ದಾವಣಗೆರೆ: ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ಒಂದೇ ಕುಟುಂಬದ ನಾಲ್ವರು ನಾಪತ್ತೆಯಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ನಗರದ ಬನಶಂಕರಿ ಬಡಾವಣೆಯ ರಮೇಶ್ ಕುಮಾರ್ (38), ಅವರ ಪತ್ನಿ ಜಯಶೀಲ (36), ಪುತ್ರ ಹಿತೇಶ್ (9) ಹಾಗೂ ಪುತ್ರಿ ಪ್ರೇರಣಾ (3) ಆಗಸ್ಟ್ 14ರಿಂದ ಕಾಣೆಯಾಗಿದ್ದಾರೆ.
ಷೇರು ಮಾರುಕಟ್ಟೆ ವ್ಯವಹಾರ ನಡೆಸುತ್ತಿದ್ದ ರಮೇಶ್ ಕುಮಾರ್ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ನಷ್ಟ ಅನುಭವಿಸಿದ್ದರು ಎನ್ನಲಾಗಿದೆ. ಕುಟುಂಬದ ಸದಸ್ಯರ ಸಂಪರ್ಕಕ್ಕೆ ಈವರೆಗೂ ಸಿಕ್ಕಿಲ್ಲ. ಅವರ ಮೊಬೈಲ್ ಸ್ವಿಚ್ಡ್ ಆಫ್ ಆಗಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿದ್ಯಾನಗರ ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದಾರೆ.
ಈ ನಡುವೆ ರಮೇಶ್ ಕುಮಾರ್ ಅವರ ಮನೆಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ‘ಸಾಲದಿಂದ ಸಾವಿನ ಮೊರೆ ಹೋಗುತ್ತಿದ್ದೇವೆ’ ಎಂದು ಬರೆಯಲಾಗಿದೆ ಎನ್ನಲಾಗಿದೆ. ಆಗಸ್ಟ್ 14ರಂದು ರಮೇಶ್ ಕುಮಾರ್ ಪೊಲೀಸರಿಗೆ ಕರೆ ಮಾಡಿ ಬೆಂಗಳೂರಿಗೆ ತೆರಳುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಬಳಿಕ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ.
ಮಗ, ಸೊಸೆ ಹಾಗೂ ಮೊಮ್ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ರಮೇಶ್ ಕುಮಾರ್ ಅವರ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

