ಬೀದರ್ : ಈ ದೇಶವು ಹಿಂದೂ ರಾಷ್ಟ್ರವಾಗಬೇಕು ಎಂದು ಕೋಮುವಾದಿಗಳು ಹೇಳುತ್ತಾರೆ. ಆದರೆ, ಈ ದೇಶವು ಹಿಂದೂ ರಾಷ್ಟ್ರವಾದರೆ ಅದಕ್ಕಿಂತ ದೊಡ್ಡ ಅಪಾಯ ದೇಶಕ್ಕೆ ಬೇರೊಂದಿಲ್ಲ ಎಂದು ಡಾ. ಬಿ.ಆರ್. ಅಂಬೇಡ್ಕರ್ ಹೇಳಿದ್ದರು,” ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.
ಬೀದರ್ನಲ್ಲಿ ಮಾತನಾಡಿದ ಅವರು, ಜಾತಿ ಪದ್ಧತಿಯು ಹಿಂದೂ ಧರ್ಮದಲ್ಲಿ ಆಳವಾಗಿ ಬೇರೂರಿದೆ ಎಂದು ಪ್ರತಿಪಾದಿಸಿದ ಅವರು, ಹಿಂದೂ ರಾಷ್ಟ್ರದ ನಿರ್ಮಾಣವು ಸಾಮಾಜಿಕ ಅಸಮಾನತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ವಾದಿಸಿದರು.
“ಜಾತಿ ಪದ್ಧತಿಯೇ ಹಿಂದೂ ಧರ್ಮದ ಮೂಲ ಪರಿಕಲ್ಪನೆಯಾಗಿದೆ. ಒಂದು ವೇಳೆ ಆ ಪದ್ಧತಿ ಮರಳಿದರೆ, ನಾವೆಲ್ಲರೂ ಮತ್ತೆ ಶೋಷಣೆಗೆ ಒಳಗಾಗುತ್ತೇವೆ. ಆಗ ಅಲ್ಪಸಂಖ್ಯಾತರು ಎಂಬ ವರ್ಗವೇ ಇರುವುದಿಲ್ಲ ಮತ್ತು ಅವರು ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕಬೇಕಾಗುತ್ತದೆ. ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದೆಂದರೆ ಶೋಷಣೆಯ ವ್ಯವಸ್ಥೆಯನ್ನು ಮರಳಿ ತರುವುದೇ ಆಗಿದೆ,” ಎಂದು ಹೇಳಿದರು.
ಸಮಾಜದಲ್ಲಿ ಒಡಕು ಮೂಡಿಸಲು ಕೋಮುವಾದಿ ಶಕ್ತಿಗಳು ಧರ್ಮವನ್ನು ಬಳಸಿಕೊಳ್ಳುತ್ತಿವೆ ಎಂದು ಸಚಿವರು ಇದೇ ವೇಳೆ ಆರೋಪಿಸಿದರು.
“ಧರ್ಮವನ್ನು ಅಸ್ತ್ರವನ್ನಾಗಿ ಬಳಸಿಕೊಂಡು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ಕೋಮುವಾದಿಗಳ ವಿರುದ್ಧ ನಾವು ಹೋರಾಡಬೇಕಿದೆ. ಆಗ ಮಾತ್ರ ನಾವು ನಮ್ಮ ಹಕ್ಕುಗಳು ಮತ್ತು ಅಧಿಕಾರವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರು ಧರ್ಮದ ಹೆಸರಿನಲ್ಲಿ ನಮ್ಮನ್ನು ವಿಭಜಿಸುತ್ತಿದ್ದಾರೆ,” ಎಂದು ಹೇಳಿದರು.
ಶತಮಾನಗಳ ಸುಧಾರಣಾ ಚಳುವಳಿಗಳ ಹೊರತಾಗಿಯೂ ಧರ್ಮವು ಜಾತಿ ಪದ್ಧತಿಗೆ ಮಾನ್ಯತೆ ನೀಡಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು.

