ನೇಪಾಳ : ನೇಪಾಳದಲ್ಲಿ ಸಂಭವಿಸಿದ ಹಠಾತ್ ಪ್ರವಾಹದ ನಂತರ ಅಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರದ ಸುಮಾರು 100 ಯಾತ್ರಾರ್ಥಿಗಳನ್ನು ಬಿಹಾರ ಸರ್ಕಾರವು ಸುರಕ್ಷಿತವಾಗಿ ಸ್ಥಳಾಂತರಿಸಿ, ರೈಲಿನ ಮೂಲಕ ಅವರ ತವರು ರಾಜ್ಯಕ್ಕೆ ಕಳುಹಿಸಿಕೊಟ್ಟಿದೆ ಎಂದು ಶನಿವಾರ ಬಿಡುಗಡೆಯಾದ ಅಧಿಕೃತ ಹೇಳಿಕೆ ತಿಳಿಸಿದೆ.
ಮಹಾರಾಷ್ಟ್ರ ಸರ್ಕಾರದ ಕೋರಿಕೆಯ ಮೇರೆಗೆ ಈ ಸ್ಥಳಾಂತರ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಬಿಹಾರ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ಬಿಹಾರದ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ನಿರ್ದೇಶನದ ಮೇರೆಗೆ, ಸಿತಾಮರ್ಹಿ ಜಿಲ್ಲಾಡಳಿತವು ಶುಕ್ರವಾರ ಯಾತ್ರಾರ್ಥಿಗಳನ್ನು ನೇಪಾಳ ಗಡಿಯಿಂದ ಸಿತಾಮರ್ಹಿಗೆ ಸುರಕ್ಷಿತವಾಗಿ ಕರೆತಂದಿತು ಎಂದು ಹೇಳಿಕೆ ತಿಳಿಸಿದೆ.
ಮುಖ್ಯ ಕಾರ್ಯದರ್ಶಿ ಪ್ರತ್ಯಯ ಅಮೃತ್ ಮತ್ತು ವಿಪತ್ತು ನಿರ್ವಹಣಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಮಲ್ ಅವರ ಮೇಲ್ವಿಚಾರಣೆಯಲ್ಲಿ ಈ ಸ್ಥಳಾಂತರ ಕಾರ್ಯ ನಡೆಯಿತು. ಸಿತಾಮರ್ಹಿ ಜಿಲ್ಲಾಡಳಿತವು ಯಾತ್ರಾರ್ಥಿಗಳಿಗೆ ಆಹಾರ, ಕುಡಿಯುವ ನೀರು ಮತ್ತು ಇತರ ಅಗತ್ಯ ಸೌಲಭ್ಯಗಳ ವ್ಯವಸ್ಥೆ ಮಾಡಿತ್ತು.
ಮಹಾರಾಷ್ಟ್ರದ ಈ ಯಾತ್ರಾರ್ಥಿಗಳು ಪಶುಪತಿನಾಥ ದೇವಾಲಯಕ್ಕೆ ಅಥವಾ ಹಿಮಾಲಯದ ದೇಶದಲ್ಲಿರುವ ಇತರ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ನೇಪಾಳಕ್ಕೆ ಹೋಗಿದ್ದರೇ ಎಂಬುದು ಸ್ಪಷ್ಟವಾಗಿಲ್ಲ.
ಶನಿವಾರ ನಸುಕಿನ ಜಾವ 2.30 ರ ಸುಮಾರಿಗೆ ಪಾಟ್ನಾಕ್ಕೆ ಕರೆತರಲಾಯಿತು ಮತ್ತು ಸಮುದಾಯ ಭವನವೊಂದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಯಿತು. ಅಲ್ಲಿ ಅವರಿಗೆ ಆಹಾರ, ವೈದ್ಯಕೀಯ ತಪಾಸಣೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಯಿತು,” ಎಂದು ಹೇಳಿಕೆ ತಿಳಿಸಿದೆ.
ಬಿಹಾರದ ಮುಖ್ಯ ಕಾರ್ಯದರ್ಶಿ ಮತ್ತು ರೈಲ್ವೆ ಮಂಡಳಿಯ ಅಧ್ಯಕ್ಷರ ನಡುವಿನ ಸಮನ್ವಯದ ನಂತರ, ಯಾತ್ರಾರ್ಥಿಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಪಾಟ್ನಾ-ಪೂರ್ಣಾ ಎಕ್ಸ್ಪ್ರೆಸ್ಗೆ ಎರಡು ಹೆಚ್ಚುವರಿ ಬೋಗಿಗಳನ್ನು ಜೋಡಿಸಲಾಯಿತು. ಯಾತ್ರಾರ್ಥಿಗಳು ಶನಿವಾರ ಬೆಳಿಗ್ಗೆ 7.30 ರ ಸುಮಾರಿಗೆ ರೈಲಿನಲ್ಲಿ ಮಹಾರಾಷ್ಟ್ರಕ್ಕೆ ಪ್ರಯಾಣ ಬೆಳೆಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮ್ಮ ಸುರಕ್ಷಿತ ವಾಪಸಾತಿಗೆ ತ್ವರಿತ ಸ್ಪಂದನೆ, ಸಂವೇದನಾಶೀಲತೆ ಮತ್ತು ಸಮನ್ವಯದ ಪ್ರಯತ್ನಗಳನ್ನು ತೋರಿದ ಬಿಹಾರದ ಉಪ ಮುಖ್ಯಮಂತ್ರಿ ಹಾಗೂ ಸಿತಾಮರ್ಹಿ ಮತ್ತು ಪಾಟ್ನಾ ಜಿಲ್ಲಾಡಳಿತಗಳಿಗೆ ಅವರು ಧನ್ಯವಾದ ಅರ್ಪಿಸಿದರು ಎಂದು ಅವರು ಹೇಳಿದರು.
ಕೆಲವು ಯಾತ್ರಾರ್ಥಿಗಳು ಸಂಬಂಧಪಟ್ಟ ರೈಲ್ವೆ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ‘ರಾಖಿ’ಯನ್ನು ಸಹ ಕಟ್ಟಿದರು ಎಂದು ಅವರು ತಿಳಿಸಿದರು.

