ಬೆಂಗಳೂರು, ಸೆ.11 : ನವೆಂಬರ್ 1ನೇ ತಾರೀಕಿನೊಳಗೆ ಪರವಾನಗಿ ಇಲ್ಲದ ಅಕ್ರಮ ಬಂದೂಕು ಶಸ್ತ್ರಾಸ್ತ್ರಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ .ಶಿವಕುಮಾರ್ ತಿಳಿಸಿದರು.
ನಗರದ ಅರಣ್ಯ ಭವನದಲ್ಲಿ ಕರ್ನಾಟಕ ಸರ್ಕಾರ ಹಾಗೂ ಅರಣ್ಯ ಇಲಾಖೆಯ ವತಿಯಿಂದ ಆಯೋಜಿಸಲಾಗಿದ ‘ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ–2026’ ಕಾರ್ಯಕ್ರಮದಲ್ಲಿ ಅರಣ್ಯ ಹುತಾತ್ಮರಿಗೆ ಹೂಗುಚ್ಛ ಸಮರ್ಪಿಸಿ ಅವರು ಮಾತನಾಡಿದರು.
ಅಕ್ರಮವಾಗಿ ಹೊಂದಿರುವ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗುವುದು. ಅಕ್ರಮ ಶಸ್ತ್ರಾಸ್ತ್ರಗಳನ್ನು ತಾವಾಗಿಯೇ ಒಪ್ಪಿಸಿದರೆ ಯಾವುದೇ ಪ್ರಕರಣ ದಾಖಲಿಸುವುದಿಲ್ಲ. ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳು ಪರವಾನಗಿ ಇಲ್ಲದೇ ಇರುವ ಬಂದೂಕುಗಳಿಂದಲೇ ಜೀವ ಕಳೆದುಕೊಂಡಿದ್ದಾರೆ. ನೀವು ನಿಮ್ಮ ಹಾಗೂ ನಿಮ್ಮ ಪ್ರಾಣಿಗಳ ರಕ್ಷಣೆಗಾಗಿ ಬಂದೂಕು ಇಟ್ಟುಕೊಳ್ಳುವುದಾದರೆ ಪರವಾನಗಿ ಪಡೆಯಿರಿ ಎಂದರು.
ಜನ ಸಾಮಾನ್ಯರು ಪೊಲೀಸರನ್ನು ಒಪ್ಪಿಕೊಳ್ಳುತ್ತಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ಒಪ್ಪುವುದಿಲ್ಲ. ಅರಣ್ಯ ಅಂಚಿನ ಜನರೊಂದಿಗೆ ಸ್ನೇಹದ ವಾತಾವರಣ ನಿರ್ಮಿಸಿಕೊಳ್ಳಿ. ಅರಣ್ಯ ಒತ್ತುವರಿ ಇಂದು ನೆನ್ನೆಯದಲ್ಲ. ಅದನ್ನು ಕಾನೂನು ಪ್ರಕಾರ ಅದನ್ನು ಬಗೆಹರಿಸೋಣ ಎಂದು ತಿಳಿಸಿದರು.
ಈ ಭೂಮಿ ನಮಗೆ ಸೇರಿದ್ದಲ್ಲ. ಆದರೆ ಭೂಮಿ ಕಾಪಾಡಬೇಕಿರುವುದು ನಮ್ಮ ಕರ್ತವ್ಯ. ಎಷ್ಟೇ ದೊಡ್ಡವರಾದರೂ ಕೊನೆಗೆ ಭೂಮಿಗೆ ಸೇರುತ್ತೇವೆ. ಚಿತೆಯಲ್ಲಿ ಸುಡುವ ಮರವೂ ಭೂಮಿ ಮೇಲೆಯೇ ಬೆಳೆಯುತ್ತದೆ. ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳು ಈ ಇಲಾಖೆಯಲ್ಲಿದ್ದಾರೆ. ಇವರಿಂದ ಅನೇಕ ಕಡೆ ಕಾಡು ಸುರಕ್ಷಿತವಾಗಿದೆ ಎಂದರು.
ದೇಶದ ಅರಣ್ಯ ಸಂಪತ್ತನ್ನು ಕಾಪಾಡುವವರು ನೀವು. ವನ್ಯಜೀವಿಗಳ ಜೊತೆ ಸಂಘರ್ಷ ಏರ್ಪಟ್ಟು ಅನೇಕ ಸಿಬ್ಬಂದಿಗಳು ಪ್ರಾಣ ತ್ಯಾಗ ಮಾಡಿದ್ದಾರೆ. ಇಲಾಖೆಯ ಸಿಬ್ಬಂದಿಗಳ ಭತ್ಯೆಯ ವಿಚಾರವಾಗಿ ಸಚಿವರ ಮನವಿಯ ಬಗ್ಗೆ ಆಲೋಚಿಸಲಾಗುವುದು. ಆರ್ಥಿಕ ಇಲಾಖೆಯ ಬಳಿ ಚರ್ಚೆ ನಡೆಸಿ ಪೊಲೀಸ್ ಇಲಾಖೆಯನ್ನೂ ಒಳಗೊಂಡಂತೆ ಒಟ್ಟಾಗಿ ತೀರ್ಮಾನ ಮಾಡಲಾಗುವುದು ಎಂದರು.
ನಗರದಲ್ಲಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗಗಳಲ್ಲಿ ಟ್ರೀ ಪಾರ್ಕ್ ಗಳನ್ನು ನಿರ್ಮಾಣ ಮಾಡಿ ನಗರದ ಶ್ವಾಸಕೋಶವನ್ನು ಹಿಗ್ಗಿಸುವ ಕೆಲಸ ಮಾಡಲಾಗುವುದು. ಶಾಲಾ ಮಕ್ಕಳಿಂದ ಗಿಡ ನೆಡುವ ಕೆಲಸ ಮಾಡಿಸಲಾಗಿತ್ತು. ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಪಾಲಿಕೆಗಳು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.

