ಫ್ಯಾಸಿಸ್ಟ್ ಪ್ರಭುತ್ವದ ದಮನಗಳಿಂದಾಗಿ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಇದು ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ಸಂವಿಧಾನಕ್ಕೆ ಆತಂಕಕಾರಿ. ಇಡೀ ದೇಶ ಪ್ರಜಾತಂತ್ರ ವ್ಯವಸ್ಥೆಯಿಂದ ಸರ್ವಾಧಿಕಾರಿ ವ್ಯವಸ್ಥೆಯತ್ತ ದಾಪುಗಾಲಿಡುತ್ತದೆ. ಜನರ ಗಮನವನ್ನು ರಾಮಮಂದಿರದತ್ತ ತಿರುಗಿಸಲಾಗಿದೆ – ಶಶಿಕಾಂತ ಯಡಹಳ್ಳಿ.
ಸರ್ವಾಧಿಕಾರಿ ಫ್ಯಾಸಿಸ್ಟ್ ಆಡಳಿತದಲ್ಲಿ ಸತ್ಯ ಹೇಳುವವರಿಗೆ ಕಿರುಕಳ ತಪ್ಪಿದ್ದಲ್ಲ. ಅದಕ್ಕೆ ಲೇಟೆಸ್ಟ್ ಉದಾಹರಣೆ ಸತ್ಯಪಾಲ್ ಮಲಿಕ್ ರವರ ಮನೆಯ ಮೇಲೆ ಸಿಬಿಐ ದಾಳಿ. ಯಾವಾಗ ಮಲ್ಲಿಕ್ ರವರು ಪುಲ್ವಾಮಾ ದಾಳಿಯ ಕೇಂದ್ರ ಸರಕಾರದ ವೈಫಲ್ಯ ಹಾಗೂ ಪ್ರಧಾನಿಗಳ ಚುನಾವಣಾ ತಂತ್ರಗಾರಿಕೆಯನ್ನು ಸಾರ್ವಜನಿಕವಾಗಿ ಬಯಲು ಮಾಡಿದರೋ ಆಗಲೇ ಐಟಿ, ಇಡಿ ಅಥವಾ ಸಿಬಿಐ ರೇಡ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಾಗೆ ಆಗಲೇ ಮಾಡಿದರೆ ಕೇಂದ್ರ ಸರಕಾರದ ಮೇಲೆ ಜನಾಕ್ರೋಶ ಹೆಚ್ಚಾದೀತು ಎಂದು ಸ್ವಲ್ಪ ಕಾಲ ಕಾಯ್ದು ಫೆ. 22 ರಂದು ಮಲ್ಲಿಕ್ ರವರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ, ಅದೂ ಮಲ್ಲಿಕ್ ರವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವಾಗ!.
ಇಷ್ಟಕ್ಕೂ ಸತ್ಯಪಾಲರ ಮೇಲೆ ಮೋದಿಯವರ ದ್ವೇಷಕ್ಕೆ ಕಾರಣ ಏನು? ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಜಮ್ಮು ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುಲ್ವಾಮಾ ಜಿಲ್ಲೆಯ ಲೆಥ್ವಾರಾ ಎಂಬಲ್ಲಿ ಐದು ವರ್ಷಗಳ ಹಿಂದೆ 2019 ಫೆ.14 ರಂದು ಭಯೋತ್ಪಾದಕ ದಾಳಿ ನಡೆದು 40 ಜನ ಕೇಂದ್ರ ಮೀಸಲು ಪಡೆಯ ಯೋಧರು ಸುಸೈಡ್ ಬಾಂಬ್ ಬ್ಲಾಸ್ಟಲ್ಲಿ ಮೃತರಾಗಿದ್ದರು. ಅದು ಲೋಕಸಭಾ ಚುನಾವಣೆಯ ಪೂರ್ವತಯಾರಿಯ ಸಮಯ.
ಅತೀ ಸೂಕ್ಷ್ಮ ಪ್ರದೇಶವಾದ ಪುಲ್ವಾಮಾದಿಂದ 2,500 ಸಿ ಆರ್ ಪಿ ಎಫ್ ಯೋಧರನ್ನು ಸ್ಥಳಾಂತರ ಗೊಳಿಸಲು ವಿಮಾನ ಬೇಕೆಂದು ಕೇಳಲಾಗಿತ್ತು. ಆದರೆ ಕೇಂದ್ರ ಗೃಹಸಚಿವಾಲಯ ನಿರಾಕರಿಸಿದ್ದರಿಂದ ಟ್ರಕ್ ಮೂಲಕ ಯೋಧರನ್ನು ಸಾಗಿಸುವಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆದು ಮಾರಣಹೋಮ ಘಟಿಸಿತು. ಈ ಘಟನೆಗೆ ಪ್ರತಿಕ್ರಿಯೆಯಾಗಿ 12 ದಿನಗಳ ನಂತರ ಬಾರಾಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ ಎಂದು ಇಡೀ ದೇಶದ ಜನತೆಯನ್ನು ನಂಬಿಸಿದ ಮೋದಿಯವರು ಜನರಲ್ಲಿ ಪಾಕಿಸ್ತಾನ ವಿರೋಧಿ ಹಾಗೂ ದೇಶಪ್ರೇಮದ ಉನ್ಮಾದವನ್ನು ಹುಟ್ಟಿಸಿ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ್ದರು.
ಆದರೆ ಪುಲ್ವಾಮಾ ದುರಂತ ಸಂಭವಿಸಿದ್ದಾಗ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ( 2018 ಆಗಸ್ಟ್ 23 ರಿಂದ 2019 ಅಕ್ಟೋಬರ್ 30ರ ವರೆಗೆ) ಬಿಜೆಪಿಯ ಹಿರಿಯ ನಾಯಕ ಸತ್ಯಪಾಲ್ ಮಲಿಕ್ ರವರು ಪುಲ್ವಾಮಾ ಘಟನೆಯ ಹಿಂದಿರುವ ಸತ್ಯ ಸಂಗತಿಗಳನ್ನು ನಾಲ್ಕು ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಬಯಲು ಮಾಡಿ ಆಘಾತಕಾರಿ ಮಾಹಿತಿಗಳನ್ನು ದೇಶದ ಮುಂದಿಟ್ಟರು.
ಸತ್ಯಪಾಲ್ ಮಲ್ಲಿಕ್ ಬಿಚ್ಚಿಟ್ಟ ಮಾಹಿತಿಗಳು
1. ಯೋಧರಿಗೆ ವಿಮಾನವನ್ನು ಗೃಹ ಸಚಿವಾಲಯವು ನಿರಾಕರಿಸಿದ್ದು ಈ ದುರಂತಕ್ಕೆ ಮೂಲ ಕಾರಣ.
2. ಯೋಧರ ಟ್ರಕ್ ಗಳು ರಸ್ತೆ ಮೂಲಕ ಹೋಗುವಾಗ ಸರಿಯಾದ ರೀತಿಯಲ್ಲಿ ಭದ್ರತೆಯ ಪರಿಶೀಲನೆಯನ್ನು ಮಾಡಲಾಗಿರಲಿಲ್ಲ.
3. ಗೃಹ ಸಚಿವಾಲಯದ ವೈಫಲ್ಯಗಳನ್ನು ಸತ್ಯಪಾಲರವರು ಪ್ರಧಾನಿ ಮೋದಿಯವರಿಗೆ ತಿಳಿಸಿದಾಗ “ಈ ವಿಚಾರದ ಬಗ್ಗೆ ಯಾರ ಬಳಿಯೂ ಮಾತಾಡಬೇಡಿ, ಸುಮ್ಮನಿದ್ದು ಬಿಡಿ” ಎಂದು ಒತ್ತಾಯಿಸಿದರು.
4. ಪಾಕಿಸ್ತಾನದ ಮೇಲೆ ದಾಳಿಯ ಆರೋಪ ಹೊರಿಸಿ ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವುದು ಮೋದಿಯವರ ಉದ್ದೇಶವಾಗಿತ್ತು. ವೈಫಲ್ಯಗಳನ್ನುಮುಚ್ಚಿಟ್ಟು, ಪುಲ್ವಾಮಾ ದಾಳಿಯನ್ನು ಬಳಸಿಕೊಂಡು ಮೋದಿಯವರು ಚುನಾವಣೆ ಗೆದ್ದರು.
5. ಪುಲ್ವಾಮಾ ದಾಳಿ ನಡೆಯುವ ಹತ್ತರಿಂದ ಹದಿನೈದು ದಿನಗಳ ಮುಂಚೆನೇ ದಾಳಿ ನಡೆಸಲು ಬಳಸಿದ ಸ್ಪೋಟಕ ತುಂಬಿದ ಪಾಕಿಸ್ತಾನಿ ಕಾರು ಜಮ್ಮು ಕಾಶ್ಮೀರದಲ್ಲಿ ಓಡಾಡುತ್ತಿತ್ತು. ನಿರಂತರ ಉಗ್ರರ ಬೆದರಿಕೆ ಇರುವ ಆತಂಕಕಾರಿ ಸ್ಥಳದಲ್ಲಿ ಯಾರೂ ಈ ಸಂದೇಹಾಸ್ಪದ ಕಾರಿನ ಕುರಿತು ವಿಚಾರಣೆ ಮಾಡದೇ ಇರುವುದರಿಂದ ಗಂಭೀರ ಗುಪ್ತಚರ ವೈಫಲ್ಯವಾಗಿದ್ದೂ ಈ ದುರಂತಕ್ಕೆ ಕಾರಣ.
6. ಕೇಂದ್ರ ಗೃಹ ಇಲಾಖೆಗೆ ದಾಳಿಯ ಸಂಭವನೀಯತೆ ಬಗ್ಗೆ 11 ಬಾರಿ ಗುಪ್ತಚರ ಮಾಹಿತಿ ಲಭಿಸಿದ್ದರೂ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ ವಹಿಸಲಾಗಿತ್ತು. ಸುರಕ್ಷತಾ ವ್ಯವಸ್ಥೆಯ ಲೋಪದಿಂದಾಗಿ ಈ ಭಯಾನಕ ದಾಳಿ ಘಟಿಸಿತು.
ಹೀಗೆ ಪುಲ್ವಾಮಾ ಹತ್ಯಾಕಾಂಡಕ್ಕೆ ಕೇಂದ್ರ ಸರಕಾರದ ವೈಫಲ್ಯ ಹಾಗೂ ಮೋದಿಯವರ ಚುನಾವಣಾ ತಂತ್ರಗಾರಿಕೆ ಕಾರಣ ಎಂದು ಸತ್ಯಪಾಲರವರು ಹೇಳಿದಾಗ ಭಾರೀ ಮುಜುಗರಕ್ಕೊಳಗಾದ ಮೋದಿಯವರು ಸುಮ್ಮನೇ ಕೂಡಲು ಸಾಧ್ಯವೇ? ಸತ್ಯಹೇಳಿದ ಸತ್ಯಪಾಲರ ಮೇಲೆ ಸೇಡು ತೀರಿಸಿಕೊಳ್ಳದೆ ಸುಮ್ಮನಿರಲಾಗುವುದೇ? ಅದೇ ಕಾರಣಕ್ಕೆ ಜಮ್ಮು ಕಾಶ್ಮೀರ, ಪಂಜಾಬ್, ಹರಿಯಾಣ, ಯುಪಿ, ಬಿಹಾರ, ದೆಹಲಿ, ಮತ್ತು ಮುಂಬೈನಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ಶೋಧ ಕಾರ್ಯಾಚರಣೆಗೆ ಮುಂದಾದರು. ದಾಳಿಗೆ ಏನಾದರೂ ಒಂದು ಕಾರಣ ಬೇಕಲ್ಲವೇ? 2,200 ಕೋಟಿ ಮೌಲ್ಯದ ಕಿರು ಜಲವಿದ್ಯುತ್ ಯೋಜನೆಯ ಕೆಲಸವನ್ನು ಗುತ್ತಿಗೆ ನೀಡುವಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ಎಂದು ಸಿಬಿಐ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಆದರೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ಯಾವ ಉದ್ದೇಶಕ್ಕೆ ಯಾರ ಮೇಲೆ ದಾಳಿ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿರೋಧ ಪಕ್ಷದ ನಾಯಕರನ್ನು ಹೆದರಿಸಿ ಪಕ್ಷಗಳನ್ನು ಒಡೆದು, ರಾಜ್ಯ ಸರಕಾರಗಳನ್ನು ಬೀಳಿಸಿ ಬಿಜೆಪಿ ಆಡಳಿತ ಸ್ಥಾಪಿಸಲು ಈ ತನಿಖಾ ಸಂಸ್ಥೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ವಿರೋಧಿಸುವವರ ಧ್ವನಿ ಅಡಗಿಸಲು ಐಟಿ ಇಡಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಅಂತಹುದರಲ್ಲಿ ನೇರವಾಗಿ ಮೋದಿಯವರ ಮೇಲೆ, ಕೇಂದ್ರ ಸರಕಾರದ ವೈಫಲ್ಯದ ಮೇಲೆ ಆರೋಪ ಮಾಡಿದ ಸತ್ಯಪಾಲ್ ಮಲ್ಲಿಕ್ ರವರನ್ನು ಸುಮ್ಮನೆ ಬಿಡಲು ಸಾಧ್ಯವೇ?
ಮೋದಿಯವರ ವಿರುದ್ಧ ನಿರ್ಧಾರ ತೆಗೆದುಕೊಂಡವರು ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆ ಹೀಗಿದೆ. ಮೋದಿ ಮತ್ತು ಶಾ ರವರ ಮೇಲೆ 2019 ರಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕುರಿತು ಏಳು ದೂರುಗಳು ದಾಖಲಾಗಿದ್ದವು. ಇವುಗಳ ಕುರಿತು ವಿಚಾರಣೆ ಮಾಡಿದ ಚುನಾವಣಾ ಕಮಿಷನ್ ಕ್ಲೀನ್ ಚಿಟ್ ನೀಡಿ ತಮ್ಮ ಮೋದಿ ನಿಷ್ಠೆಯನ್ನು ಸಾಬೀತು ಪಡಿಸಿತು. ಮೂರು ಜನ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ ಲವಾಸಾರವರು ಮಾತ್ರ ಏಳು ದೂರುಗಳಲ್ಲಿ ಐದಕ್ಕೆ ಕ್ಲೀನ್ ಚಿಟ್ ಕೊಡಲು ನಿರಾಕರಿಸಿ ತಮ್ಮ ವಿರೋಧ ದಾಖಲಿಸಿದರು. ಮುಂದೆ ಈ ಚುನಾವಣಾಧಿಕಾರಿಯ ಪತ್ನಿ, ಮಗ, ಮಗಳು ಸಹೋದರಿಯರ ಮೇಲೆ ಸರಕಾರಿ ತನಿಖಾ ಸಂಸ್ಥೆಗಳಿಂದ ನೋಟೀಸ್ ಜಾರಿಮಾಡಲಾಯಿತು ಹಾಗೂ ಸಾವಕಾಶವಾಗಿ ಅಶೋಕ ಲವಾಸಾರವರನ್ನು ಅಧಿಕಾರದಿಂದ ಹೊರಗೆ ಹಾಕಲಾಯ್ತು.
ಇದು ಸರ್ವಾಧಿಕಾರಿ ಸರಕಾರದ ಸಾಮ ಬೇಧ ದಂಡ ಪ್ರಯೋಗದ ರಣನೀತಿ. ಈ ಕುತಂತ್ರ ನೀತಿಯಿಂದಾಗಿ ಚುನಾಯಿತ ಸರಕಾರಗಳೇ ಪಲ್ಲಟಗೊಂಡಿವೆ. ಧೈರ್ಯವಾಗಿ ಪ್ರಶ್ನಿಸುವವರು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾಗಿದ್ದಾರೆ. ಹಲವಾರು ಪ್ರತಿಪಕ್ಷದ ನಾಯಕರುಗಳು ಯಾವತ್ತು ತಮ್ಮ ಮೇಲೆ ದಾಳಿ ಮಾಡಲಾಗುತ್ತದೋ ಎನ್ನುವ ಆತಂಕದಲ್ಲಿದ್ದಾರೆ. ತನಿಖಾ ಸಂಸ್ಥೆಗಳಿಗೆ ಹೆದರಿ 33 ಕ್ಕೂ ಹೆಚ್ಚು ಕಾರ್ಪೋರೇಟ್ ಕಂಪನಿಗಳು ಕೋಟ್ಯಂತರ ರೂಪಾಯಿಗಳ ಕಪ್ಪಕಾಣಿಕೆಯನ್ನು ಬಿಜೆಪಿ ಚುನಾವಣಾ ಬಾಂಡ್ ಗೆ ಕಟ್ಟಿವೆ. ಫ್ಯಾಸಿಸ್ಟ್ ಪ್ರಭುತ್ವದ ದಮನಗಳಿಂದಾಗಿ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಇದು ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ಸಂವಿಧಾನಕ್ಕೆ ಆತಂಕಕಾರಿ. ಇಡೀ ದೇಶ ಪ್ರಜಾತಂತ್ರ ವ್ಯವಸ್ಥೆಯಿಂದ ಸರ್ವಾಧಿಕಾರಿ ವ್ಯವಸ್ಥೆಯತ್ತ ದಾಪುಗಾಲಿಡುತ್ತದೆ. ಜನರ ಗಮನವನ್ನು ರಾಮಮಂದಿರದತ್ತ ತಿರುಗಿಸಲಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು