ಬೆಂಗಳೂರು: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಬಳಿ ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಜೈಲಧಿಕಾರಿಯನ್ನು ಸಸ್ಪೆಂಡ್ ಮಾಡಿ ಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಧಿಕಾರಿಗಳು ನಡೆಸಿದ ದಿಢೀರ್ ತಪಾಸಣೆ ವೇಳೆ ಪ್ರಜ್ವಲ್ ರೇವಣ್ಣ ಬಳಿಯಿಂದ ನೀಲಿ ಬಣ್ಣದ ಆ್ಯಂಡ್ರಾಯ್ಡ್ ಮೊಬೈಲ್ ಫೋನ್, ಪೆನ್‌ಡ್ರೈವ್, ಮೊಬೈಲ್ ಚಾರ್ಜರ್ ಹಾಗೂ ಡೈರಿಯೊಂದನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ರಂಗಾಪುರ ಅನ್ನು ಸಸ್ಪೆಂಡ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಖೈದಿಗಳು ಧರಿಸುವ ಬಿಳಿ ಬಟ್ಟೆ ಧರಿಸ್ತಿರಲಿಲ್ಲ. ಇದೀಗ ಅಂಡ್ರಾಯ್ಡ್ ಮೊಬೈಲ್ ಸಹ ಸಿಕ್ಕಿದೆ. ಹೀಗಾಗಿ ಕರ್ತವ್ಯ ಲೋಪದ ಕಾರಣ ಕೇಳಿ ಜೈಲು ಎಸ್‌ಪಿ ಅನ್ಶುಕುಮಾರ್‌ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಜೈಲು ನಿಯಮಗಳ ಪ್ರಕಾರ ಬಂಧಿತ ಕೈದಿಗಳು ಮೊಬೈಲ್ ಫೋನ್ ಸೇರಿದಂತೆ ಇಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ಅವಕಾಶವಿಲ್ಲ. ಹೀಗಾಗಿ ಪ್ರಜ್ವಲ್ ರೇವಣ್ಣನ ಬಳಿ ಮೊಬೈಲ್ ಹಾಗೂ ಪೆನ್‌ಡ್ರೈವ್ ಹೇಗೆ ಬಂದವು ಎಂಬುದರ ಕುರಿತು ಜೈಲು ಅಧಿಕಾರಿಗಳು ತನಿಖೆ ಆರಂಭಿಸುವ ಸಾಧ್ಯತೆ ಇದೆ.
ಪತ್ತೆಯಾಗಿರುವ ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್‌ನಲ್ಲಿ ಏನಿದೆ ಎಂಬುದು ಇದೀಗ ಪ್ರಮುಖ ಪ್ರಶ್ನೆಯಾಗಿದೆ. ಸಾಧನಗಳನ್ನು ಪರಿಶೀಲನೆಗೆ ಒಳಪಡಿಸಿದ ಬಳಿಕ ಅವುಗಳ ಬಳಕೆ, ಸಂಪರ್ಕ ಹಾಗೂ ಅದರಲ್ಲಿರುವ ಮಾಹಿತಿಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳು ಹೊರಬರುವ ಸಾಧ್ಯತೆ ಇದೆ.
ಪ್ರಜ್ವಲ್ ರೇವಣ್ಣ ಹಾಸನದ ಮಾಜಿ ಸಂಸದನಾಗಿದ್ದು, ಹಲವು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾನೆ.

