ಮುಂಬೈ: ಮೂತ್ರಪಿಂಡದ ಸೋಂಕಿನ ಹಿನ್ನಲೆ, ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಮುಂಬೈನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಅವರ ಸಹಾಯಕ ದತ್ತಾ ಅವರಿ ಮಂಗಳವಾರ ತಿಳಿಸಿದ್ದಾರೆ.
ಅಹಲ್ಯನಗರ ಜಿಲ್ಲೆಯ ತಮ್ಮ ಸ್ವಗ್ರಾಮವಾದ ರಾಳೆಗಾಂಧ್ ಸಿದ್ಧಿಯಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಸ್ಥಳೀಯ ವೈದ್ಯಕೀಯ ಕೇಂದ್ರವೊಂದರಲ್ಲಿ ದಾಖಲಾಗಿದ್ದ 89 ವರ್ಷದ ಹಜಾರೆ ಅವರನ್ನು, ಸೋಮವಾರ ರಾತ್ರಿ ದಕ್ಷಿಣ ಮುಂಬೈನ ಬಾಂಬೆ ಆಸ್ಪತ್ರೆಗೆ ಕರೆತರಲಾಯಿತು. ಅಣ್ಣಾ ಅವರ ರಕ್ತ ಪರೀಕ್ಷಾ ವರದಿಗಳ ಪ್ರಕಾರ ಅವರಿಗೆ ಮೂತ್ರಪಿಂಡದ ಸೋಂಕು ಇತ್ತು, ಆದರೆ ಈಗ ಅವರು ಚೇತರಿಸಿಕೊಂಡಿದ್ದಾರೆ ಎಂದು ಅವರಿ ಹೇಳಿದರು.
ಭ್ರಷ್ಟಾಚಾರ ವಿರೋಧಿ ಹೋರಾಟಗಾರರನ್ನು ಕಳೆದ ವಾರ ಅಹಲ್ಯಾ ನಗರದ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು ಮತ್ತು ಅವರು ಚೇತರಿಸಿಕೊಂಡಿದ್ದರು. ಬಾಂಬೆ ಆಸ್ಪತ್ರೆಯ ವೈದ್ಯರು ಹಜಾರೆ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸುತ್ತಿದ್ದರು.
ಮಾಜಿ ಸೈನಿಕರಾದ ಈ ಕಾರ್ಯಕರ್ತರು, ಗ್ರಾಮೀಣ ಅಭಿವೃದ್ಧಿಯನ್ನು ಉತ್ತೇಜಿಸಲು, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಹಲವು ವರ್ಷಗಳಿಂದ ಅನೇಕ ಚಳುವಳಿಗಳನ್ನು ಮುನ್ನಡೆಸಿದ್ದಾರೆ.
2011ರಲ್ಲಿ ಹಜಾರೆ ಅವರ ನೇತೃತ್ವದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಚಳುವಳಿಯು ನವದೆಹಲಿಯಲ್ಲಿ ನಡೆದ ಅತಿದೊಡ್ಡ ಸಾರ್ವಜನಿಕ ಜನಾಂದೋಲನಗಳಲ್ಲಿ ಒಂದಾಗಿತ್ತು. ಬಲವಾದ ಲೋಕಪಾಲ ಕಾನೂನನ್ನು ಜಾರಿಗೆ ತರುವಂತೆ ಆಗ್ರಹಿಸಿ ಅವರು ನಡೆಸಿದ 13 ದಿನಗಳ ಉಪವಾಸ ಸತ್ಯಾಗ್ರಹವು ಅಪಾರ ಸಂಖ್ಯೆಯ ಜನರನ್ನು ಆಕರ್ಷಿಸಿತ್ತು. ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪದ್ಮಭೂಷಣ’ ಪುರಸ್ಕೃತರಾಗಿದ್ದಾರೆ.

