ಬೆಂಗಳೂರು : ನಗರದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮನವಿ ಮಾಡಿದರು.
ಗೌರಿ ಗಣೇಶೋತ್ಸವದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಜಿಬಿಎ ಹಾಗೂ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ “ಶಾಂತಿ ಸೌಹಾರ್ದತೆ” ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲಾದ ಗಣೇಶ ಮೂರ್ತಿಗಳ ಬಳಕೆಯನ್ನು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಂಪೂರ್ಣವಾಗಿ ನಿಷೇಧಿಸಿದೆ. ಆದ್ದರಿಂದ ಈ ಬಾರಿ ಗೌರಿ ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು. ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನೇ ಪ್ರತಿಷ್ಠಾಪಿಸಿ ಪೂಜಿಸಬೇಕು ಎಂದು ಹೇಳಿದರು.
ಗಣೇಶೋತ್ಸವವನ್ನು ನಾವೆಲ್ಲರೂ ಒಗ್ಗೂಡಿ ವಿಶೇಷವಾಗಿ ಆಚರಿಸಬೇಕು. ಈ ನಿಟ್ಟಿನಲ್ಲಿ ಗಣೇಶೋತ್ಸವವು ಸುಸೂತ್ರವಾಗಿ ನಡೆಯಲು ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪೊಲೀಸ್ ಠಾಣಾವಾರು ಪಾಲಿಕೆ, ಪೊಲೀಸ್ ಹಾಗೂ ಬೆಸ್ಕಾಂ ಅಧಿಕಾರಿಗಳು ಸಭೆ ನಡೆಸಿ, ಗಣೇಶೋತ್ಸವಕ್ಕೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದರು.
ರಸ್ತೆ ಹಾಗೂ ಪಾದಚಾರಿ ಮಾರ್ಗಗಳು ದುರಸ್ತಿಯಲ್ಲಿರುವ ಕಡೆಗಳಲ್ಲಿ ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಕೆರೆಗಳ ಬಳಿಯಿರುವ ಕಲ್ಯಾಣಿ/ವಿಸರ್ಜನಾ ಕೇಂದ್ರಗಳಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಗಣೇಶೋತ್ಸವದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಉತ್ತಮ ರೀತಿಯಲ್ಲಿ ಹಾಗೂ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸೋಣ ಎಂದರು.
ತಡವಾಗಿ ಬಂದರೂ ವಿಸರ್ಜನೆಗೆ ಅವಕಾಶ:
ಕೆರೆಗಳ ಬಳಿಯಿರುವ ಕಲ್ಯಾಣಿಗಳನ್ನು ಬೇಗ ಮುಚ್ಚಲಾಗುತ್ತದೆ ಎಂಬ ನಾಗರಿಕರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಾರಿ ಕಲ್ಯಾಣಿಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ತಡವಾಗಿ ಬಂದರೂ ಅವಕಾಶ ಕಲ್ಪಿಸಲಾಗುವುದು. ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಕೆರೆಗಳ ಬಳಿಯಿರುವ ಕಲ್ಯಾಣಿಗಳ ಹೊರತಾಗಿ ಬೇರೆ ಸ್ಥಳಗಳಲ್ಲಿ ವಿಸರ್ಜನಾ ವ್ಯವಸ್ಥೆ ಕಲ್ಪಿಸುವಂತೆ ಮನವಿ ಬಂದಲ್ಲಿ, ಅದಕ್ಕೂ ಅಗತ್ಯ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಏಕಗವಾಕ್ಷಿ ಕೇಂದ್ರಗಳ ವ್ಯವಸ್ಥೆ:
ಗಣೇಶೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಉಪವಿಭಾಗ ಕಚೇರಿಗಳಲ್ಲಿ ಪಾಲಿಕೆ, ಪೊಲೀಸ್, ಬೆಸ್ಕಾಂ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಿ ಏಕಗವಾಕ್ಷಿ ಕೇಂದ್ರಗಳನ್ನು ತೆರೆಯಲಾಗುವುದು.
ಏಕಗವಾಕ್ಷಿ ಕೇಂದ್ರಗಳ ವಿಳಾಸ ಹಾಗೂ ಅಲ್ಲಿ ನಿಯೋಜಿಸಲಾಗುವ ನೋಡಲ್ ಅಧಿಕಾರಿಗಳ ವಿವರಗಳನ್ನು ಶೀಘ್ರದಲ್ಲೇ ಪಾಲಿಕೆಯ ವೆಬ್‌ಸೈಟ್ ಮೂಲಕ ಪ್ರಕಟಿಸಲಾಗುವುದು. ಅದರಂತೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಉದ್ದೇಶಿಸಿರುವವರು ಏಕಗವಾಕ್ಷಿ ಕೇಂದ್ರಕ್ಕೆ ಭೇಟಿ ನೀಡಿ ಒಂದೇ ಸ್ಥಳದಲ್ಲಿ ಅಗತ್ಯ ಅನುಮತಿಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು ಮಾತನಾಡಿ, ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸುವ್ಯವಸ್ಥಿತವಾಗಿ ಆಚರಿಸಲು ಪೊಲೀಸ್ ಇಲಾಖೆಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ಹಾಗೂ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೌಲಭ್ಯಗಳು ಹಾಗೂ ವ್ಯವಸ್ಥೆಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಲ್ಪಿಸಲಾಗುವುದು. ಸಾರ್ವಜನಿಕರು ಯಾವುದೇ ರೀತಿಯ ತೊಂದರೆ ಅನುಭವಿಸದಂತೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು.
ಗಣೇಶೋತ್ಸವದ ಮೆರವಣಿಗೆಯನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪ್ರಾರಂಭಿಸುವುದು ಅತ್ಯಂತ ಮುಖ್ಯವಾಗಿದೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಸಂಚಾರ ವ್ಯವಸ್ಥೆಗೆ ಯಾವುದೇ ಅಡಚಣೆಯಾಗದಂತೆ ಮೆರವಣಿಗೆಯ ಮಾರ್ಗ ಹಾಗೂ ಸಮಯದ ಕುರಿತು ಅಗತ್ಯ ನಿರ್ದೇಶನಗಳನ್ನು ನೀಡಲಾಗುವುದು. ಸಂಘಟಕರು ಹಾಗೂ ಸಾರ್ವಜನಿಕರು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದರು.
ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡುವುದಿಲ್ಲ. ನಿಯಮ ಉಲ್ಲಂಘಿಸುವವರು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪಿಓಪಿ ಗಣೇಶ ಮೂರ್ತಿಗಳಿಗೆ ಅವಕಾಶವಿಲ್ಲ:
ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಬಳಕೆಯನ್ನು ನಿಷೇಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಪಿಓಪಿಯಿಂದ ತಯಾರಿಸಲಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶ ನೀಡುವುದಿಲ್ಲ. ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಮೆರವಣಿಗೆಯಲ್ಲಿ ಮದ್ಯಪಾನಕ್ಕೆ ಕಡಿವಾಣ:
ಗಣೇಶೋತ್ಸವದ ಮೆರವಣಿಗೆಯಲ್ಲಿ ಮದ್ಯಪಾನ ಮಾಡಿ ಭಾಗವಹಿಸುವವರ ಬಗ್ಗೆ ಸ್ವಯಂಸೇವಕರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸ್ವಯಂಸೇವಕರು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯನಿರ್ವಹಿಸಿದರೆ ಗಣೇಶೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಲಿದೆ ಎಂದರು.
ಮೂಲಭೂತ ವ್ಯವಸ್ಥೆ ಕಲ್ಪಿಸಲು ಕ್ರಮ:
ಮೆರವಣಿಗೆಯ ಮಾರ್ಗದಲ್ಲಿ ಅಗತ್ಯವಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸುವುದು, ವಿದ್ಯುತ್ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಂಬಂಧಿಸಿದ ಇಲಾಖೆಗಳ ಸಹಯೋಗದೊಂದಿಗೆ ಕಲ್ಪಿಸಲಾಗುವುದು. ಈಗಾಗಲೇ ಇರುವ ಸಮಸ್ಯೆಗಳನ್ನು ಗುರುತಿಸಿ ಸೂಕ್ತವಾಗಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಮನವಿ:
ಗಣೇಶೋತ್ಸವದ ಸಂದರ್ಭದಲ್ಲಿ ಯಾರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಯಾವುದೇ ಚಟುವಟಿಕೆಗಳಲ್ಲಿ ತೊಡಗಬಾರದು. ಶಾಂತಿಯುತವಾಗಿ ಹಬ್ಬವನ್ನು ಆಚರಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವ ಸಂಘಟಕರು ಹಾಗೂ ಸಾರ್ವಜನಿಕರ ಸಹಕಾರವನ್ನು ಶ್ಲಾಘಿಸಲಾಗುವುದು ಎಂದು ತಿಳಿಸಿದರು.
ಸೌಹಾರ್ದತೆ ಸಭೆಯಲ್ಲಿ ನಾಗರಿಕರಿಂದ ಬಂದ ಪ್ರಮುಖ ಸಲಹೆಗಳು:
- ನಗರದಲ್ಲಿ ಕೆಲವು ಕೆರೆಗಳ ಕಲ್ಯಾಣಿಗಳಲ್ಲಿ ಮಾತ್ರ ಗಣೇಶ ಮೂರ್ತಿ ವಿಸರ್ಜನೆಗೆ ಅವಕಾಶ ನೀಡಲಾಗಿದ್ದು, ಇನ್ನೂ ಹೆಚ್ಚಿನ ಕೆರೆಗಳಲ್ಲಿ ತಾತ್ಕಾಲಿಕ ಕಲ್ಯಾಣಿಗಳನ್ನು ನಿರ್ಮಿಸಿ ವಿಸರ್ಜನೆಗೆ ಅವಕಾಶ ಕಲ್ಪಿಸುವಂತೆ ಮನವಿ.
- ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮನವಿ.
- ಸುರಕ್ಷತೆಯ ದೃಷ್ಟಿಯಿಂದ ರಸ್ತೆಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಅವಕಾಶ ನೀಡದಂತೆ ಮನವಿ.
- ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಮನವಿ.
- ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಮದ್ಯಪಾನವನ್ನು ಕಡ್ಡಾಯವಾಗಿ ನಿಷೇಧಿಸುವಂತೆ ಮನವಿ.
- ಗಣೇಶ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯ ಸಮಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳುವಂತೆ ಮನವಿ.
- ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಬೆಸ್ಕಾಂ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡು ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ನೋಡಿಕೊಳ್ಳುವಂತೆ ಮನವಿ.
- ಗಣೇಶ ಮೆರವಣಿಗೆಯ ಸಂದರ್ಭದಲ್ಲಿ ಅನಧಿಕೃತ ಕೇಬಲ್‌ಗಳಿಂದ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಅವುಗಳನ್ನು ತೆರವುಗೊಳಿಸುವಂತೆ ಮನವಿ.
- ಕೆರೆಗಳ ಬಳಿಯಿರುವ ಕಲ್ಯಾಣಿಗಳಲ್ಲಿ ವಿಸರ್ಜನೆ ಮಾಡಿದ ಬಳಿಕ ಗಣೇಶ ಮೂರ್ತಿಗಳನ್ನು ರಸ್ತೆ ಬದಿಯಲ್ಲಿ ಇಟ್ಟು ಹೋಗುವುದನ್ನು ತಪ್ಪಿಸಿ, ತ್ವರಿತವಾಗಿ ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಮನವಿ.
- ಗಣೇಶ ವಿಸರ್ಜನಾ ಮಾರ್ಗಗಳಲ್ಲಿ ರಸ್ತೆ ದುರಸ್ತಿ ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸುವಂತೆ ಮನವಿ.
- ಗಣೇಶ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಸಂಚಾರ ದಟ್ಟಣೆ ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ.
- ರಸ್ತೆ ಕಾಮಗಾರಿ ಪೂರ್ಣಗೊಂಡಿರುವ ಪ್ರದೇಶಗಳಲ್ಲಿ ಸಂಪೂರ್ಣ ಸ್ವಚ್ಛತೆ ಕೈಗೊಂಡು, ಮೆರವಣಿಗೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಕ್ರಮವಹಿಸುವಂತೆ ಮನವಿ.
- ಎಲ್ಲಾ ಸಮುದಾಯಗಳನ್ನು ಒಂದೇ ಎಂಬ ಭಾವನೆಯಿಂದ ನೋಡುವ ಹಾಗೂ ಪರಸ್ಪರ ಸೌಹಾರ್ದತೆಯಿಂದ ಬದುಕುವ ಮನೋಭಾವವನ್ನು ಬೆಳೆಸುವಂತೆ ಮನವಿ.
ಸಭೆಯಲ್ಲಿ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ನಗರ ಪಾಲಿಕೆ ಅಪರ ಆಯುಕ್ತರಾದ ಆರ್. ಲತಾ, ನವೀನ್ ಕುಮಾರ್ ರಾಜು, ಜಿಬಿಎ, ಬೆಸ್ಕಾಂ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪೊಲೀಸ್ ಹಾಗೂ ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು, ಗಣೇಶ ಪ್ರತಿಷ್ಠಾಪನಾ ಸಮಿತಿಗಳ ಆಯೋಜಕರು, ವಿವಿಧ ಸಮುದಾಯಗಳ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

