ತುಮಕೂರು ಸೆ. 05 : ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿಗಳಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರವೇ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಸಲುವಾಗಿ ಪ್ರಜಾಸೇವಾ ಇಲಾಖೆಯನ್ನು ಇಂದಿನಿಂದ ಆರಂಭಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಹೇಳಿದರು.
ಪ್ರಜಾ ಸೇವಾ ಇಲಾಖೆ ಹಾಗೂ ತುಮಕೂರು ಜಿಲ್ಲಾಡಳಿತದ ವತಿಯಿಂದ ಗುಬ್ಬಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ‘ಪ್ರಜಾ ಸೇವಾ ಅಭಿಯಾನ ಜನಸಭೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಇಡೀ ದೇಶದಲ್ಲಿ ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಅದೇ ದಿನ ಪ್ರಜಾಸೇವಾ ಅಭಿಯಾನ ಆಚರಿಸಬೇಕು ಎಂದು ಮುಖ್ಯಮಂತ್ರಿ ಅವರು ಕರೆ ಕೊಟ್ಟಿದ್ದರು. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು ಈ ನೂತನ ಕಾರ್ಯಕ್ಕೆ ಚಾಲನೆ ನೀಡುತ್ತಿದ್ದಾರೆ ಎಂದರು.
ಯಾವುದೇ ಇಲಾಖೆಯ ಸಮಸ್ಯೆಗಳನ್ನು ನೇರವಾಗಿ ಪ್ರಜಾಸೇವೆ ಇಲಾಖೆಯಡಿ ದಾಖಲಿಸಿದರೆ, ಸಂಬಂಧಪಟ್ಟ ಅಧಿಕಾರಿಗಳು ಅದನ್ನು ಸಕಾಲದಲ್ಲಿ ಪರಿಹರಿಸಿಕೊಡುವ ಕೆಲಸ ಮಾಡಿಕೊಡಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರತಿ ತಿಂಗಳು ಮೊದಲನೆ ಮತ್ತು ಮೂರನೇ ಶನಿವಾರದಂದು ಪ್ರತಿ ತಾಲ್ಲೂಕಿನಲ್ಲಿ ಅಭಿಯಾನ ನಡೆಸಲಾಗುತ್ತದೆ. ನಂತರ ಹೋಬಳಿ ಮಟ್ಟದಲ್ಲಿ ಪ್ರಜಾಸೇವಾ ಅಭಿಯಾನ ಸಭೆ ನಡೆಸಲಾಗುವುದು. ಇದು ನಿರಂತರವಾಗಿ ನಡೆಯಲಿದ್ದು, ಇಂದು ಅರ್ಜಿ ನೀಡಲು ಸಾಧ್ಯವಾಗದವರು ಮೂರನೇ ಶನಿವಾರ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರಿಂದ ಬರುವ ಅರ್ಜಿಗಳಿಗೆ ಪ್ರಾಮುಖ್ಯತೆ ಕೊಟ್ಟು, ಸರ್ಕಾರ ಜನರ ಸಮಸ್ಯೆಗಳನ್ನು ಬಗೆಹರಿಸಿಕೊಡುವ ಕೆಲಸ ಮಾಡಲಿದೆ ಎಂದರು.
ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಹಳಷ್ಟು ಟೀಕೆಗಳು ಕೇಳಿಬಂದವು. ಯಾರಿಗೆ ಸಹಾಯ ಹಸ್ತದ ನಿರೀಕ್ಷೆಯಿತ್ತು, ಸರ್ಕಾರದಿಂದ ಸಹಾಯ ಬೇಕಾಗಿತ್ತು ಅಂತವರಿಗೆ ಗ್ಯಾರಂಟಿ ಯೋಜನೆಗಳು ಹೆಚ್ಚು ಅನುಕೂಲವಾಗಿವೆ. ಕೂಲಿ ಮಾಡುವವರಿಗೆ, ಬಡವರ ಜೀವನಕ್ಕೆ ಸಹಾಯವಾಗುತ್ತಿದೆ. ಕೂಲಿ ಮಾಡುವ ಹೆಣ್ಣು ಮಗಳಿಗೆ ಎರಡು ಸಾವಿರ ರೂ. ದೊಡ್ಡದು. ಆಕೆಗೆ ಎರಡು ಸಾವಿರ ರೂಪಾಯಿ ಎರಡು ಲಕ್ಷದ ಮೌಲ್ಯಕ್ಕೆ ಸಮ.
ಚಾಮರಾಜನಗರ ಜಿಲ್ಲಾ ಪ್ರವಾಸ ಕೈಗೊಂಡಾಗ ‘ಅಜ್ಜಿಯೊಬ್ಬರಿಗೆ ಎರಡು ಸಾವಿರ ರೂ. ಬರುತ್ತದೆಯೇ ಎಂದು ವಿಚಾರಿಸಿದೆ. ಆಗ ಅವರು ಈ ಹಣ ನನಗೆ ಔಷಧ ತೆಗೆದುಕೊಳ್ಳಲು ಸಹಾಯವಾಗುತ್ತಿದ್ದು, ನಾನು ಬದುಕಿರುವುದೇ ಈ ಎರಡು ಸಾವಿರ ರೂ. ಹಣದಿಂದ’ ಎಂಬ ಮಾತನ್ನು ಹೇಳಿದರು. ಇದನ್ನು ಕೇಳಿದ ನನಗೆ ನಮ್ಮ ಕಾರ್ಯಕ್ರಮ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿತು ಎಂದರು.
ಶಕ್ತಿ ಯೋಜನೆಯಿಂದ ಪ್ರೇರಣೆ ಪಡೆದು ಅಮೆರಿಕಾದ ನಗರವೊಂದರ ಮೇಯರ್ ಅಲ್ಲಿನ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಪ್ರಧಾನಮಂತ್ರಿಯವರು ನಮ್ಮ ಗ್ಯಾರಂಟಿ ಯೋಜನೆಯನ್ನು ಕಾಪಿ ಹೊಡೆದರು. ಎಲ್ಲ ರಾಜ್ಯದಲ್ಲೂ ಕರ್ನಾಟಕದ ಗ್ಯಾರಂಟಿ ಯೋಜನೆಗಳನ್ನು ಬೇರೆ ಬೇರೆ ರೂಪದಲ್ಲಿ ಅನುಷ್ಠಾನಗೊಳಿಸಲಾಗಿದೆ. ಇದು ನಮ್ಮ ಗ್ಯಾರಂಟಿ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ನಾನು ಕಂದಾಯ ಇಲಾಖೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬಳಿಕ ಹೊಸ ಯೋಜನೆಯನ್ನು ಹಾಕಿಕೊಂಡಿದ್ದೇನೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಬೇಕು ಎಂಬುದು ನನ್ನ ಆಶಯ. ಬಡವರಿಗೆ 3್ಠ040 ಅಳತೆಯ ನಿವೇಶನವನ್ನು ಉಚಿತವಾಗಿ ನೀಡಲಾಗುವುದು. ರಾಜ್ಯಾದ್ಯಂತ 15 ಲಕ್ಷಕ್ಕೂ ಹೆಚ್ಚು ನಿವೇಶನ ಕೊಡುವ ಯೋಜನೆ ಹಾಕಿಕೊಳ್ಳಲಾಗಿದೆ.
ಬಹಳಷ್ಟು ಜನರಿಗೆ ಜಾಗ ಇಲ್ಲ, ಮನೆಯೂ ಇಲ್ಲ. ನಿವೇಶನ ನೀಡಿದರೆ ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ. ಅವರ ಬದುಕಲ್ಲಿ ನೆಮ್ಮದಿ ಮೂಡುತ್ತದೆ. ಲಭ್ಯ ಇರುವ ಸರ್ಕಾರಿ ಜಾಗದಲ್ಲಿ ನಿವೇಶನ ಸಿದ್ಧಪಡಿಸಿ, ಬಡವರಿಗೆ ಕೊಡುವ ಕೆಲಸ ಮಾಡಲು ಹೊರಟಿದ್ದೇವೆ. ಶಾಸಕರ ಮೂಲಕ ಗ್ರಾಮ ಸಭೆಗಳನ್ನು ಮಾಡಿ, ಬಡವರಿಗೆ ನಿವೇಶನ ಹಂಚಿಕೆ ಮಾಡಲಾಗುತ್ತದೆ ಎಂದು ಹೇಳಿದರು.
ಇಡೀ ರಾಜ್ಯದಲ್ಲಿ ಭೀಕರ ಬರ ಎದುರಾಗಿದೆ. ಯಾವತ್ತು ಈ ರೀತಿಯ ಬರ ಬಂದಿಲ್ಲ. ಈ ರೀತಿಯ ಬರ 150 ವರ್ಷದ ಹಿಂದೆ ಬಂದಿತ್ತು ಎಂದು ಹೇಳಲಾಗುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಯಾವ ಬೆಳೆಯೂ ಇಲ್ಲ. ಸೂರ್ಯಕಾಂತಿ, ಜೋಳ, ಹೂವು, ನಂಜನಗೂಡು ರಸಬಾಳೆ ತೋಟಗಳು ಒಣಗುತ್ತಿವೆ. ಹಳ್ಳಿಹಳ್ಳಿಯಲ್ಲಿ ನೀರಿಗೆ ಹಾಹಾಕಾರ ಆರಂಭವಾಗಿದೆ. ಇದನ್ನು ನೋಡಿದಾಗ ಮನಸ್ಸಿಗೆ ನೋವಾಗುತ್ತದೆ ಎಂದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿಗಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದು ಕೋಟಿ ರೂ.ನೀಡಲಾಗಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 329 ಕೋಟಿ ರೂ.ನೀಡಲಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸೂಚಿಸಿದ್ದೇನೆ. ಬರದಿಂದ ಜನ ಗುಳೆ ಹೋಗುವುದನ್ನು ತಪ್ಪಿಸಲು ಶಾಸಕರೊಂದಿಗೆ ಚರ್ಚಿಸಿ ವಿಬಿಜಿರಾಮ್‍ಜಿ ಯೋಜನೆಯಡಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಗುಬ್ಬಿ ಶಾಸಕರು ಹಾಗೂ ಕೆಎಸ್‍ಆರ್‍ಟಿಸಿ ಅಧ್ಯಕ್ಷರಾದ ಎಸ್.ಆರ್.ಶ್ರೀನಿವಾಸ್, ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಹೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದೀಪಾ ಚೋಳನ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜ .ಬಿ.ವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಗೌಡ ಮುಂತಾದವರು ಇದ್ದರು.

