ಡೆಹ್ರಾಡೂನ್ : ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ರಾಮಲೀಲಾ ಮೈದಾನವನ್ನು ಕೋಮುವಾದಿ ದುಷ್ಕರ್ಮಿಗಳು ‘ಶುದ್ಧೀಕರಣ’ ಮಾಡಿರುವ ಘಟನೆ ಉತ್ತರಾಖಂಡದಲ್ಲಿ ಭಾರೀ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣಕ್ಕಾಗಿ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಆದರೆ ಶುದ್ಧೀಕರಣ ನಡೆಸಿದ ಸಂಘಟನೆಯೊಂದಿಗೆ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಎಂದಿನಂತೆ ಬಿಜೆಪಿ ಜಾರಿಕೊಳ್ಳುವ ಯತ್ನ ನಡೆಸಿದೆ.
ಆಗಸ್ಟ್ 8ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ‘ವಿಜಯ ಶಂಖನಾದ’ ರ‍್ಯಾಲಿ ಆಯೋಜಿಸಿತ್ತು. ಮುಂಬರುವ 2027ರ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಚಾರಕ್ಕೆ ಚಾಲನೆ ನೀಡುವ ಭಾಗವಾಗಿ ನಡೆದ ಈ ಸಮಾವೇಶದಲ್ಲಿ ಖರ್ಗೆ ಸಾರ್ವಜನಿಕ ಭಾಷಣ ಮಾಡಿದ್ದರು. ರ‍್ಯಾಲಿಯಲ್ಲಿ ಯುವಕರಿಗೆ ಉದ್ಯೋಗ, ಭ್ರಷ್ಟಾಚಾರರಹಿತ ಆಡಳಿತ ಸೇರಿದಂತೆ ಹಲವು ಭರವಸೆಗಳನ್ನು ಕಾಂಗ್ರೆಸ್ ಮುಂದಿಟ್ಟಿತ್ತು.
ಇದಾದ ಮೂರು ದಿನಗಳ ಬಳಿಕ, ಆಗಸ್ಟ್ 11ರಂದು ಅಲ್ಲಿನ ರಾಮಲೀಲಾ ಮೈದಾನದ ವೇದಿಕೆಯಲ್ಲಿ ಶ್ರೀರಾಮ ಸೇನಾ ಧರ್ಮಾರ್ಥ ಸೇವಾ ನ್ಯಾಸ್ ವತಿಯಿಂದ ‘ಶುದ್ಧೀಕರಣ ಯಜ್ಞ’ ನಡೆಸಲಾಗಿದೆ ಎಂದು ವರದಿಯಾಗಿದೆ. ಯಜ್ಞದ ಬಳಿಕ ಗಂಗಾಜಲ ಸಿಂಪಡಿಸಲಾಗಿದೆ. ಈ ಕೋಮುವಾದಿ ಸಂಘಟನೆಯ ಪ್ರತಿನಿಧಿಗಳ ಪ್ರಕಾರ, ರಾಜಕೀಯ ಕಾರ್ಯಕ್ರಮದ ವೇಳೆ ವೇದಿಕೆಯಿಂದ ಆಕ್ಷೇಪಾರ್ಹ ಘೋಷಣೆಗಳು ಕೇಳಿಬಂದಿದ್ದವು. ರಾಮಲೀಲಾ ವೇದಿಕೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮೀಸಲಾದ ಸ್ಥಳವಾಗಿದ್ದು, ರಾಜಕೀಯ ಕಾರ್ಯಕ್ರಮಗಳಿಗೆ ಬಳಸಬಾರದು ಎಂಬ ಕಾರಣಕ್ಕಾಗಿ ಶುದ್ಧೀಕರಣ ನಡೆಸಲಾಗಿದೆ ಎಂದು ಸಂಘಟನೆ ಹೇಳಿದೆ.
ಆದರೆ ಕಾಂಗ್ರೆಸ್ ಈ ವಿವರಣೆಯನ್ನು ತಿರಸ್ಕರಿಸಿದೆ. ಖರ್ಗೆ ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಅವರು ಭಾಷಣ ಮಾಡಿದ ವೇದಿಕೆಯನ್ನು ಶುದ್ಧೀಕರಿಸುವ ಮೂಲಕ ಅವರನ್ನು ಹಾಗೂ ದಲಿತ ಸಮುದಾಯವನ್ನು ಅವಮಾನಿಸಲಾಗಿದೆ ಎಂದು ಉತ್ತರಾಖಂಡ ಕಾಂಗ್ರೆಸ್ ಆರೋಪಿಸಿದೆ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಗೋಡಿಯಾಲ್, ಈ ಘಟನೆ ಖಂಡನೀಯವಾಗಿದ್ದು, ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ವಿವಾದ ಸಂಸತ್ತಿನಲ್ಲೂ ಪ್ರತಿಧ್ವನಿಸಿದೆ. ರಾಜ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಖರ್ಗೆ, ತಾವು ಭಾಷಣ ಮಾಡಿದ ವೇದಿಕೆಯನ್ನು ನಂತರ ‘ಶುದ್ಧೀಕರಿಸಿರುವುದು’ ತಮ್ಮನ್ನು ಅಸ್ಪೃಶ್ಯರಂತೆ ಕಾಣುವ ಮನೋಭಾವವನ್ನು ತೋರಿಸುತ್ತದೆ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ದೇಶದಲ್ಲಿ ದಲಿತರಿಗೆ ಗೌರವ ಮತ್ತು ಸಮಾನ ಸ್ಥಾನವಿದೆಯೇ ಎಂಬ ಪ್ರಶ್ನೆ ಮೂಡಿಸುತ್ತವೆ ಎಂದು ಅವರು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಇಂತಹ ಕೃತ್ಯವನ್ನು ಬಿಜೆಪಿ ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆ ಬಗ್ಗೆ ತಮಗೂ ಬೇಸರವಿದೆ ಎಂದು ನಡ್ಡಾ ಹೇಳಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ತಿಳಿಸಿದ್ದಾರೆ. ಖರ್ಗೆ ಮಾತ್ರವಲ್ಲ, ಇಂತಹ ಘಟನೆ ಯಾರಿಗಾದರೂ ನಡೆದಿದ್ದರೆ ಅದು ಖಂಡನೀಯ ಎಂಬ ನಿಲುವನ್ನು ಬಿಜೆಪಿ ವ್ಯಕ್ತಪಡಿಸಿದೆ.

