ಚೆನ್ನೈ : ಸರ್ಕಾರದ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ಬೇರೆ ಗೀತೆ ಹಾಡುವ ಮುನ್ನ ತಮಿಳು ತಾಯಿಯ ಸ್ತುತಿಗೀತೆ ಹಾಡುವಂತೆ ತಮಿಳುನಾಡು ವಿಧಾನಸಭೆಯು ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿದೆ.
ರಾಜ್ಯದ ಎಲ್ಲಾ ಕಾರ್ಯಕ್ರಮಗಳಲ್ಲಿ”ತಮಿಳ್ ತಾಯಿ ವಾಳ್ತು” ಹಾಡನ್ನು ಕಡ್ಡಾಯವಾಗಿ ಮೊದಲು ಹಾಡಬೇಕು ಎಂದು ಸರ್ಕಾರದ ಪರವಾಗಿ ನಿರ್ಣಯವನ್ನು ಮಂಡಿಸಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ವಿಶ್ವದ ಅತ್ಯಂತ ಹಳೆಯ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾದ ತಮಿಳು ಮತ್ತು ತಮಿಳು ನಾಗರಿಕತೆಯು ವಿಧಾನಸಭೆಯಿಂದ ಹೆಮ್ಮೆಯಿಂದ ದಾಖಲಿಸಲ್ಪಡಲು ಅರ್ಹವಾಗಿದೆ ಎಂದು ಹೇಳಿದರು.
ಅಲ್ಲದೇ, 1970ರ ನವೆಂಬರ್ 23ರಂದು ಅಂದಿನ ಸರ್ಕಾರದ ಆದೇಶದ ಹಿನ್ನೆಲೆಯನ್ನು ಅವರು ವಿವರಿಸಿದರು. ಈ ಗೀತೆಯನ್ನು ಮನೋನ್ಮಣಿಯಂ ಸುಂದರಂ ಪಿಳ್ಳೈ ಅವರ 1891ರ ನಾಟಕ ‘ಮನೋನ್ಮಣಿಯಂ’ನ ಮುನ್ನುಡಿಯಿಂದ ಆಯ್ದುಕೊಳ್ಳಲಾಗಿತ್ತು. ಈ ಗೀತೆಗೆ 2021ರ ಡಿಸೆಂಬರ್ 17ರಂದು ಅಧಿಕೃತ ರಾಜ್ಯ ಮಾನ್ಯತೆಯನ್ನು ನೀಡಲಾಗಿತ್ತು ಎಂದು ತಿಳಿಸಿದರು.
ಆ ಪ್ರಕಾರ, ತಮಿಳುನಾಡಿನ ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಉದ್ಯಮಗಳು ಯಾವುದೇ ಕಾರ್ಯಕ್ರಮವನ್ನು ಪ್ರಾರಂಭಿಸುವ ಮೊದಲು ಈ ಗೀತೆಯನ್ನು ಹಾಡುವುದು ಕಡ್ಡಾಯವಾಯಿತು.
ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಯಾವ ಗೀತೆಯನ್ನು ಮೊದಲು ಹಾಡಬೇಕು ಎಂಬುದರ ಕುರಿತು ಕೇಂದ್ರ ಸಚಿವಾಲಯವು ಜುಲೈ 9, 2026 ರಂದು ನೀಡಿದ ಸೂಚನೆಯ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಸರ್ಕಾರಿ ಕಾರ್ಯಕ್ರಮಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ “ತಮಿಳ್ ತಾಯ್ ವಾಳ್ತು” ಗೀತೆಯೊಂದಿಗೆ ಕಾರ್ಯಕ್ರಮಗಳನ್ನು ಪ್ರಾರಂಭಿಸುವ ತಮಿಳುನಾಡಿನ ಪದ್ಧತಿಯು, ಸತತ ಸರ್ಕಾರಿ ಆದೇಶಗಳ ಬೆಂಬಲದೊಂದಿಗೆ 1970ರ ದಶಕದಿಂದಲೂ ಜಾರಿಯಲ್ಲಿದೆ ಎಂದು ನಿರ್ಣಯವು ಉಲ್ಲೇಖಿಸಿದೆ. “ತಮಿಳ್ ತಾಯ್ ವಾಳ್ತು” ಗೀತೆಯು ತಮಿಳು ಭಾಷೆ ಮತ್ತು ಸಂಸ್ಕೃತಿಯ ಮೇಲಿನ ಗೌರವದ ಅಭಿವ್ಯಕ್ತಿಯಾಗಿದೆ ಎಂದು ಸದನವು ನಿರ್ಣಯಿಸಿತು.

