ಚಾಮರಾಜನಗರ: ಕಾವೇರಿ ವನ್ಯಜೀವಿಧಾಮದ ಮರಿಯ ಮಂಗಲ ಅರಣ್ಯ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. ಎನ್‌ಕೌಂಟರ್ ವೇಳೆ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾದ ಮಹಿಮಾ ದಾಸ್ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟು ತನ್ನ ಆತಂಕವನ್ನು ತೋಡಿಕೊಂಡಿದ್ದಾನೆ.
ವಿಡಿಯೋದಲ್ಲಿ ಮಾತನಾಡಿರುವ ಮಹಿಮಾ ದಾಸ್, ತಾನು ಬೆಟ್ಟದಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಅಲ್ಲಿಗೆ ಬಂದರು. ಅವರು ಬಂದ ಕೂಡಲೇ ಗುಂಡು ಹಾರಿಸಿದರು. ಇದರಿಂದ ಭಯಗೊಂಡು ತಾನು ಅಲ್ಲಿಂದ ಓಡಿ ಹೋಗಿದ್ದಾಗಿ ಹೇಳಿಕೊಂಡಿದ್ದಾನೆ.
“ನಾನು ಬೆಟ್ಟದಿಂದ ಕೆಳಗಿಳಿದಿದ್ದೆ. ಅರಣ್ಯ ಇಲಾಖೆ ಸಿಬ್ಬಂದಿ ಬಂದರು. ಬಂದ ತಕ್ಷಣ ಶೂಟ್ ಮಾಡಿದರು. ಭಯವಾಯಿತು. ಹಾಗಾಗಿ ಓಡಿ ಹೋದೆ” ಎಂದು ಮಹಿಮಾ ದಾಸ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.
ತನ್ನನ್ನು ಪ್ರಕರಣದಲ್ಲಿ ಸಾಕ್ಷಿಯಾಗಿ ಬಳಸಿಕೊಳ್ಳಲು ಅರಣ್ಯ ಇಲಾಖೆ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಆತ ಮಾಡಿದ್ದಾನೆ.
“ಈಗ ಸಾಕ್ಷಿಯಾಗು ಎಂದು ಅರಣ್ಯ ಇಲಾಖೆಯವರು ಒತ್ತಾಯಿಸುತ್ತಿದ್ದಾರೆ. ನನಗೆ ಭಯವಾಗುತ್ತಿದೆ. ಪೊಲೀಸರೇ, ನೀವೇ ಇದನ್ನು ನೋಡಿಕೊಳ್ಳಬೇಕು” ಎಂದು ಮಹಿಮಾ ದಾಸ್ ಮನವಿ ಮಾಡಿಕೊಂಡಿದ್ದಾನೆ.
ಆಗಸ್ಟ್ 15ರಂದು ಹನೂರು ತಾಲೂಕಿನ ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದರು ಎಂಬುದು ಸರ್ಕಾರದ ಪ್ರಾಥಮಿಕ ವಾದವಾಗಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.
ಘಟನೆಯ ಬಳಿಕ ಮೃತರು ನಿಜವಾಗಿಯೂ ಬೇಟೆಗೆ ತೆರಳಿದ್ದರೇ, ಗುಂಡಿನ ದಾಳಿ ನಡೆದ ಸಂದರ್ಭ ಏನಾಗಿತ್ತು ಮತ್ತು ಅರಣ್ಯ ಇಲಾಖೆ ಸಿಬ್ಬಂದಿಯ ಕ್ರಮ ಕಾನೂನುಬದ್ಧವಾಗಿತ್ತೇ ಎಂಬ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ವಿಧಾನಸಭೆಯಲ್ಲೂ ಪ್ರಕರಣ ಪ್ರತಿಧ್ವನಿಸಿದ್ದು, ವಿಪಕ್ಷಗಳು ನ್ಯಾಯಾಂಗ ತನಿಖೆಗೆ ಆಗ್ರಹಿಸಿವೆ.
ಇದೀಗ ಎನ್‌ಕೌಂಟರ್‌ನಿಂದ ತಪ್ಪಿಸಿಕೊಂಡಿದ್ದಾನೆ ಎನ್ನಲಾದ ಮಹಿಮಾ ದಾಸ್‌ನ ವಿಡಿಯೋ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಹಾಗೂ ಅನುಮಾನಗಳನ್ನು ಹುಟ್ಟುಹಾಕಿದೆ. ಆತ ಹೇಳಿರುವ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

