ಬೆಂಗಳೂರು ಸೆ.3: ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5ರಷ್ಟು ಜಾಗವನ್ನು ಮಾರಾಟ ಅಥವಾ ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದ್ದ ಕರ್ನಾಟಕ ಉದ್ಯಾನವನ ಸಂರಕ್ಷಣೆ ತಿದ್ದುಪಡಿ ವಿಧೇಯಕವನ್ನು ಸರ್ಕಾರ ವಾಪಸ್ ಪಡೆಯಲು ನಿರ್ಧರಿಸಿದೆ.
ವಿಧೇಯಕಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ವಿಧೇಯಕವನ್ನು ವಾಪಸ್ ಪಡೆಯಲು ತೀರ್ಮಾನಿಸಲಾಗಿದೆ. ಮುಂಬರುವ ಅಧಿವೇಶನದಲ್ಲಿ ಉಭಯ ಸದನಗಳಲ್ಲೂ ವಿಧೇಯಕವನ್ನು ವಾಪಸ್ ಪಡೆಯುವ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರ ನಿರ್ಧರಿಸಿದೆ.
ಈ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಈಗಾಗಲೇ ವಿಧಾನಸಭೆ ಹಾಗೂ ವಿಧಾನ ಪರಿಷತ್ನಲ್ಲಿ ಅಂಗೀಕರಿಸಿಕೊಂಡಿತ್ತು. ಆದರೆ, ಪಾರ್ಕ್ಗಳ ಜಾಗವನ್ನು ಮಾರಾಟ ಮಾಡಲು ಸರ್ಕಾರ ಅವಕಾಶ ನೀಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಸೇರಿದಂತೆ ವಿವಿಧ ವಲಯಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.
ವಿಧೇಯಕದ ಬಗ್ಗೆ ಆಡಳಿತಾರೂಢ ಪಕ್ಷದೊಳಗೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಇದೀಗ ಹೆಚ್ಚುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಸರ್ಕಾರ ವಿಧೇಯಕವನ್ನು ವಾಪಸ್ ಪಡೆಯುವ ನಿರ್ಧಾರ ಕೈಗೊಂಡಿದೆ.
ಪಾರ್ಕ್ಗಳ ಜಾಗವನ್ನು ಖಾಸಗಿ ಉದ್ದೇಶಗಳಿಗೆ ಬಳಸಲು ಅವಕಾಶ ಕಲ್ಪಿಸುವುದರಿಂದ ಬೆಂಗಳೂರಿನಂತಹ ನಗರಗಳಲ್ಲಿ ಸಾರ್ವಜನಿಕ ಹಸಿರು ಪ್ರದೇಶಗಳು ಕಡಿಮೆಯಾಗುವ ಅಪಾಯವಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ತೀವ್ರ ರಾಜಕೀಯ ಮತ್ತು ಸಾರ್ವಜನಿಕ ವಿರೋಧದ ಬೆನ್ನಲ್ಲೇ ಸರ್ಕಾರ ವಿಧೇಯಕ ವಾಪಸ್ ಪಡೆಯಲು ಮುಂದಾಗಿರುವುದು ಮಹತ್ವದ ಬೆಳವಣಿಗೆಯಾಗಿದೆ.

