ಲಕ್ನೋ: ಉತ್ತರ ಪ್ರದೇಶದಲ್ಲಿ ಹರಿಯುವ ಗಂಡಕ್ ನದಿಯಲ್ಲಿ ನೇಪಾಳದ ಪ್ರವಾಹದಲ್ಲಿ ಕೊಚ್ಚಿ ಹೋಗಿರುವ ಮೃತದೇಹಗಳು ತೇಲಿ ಬರುತ್ತಿರುವ ದೃಶ್ಯಗಳು ಭಯಾನಕವಾಗಿವೆ. ನೇಪಾಳದಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಮೃತದೇಹಗಳನ್ನು ಹೊತ್ತು ತರುವ ಮೂಲಕ ಆ ದುರಂತದ ಕರಾಳ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತಿದೆ.
ನೇಪಾಳದಲ್ಲಿ ಉಗಮಿಸುವ ಗಂಡಕ್ ನದಿಯು ಭಾರತದತ್ತ ಹರಿಯುತ್ತದೆ. ಹರಿದು ಬರುವ ನದಿಯಲ್ಲಿ ಕಳೆದ ಎರಡು ದಿನಗಳಲ್ಲಿ ಮಹಾರಾಜ್ಗಂಜ್ ಮತ್ತು ಕುಶಿನಗರ ಜಿಲ್ಲೆಗಳಲ್ಲಿ ನದಿಯಿಂದ ಒಟ್ಟು 10 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ ಮೃತರ ಗುರುತು ಪತ್ತೆಹಚ್ಚುವ ಅಥವಾ ಅವರ ಕುಟುಂಬದವರನ್ನು ಸಂಪರ್ಕಿಸುವ ಕಾರ್ಯ ಇನ್ನೂ ಬಾಕಿ ಇದೆ.
ಅಧಿಕೃತ ಮೂಲಗಳ ಪ್ರಕಾರ, ಗಂಡಕ್ ನದಿಯ ಕೆಳಭಾಗದಲ್ಲಿ ಪತ್ತೆಯಾದ ಮೃತದೇಹಗಳೆಲ್ಲವೂ ನೇಪಾಳ ಮೂಲದ ವಯಸ್ಕರದ್ದಾಗಿವೆ. ಈ ಮೃತದೇಹಗಳು ಉಬ್ಬಿಕೊಂಡಿದ್ದು, ಕೊಳೆತ ಸ್ಥಿತಿಯಲ್ಲಿದ್ದವು.
ಮೃತದೇಹಗಳನ್ನು ಮಹಾರಾಜ್ಗಂಜ್ ಮತ್ತು ಕುಶಿನಗರದ ಶವಾಗಾರಗಳಿಗೆ ರವಾನಿಸಲಾಗಿದ್ದು, ಅಲ್ಲಿ ಅವುಗಳನ್ನು 72 ಗಂಟೆಗಳ ಕಾಲ ಇರಿಸಲಾಗುವುದು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹಗಳ ಮೇಲೆ ಕಂಡುಬಂದ ಆಭರಣಗಳು ಮತ್ತು ಇತರ ವಸ್ತುಗಳ ವಿವರಗಳ ಜೊತೆಗೆ, ಹಚ್ಚೆ (ಟ್ಯಾಟೂ) ಮತ್ತು ಇತರ ಗುರುತಿನ ಚಿಹ್ನೆಗಳಂತಹ ದೈಹಿಕ ಲಕ್ಷಣಗಳನ್ನು ಸಂಬಂಧಪಟ್ಟ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮೃತರ ಛಾಯಾಚಿತ್ರಗಳನ್ನು ಸಹ ಹತ್ತಿರದ ಪ್ರದೇಶಗಳಲ್ಲಿ ಪ್ರಸಾರ ಮಾಡಲಾಗಿದೆ.
ಮಹಾರಾಜ್ಗಂಜ್ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಪ್ರಕಾರ, ಜಿಲ್ಲೆಯಲ್ಲಿ ನಾಲ್ಕು ಮೃತದೇಹಗಳು, ಮೂವರು ಮಹಿಳೆಯರು ಮತ್ತು ಒಬ್ಬ ಯುವಕನ ದೇಹ ಪತ್ತೆಯಾಗಿವೆ.
ಮುಂದಿನ 72 ಗಂಟೆಗಳ ಅವಧಿಯಲ್ಲಿ ಯಾರೂ ಮುಂದೆ ಬರದಿದ್ದರೆ, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕುಮಾರ್ ಹೇಳಿದರು. ಮೃತದೇಹಗಳ ಪತ್ತೆಯ ಕುರಿತಾದ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ ಮತ್ತು ಹೆಚ್ಚಿನ ಮಾಹಿತಿ ಹಾಗೂ ಅಗತ್ಯ ಕ್ರಮಕ್ಕಾಗಿ ಅದನ್ನು ಕೇಂದ್ರ ಸರ್ಕಾರಕ್ಕೆ ರವಾನಿಸುವ ನಿರೀಕ್ಷೆಯಿದೆ.

