ಬೆಂಗಳೂರು ಆ.25: ಚಿತ್ರ ನಟ ದರ್ಶನ್ ಅವರಿಗೆ ಮಹಾಸಂಕಷ್ಟ ಎದುರಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯನ್ನು ಕೋರ್ಟ್ ಅಂಗೀಕರಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಗೆ ಗೊತ್ತಿರುವ ಎಲ್ಲ ಸತ್ಯಾಂಶಗಳನ್ನು ಕೋರ್ಟ್ ಮುಂದೆ ಬಹಿರಂಗಪಡಿಸಬೇಕು ಎಂದು ಪ್ರದೋಷ್ಗೆ ಕೋರ್ಟ್ ಸೂಚನೆ ನೀಡಿದೆ. ವಿಚಾರಣೆ ವೇಳೆ ಯಾವುದೇ ಸತ್ಯವನ್ನು ಮರೆಮಾಚುವಂತಿಲ್ಲ ಹಾಗೂ ಸುಳ್ಳು ಹೇಳಿಕೆ ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಒಂದು ವೇಳೆ ಪ್ರದೋಷ್ ಕೋರ್ಟ್ ಮುಂದೆ ಸುಳ್ಳು ಹೇಳಿಕೆ ನೀಡಿದರೆ ಅಥವಾ ತನಗೆ ಗೊತ್ತಿರುವ ಪ್ರಮುಖ ಮಾಹಿತಿಯನ್ನು ಮರೆಮಾಚಿದರೆ, ಅವರ ವಿರುದ್ಧ ಪ್ರಾಸಿಕ್ಯೂಷನ್ ಸೂಕ್ತ ತೀರ್ಮಾನ ಕೈಗೊಳ್ಳಬಹುದಾಗಿದೆ. ಈ ಷರತ್ತಿನೊಂದಿಗೆ ಪ್ರದೋಷ್ ಅವರ ಮಾಫಿ ಸಾಕ್ಷಿ ಅರ್ಜಿಗೆ ಕೋರ್ಟ್ ಸಮ್ಮತಿ ನೀಡಿದೆ.
ಮಾಫಿ ಸಾಕ್ಷಿಯಾಗಲು ಪ್ರದೋಷ್ ಮುಂದಾಗಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅವರು ಕೋರ್ಟ್ ಮುಂದೆ ನೀಡುವ ಹೇಳಿಕೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ವಿಶೇಷವಾಗಿ ಕೊಲೆ ಪ್ರಕರಣದಲ್ಲಿ ಆರೋಪಿಗಳ ಪಾತ್ರದ ಕುರಿತು ಪ್ರದೋಷ್ ನೀಡುವ ಮಾಹಿತಿ ಇದೀಗ ಕುತೂಹಲ ಮೂಡಿಸಿದೆ.
ಪ್ರದೋಷ್ ಅವರ ಹೇಳಿಕೆಯಿಂದಾಗಿ ಕೊಲೆಯಲ್ಲಿ ಭಾಗಿಯಾದವರ ಪಾತ್ರದ ಬಗ್ಗೆ ಮಾಹಿತಿ ಬಹಿರಂಗವಾಗಲಿದೆ, ಪ್ರಕರಣದ ಪ್ರಮುಖ ಆರೋಪಿ ದರ್ಶನ್ ವಿರುದ್ಧ ಅವರ ಹೇಳಿಕೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಮುಂದಿನ ವಿಚಾರಣೆಯಲ್ಲಿ ಸ್ಪಷ್ಟವಾಗಲಿದೆ.

