ಚಾಮರಾಜನಗರ ಆ. 16: ಹನೂರಿನಲ್ಲಿ ಮೂವರು ಮೃತಪಟ್ಟ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹನೂರು ಪೊಲೀಸ್ ಠಾಣೆಯಲ್ಲಿ ಅರಣ್ಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೃತ ಅಂಥೋಣಿಸಾಮಿ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ನಿರ್ದಿಷ್ಟ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸದೆ ‘ಅರಣ್ಯ ಅಧಿಕಾರಿಗಳು’ ಎಂದು ದಾಖಲಿಸಲಾಗಿದೆ. BNS ಸೆಕ್ಷನ್ 103(1) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ವಲಯ ಐಜಿ ಬೋರಲಿಂಗಯ್ಯ ಹಾಗೂ ಎಸ್‌ಪಿ ಮುತ್ತುರಾಜು ಸಮ್ಮುಖದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಪ್ರಕರಣದ ಬಳಿಕ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಅರಣ್ಯ ಪ್ರದೇಶದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಮೃತರ ಕುಟುಂಬಸ್ಥರ ಆಕ್ರೋಶ ಮುಂದುವರಿದಿದ್ದು, ಅರಣ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ನಿನ್ನೆ ಉಪವಲಯ ಅರಣ್ಯಾಧಿಕಾರಿ ಕಚೇರಿ ಹಾಗೂ ಕಳ್ಳಬೇಟೆ ಶಿಬಿರವನ್ನು ಧ್ವಂಸಗೊಳಿಸಿದ್ದ ಗ್ರಾಮಸ್ಥರು, ಜಾಗೇರಿಯಲ್ಲಿರುವ ಅರಣ್ಯ ಕಚೇರಿಗೂ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಹನೂರು ಪೊಲೀಸ್ ಠಾಣೆ ಮುಂದೆಯೂ ಪ್ರತಿಭಟನೆ ಮುಂದುವರಿದಿದ್ದು, ಮರಿಯಮಂಗಲ, ತೋಮಿಯಾರ್ ಸೇರಿದಂತೆ ವಿವಿಧ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಎನ್‌ಕೌಂಟರ್ ನಡೆಸಿದ ಅಧಿಕಾರಿಗಳ ವಜಾ ಹಾಗೂ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗಿದೆ.
ಇನ್ನೊಂದೆಡೆ, ಮೈಸೂರಿನ ಶವಾಗಾರದಲ್ಲಿರುವ ಮೂವರ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ಸಹಿ ಹಾಕಲು ನಿರಾಕರಿಸಿದ್ದಾರೆ. ‘ಮೃತದೇಹ ನೋಡಲು ಬಂದಿದ್ದೇವೆ, ಸಹಿ ಹಾಕಲು ಅಲ್ಲ. ನ್ಯಾಯ ಸಿಗುವವರೆಗೂ ಸಹಿ ಮಾಡುವುದಿಲ್ಲ’ ಎಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮರಣೋತ್ತರ ಪರೀಕ್ಷೆಗೆ ಬಂದಿದ್ದ ವೈದ್ಯರು ಹಾಗೂ ಅಧಿಕಾರಿಗಳು ವಾಪಸ್ ತೆರಳಿದ್ದಾರೆ. ಕುಟುಂಬಸ್ಥರೊಂದಿಗೆ ಪೊಲೀಸರು ನಡೆಸಿದ ಸಂಧಾನವೂ ವಿಫಲವಾಗಿದೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪುಟ್ಟರಂಗಶೆಟ್ಟಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ತನಗೆ ಸುಳ್ಳು ಮಾಹಿತಿ ನೀಡಿದೆ, ಒಬ್ಬೊಬ್ಬ ಅಧಿಕಾರಿಗಳು ಒಂದೊಂದು ರೀತಿಯ ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತಪಟ್ಟ ಮೂವರು ಬೇಟೆಗಾರರು ಎಂಬುದನ್ನು ತಾನು ನಂಬುವುದಿಲ್ಲ. ಅರಣ್ಯ ಇಲಾಖೆಯ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಅಮಾಯಕರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಕೊಂದಿದ್ದಾರೆ ಎಂದು ಆರೋಪಿಸಿರುವ ಅವರು, ಏಳು ಮಂದಿ ಅಧಿಕಾರಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.

