗ್ರಾಹಕರ ಮೇಲೆ ಹೊರಿಸದಂತೆ ಖಚಿತಪಡಿಸಿಕೊಳ್ಳಲು ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತದೆ.
ಕ್ರೆಡಿಟ್ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು ಮತ್ತು ವಾಲೆಟ್ಗಳಂತಹ ಇತರ ಡಿಜಿಟಲ್ ಪಾವತಿ ಸಾಧನಗಳಿಗೆ ಸಂಬಂಧಿಸಿದ ಶುಲ್ಕಗಳಿಗಿಂತ ಪರಿಷ್ಕೃತ MDR ಕಡಿಮೆಯಾಗಿರುತ್ತದೆ ಎಂದು ಸರ್ಕಾರ ತಿಳಿಸಿದೆ.
ಒಟ್ಟು ಯುಪಿಐ ವಹಿವಾಟಿನ ಪ್ರಮಾಣದಲ್ಲಿ ಸುಮಾರು ಶೇಕಡಾ 37 ರಷ್ಟು ಮತ್ತು ಮೌಲ್ಯದಲ್ಲಿ ಶೇಕಡಾ 70 ರಷ್ಟು ಪಾಲನ್ನು ಹೊಂದಿರುವ ‘ವ್ಯಕ್ತಿಯಿಂದ ವ್ಯಕ್ತಿಗೆ’ (P2P) ಯುಪಿಐ ವರ್ಗಾವಣೆಗಳ ಮೇಲೆ ಈ ಬದಲಾವಣೆಗಳು ಯಾವುದೇ ಪರಿಣಾಮ ಬೀರುವುದಿಲ್ಲ.

